*ಕವಿತೆ ಪದಗಳ ಆಟವಲ್ಲ ಹೃದಯದ ಹೋರಾಟ: ಪ್ರೊ ಶಿವಾನಂದ ಬೆಳಕೂಡ*
ರಾಯಬಾಗ: ಕವಿತೆ ಎಂದರೆ ಕೇವಲ ಸುಂದರ ಪದಗಳ ಜೋಡಣೆಯಲ್ಲ. ಅದು ಮನಸ್ಸಿನ ಆಳದಲ್ಲಿ ಮೂಡುವ ಭಾವಗಳ ಅಭಿವ್ಯಕ್ತಿ. ಜೀವನದ ನೋವು, ಕನಸು, ಸಂಘರ್ಷ, ಮತ್ತು ಅನುಭವಗಳು ಕವಿತೆಯಾಗಿ ರೂಪುಗೊಳ್ಳುವಾಗ ಅದರ ನಿಜವಾದ ಶಕ್ತಿ ವ್ಯಕ್ತವಾಗುತ್ತದೆ. ಹೃದಯ ತಂದನ ಸಾಮಾಜಿಕ ಕಳಕಳಿ ಮತ್ತು ಮಾನವೀಯ ಸಂವೇದನೆಗಳು ಕವಿತೆಗೆ ಜೀವ ತುಂಬುತ್ತವೆ. ಆದ್ದರಿಂದ ಕವಿತೆ ಮನರಂಜನೆಗಾಗಿ ಹುಟ್ಟಿದ ಪದಗಳ ಆಟವಲ್ಲ, ಬದುಕಿನ ಸತ್ಯಗಳೊಂದಿಗೆ ನಡೆಸುವ ಹೃದಯದ ಹೋರಾಟ ಎಂದು ರಾಯಬಾಗದ ಹೆಸರಾಂತ ಸಾಹಿತಿ, ಬಾಗೆನಾಡಿನ ಪ್ರೇಮ ಕವಿ ಪ್ರೊ ಶಿವಾನಂದ ಬೆಳಕೂಡ ಹೇಳಿದರು.
ಪ್ರಸ್ತುತ ಹೊಸ ಪೀಳಿಗೆಯ ಉದಯೋನ್ಮುಖ ಕವಿಗಳ ಕಾವ್ಯ ರಚನಾ ಶೈಲಿಯ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ತಮ್ಮ ಮನದ ಮಾತುಗಳನ್ನು ಸೊಗಸಾಗಿ ಹಂಚಿಕೊಂಡರು.
ಕಾವ್ಯ ಎಂದರೆ ಪದಗಳ ಜೋಡಣೆ ಅಥವಾ ಪ್ರಾಸಗಳ ಪ್ರದರ್ಶನವಲ್ಲ, ಅದು ಬದುಕಿನ ಆಳವಾದ ಅನುಭವ ಮತ್ತು ಅಧ್ಯಯನದ ಸಂಯೋಜನೆಯಿಂದ ಮೂಡುವ ಜೀವಂತ ಅಭಿವ್ಯಕ್ತಿ ಎಂಬುದನ್ನು ಅವರು ಸೊಗಸಾಗಿ ಪ್ರತಿಪಾದಿಸಿದರು.
ಇಂದಿನ ಅನೇಕ ಯುವ ಕವಿಗಳು ಓದಿಗಿಂತ ಬರವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ, "ಮೊದಲು ಓದು, ನಂತರ ಬರಹ" ಎಂಬ ಸಾಹಿತ್ಯದ ಮೂಲಮಂತ್ರವನ್ನು ಅವರು ನೆನಪಿಸಿದರು.ಓದು ಇಲ್ಲದ ಬರವಣಿಗೆ ಬೇರುಗಳಿಲ್ಲದ ಮರದಂತಿದ್ದು, ಅದು ದೀರ್ಘಕಾಲ ಉಳಿಯುವುದಿಲ್ಲ ಎಂಬ ಎಚ್ಚರಿಸಿದರು. ಹಿರಿಯ ಕವಿಗಳ ಸಾಹಿತ್ಯದ ಅಧ್ಯಯನ, ಅವರೊಂದಿಗೆ ಚರ್ಚೆ, ಸಂವಾದ, ಮತ್ತು ನಿರಂತರ ಮಾರ್ಗದರ್ಶನದ ಮೂಲಕವೇ ಕಾವ್ಯದ ಆಳ-ಅಗಲಗಳನ್ನು ಅರಿಯಲು ಸಾಧ್ಯ ಎಂದರು.
ಕಾವ್ಯವು ಕವಿಯ ಆಂತರಿಕ ತಲ್ಲಣ, ಸಂವೇದನೆ ಮತ್ತು ಜೀವನಾನುಭವಗಳ ಸಹಜ ಸ್ಫೋಟವಾಗಿರಬೇಕು."ಉಸಿರಿಲ್ಲದ ದೇಹ ಹೇಗೆ ನಿರ್ಜೀವವೋ, ಆಂತರಿಕ ಒತ್ತಡವಿಲ್ಲದ ಕಾವ್ಯವೂ ಹಾಗೆಯೇ" ಬರೆಯುತ್ತಿದ್ದಂತೆಯೇ ಪ್ರಕಟಿಸುವ ಆತುರಕ್ಕಿಂತ, ಅದನ್ನು ಮಥಿಸಿ, ವಿಮರ್ಶಿಸಿ, ಪರಿಪಕ್ವಗೊಳಿಸಿ ಹೊರತರುವ ಸಾಹಿತ್ಯಿಕ ಪ್ರಜ್ಞೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಟಿ.ಎಸ್. ಎಲಿಯಟ್ ಅವರ ಚಿಂತನೆಗೆ ಉಲ್ಲೇಖ ನೀಡುತ್ತಾ, ಕಾವ್ಯವು ಕೇವಲ ವ್ಯಕ್ತಿಗತ ಭಾವನೆಗಳ ಅಭಿವ್ಯಕ್ತಿಯಾಗದೆ, ಸಮಷ್ಟಿಯ ನೋವು-ನಲಿವುಗಳಿಗೆ ಧ್ವನಿಯಾಗಬೇಕು ಎಂಬುದನ್ನು ಅವರು ಸೊಗಸಾಗಿ ವಿಶ್ಲೇಷಿಸಿದರು.
ವೈಯಕ್ತಿಕ ಅನುಭವ ಸಾರ್ವತ್ರಿಕ ಅನುಭವವಾಗಿ ರೂಪಾಂತರಗೊಳ್ಳುವಾಗಲೇ ಕಾವ್ಯ ತನ್ನ ನಿಜವಾದ ಸಾಮಾಜಿಕ ಅರ್ಥವನ್ನು ಪಡೆಯುತ್ತದೆ.
ಅದರಲ್ಲೂ ಕವಿ ಕೇವಲ ಸೌಂದರ್ಯದ ಆರಾಧಕನಾಗಿರದೆ, ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ನೋವಿಗೆ ಧ್ವನಿಯಾಗಬೇಕು.
ಶೋಷಿತರು, ದಲಿತರು, ದುರ್ಬಲರು ಮತ್ತು ನಿರ್ಗತಿಕರ ಬದುಕಿನ ಸಂಕಟಗಳನ್ನು ತನ್ನೊಳಗೆ ಹೊತ್ತುಕೊಂಡಾಗ ಮಾತ್ರ ಕಾವ್ಯಕ್ಕೆ ಸಾಮಾಜಿಕ ಹೊಣೆಗಾರಿಕೆಯ ಅರ್ಥ ದೊರೆಯುತ್ತದೆ ಎಂದು ಸೋದಾಹರಣವಾಗಿ ವಿಶ್ಲೇಷಿಸಿದರು.
ಅಧ್ಯಯನ, ಅನುಭವ, ಸಂವೇದನೆ, ಸಾಮಾಜಿಕ ಬದ್ಧತೆ ಮತ್ತು ಅಪಾರ ಜೀವನಪ್ರೀತಿ—ಇವುಗಳ ಸಂಗಮವೇ ನಿಜವಾದ ಕಾವ್ಯಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದರು.
ಕಾವ್ಯ ಅದು ಒತ್ತಾಯದ ಹೆರಿಗೆಯಲ್ಲ; ಅದು ಬದುಕಿನ ಆಳದಿಂದ ಸಹಜವಾಗಿ ಅರಳುವ ಹೂವು ಎಂದು ಪ್ರೊ ಬೆಳಕೂಡ ಅವರು ಕಾವ್ಯದ ಶೈಲಿ ಕುರಿತು ಮಾರ್ಮಿಕವಾಗಿ ವಿವರಿಸಿದರು.
ವರದಿ:ಡಾ. ಜಯವೀರ ಎ ಕೆ
ಖೇಮಲಾಪುರ

.gif)

.gif)


0 Comments