*ಸರ್ಕಾರಿ ಶಾಲೆಗೆ ಪುತ್ರನ ದಾಖಲಿಸಿ ಆದರ್ಶ ಮೆರೆದ ಡಾ. ವಿಲಾಸ ಕಾಂಬಳೆ*

 *ಸರ್ಕಾರಿ ಶಾಲೆಗೆ ಪುತ್ರನ ದಾಖಲಿಸಿ ಆದರ್ಶ ಮೆರೆದ ಡಾ. ವಿಲಾಸ ಕಾಂಬಳೆ*




ರಾಯಬಾಗ: ಇಂದಿನ ದಿನಗಳಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೇ ಆಯ್ಕೆ ಮಾಡುತ್ತಿರುವ ಸಂದರ್ಭದಲ್ಲಿ, ಕನ್ನಡ ನಾಡು-ನುಡಿಯ ಮೇಲಿನ ತಮ್ಮ ಬದ್ಧತೆಯನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸದೆ, ಕಾರ್ಯರೂಪಕ್ಕೆ ತಂದು ತೋರಿಸಿರುವ ಕನ್ನಡ ಪ್ರಾಧ್ಯಾಪಕ ಡಾ. ವಿಲಾಸ ಕಾಂಬಳೆ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಸುಪುತ್ರ ಕು. ಕಾರ್ತಿಕನನ್ನು ಸರ್ಕಾರಿ ಕನ್ನಡ ಶಾಲೆಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವು-ಬೆಳವಣಿಗೆಯ ಪರವಾಗಿ ಬಲವಾದ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.



ಅಥಣಿ ತಾಲೂಕಿನ ಸುಕ್ಷೇತ್ರ ಶೇಗುಣಶಿ ಗ್ರಾಮದಲ್ಲಿ ಸತ್ಯಪ್ಪ ಹಾಗೂ ಮಾಯವ್ವ ದಂಪತಿಯ ಪುತ್ರನಾಗಿ 01 ಜೂನ್ 1985ರಂದು ಜನಿಸಿದ ಡಾ. ವಿಲಾಸ ಕಾಂಬಳೆ ಅವರು ಬಾಲ್ಯದಿಂದಲೇ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಸ್ವಗ್ರಾಮ ಶೇಗುಣಶಿಯಲ್ಲಿ, ಪ್ರೌಢ ಶಿಕ್ಷಣವನ್ನು ಹಾರೂಗೇರಿಯಲ್ಲಿ ಪೂರ್ಣಗೊಳಿಸಿದರು.

ಉನ್ನತ ಶಿಕ್ಷಣದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ವಿದ್ಯಾಕಾಶಿ ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ. ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದ ಅವರು, ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಎಂ.ಎ. ಪದವಿಯನ್ನೂ ಪ್ರಥಮ ದರ್ಜೆಯಲ್ಲಿ ಸಂಪಾದಿಸಿದರು. ನಂತರ ಜೆಎಸ್‌ಎಸ್ ವಿದ್ಯಾಗಿರಿಯ ಬಿ.ಎಡ್. ಪದವಿಯೊಂದಿಗೆ ತಮ್ಮ ಶೈಕ್ಷಣಿಕ ಪಯಣವನ್ನು ಮತ್ತಷ್ಟು ಸಮೃದ್ಧಗೊಳಿಸಿದರು.

ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜಸೇವೆ, ರಂಗಭೂಮಿ ಹಾಗೂ ಚಲನಚಿತ್ರ ಅಭಿನಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡರು. ಆದರೆ ಅವರ ಜ್ಞಾನ ದಾಹ ಅಷ್ಟಕ್ಕೇ ತಣಿಯಲಿಲ್ಲ. ಕನ್ನಡ ಸಾಹಿತ್ಯದ ಆಳವಾದ ಅಧ್ಯಯನದಲ್ಲಿ ತೊಡಗಿಕೊಂಡ ಅವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಖ್ಯಾತ ವಿದ್ವಾಂಸ ಡಾ. ಗುಂಡಣ್ಣ ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ “ಡಾ. ಸರಜೂ ಕಾಟ್ಕರ ಸಮಗ್ರ ಗದ್ಯ ಸಾಹಿತ್ಯ” ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪದವಿ ಪಡೆದರು.

ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಪಾದಿಸಿದ “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ತ್ರಿಮಂತ್ರವನ್ನು ತಮ್ಮ ಬದುಕಿನ ಮಾರ್ಗದರ್ಶಕ ತತ್ವವಾಗಿ ಅಳವಡಿಸಿಕೊಂಡಿರುವ ಅವರು, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.

ಅವರ ಸೇವೆಯನ್ನು ಗುರುತಿಸಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳು ಅವರನ್ನು ಗೌರವಿಸಿವೆ. ಡಾ. ಡಿ.ಸಿ. ಪಾವಟೆ ಪ್ರಶಸ್ತಿ, ಮಹಾನಾಯಕ ಅಂಬೇಡ್ಕರ್ ಪ್ರಶಸ್ತಿ ಹಾಗೂ ಡಾ. ಅಂಬೇಡ್ಕರ್ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿಗಳು ಅವರ ಸಾಧನೆಗೆ ಸಾಕ್ಷಿಯಾಗಿವೆ.

ಇಂತಹ ಸಾಧಕ-ಶಿಕ್ಷಕನ ವಿಶೇಷತೆ ಕೇವಲ ಪ್ರಶಸ್ತಿಗಳಲ್ಲ; ಅವರು ನಂಬಿದ ಮೌಲ್ಯಗಳನ್ನು ತಮ್ಮ ಜೀವನದಲ್ಲೇ ಅನುಷ್ಠಾನಗೊಳಿಸುವುದರಲ್ಲಿ ಇದೆ. ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಬೇಕೆಂಬ ಉದ್ದೇಶದಿಂದ ತಮ್ಮ ಮಗನನ್ನು ಸರ್ಕಾರಿ ಕನ್ನಡ ಶಾಲೆಗೆ ದಾಖಲಿಸಿರುವುದು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದು, “ಕನ್ನಡದ ಮೇಲಿನ ಪ್ರೀತಿ ಮಾತಿನಲ್ಲಿ ಅಲ್ಲ, ನಡೆ-ನುಡಿಯಲ್ಲಿ ವ್ಯಕ್ತವಾಗಬೇಕು” ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.



ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕರಾಗಿ, ಸಮಾಜಮುಖಿ ಚಿಂತಕರಾಗಿ ಹಾಗೂ ಕನ್ನಡದ ಅಭಿಮಾನಿಯಾಗಿ ಗುರುತಿಸಿಕೊಂಡಿರುವ ಡಾ. ವಿಲಾಸ ಕಾಂಬಳೆ ಅವರ ಈ ನಡೆ, ಸರ್ಕಾರಿ ಶಾಲೆಗಳ ಬಗ್ಗೆ ಸಮಾಜದಲ್ಲಿ ಹೊಸ ವಿಶ್ವಾಸ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.



ವರದಿ: ಡಾ. ಜಯವೀರ ಎ. ಕೆ.,     ಖೇಮಲಾಪುರ

Image Description

Post a Comment

0 Comments