*"ಗ್ರಂಥ ಸಂಪಾದನೆ ಒಂದು ವೈಜ್ಞಾನಿಕ ಹಾಗೂ ಸೃಜನಾತ್ಮಕ ಕಲೆಯಾಗಿದೆ":*
*ಡಾ. ಜಯವೀರ ಎ. ಕೆ*
ಅಂಕಲಿ:ಸುವ್ಯವಸ್ಥಿತ ಹಾಗೂ ಯೋಜನಾಬದ್ದ ಅಳವಡಿಕೆಯೊಂದಿಗೆ ಮಾಡುವ ಗ್ರಂಥ ಸಂಪಾದನೆ ಒಂದು ವೈಜ್ಞಾನಿಕ ಹಾಗೂ ಸೃಜನಾತ್ಮಕ ಕಲೆಯಾಗಿದೆ ಎಂದು ಶಿರಗುಪ್ಪಿಯ ಕೆ ಎಲ್ ಇ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು, ಸಾಹಿತಿ ಡಾ. ಜಯವೀರ ಎ. ಕೆ. ಹೇಳಿದರು.
ಅಂಕಲಿ ಪಟ್ಟಣದ ಕೆ ಎಲ್ ಇ ಸಂಸ್ಥೆಯ ಪದವಿ ಮಹಾವಿದ್ಯಾಲಯದಲ್ಲಿ ನಿನ್ನೆ ಗುರುವಾರ ದಿ. 23 ರಂದು ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ "ಗ್ರಂಥ ಸಂಪಾದನೆಯ ರಚನೆ ಹಾಗೂ ವಿನ್ಯಾಸ" ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ರಚನೆ ಮತ್ತು ವಿನ್ಯಾಸವಿಲ್ಲದೆ ಉತ್ತಮ ವಿಷಯವು ಓದುಗರಿಗೆ ತಲುಪುವುದಿಲ್ಲ. ಆದ್ದರಿಂದ ಸರಿಯಾದ ರಚನೆ, ಸುಂದರ ವಿನ್ಯಾಸ, ಹಾಗೂ ನಿಖರ ಸಂಪಾದನೆ ಇವುಗಳ ಸಂಯೋಜನೆ ಯಶಸ್ವಿ ಗ್ರಂಥವನ್ನು ನಿರ್ಮಿಸುತ್ತದೆ ಎಂದರು.
ಗ್ರಂಥ ಸಂಪಾದನೆಯ ಸಂಕುಚಿತ ಹಾಗೂ ವಿಶಾಲ ಅರ್ಥ ಸ್ವರೂಪ ಅದರ ಮುಖ್ಯ ಹಂತಗಳು, ಹಾಗೂ ಗ್ರಂಥ ರಚನೆಯ ವಿವಿಧ ಭಾಗಗಳನ್ನು ಸೋದಾಹರಣವಾಗಿ ವಿಶ್ಲೇಷಿಸಿದರು. ಗ್ರಂಥ ಸಂಪಾದನೆ ಮಾಡಲು ನಾವು ನಿಷ್ಠೆ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಅದರ ವಿಧಿ ವಿಧಾನಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯವಿದೆ. ಭವಿಷ್ಯದಲ್ಲಿ ತಾವೆಲ್ಲರೂ ಕ್ರಿಯಾಶೀಲರಾಗಿ ಒಂದು ಉತ್ತಮ ಗ್ರಂಥ ಸಂಪಾದನೆ ಮಾಡುವುದರೊಂದಿಗೆ ಸಾಹಿತ್ಯ ಲೋಕದಲ್ಲಿ ಸ್ಮರಣೀಯ ಹೆಜ್ಜೆ ಗುರುತುಗಳನ್ನು ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ಸೂಚ್ಯವಾಗಿ ನುಡಿದರು.
ಇದಕ್ಕೂ ಮೊದಲು ವಿಶ್ವ ಪುಸ್ತಕ ದಿನಾಚರಣೆ ನಿಮಿತ್ಯ ಡಾ. ಜಯವೀರ ಎ. ಕೆ ಅವರು ಸಂಪಾದಿತ "ಭೂಮಿ ತೂಕದ ಹೆಣ್ಣು" ಎಂಬ ಸಂಪಾದಿತ ಕವನ ಸಂಕಲನ ಕೃತಿಯನ್ನು ಸಂಕೇತಿಕವಾಗಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಎಸ್ ಬಿ ಬೊಮ್ಮಣ್ಣವರ ಅವರಿಗೆ
ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಂ ಎಸ್ ಕಾನಡೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಉಪಸ್ಥಿತಿ ಸ್ಥಾನ ವಹಿಸಿದ್ದ ಹಿರಿಯ ಕನ್ನಡ ಪ್ರಾಧ್ಯಾಪಕರಾದ ಪ್ರೊ ಎಸ್ ಬಿ ಬೊಮ್ಮಣ್ಣವರ ಅವರು ಅತಿಥಿಗಳನ್ನು ಪರಿಚಯಿಸಿ ಮಾತನಾಡುತ್ತಾ, "ಪುಸ್ತಕಂ ವನಿತಾ ವಿತ್ತo ಪರಹಸ್ತ ಗತಂ ಗತo" ಎಂದು ಈ ನಾಡಿನ ಖ್ಯಾತ ಸಂಶೋಧಕ ದಿ. ಡಾ. ಎಂ ಎಂ ಕಲಬುರ್ಗಿ ಅವರು ಗ್ರಂಥ ಸಂಪಾದನೆ ಮಾಡುವ ಸಂದರ್ಭದಲ್ಲಿ ಹೇಳಿದ ಈ ಉಕ್ತಿಯನ್ನು ಪ್ರಾಸಂಗಿಕವಾಗಿ ಉಲ್ಲೇಖಿಸುತ್ತ, ಪುಸ್ತಕ ಎಂಬುದು ಸ್ತ್ರೀ ಸಂಪತ್ತು ಇದ್ದಂತೆ,ಅದನ್ನು ಇನ್ನೊಬ್ಬರಿಗೆ ನಾವು ಕೊಟ್ಟರೆ ನಾವು ಕೊಟ್ಟ ರೀತಿಯಲ್ಲಿ ಮರಳಿ ಬಾರದು, ಅದು ಸ್ವಲ್ಪಾದರೂ ಮುಕ್ಕಾಗುತ್ತದೆ ಎಂದು ಹೇಳಿದರು. ನಮ್ಮ ಮಾತೃಭಾಷೆ ಕನ್ನಡವನ್ನು ಕೇವಲ ಅಪ್ಪಿಕೊಂಡರೆ ಸಾಲದು, ಕನ್ನಡ ಎಂಬುದು ಒಂದು ವಾರಿಧಿ ಇದ್ದಂತೆ, ಭವಿಷ್ಯದಲ್ಲಿ ತಾವು ಅಕ್ಷರ ಲೋಕವನ್ನು ಸಿರಿವಂತಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ಚೆನ್ನಾಗಿ ತೊಡಗಿಸಿಕೊಂಡು ಈ ಸಾರಸ್ವತ ಲೋಕದಲ್ಲಿ ಓರ್ವ ವಿಭಿನ್ನ ಉದಯೋನ್ಮುಖ ಉದ್ದಾಮ ಲೇಖಕರಾಗಿ ಹೊರಹೊಮ್ಮಬೇಕೆಂದು ಸಲಹೆ ನೀಡಿದರು.ಕನ್ನಡ ಸಹ ಪ್ರಾಧ್ಯಾಪಕಿ ಪ್ರೊ ಶ್ರೀಮತಿ ಆರ್ ಎಸ್ ಪಿರಣ್ಣವರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments