ಪ್ರಸ್ತುತ ಸಾಂಸ್ಕೃತಿಕ - ಸಿನಿಮಾ ಲೋಕದ ಬರಡುತನದಲ್ಲಿ ಡಾ. ರಾಜಕುಮಾರ ಹೆಚ್ಚು ಆಕರ್ಷಿತ ಕನ್ನಡತ್ವದ ಮಾದರಿ ಪ್ರತಿಮೆ.
ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಸಾಧಕ ಮಹಾನ್ ವ್ಯಕ್ತಿಗಳ ಹಿಂದೆ ವ್ಯಕ್ತಿತ್ವದ ಪ್ರಾಧಾನ್ಯತೆ ಇದೆ. ಚಾರಿತ್ರ್ಯ ರಹಿತ ಸಾಧನೆ ಖಂಡಿತಾ ಸಾಧ್ಯವಿಲ್ಲ. ಪ್ರಸ್ತುತ ಚಾರಿತ್ರ್ಯ ರಹಿತ ಸಾಧಕ ಮುಖಗಳು ವಿರಾಜಿಸುವ ಸಂದರ್ಭದಲ್ಲಿ ಚಾರಿತ್ರ್ಯಿಕ ವ್ಯಕ್ತಿತ್ವಗಳು ಮುನ್ನಲೆಗೆ ಬಂದು ಕಾಡುತ್ತವೆ; ನಿರ್ದೇಶಿಸುತ್ತವೆ. ರಾಜಕುಮಾರ ಇಂದು ಹೆಚ್ಚು ಪ್ರಸ್ತುತವಾಗುವುದು ಇದೇ ಕಾರಣಕ್ಕೆ.
ಗಾಜನೂರ ಹಳ್ಳಿಯ ಮಣ್ಣಿನ ಸೊಗಡಿನಲ್ಲಿ ಮುತ್ತುರಾಜನಾಗಿದ್ದವ ಕನ್ನಡದ ರಾಜಕುಮಾರ ಆಗಬೇಕಾದರೆ ಅದರ ಹಿಂದಿನ ನಡುಗೆ ಅಸಾಮಾನ್ಯವಾದುದು. ಬಡವ, ಅಸಹಾಯಕ, ದುರ್ಬಲ ಹಾಗೂ ತಳಸಮುದಾಯಗಳ ಪ್ರಾಮಾಣಿಕತೆ, ಪರಿಶ್ರಮ, ಪ್ರತಿಭೆಯನ್ನು ಸಹಿಸಿಕೊಳ್ಳಲು ಸಾಧ್ಯವಿರದ ಈ ನೆಲದಲ್ಲಿ ಈ ವರ್ಗದ ಶ್ರಮಜೀವಿ ಉನ್ನತಮಟ್ಟಕ್ಕೆ ಏರುವುದು ಬೆಂಕಿಯ ನಡುಗೆಯಾಗಿರುತ್ತದೆ.
ಅದರ ಹಿಂದೆ ಕಷ್ಟ ಸಹಿಷ್ಣುತೆ, ಅಪಮಾನ -ಅವಮಾನಗಳ ಸರಮಾಲೆ, ಬಡತನ - ಹಸಿವಿನ ಅಗ್ನಿಕುಂಡ, ತಿರಸ್ಕಾರ - ತುಳಿತ - ಒದೆತ, ಮೂಲೆಗುಂಪು ಮಾಡುವ ಹುನ್ನಾರಗಳು ಇತ್ಯಾದಿ ಅಮಾನವೀಯ ವರ್ತನೆಗಳಿಗೆ ಮುಖಾಮುಖಿಯಾಗಿ , ಎದುರಾಗುವ ಇಂಥ ಸವಾಲುಗಳನ್ನು ಹೆಗಲಿಗೆ ಹಾಕಿ ಸ್ವಾಭಿಮಾನದೊಂದಿಗೆ ಸಾಗುವ - ಸಾಧಿಸುವ ಛಲ ನಿಜವಾದ ಬೆವರು ಸಂಸ್ಕ್ರತಿಗೆ ಮಾತ್ರ ಸಾಧ್ಯವಿದೆ. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿವೆ. ಅದರಲ್ಲಿ ರಾಜ್ ಒಬ್ಬರು.
ಬಡತನದಲ್ಲಿ ಸ್ವಾಭಿಮಾನ ಕಳೆದುಕೊಳ್ಳದೆ; ಸಿರಿತನದಲ್ಲಿ ಅಹಂಕಾರ ಪ್ರವೇಶಿಸದಂತೆ ಎಲ್ಲರೊಳು ಒಂದಾಗಿ ಜೀವಿಸುವ ಸಾಧಕನ ಬದುಕಿನ ಕ್ರಮ ದೊಡ್ಡ ತಪಸ್ಸು. ಹಣ, ಅಧಿಕಾರ, ಪ್ರಚಾರ, ಪ್ರಶಸ್ತಿ - ಅಹಂಕರಾದ ಮುಕ್ತ ಪ್ರವೇಶ ದ್ವಾರಗಳು. ಹಸಿವು, ಬಡತನ ಮತ್ತು ಅವಮಾನಗಳ ಕ್ರೂರತೆಯನ್ನು ಚನ್ನಾಗಿ ಅನುಭವಿಸಿ ಬೆಳೆದ ರಾಜಕುಮಾರ ಅವರು ಹಣದ ರಾಶಿ ಕಂಡಿದ್ದಾರೆ, ಪ್ರಶಸ್ತಿ - ಪ್ರಚಾರದ ಯಾರೂ ಏರಲಾರದ ಎತ್ತರದ ಶಿಖರಕ್ಕೆ ಏರಿದ್ದಾರೆ. ಅಧಿಕಾರದ ತೋರಣ ಮನೆ ಬಾಗಿಲಿಗೆ ಬಂದರೂ ನಯವಾಗಿ ಸರಸಿಟ್ಟಿದ್ದಾರೆ. ಇವು ಯಾವುದನ್ನೂ ತಲೆಗೆ ತಂದುಕೊಳ್ಳದೆ, ಇವೆಲ್ಲ ಅಶಾಶ್ವತ ಎಂದರಿತು, ತಾನೊಬ್ಬ ಪಾತ್ರದಾರಿ, ಅಭಿಮಾನಿ ದೇವರುಗಳು ಸೂತ್ರದಾರಿ ಎಂದುಕೊಂಡು ವಿನಿತ್ವದ ಹೃದಯ ವೈಶಾಲತೆ ಕಾಯ್ದುಕೊಂಡು ಬದುಕಿದವರು. ಈ ನಡೆ ಅವರಲ್ಲಿ ಅವಕಾಶವಾದಿತ್ವದ ಕೃತ್ರಿಮವಾಗಿರಲಿಲ್ಲ. ಜೀವನದ ಸಹಜ ಕ್ರಮವಾಗಿತ್ತು. ಇದು ಚಾರಿತ್ರ್ಯದ ಒಂದು ಮುಖ.
ಮಣ್ಣಿನ ಸೊಗಡಿನ ಬೆವರು ಸಂಸ್ಕ್ರತಿಯೊಂದಿಗೆ ಬೆಳೆದ ಡಾ. ರಾಜ್ ನಿರಂತರ ಅಪ್ಪಟ ಶ್ರಮಜೀವಿ. ತನ್ನ ಕಾಯಕ ಪಾವಿತ್ರ್ಯವೆಂದು ಭಾವಿಸಿ, ತನ್ಮಯತೆ ಸಾಧಿಸಿ ಆನಂದಿಸಿದವರು. ("ದುಡಿಮೆಯ ನಂಬಿ ಬದುಕು; ಅದರಲ್ಲಿ ದೇವರ ಹುಡುಕು" - ತತ್ವ ಪಾಲಿಸಿದವರು). ಕಾಯಕನಿಷ್ಠೆಯಲ್ಲಿ ಪ್ರಯೋಗಶೀಲ ವ್ಯಕ್ತಿತ್ವ. ತೆಗೆದುಕೊಂಡ ಪಾತ್ರಗಳಲ್ಲಿ ಒಳ ಪ್ರವೇಶಿಸಲು ಅವರು ತಮ್ಮನ್ನು ಏಕಾಂಕಿಯಾಗಿ ಜೀವದ ಹಂಗು ತೊರೆದು ಪ್ರಯೋಗಕ್ಕೆ ಒಳಪಡಿಸಿಕೊಳ್ಳುತ್ತಿದ್ದರು. ಧಾರ್ಮಿಕ, ಚಾರಿತ್ರ್ಯಿಕ, ಸಾಮಾಜಿಕ ವಿಶೇಷ ಪಾತ್ರಗಳಲ್ಲಿ ಲೀನತೆ ಸಾಧಿಸಲು ಅವರು ಮಾಡಿದ ಪ್ರಯೋಗಗಳು ಅನೇಕ ನಿರ್ದೇಶಕರು ಉದಾಹರಣೆ ಸಹಿತ ವಿವರಿಸಿದ್ದಾರೆ. ಅವರು ನಿರ್ವಹಿಸಿದ ಪಾತ್ರಗಳನ್ನು ಏಕಚಿತ್ತದಿಂದ ಗಮನಿಸಿದ ಪ್ರತಿಯೊಬ್ಬರಿಗೂ ಅನುಭವಕ್ಕೆ ಬರುತ್ತದೆ.
ಅವರ ದೇಹ ಸೌಂದರ್ಯದ ಚೌಕಟ್ಟು ಮತ್ತು ಅಂತರಂಗದ ಸೌಂದರ್ಯಕ್ಕೆ ಅವರೊಳಗಿನ ಮುಕ್ತಭಾವ ಹಾಗೂ ಯೋಗದ ಸಾಧಕತೆ ಕಾರಣ. ಭೌತಿಕ ಮತ್ತು ಬೌದ್ದಿಕ ಪಾವಿತ್ರ್ಯಕ್ಕೆ ಆದ್ಯತೆ ನೀಡಿ ಜೀವಿಸಿದ ಅಪರೂಪದ ವ್ಯಕ್ತಿ. ಅವರ ಕಂಠ ಮಾಧುರ್ಯದಿಂದ ಲಯಗೊಳುವ ಗಾಯನದ ನಾದ ಮಂತ್ರಮುಗ್ಧಗೊಳಿಸುವ ಶಕ್ತಿ. ಅವರ ಮುಗ್ಧತೆ ಮಾತು, ಗಾಯನ ಮತ್ತೇ ಮತ್ತೇ ಕೇಳಬೇಕೆಂಬ ಹಂಬಲ.
ರಾಜ್ ವಿನಿತ್ವದ ಪ್ರತಿರೂಪವಾದರೂ ವ್ಯವಸ್ಥೆ ಬಗೆಗಿನ ಸಿಟ್ಟು ಇರಲಿಲ್ಲಂತಲ್ಲ. ತುಂಬಾ ಇತ್ತು. ನುಂಗಿಕೊಂಡ ವಿಷಕಂಠ. ಅದಕ್ಕೆ ಬಹಿರಂಗ ವೇದಿಕೆಗಳನ್ನು ಬಳಸಿಕೊಳ್ಳದೆ ಸಿನಿಮಾಗಳ ಅಸ್ತ್ರಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಇದಕ್ಕೆ ಸಂಪತ್ತಿಗೆ ಸವಾಲ್, ಗಿರಿ ಕನ್ಯೆ, ಜ್ವಾಲಾಮುಖಿ, ಬಡವರ ಬಂಧು ಮೊದಲಾದ ಚಿತ್ರಗಳು ನಿದರ್ಶನ.
ಮಣ್ಣಿನ ಮೂಲದಿಂದ ಬಂದ ಮುತ್ತುರಾಜ ಕನ್ನಡದ ರಾಜಕುಮಾರನಾಗಿ ಮೆರೆದರೂ ತಾನು ಮಾತ್ರ ಮರಳಿ ಮುತ್ತುರಾಜನಾಗಿಯೇ ಇರಬೇಕೆಂದು ಯಾವತ್ತೂ ಗಾಜನೂರಿನ ಆ ಹಂಚಿನ ಮನೆ, ಆತ್ಮದೊಂದಿಗೆ ಸಂವಾದಿಸುವ ಆಲದ ಮರ, ಮಣ್ಣಿನಲ್ಲಿ ದೈವತ್ವ ಕಂಡ ಆ ಹೊಲದ ಪ್ರೀತಿ ಕಾಡಿದ್ದು ಮತ್ತು ಸೆಳೆದದ್ದು ಜಾಸ್ತಿ. ಇದು ರಾಜಕುಮಾರನ ಚಾರಿತ್ರ್ಯದ ಇನ್ನೊಂದು ಮುಖ.
ಇಂದು ಅವರ ಜನ್ಮ ದಿನ. ರಾಜ್ ವ್ಯಕ್ತಿತ್ವ ಸದಾ ಹಚ್ಚ ಹಸಿರು.
*-ಡಾ. ಕೆ. ಎನ್. ದೊಡ್ಡಮನಿ*

.gif)

.gif)


0 Comments