*ಶಾಲಾ ಪ್ರಾರಂಭೋತ್ಸವವೇ ಸರ್ಕಾರಿ ಶಾಲೆಗಳ ಭವಿಷ್ಯದ ದಿಕ್ಕು ತೋರಿಸಲಿ*

 *ಶಾಲಾ ಪ್ರಾರಂಭೋತ್ಸವವೇ ಸರ್ಕಾರಿ ಶಾಲೆಗಳ ಭವಿಷ್ಯದ ದಿಕ್ಕು ತೋರಿಸಲಿ*




ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರವೂ ವ್ಯಾಪಾರಿಕ ಸ್ಪರ್ಧೆಯ ಅಲೆಗಳಿಗೆ ಒಳಗಾಗಿದೆ. ಒಂದು ಕಾಲದಲ್ಲಿ ಗ್ರಾಮೀಣ ಬದುಕಿನ ಜ್ಞಾನ ದೀಪಗಳಾಗಿದ್ದ ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳ ಗಾಢ ಪ್ರಭಾವದ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವುದು ವಾಸ್ತವ. 


ಆಕರ್ಷಕ ಕಟ್ಟಡಗಳು, ಇಂಗ್ಲಿಷ್ ಮಾಧ್ಯಮದ ಭರವಸೆ, ಡಿಜಿಟಲ್ ತರಗತಿಗಳು, ಶಾಲಾ ಬಸ್ ಗಳು, ಹಾಗೂ ವೈಭವದ ಜಾಹೀರಾತುಗಳ ಮೂಲಕ ಖಾಸಗಿ ಶಾಲೆಗಳು ಪಾಲಕರ ಜನಮನ ಗೆಲ್ಲುತ್ತಿವೆ. ಇಂತಹ ಸಂದರ್ಭದಲ್ಲಿ 2026-27ನೇ ಶೈಕ್ಷಣಿಕ ವರ್ಷದ “ಶಾಲಾ ಪ್ರಾರಂಭೋತ್ಸವ” ಕೇವಲ ಅದು ಒಂದು ಆಚರಣೆ ಆಗದೆ, ಸರ್ಕಾರಿ ಶಾಲೆಗಳ ಮೇಲಿನ ಅಪಾರ ನಂಬಿಕೆಯನ್ನು ಪುನರುಜ್ಜೀವನಗೊಳಿಸುವ ಜನಾಂದೋಲನವಾಗಬೇಕು.

ಸರ್ಕಾರಿ ಶಾಲೆಗಳ ಶಕ್ತಿ ಕೇವಲ ಉಚಿತ ಶಿಕ್ಷಣದಲ್ಲಿಲ್ಲ; ಅದು ಮೌಲ್ಯಾಧಾರಿತ ಶಿಕ್ಷಣ, ಅನುಭವಜ್ಞ ಶಿಕ್ಷಕರು, ಸಮಾನತೆಯ ವಾತಾವರಣ ಮತ್ತು ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವ ಸಾಮಾಜಿಕ ಹೊಣೆಗಾರಿಕೆಯಲ್ಲಿ ಅಡಗಿದೆ.       ಈ ಅಂಶಗಳನ್ನು ಪಾಲಕ ಪೋಷಕರಿಗೆ ಮನದಟ್ಟಾಗಿಸುವ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನ್ಯಾಸಗೊಳಿಸಬೇಕಾಗಿದೆ.



ಮೊದಲು ಶಾಲೆಯ ವಾತಾವರಣವೇ ಹಬ್ಬದ ಸಂಭ್ರಮದಂತೆ ಕಾಣಬೇಕು. ಶಾಲಾ ಆವರಣವನ್ನು ಸ್ವಚ್ಛವಾಗಿ, ಬಣ್ಣಬಣ್ಣದ ಚಿತ್ರಗಳು, ಮಕ್ಕಳ ಕಲಾಕೃತಿಗಳು, ಪ್ರೇರಣಾದಾಯಕ ನುಡಿಗಳಿಂದ ಅಲಂಕರಿಸಿದರೆ ಪಾಲಕರಲ್ಲಿ ಮೊದಲ ನೋಟದಲ್ಲೇ ಒಳ್ಳೆಯ ಭಾವನೆ ಮೂಡುತ್ತದೆ. ಮಕ್ಕಳನ್ನು ಶಾಲೆಗೆ ಸ್ವಾಗತಿಸುವ ಶಿಕ್ಷಕರ ನಗುಮುಖ, ಆತ್ಮೀಯ ಮಾತುಗಳು ಪಾಲಕರ ವಿಶ್ವಾಸವನ್ನು ಹೆಚ್ಚಿಸುತ್ತವೆ.



ಪ್ರಾರಂಭೋತ್ಸವದಲ್ಲಿ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗದೆ, ಶಾಲೆಯ ಸಾಧನೆಗಳನ್ನು ನೇರವಾಗಿ ಪರಿಚಯಿಸಬೇಕು. ಹಿಂದಿನ ವರ್ಷಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ ಯಶೋಗಾಥೆ, ಸರ್ಕಾರಿ ಶಾಲೆಯಿಂದಲೇ ಉನ್ನತ ಹುದ್ದೆಗಳಿಗೆ ಏರಿದ ಹಳೆ ವಿದ್ಯಾರ್ಥಿಗಳ ಅನುಭವ ಹಂಚಿಕೆ ಪಾಲಕರ ಮನಸ್ಸಿಗೆ ನೇರವಾಗಿ ತಾಕುತ್ತದೆ. “ನಮ್ಮ ಮಕ್ಕಳಿಗೂ ಇಲ್ಲಿಂದ ಉತ್ತಮ ಭವಿಷ್ಯ ಸಾಧ್ಯ” ಎಂಬ ನಂಬಿಕೆಯನ್ನು ಹುಟ್ಟಿಸುವುದು ಬಹಳ ಮುಖ್ಯ.



ಇಂದಿನ  ಪಾಲಕರು ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೂ ಪ್ರಥಮ ಆದ್ಯತೆ ನೀಡುತ್ತಾರೆ. ಆದ್ದರಿಂದ ಶಾಲೆಯಲ್ಲಿ ನಡೆಯುವ ಕ್ರೀಡೆ, ವಿಜ್ಞಾನ ಚಟುವಟಿಕೆ, ಡಿಜಿಟಲ್ ಕಲಿಕೆ, ಸಾಂಸ್ಕೃತಿಕ ಕಾರ್ಯಕ್ರಮ , ಯೋಗ, ಪರಿಸರ ಜಾಗೃತಿ ಮುಂತಾದ ಚಟುವಟಿಕೆಗಳ ಪ್ರಾತ್ಯಕ್ಷಿಕೆಯನ್ನು ಪ್ರಾರಂಭೋತ್ಸವದಲ್ಲೇ ಚೆನ್ನಾಗಿ ತೋರಿಸಿದರೆ ಅದು ಹೆಚ್ಚು ಪರಿಣಾಮಕಾರಿ ಆಗುತ್ತದೆ. ಮಕ್ಕಳಿಂದಲೇ ಸ್ವಾಗತ ಗೀತೆ, ಇಂಗ್ಲಿಷ್ ಸಂಭಾಷಣೆ, ವಿಜ್ಞಾನ ಮಾದರಿ ಪ್ರದರ್ಶನ ಏರ್ಪಡಿಸಿದರೆ ಪಾಲಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಹೊಸ ಅಭಿಪ್ರಾಯ ಮೂಡುತ್ತದೆ.

ಶಾಲೆ ಮತ್ತು ಪಾಲಕರ ನಡುವೆ ಭಾವನಾತ್ಮಕ ಸಂಬಂಧ ನಿರ್ಮಾಣವೂ ಅಗತ್ಯ. ಪ್ರತಿಯೊಬ್ಬ ಪಾಲಕರನ್ನೂ ಗೌರವದಿಂದ ಆಹ್ವಾನಿಸಿ, ಅವರ ಅಭಿಪ್ರಾಯ ಕೇಳಿ, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರದ ಕುರಿತು ಸಂವಾದ ನಡೆಸಿದರೆ ಶಾಲೆಯ ಮೇಲೆ ಆತ್ಮೀಯತೆ ಹೆಚ್ಚುತ್ತದೆ. “ಇದು ಸರ್ಕಾರದ ಶಾಲೆ” ಎಂಬ ಭಾವನೆಗಿಂತ “ಇದು ನಮ್ಮ ಶಾಲೆ” ಎಂಬ ಭಾವನೆ ಮೂಡಿಸುವ ಕೆಲಸ ಪ್ರಾರಂಭೋತ್ಸವದಿಂದಲೇ ಆರಂಭವಾಗಬೇಕು.

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೂ ಮುಖ್ಯವಾಗಿದೆ. ಶಾಲೆಯ ಚಟುವಟಿಕೆಗಳು, ಸಾಧನೆಗಳು, ಮಕ್ಕಳ ಪ್ರತಿಭೆಗಳನ್ನು ವಿಡಿಯೋ ಹಾಗೂ ಚಿತ್ರಗಳ ಮೂಲಕ ಜನರಿಗೆ ತಲುಪಿಸಿದರೆ ಸರ್ಕಾರಿ ಶಾಲೆಗಳ ಬಲವೂ ಸಮಾಜಕ್ಕೆ ಗೋಚರಿಸುತ್ತದೆ. ಉತ್ತಮ ಕಾರ್ಯಗಳನ್ನು ಮೌನವಾಗಿ ಮಾಡುವ ಕಾಲ ಕಳೆದಿದೆ; ಈಗ ಅವುಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕಾಲ.



ಒಟ್ಟಿನಲ್ಲಿ, ಸರ್ಕಾರಿ ಶಾಲೆಗಳ ಉಳಿವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಶಿಕ್ಷಕರು, ಪಾಲಕರು, ಹಳೆ ವಿದ್ಯಾರ್ಥಿಗಳು ಮತ್ತು ಸಮುದಾಯದ ಒಗ್ಗಟ್ಟಿನ ಸಂಕಲ್ಪವಾಗಿದೆ. “ಶಾಲಾ ಪ್ರಾರಂಭೋತ್ಸವ” ಮಕ್ಕಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರಮವಾಗದೆ, ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವನ್ನು ಪುನರ್ ನಿರ್ಮಿಸುವ ಚಳವಳಿಯಾಗಬೇಕು. ಆಗ ಮಾತ್ರ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಸರ್ಕಾರಿ ಶಾಲೆಗಳು ಮತ್ತೆ ಜನಮನ ಗೆದ್ದು, ಸಮಾಜದ ಆಶಾಕಿರಣಗಳಾಗಿ ಬೆಳಗಲಿವೆ.


[ "1 ರಿಂದ 8 ನೇ ತರಗತಿಗಳಿಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೆ ಗ್ರಾಮದ ಕೊಡಗೈದಾನಿಗಳಾದ ಶ್ರೀ ದಸ್ತಗೀರ ಕಾಗವಾಡೆ ಅವರ ನೆರವಿನಿಂದ 1,111 ರೂಪಾಯಿ ನಿಶ್ಚಿತ ಠೇವಣಿ ಇರಿಸುವ ಜೊತೆಗೆ ಸ್ಕೂಲ್ ಬ್ಯಾಗ್ ನೋಟ್ ಬುಕ್ ಹಾಗೂ         ಶೈಕ್ಷಣಿಕ ಕಿಟ್ ವಿತರಣೆ ಮಾಡುವುದರೊಂದಿಗೆ ಸದ್ಯ ಕಲಿಯುತ್ತಿರುವ ಎಲ್ಲ ಮಕ್ಕಳಿಗೆ ಉಚಿತವಾಗಿ  ಕೊರಳು ಪಟ್ಟಿ,( ಟೈ) ಬೆಲ್ಟ್, ಆಯ್ ಡಿ ಕಾರ್ಡ್ ಹಾಗೂ ಶೈಕ್ಷಣಿಕ ಕಿಟ್ ಕೊಡುವ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ಸೇವೆಯಲ್ಲಿರುವ ಪ್ರತಿಭಾವಂತ ಸಾಧಕರಿಂದ ಪ್ರೇರಣಾದಾಯಕ ಹಾಗೂ ಪೂರ್ತಿ ತುಂಬುವ ಕಿವಿ ಮಾತುಗಳನ್ನು ಕೇಳಿಸುವುದು. ಪ್ರತಿ ತಿಂಗಳು ನಮ್ಮ ಶಾಲೆಯಲ್ಲಿ ಕಲಿಕೆಗೆ ಪೂರಕವಾಗುವ  ಪಠ್ಯೇತರ  ವಿಷಯಗಳ ಮೇಲೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಕೊಡುವ ಮೂಲಕ ನಿರಂತರ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಬೇರೆ ಬೇರೆ ಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡಿದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ದಿನದಂದು ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂಪಾಯಿ ನಗುದು ಪ್ರೋತ್ಸಾಹ ಧನ ವಿತರಣೆ ಮಾಡುವ ಮೂಲಕ ಮಕ್ಕಳಲ್ಲಿ  ಕಲಿಕಾಸಕ್ತಿಯನ್ನು ಹೆಚ್ಚಿಸಲು ಮೌಲ್ಯಯುತ ಯೋಜನೆ ಅನುಷ್ಠಾನಕ್ಕೆ ತಂದಿದ್ದೇವೆ.]


~ *ಶ್ರೀ ವಿ ಪಿ ಗಲಗಲಿ* 

 *ಮುಖ್ಯೋಪಾಧ್ಯಾಯರು*

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಸಿದ್ದಾಪುರ ತೋಟ 


********************                         ಲೇಖನ:ಡಾ. ಜಯವೀರ ಎ. ಕೆ.

      ಖೇಮಲಾಪುರ*

Image Description

Post a Comment

0 Comments