*ದೇವನೂರು ಮಹಾದೇವ ಅವರಿಗೆ ಪಂಪ ಪ್ರಶಸ್ತಿ: ಅಭಿನಂದನೆಗಳು*
ರಾಯಬಾಗ: ನಾಡಿನ ಮೇರು ಸಾಹಿತಿ ಹಾಗೂ ಪ್ರಬುದ್ಧ ಚಿಂತಕ ಡಾ. ದೇವನೂರು ಮಹಾದೇವ ಅವರು 2025-26 ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ರಾಯಬಾಗ ತಾಲೂಕಿನ ಸಾಹಿತಿಗಳು ಹಾಗೂ ಕವಿಗಳು ಅಭಿಮಾನದಿಂದ ಅಭಿನಂದಿಸಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಂತ ವಿಶಿಷ್ಟ ಬರಹಗಾರರಾಗಿ ಹೊಮ್ಮಿದ ದೇವನೂರು ಅವರು ಕೇವಲ ಲೇಖಕರಲ್ಲ, ಸಮಾಜ ಚಿಂತಕರಾಗಿಯೂ, ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದಾರೆ.
ಅವರು ಸರಳತೆ, ನಿಷ್ಠೆ ಮತ್ತು ಸಾಮಾಜಿಕ ಬದ್ಧತೆಗಳಿಂದ ಕೂಡಿದ ವಿಶೇಷ ವ್ಯಕ್ತಿಯಾಗಿರುವರು ಎಂದು ಕನ್ನಡ ಪ್ರಾಧ್ಯಾಪಕರು,ಸಾಹಿತಿ ಡಾ. ಜಯವೀರ ಎ. ಕೆ. ಅವರ ಘನ ವ್ಯಕ್ತಿತ್ವವನ್ನು ಪ್ರಾಸಂಗಿಕವಾಗಿ ಬಣ್ಣಿಸಿದರು. ದಲಿತ ಸಮುದಾಯದ ನೋವು, ಹಿಂಸೆ ಮತ್ತು ಅನ್ಯಾಯಗಳನ್ನು ಅವರು ಸ್ವತಃ ಅನುಭವಿಸಿದವರಂತೆ ಸ್ಪಷ್ಟವಾಗಿ ಅಭಿವ್ಯಕ್ತಿಸಿದ್ದಾರೆ.
ಅವರು ಸದಾ ದಲಿತರ ಹಕ್ಕುಗಳ ಪರವಾಗಿ ನಿಂತವರು.
ಅವರು ಖ್ಯಾತಿಯಲ್ಲಿದ್ದರೂ ಅತಿಸಾಧಾರಣ ಜೀವನ ನಡೆಸಿದವರು. ಅನ್ಯಾಯದ ವಿರುದ್ಧ ಸ್ಪಷ್ಟವಾಗಿ ಧ್ವನಿ ಎತ್ತಿದವರು.
ದೇವನೂರು ಮಹಾದೇವ ಅವರ ಸಾಹಿತ್ಯವು ಕೇವಲ ಕಥೆಗಳಲ್ಲ; ಅದು ಸಮಾಜದ ಕನ್ನಡಕವಾಗಿದೆ.
ಅವರ ಕೃತಿಗಳು ದಲಿತ ಜೀವನದ ನಿಜಸ್ವರೂಪವನ್ನು ಬಿಂಬಿಸುತ್ತವೆ. ಸಮಾಜದ ಅಸಮಾನತೆಗಳನ್ನು ತೀವ್ರವಾಗಿ ಪ್ರಶ್ನಿಸುತ್ತವೆ.
ಅವರ ಬರಹಗಳಲ್ಲಿ ಅತಿರಂಜನೆ ಇಲ್ಲ; ನೈಜ ಜೀವನದ ಚಿತ್ರಣವೇ ಮುಖ್ಯ. ಓದುಗರಿಗೆ ನಿಜವಾದ ಅನುಭವವನ್ನು ಕೊಡುತ್ತದೆ ಎಂದು ಹೇಳಿದರು.ಪ್ರಸ್ತುತ ಈ ವಿಶಿಷ್ಟ ಪ್ರಶಸ್ತಿ ಪಡೆಯುವ ಮೂಲಕ ಪ್ರಶಸ್ತಿಯ ಮೌಲ್ಯ ಇಮ್ಮಡಿಗೊಂಡಿದೆ ಎಂದು ವಿಶ್ಲೇಷಿಸಿದರು.
ಖ್ಯಾತ ವಿಮರ್ಶಕ ಡಾ. ವಿ ಎಸ್ ಮಾಳಿ, ಪ್ರೇಮ ಕವಿ ಪ್ರೊ ಶಿವಾನಂದ ಬೆಳಕೂಡ, ಶರಣ ಸಾಹಿತಿ ಡಾ.ಬಿ ಎಂ ಪಾಟೀಲ, ಹಿರಿಯ ತತ್ವಜ್ಞಾನಿ ಚಿಂತಕರಾದ ಡಿ. ಎಸ್ ನಾಯಿಕ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ, ಆದರ್ಶ ಕವಿ ಪ್ರಕಾಶಕ ಎಂ ಕೆ. ಶೇಖ್, ಕವಿಯತ್ರಿ ಡಾ. ರತ್ನಾ ಬಾಳಪ್ಪನವರ, ಚುಟುಕು ಕವಿಗಳಾದ ಪ್ರೊ ಎಲ್ ಎಸ್ ವಂಟಮೂರೆ, ಶಿರೂರು ಶ್ರೀಶೈಲ,ವಾಗ್ಮಿ ಪ್ರೊ ಟಿ ಎಸ್ ವಂಟಗೂಡೆ, ನ್ಯಾಯವಾದಿ, ಚಿಂತಕ ಡಿ ಎಚ್ ಯಲ್ಲಟ್ಟಿ, ಸಮಾಜ ಸೇವಕರು, ಕವಿ ಸಾಗರ ಝೆ0ಡೆನ್ನವರ,ಕನ್ನಡ ಪ್ರಾಧ್ಯಾಪಕರಾದ ಪ್ರೊ ಶ್ರೀಕಾಂತಗೌಡ ಪಾಟೀಲ, ಡಾ. ವಿಲಾಸ ಕಾಂಬಳೆ,ಸಾಹಿತಿ ಸುಖದೇವ ಕಾಂಬಳೆ, ಸಮಾಜ ಸೇವಕ ರಾಜು ಚೌಗಲಾ ಹಾಗೂ ತಾಲೂಕಿನ ಅನೇಕ ಗಣ್ಯರು, ಶಿಕ್ಷಕ ಸಾಹಿತಿಗಳು ಪ್ರಶಸ್ತಿ ಪುರಸ್ಕೃತ ದೇವನೂರು ಮಹಾದೇವ ಅವರನ್ನು ಅಭಿನಂದಿಸಿದ್ದಾರೆ.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments