ಆತ್ಮಾನುರಣನ.!

 "ಇದು ಪ್ರತಿ ಬದುಕಿನ ಜೀವ ತಲ್ಲಣಗಳ ಮಾರ್ಮಿಕ ಕವಿತೆ. ಬೆಳಕಿನ ಭಾವ ರಿಂಗಣಗಳ ಸಾತ್ವಿಕ ತತ್ವಗೀತೆ. ನಿತ್ಯ ಸತ್ಯ ಆತ್ಮಾನುರಣನದ ಹೃದ್ಯಗೀತೆ. ಕುಸಿವ ಬದುಕಿನ ಒಡಲಿಗೆ, ಮೊರೆವ ಬೆಳಕಿನ ಮಡಿಲ ಕಿರಣಗಳ ಚೈತನ್ಯಗೀತೆ. ಆಗಾಗ ಕವಿವ ಕತ್ತಲಿಗೆ ಕಳವಳಗೊಳ್ಳುವ ಆಂತರ್ಯಕೆ, ಕಾಣದೆ ಪೊರೆವವನ ಕಾರುಣ್ಯಸ್ಫುರಣಗಳ ನೆನಪಿಸುತ ಜೀವ-ಭಾವ ನವೀಕರಣಗೊಳಿಸುವ ಸತ್ವ ಸಮೀಕರಣಗೀತೆ. ಇದು ನಮ್ಮೊಳಗೆ ನಾವೇ ಸಂತೈಸಿಕೊಂಡು ಸ್ಪೂರ್ತಿಗೊಳ್ಳುವ ಸೂಕ್ಷ್ಮ ಸಂವೇದನೆಗಳ ಸತ್ಯಗೀತೆ. ಏನಂತೀರಾ.?’ - ಪ್ರೀತಿಯಿಂದ ಎ.ಎನ್.ರಮೇಶ್,ಗುಬ್ಬಿ. 


ಆತ್ಮಾನುರಣನ.!



ತಿರುತಿರುಗಿ ತಲ್ಲಣಿಸದಿರು ಜೀವವೆ

ಕೊರಗಿ ಕರಗಿ ಕನಲದಿರು ಭಾವವೆ

ಬಿಕ್ಕಿ ಬೆಂದು ಉಡುಗದಿರು ಸ್ವರವೆ

ಕುಗ್ಗಿ ಕುಸಿದು ನಡುಗದಿರು ಕರವೆ.!


ಯಾವ ಕ್ಷಣಕೆ ಯಾವ ತಿರುವೋ?

ಯಾರ ಋಣಕೆ ಯಾರ ಹರಿವೋ?

ಯಾವ ದಿಕ್ಕಿಗೆ ಯಾರ ದೆಸೆಯೋ?

ಯಾರ ನಂಟಿಗೆ ಯಾವ ತೀರವೋ?


ಹಳ್ಳದಿಣ್ಣೆ ಏರುಜಾರಿನ ಬಾಳಹಾದಿ 

ನೋವು ನಲಿವಿನ ನೂರು ಯಾದಿ

ಭಾವದ ಅಲೆಗಳ ಮೊರೆವ ಶರಧಿ

ನಿಲ್ಲದೇ ನಿರತ ಸಾಗುವ ಜೀವನದಿ.!


ಯಾರ ಚೈತನ್ಯದಿ ಯಾವ ಬೆಳಕೋ?

ಯಾವ ಕಾರುಣ್ಯದಿ ಯಾರ ಬದುಕೋ?

ಬಿರುಕು ಬೆಸುಗೆ ಎಲ್ಲವೂ ಎದುಕೋ?

ನಿತ್ಯ ನೆಳಲು ಬೆಳಕಿನ ಆಟವೆದಕೋ?


ತಿಳಿಯದೆಂದು ಮುಂದೇನು ಎಂದು

ಅರಿವು ಪರಿವುಗಳನು ಮೀರಿ ನಿಂದು

ಇಹುದು ಕಾಲಜಾಲ ಮರ್ಮ ಒಂದು

ನಡೆಯಲೇಬೇಕು ನೊಂದು ಬೆಂದು.!


ಯಾವ ಭಾಗ್ಯಕೆ ಯಾರ ಶಿರವೋ?

ಯಾರ ಸೌಖ್ಯಕೆ ಯಾವ ವರವೋ?

ಯಾವ ಒಡಲಲಿ ಏನು ಸಾರವೋ?

ಯಾರಿಗಿಲ್ಲಿ ಎನಿತು ಋಣಭಾರವೋ?


ಓ ಉಸಿರೇ ಬರಲಿಬಿಡು ಬರುವುದೆಲ್ಲ

ನಡಿಗೆಯಲಿ ಎಂದು ಅಂಕೆ ಶಂಕೆ ಸಲ್ಲ

ಚಿಂತೆ ಸಂತೆಯೆಲ್ಲ ಕೊಡುವವನೆ ಬಲ್ಲ

ನೆನಪಿರಲಿದು ವಿಧಾತನ ಆಡಂಬೋಲ.!


ಆಸ್ವಾಧಿಸು ಪ್ರತಿ ಹೆಜ್ಜೆ ಪ್ರತಿ ಘಳಿಗೆ

ಆನಂದಿಸು ಪ್ರತಿ ತುತ್ತು ಉಡಿಗುಡಿಗೆ

ಅಭಿವಂದಿಸು ಪ್ರತಿ ಬಂಧ ಬೆಸುಗೆ

ಆರಾಧಿಸು ಬಾಳು ಬೆಳಕು ಅಡಿಗಡಿಗೆ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments