ಪ್ರೊ .ಬಿ. ಆರ್ ಹಿರೇಮಠ ಗುರುಗಳೆಂಬ ಶೋಧವೃಕ್ಷ

 ಪ್ರೊ .ಬಿ. ಆರ್ ಹಿರೇಮಠ ಗುರುಗಳೆಂಬ ಶೋಧವೃಕ್ಷ 



    ಪ್ರೊ. ಬಿ .ಆರ್ ಹಿರೇಮಠ ಗುರುಗಳ ಮಾತೃಹೃದಯದ ಪ್ರೀತಿಯ ಮಮತೆಯ ಸವಿಯುಂಡ ವಿದ್ಯಾರ್ಥಿಗಳ ಬಳಗದಲ್ಲಿ ನಾನು ಒಬ್ಬಳು. ೧೯೯೮ರಲ್ಲಿ ಕವಿವಿ ಕನ್ನಡ ಅಧ್ಯಯನ ಪೀಠಕ್ಕೆ ಸ್ನಾತಕೋತ್ತರ ಕನ್ನಡ ವಿದ್ಯಾರ್ಥಿನಿಯಾಗಿ ನಾನು ಅಧ್ಯಯನಕ್ಕೆ ಸೇರಿದೆ.

ಅಲ್ಲಿರುವ ಅಧ್ಯಾಪಕ ಬಳಗದ ವಿದ್ವಾಂಸರ ದೊಡ್ಡ ದಂಡು ನೋಡಿ ಬೆರಗಾಗಿದ್ದೆ. ಎರಡು ವರ್ಷ ಸ್ನಾತಕೋತ್ತರ ಎಂ ಎ ಪದವಿಯನ್ನು ಪೂರ್ಣಗೊಳಿಸುವ ಹೊತ್ತಿನಲ್ಲಿ ಓದಿನ, ಅಧ್ಯಯನದ, ಸಂಶೋಧನೆಯ  ಅಲ್ಪ ಅರಿವು ನನ್ನಲ್ಲಿ ಮೂಡಿತ್ತು. ಪ್ರೊ ಬಿ ಆರ್ ಹಿರೇಮಠ ಸರ್ ನಮಗೆ ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಪ್ರಾಚೀನ ಕನ್ನಡ ಸಂಸ್ಕೃತಿ ಕುರಿತಾಗಿ  ಪಾಠ ಮಾಡುವಾಗ ಅತ್ಯಂತ ತನ್ಮಯತೆಯಿಂದ ಕೇಳುತ್ತಿದ್ದೆ ಅವರ ಅಗಾಧವಾದ ಜ್ಞಾನಕ್ಕೆ ಶರಣೆಂದೆ....

     ಅಧ್ಯಾಪನದ ಹೊರತಾಗಿ ಅವರೊಬ್ಬ ಅಪರೂಪದ ಸಂಶೋಧಕರಾಗಿದ್ದರು. ಕಳೆದ  ೫೦ ದಶಕಗಳ ಹಿಂದೆ ಅತೀ ಜರೂರಾಗಿ ನಡೆಯಲೇ ಬೇಕಾದ ಆ ಕಾಲಘಟ್ಟದಲ್ಲಿನ ಮಹತ್ವದ ಸಂಶೋಧನಾ ಯೋಜನೆಗಳನ್ನು  ಬಿ. ಆರ್. ಸರ್ ಯಶಸ್ವಿಯಾಗಿ ನಿರ್ವಹಿಸಿದ್ದರು.ಶರಣ ಸಾಹಿತ್ಯ, ವಚನ ಸಾಹಿತ್ಯದ  ಸಂಶೋಧನೆ ಮತ್ತು ಗ್ರಂಥ ಸಂಪಾದನೆಯ ಅತೀ ಮಹತ್ವದ ಕೆಲಸಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡ ನಾಡಿನ ಶ್ರೇಷ್ಠ ವಿದ್ವಾಂಸರಲ್ಲಿ ಪ್ರೊ ಬಿ ಆರ್ ಅವರದು ಮುಂಚೂಣಿಯಲ್ಲಿರುವ ಹೆಸರು .ಆ ದಿನಗಳಲ್ಲಿ ನಾಡಿನ ಬೆರಳೆಣಿಕೆಯಷ್ಟು ವಿದ್ವಾಂಸರು ಮಾತ್ರ ಸಂಶೋಧನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಪ್ರಮುಖವಾಗಿ  ಆ ದಶಕದಲ್ಲಿ  ವಚನ ಸಾಹಿತ್ಯ ಸಂಶೋಧನೆ ಪರಿಷ್ಕರಣೆ  ಗ್ರಂಥ ಸಂಪಾದನೆಯ ಕ್ಷೇತ್ರದಲ್ಲಿ  ಅತೀ ಮಹತ್ವದ  ಕಾರ್ಯಗಳು ನಡೆಯುತ್ತಿದ್ದವು.ಕವಿವಿಯ ಆರ್ ಸಿ ಹಿರೇಮಠ  ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ಬಳಗಕ್ಕೆ ಆಗ ನಾಡಿನಾದ್ಯಂತ ಬಹುದೊಡ್ಡ ಹೆಸರಿತ್ತು .ವಿದ್ವತ್ಪೂರ್ಣ ‍ಬರಹಗಳಿಂದ, ತಲಸ್ಪರ್ಶಿ ಸಂಶೋಧನಾ ಪ್ರಬಂಧಗಳಿಂದ ಪ್ರಬುದ್ಧ ಭಾಷಣಗಳಿಂದ ನಾಡಿನ ಮನೆ ಮಾತಾಗಿದ್ದರು. ಆ ದಿನಗಳಲ್ಲಿ  ನಾಡಿನ ಪ್ರಮುಖ ಮಠಗಳು ವಚನ ಸಾಹಿತ್ಯದ  ಪ್ರಚಾರ, ಪ್ರಸಾರ, ಪ್ರಕಟಣೆಯಲ್ಲಿ ತೊಡಗಿದ್ದವು.ಈ ಮಹತ್ವದ  ಸಂಶೋಧನಾ ಕಾರ್ಯದಲ್ಲಿ ಗುರುತಿಸಿಕೊಂಡ ಪ್ರಮುಖ ಪ್ರಾಧ್ಯಾಪಕರಲ್ಲಿ ಪ್ರೊ ಬಿ.ಆರ್ ಸರ್ ಅವರದು ಬಹುದೊಡ್ಡ ಕೊಡುಗೆಯಾಗಿತ್ತು.

    ಇತ್ತೀಚೆಗೆ ನನ್ನ  ಓದು ಅಧ್ಯಯನಗಳ ಸಂದರ್ಭದಲ್ಲಿ  ಕವಿವಿಯ ಪ್ರಾಧ್ಯಾಪಕ ಬಳಗದ ಅಮೂಲ್ಯವಾದ ಬರಹ ಮತ್ತು ಸಂಶೋಧನೆಗಳನ್ನು ನೋಡಿ ಅತೀವ ಹೆಮ್ಮೆ  ಅಭಿಮಾನ ಮೂಡಿದ್ದು ಸತ್ಯ.ವಿದ್ಯಾರ್ಥಿನಿಯಾಗಿದ್ದ ಸಂದರ್ಭದಲ್ಲಿ ಇಷ್ಟು  ತಿಳುವಳಿಕೆ ನನಗಿರಲಿಲ್ಲ.ನಾನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ೨೦೧೩ರಲ್ಲಿ ಕನ್ನಡ ವಿಭಾಗದಲ್ಲಿ ನೇಮಕಾತಿಯಾದಾಗ, ಓದಿನ ಅರಿವು ಪಾಠದ ತಿಳುವಳಿಕೆ  ಮತ್ತು ಸಂಶೋಧನೆಯ ಮಹತ್ವದ ಕುರಿತಾಗಿ ತಿಳಿದುಕೊಂಡೆ .          


     ಅಧ್ಯಾಪಕರಾದವರು ನಿರಂತರವಾಗಿ ಬೋಧನೆ ಶೋಧನೆ ಅಧ್ಯಯನ  ಅಧ್ಯಾಪನಗಳಲ್ಲಿ ಕ್ರಿಯಾಶೀಲರಾಗಿರ ಬೇಕೆಂಬ ಪ್ರೊ .ಬಿ .ಆರ್ ಸರ್ ಅವರ ಮಾತು ನಿತ್ಯವೂ  ನೆನಪಾಗುತ್ತದೆ. ೧೯೯೯ರ ಅಂತ್ಯದಲ್ಲಿ ನಮ್ಮ ಸ್ನಾತಕೋತ್ತರ ಪದವಿ ಪೂರ್ಣವಾತು.

ಅದೇ ದಿನಗಳಲ್ಲಿ ನನ್ನ ಮದುವೆ ಕೂಡ ಆತು. ಮುಂದೆ ಪಿಹೆಚ್‌ಡಿ ಸಂಶೋಧನೆ ಮಾಡುವ ನನ್ನ  ಆಶೆಯೂ ಕೈಗೂಡಿತು. ಹುಬ್ಬಳ್ಳಿಯ ನೆಹರು ಕಾಲೇಜು ಪ್ರಾಧ್ಯಾಪಕರಾದ ಡಾ.ದಸ್ತಗಿರಿ ಸರ್ ಕಡೆಗೆ "ಕನ್ನಡ ಸಾಹಿತ್ಯಕ್ಕೆ ಮುಸ್ಲಿಂ ಕಾದಂಬರಿಕಾರರ ಕೊಡುಗೆ" ಕುರಿತಾಗಿ ಪಿಹೆಚ್‌ಡಿ ಅಧ್ಯಯನ ಪ್ರಾರಂಭಿಸಿದೆ.ಆದರೆ ೨೦೦೧ ರಿಂದ ೨೦೦೩ರ ವರೆಗೆ ಮಾತೃತ್ವದ ಜವಾಬ್ದಾರಿಗಳನ್ನು ನಿಭಾಯಿಸುವ ಹೊತ್ತಿನಲ್ಲಿ ಓದಲು ಬರೆಯಲು ಆಗಲಿಲ್ಲ  ಅಲ್ಲಿಗೆ ಪಿಹೆಚ್‌ಡಿ  ಆಶೆ ಕೈ ಬಿಟ್ಟೆ...ಮುಂದೆ ೨೦೦೪ರಲ್ಲಿ ವಿಭಾಗದಲ್ಲಿನ ಒಂದು ಕಾರ್ಯಕ್ರಮಕ್ಕೆ ಹೋದಾಗ ಪ್ರೊ. ಬಿ. ಆರ್ ಸರ್ ಮುಂದೆ ನನ್ನ ಅಸಹಾಯಕತೆ ತೋಡಿಕೊಂಡೆ, ತಕ್ಷಣವೇ ಅವರು ನಿನ್ನ ಈ ಉತ್ಸಾಹಕ್ಕೆ ಖಂಡಿತವಾಗಿಯೂ ನಾನು ಸಹಾಯ ಮಾಡುವೆ ಎಂದು ನನ್ನ ಕುಟುಂಬದ ಹೊಣೆಗಾರಿಕೆಯ ಜೊತೆಯಲ್ಲಿ ಸಂಶೋಧನೆ ಮಾಡಲು ನೆರವಾಗುವಂತೆ ಹುಬ್ಬಳ್ಳಿಯ ಖ್ಯಾತ ಸಾಹಿತಿಗಳಾದ "ಶ್ರೀ ಎಂ ಡಿ ಗೋಗೇರಿಯವರ ಸಮಗ್ರ ಸಾಹಿತ್ಯ" ಕುರಿತಾಗಿ ಅಧ್ಯಯನ ಮಾಡುವಂತೆ ಹೇಳಿದರು.ಅದರೊಂದಿಗೆ ತಮ್ಮ ಕಡೆಯಲ್ಲಿ ಖಾಲಿ ಇದ್ದ ಸಂಶೋಧನಾ ವಿದ್ಯಾರ್ಥಿ ಸೀಟ್ ನೀಡಿ ನನ್ನ ಪಿಹೆಚ್‌ಡಿ ಆಶೆಗೆ ಪೋಷಣೆ ನೀಡಿದರು.ಅವರ ಮಾರ್ಗದರ್ಶನದಲ್ಲಿ ೨೦೦೬ರಲ್ಲಿ ನನ್ನ ಸಂಶೋಧನಾ ಅಧ್ಯಯನ ಅಂತಿಮವಾಗಿ ಒಂದು ಹಂತಕ್ಕೆ ಬಂದಿತ್ತು.ಅವರ ನಿರಂತರವಾದ ಮಾರ್ಗದರ್ಶನದಲ್ಲಿ ನಾನು ಬಹಳಷ್ಟು ಕಲಿತೆ. ಕ್ರಮಬದ್ಧವಾಗಿ ಓದುವ, ಟಿಪ್ಪಣಿ ಮಾಡಿಕೊಳ್ಳುವ, ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ರೂಢಿಸಿಕೊಂಡೆ.

ಆ ದಿನಗಳಲ್ಲಿ ಪ್ರೊ. ಬಿ .ಆರ್ ಸರ್ ಕಡೆಯಿಂದ ನಾಲ್ಕಾರು ಬಾರಿ ಬೈಸಿಕೊಂಡ ನಂತರ ಬಹಳ ಸಿರಿಯಸ್ ಆಗಿ ಓದಲು ಬರೆಯಲು ಕಲಿತೆ.ಅವರು ಕೇವಲ ಸಂಶೋಧನಾ ಮಾರ್ಗದರ್ಶಕರಾಗಿರದೆ ನಮ್ಮ ಮುಂದಿನ ಭವಿಷ್ಯದ ಬಗ್ಗೆಯೂ ದಾರಿ ತೋರಿದರು. ಹತ್ತಾರು ಕೃತಿಗಳನ್ನು  ಅಭ್ಯಸಿಸಲು ನೀಡಿದರು.ನಾನು ಬರೆದ ಅಧ್ಯಾಯಗಳನ್ನು ಬಹಳ ತಾಳ್ಮೆಯಿಂದ ತಿದ್ದಿದರು.

ಸಂಶೋಧನಾ ಬರವಣಿಗೆಯೆಂದರೆ ಹೇಗೆ ಇರಬೇಕು ಅಂತ ಕಲಿಸಿದರು. ಇಪ್ಪತ್ತೈದು ವರ್ಷಗಳ ಹಿಂದೆ ಅಂತಹ ಪ್ರಾಧ್ಯಾಪಕರ ಕೈಯಲ್ಲಿ ಕಲಿತ ನಮಗೆ ಇಂದು ಅದರ ಮಹತ್ವ ಗೊತ್ತಾಗಿದೆ.  ಅಧ್ಯಯನ,ಅಧ್ಯಾಪನ,  ಸಂಶೋಧನೆ  ಮಾಡುವ ಬಗೆಯನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಂಡಿದ್ದೇನೆ ಎಂದರೆ ಅದಕ್ಕೆ ಅಂದಿನ ನಮ್ಮ  ಕವಿವಿ ಪ್ರಾಧ್ಯಾಪಕ ಬಳಗದ ವ್ಯಕ್ತಿತ್ವದ ಪ್ರಭಾವೆಂದರೆ ಅತೀಶಯೋಕ್ತಿಯಲ್ಲ.ಅಂತಹ ವಿದ್ವತ್ಪೂರ್ಣ ಮಾರ್ಗದರ್ಶಕರ ಕೊರತೆಯ ಈ ದಿನಗಳಲ್ಲಿ ಪ್ರೊ. ಬಿ. ಆರ್ ಸರ್ ಅಂತಹ ಸಹೃದಯ ಗುರುಗಳ ಮಹತ್ವ ಈಗ ಗೊತ್ತಾಗುತ್ತಿದೆ. 

        ೨೦೦೬ -೦೭ರ ಅವಧಿಯಲ್ಲಿ ನನ್ನ ಪಿಹೆಚ್‌ಡಿ ಅಧ್ಯಯನ ಅಂತಿಮವಾಗಿ ವಿಶ್ವವಿದ್ಯಾಲಯಕ್ಕೆ ಸಲ್ಲಿಕೆಯಾಗಬೇಕಿತ್ತು.ಸರ್ ಅವರ ಅನಾರೋಗ್ಯದಿಂದ ನಾಲ್ಕಾರು ತಿಂಗಳುಗಳು ತಡೆಯಬೇಕಾತು. ಆ ದಿನಗಳಲ್ಲಿ ಸರ್ ಅವರನ್ನು ಕಳೆದುಕೊಂಡ ನನಗೆ ಆಕಾಶವೇ ಕಳಚಿ ಬಿತ್ತು. ಪಿಹೆಚ್‌ಡಿ ಅಧ್ಯಯನದ ಹಣೆಬರಹವೇ ಹೀಗೆ ದುರಂತದ ಹಾದಿ ಹಿಡಿತು ಅಂತ ಬಹಳ ನೊಂದೆ.ಆದರೆ ವಿಭಾಗದ ಅಂದಿನ ಮುಖ್ಯಸ್ಥರಾಗಿದ್ದ ಪ್ರೊ ಮಹೇಶ್ವರಯ್ಯ ಸರ್ ಬೇರೆ ಮಾರ್ಗದರ್ಶಕರನ್ನು ಒದಗಿಸುವ ಭರವಸೆ ನೀಡಿದರು.ಮುಂದೆ ೨೦೦೭ರಲ್ಲಿ ನನ್ನ ಸಂಶೋಧನೆಯ ಕೊನೆಯ ಹಂತದಲ್ಲಿರುವ ಮಹಾ ಪ್ರಬಂಧಕ್ಕೆ  ಪ್ರೊ ನಿಜಲಿಂಗಪ್ಪ ಮಟ್ಟಿಹಾಳ ಸರ್ ಅವರ  ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪದವಿ ಪಡದೆ.

     ಹೆಣ್ಣುಮಕ್ಕಳು ಎಷ್ಟೇ ಕಲಿತರು ಸಂಸಾರ, ದಾಂಪತ್ಯ, ಮಕ್ಕಳು ಹಾಗೂ  ವಯಕ್ತಿಕ ಕರಿಯರ್ ಮಾಡಿಕೊಳ್ಳಲು ಎಷ್ಟೊಂದು ಕಷ್ಟಕರ ಪರಿಸ್ಥಿತಿ ಅನುಭವಿಸಬೇಕು, ಎಷ್ಟೊಂದು  ಅನಾನುಕೂಲಗಳನ್ನು  ಎದುರಿಸಬೇಕು, ಅಂತಹ ಸಮಯದಲ್ಲಿ  ಸರಿಯಾದ ವ್ಯಕ್ತಿಗಳು ನಮಗೆ ದಾರಿ ತೋರದಿದ್ದಲ್ಲಿ ನಮ್ಮಂತಹ ಅದೆಷ್ಟೋ ಹೆಣ್ಣುಮಕ್ಕಳು  ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಿತ್ತು ಎಂಬುದನ್ನು ನೆನಪಿಸಿಕೊಂಡಾಗಲೊಮ್ಮೆ , ಪ್ರೊ.ಬಿ .ಆರ್ ಸರ್ ಅವರ ತಾಯ್ತನದ ಬಗ್ಗೆ ಅಪಾರ ಅಭಿಮಾನ ಮೂಡುತ್ತದೆ.ಅಂದು ಅವರು ಕಲಿಸಿಕೊಟ್ಟ ಓದು ಬರಹಗಳು ಇಂದು ಕೈ ಹಿಡಿದು ಮುನ್ನಡೆಸಿವೆ.

   ಪ್ರೊ ಬಿ .ಆರ್ ಹಿರೇಮಠ ಗುರುಗಳಿಂದ ಇನ್ನೂ  ಕಲಿಯುವುದು ತಿಳಿಯುವುದು ಬಹಳ ಇತ್ತು ಅಂತ ಈಗ ಅನಿಸುತ್ತಿದೆ.ಅಂತಹ ಮೇರು ವ್ಯಕ್ತಿತ್ವದ, ಬಹುಮುಖಿ ಜ್ಞಾನ ಶಿಸ್ತಿನ ಸಂಶೋಧನಾ ವೃಕ್ಷದ ಛಾಯೆಯನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕ ಅನಾಥವಾಗಿದೆ.


ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ 

ಸದಸ್ಯರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು 

9880839382

Image Description

Post a Comment

0 Comments