"ಇದು ಮುತ್ತಿನ ಕವಿತೆಯಲ್ಲ.. ಮುತ್ತೇ ಕಾವ್ಯವಾದ ಸವಿ ಸುಂದರ ಕಥೆ. ಚುಂಬಕ ಚುಂಬನದ ಮಧು ಭಾಷ್ಯದ ಮಧು ಮಧುರ ಭಾವಗೀತೆ. ಇಲ್ಲಿ ಅಸ್ವಾಧಿಸಿದಷ್ಟೂ ಅಧರಾನುರಾಗದ ಶೃಂಗಾರ ಸಾರವಿದೆ. ಅನುಭಾವಿಸಿದಷ್ಟೂ ಒಲವಿನಾರಾಧನೆಯ ವಿಸ್ತಾರವಿದೆ. ಅರಿತಷ್ಟೂ ಮುತ್ತಿನ ಮತ್ತು ಘಮ್ಮತ್ತಿದೆ. ಅರ್ಥೈಸಿದಷ್ಟೂ ಕಿಸ್ಸಿನ ಕಿಸ್ಮತ್ತು ಕಿಮ್ಮತ್ತಿದೆ. ನವಿರು ಪುಳಕ ಸಂವೇದನೆಗಳ ಈ ಮಧುಕಾವ್ಯ ನಿಮ್ಮ ನಿಮ್ಮ ಭಾವದೊಲುಮೆಗೆ, ಎದೆಭಾಷ್ಯಚಿಲುಮೆಗೆ, ನಿಲುಮೆಗೆ, ನಲುಮೆಗೆ ಬಿಟ್ಟಿದ್ದು.. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಅಧರಂ ಮಧುರಂ..!
ಅಧರದ ಲೇಖನಿಯಲಿ
ಒಲವಿನ ಶಾಯಿ ತುಂಬಿ
ಕದಪುಗಳ ಹಾಳೆ ಮೇಲೆ
ಮುತ್ತಿನ ಕಾವ್ಯ ಬರೆಯಲೆ.?
ತುಟಿಗಳ ಕುಂಚದಲಿ
ಪ್ರೇಮದ ಬಣ್ಣಗಳ ತುಂಬಿ
ಕೆನ್ನೆಯ ಕ್ಯಾನ್ವಾಸಿನ ಮೇಲೆ
ಚುಂಬನ ಚಿತ್ತಾರ ಬಿಡಿಸಲೆ.?
ಅಧರಗಳ ಉಳಿಯಿಂದ
ಅನುರಾಗದ ಸುತ್ತಿಗೆ ಬಳಸಿ
ಕಪೋಲಗಳ ಹಾಸಿನ ಮೇಲೆ
ಮುತ್ತಿನ ಶಿಲ್ಪ ಕೆತ್ತಲೆ.?
ಎದೆಯ ಭಾವ ಬತ್ತಿಯಲಿ
ಪ್ರೀತಿಭಾಷ್ಯದ ತೈಲ ತುಂಬಿ
ನಿನ್ನಯ ನೊಸಲಿನ ಮೇಲೆ
ಚುಂಬನ ಪ್ರಣತೆ ಬೆಳಗಲೆ.!
ತುಟಿಗಳ ಸವಿಸುಧೆಯಿಂದ
ಚುಂಬಕ ಮಧುಧಾರೆ ಹರಿಸಿ
ಗಲ್ಲದ ಸೂಜಿಗಲ್ಲಿನ ಮೇಲೆ
ಮುತ್ತುಮತ್ತಿನ ಮುದ್ರೆ ಒತ್ತಲೆ?
ಒಂದೊಂದು ಮುತ್ತಿನಲು
ಹೃದಯ ಜೀವಸೆಲೆ ತುಂಬಿ
ಕಂಗಳ ಕೋಲ್ಮಿಂಚ ಮೇಲೆ
ಚುಂಬನ ಬೆಳದಿಂಗಳ ಸ್ಫುರಿಸಲೆ.?
ನನ್ನಯ ಉಸಿರು ಉಸಿರಿನಲಿ
ಚಿರಪ್ರೇಮದ ಚಿಲುಮೆ ಚಿಮ್ಮಿಸಿ
ಹುಬ್ಬುಗಳ ನಡುವಿನಲಿ ಬಾಲೆ
ಆರಾಧನೆಯ ಮುತ್ತುತಿಲಕವಿಡಲೆ.?
ಎ,ಎನ್.ರಮೇಶ್.ಗುಬ್ಬಿ.

.gif)

.gif)


0 Comments