*ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಕುಗ್ಗಿಸುತ್ತಿವೆ:* *ಪ್ರೊ ಎಲ್ ಎಸ್ ವಂಟಮೂರೆ*

 *ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಕುಗ್ಗಿಸುತ್ತಿವೆ:* 

*ಪ್ರೊ ಎಲ್ ಎಸ್ ವಂಟಮೂರೆ* 




 ರಾಯಬಾಗ:ಪ್ರಸ್ತುತ ತಂತ್ರಜ್ಞಾನದ ಕಾಲಘಟ್ಟದಲ್ಲಿ ಈ ,ಡಿಜಿಟಲ್ ಯುಗದ ಅತ್ಯಂತ ವೇಗದ ಬದಲಾವಣೆಗಳ  ನಡುವೆ ಶಿಕ್ಷಣ ಕ್ಷೇತ್ರವೂ ಮಹತ್ತರ ರೂಪಾಂತರಗಳನ್ನು ಅನುಭವಿಸುತ್ತಿದೆ. ಆದರೆ, ಈ ಪರಿವರ್ತನೆಯ ಮತ್ತೊಂದು ಮುಖ ಸಾಮಾಜಿಕ ಜಾಲತಾಣಗಳು  ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಹೇರಳವಾಗಿ ಕುಗ್ಗಿಸುತ್ತಿವೆ ಎಂದು ರಾಯಬಾಗದ ವಾಣಿಜ್ಯ ಪ್ರಾಧ್ಯಾಪಕರು, ಚುಟುಕು ಕವಿಗಳಾದ ಪ್ರೊ ಎಲ್ ಎಸ್ ವಂಟಮೂರೆ ಹೇಳಿದರು.


ಮಾಧ್ಯಮಗಳೊಂದಿಗೆ ಇಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡ ಅವರು ಶಿಕ್ಷಣ ಕ್ಷೇತ್ರಕ್ಕೆ ಈ ಸಾಮಾಜಿಕ ಜಾಲತಾಣಗಳು 

ಗಂಭೀರ ಸವಾಲಾಗಿ ಪರಿಣಮಿಸುತ್ತಿರುವುದನ್ನು ತಜ್ಞರು ಎಚ್ಚರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ವಿದ್ಯಾರ್ಥಿಗಳಲ್ಲಿ ಅಧ್ಯಯನದ ಮೇಲೆ ಇರುವ ಏಕಾಗ್ರತೆಯನ್ನು ತೀವ್ರ ಕುಗ್ಗಿಸುತ್ತಿದ್ದು, ಶೈಕ್ಷಣಿಕ ಗುಣಮಟ್ಟದ ಮೇಲೂ ಅದು ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.



 “ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಲು ಸಾಧ್ಯವಿಲ್ಲ. ಅವುಗಳು ಜ್ಞಾನ ವಿಸ್ತರಣೆಗೆ ಸಹಾಯಕವಾಗುವ ಸಾಮರ್ಥ್ಯ ಹೊಂದಿವೆ. ಆದರೆ, ವಿದ್ಯಾರ್ಥಿಗಳು ಅವುಗಳನ್ನು ಪೂರಕ ಸಾಧನಗಳಾಗಿ ಬಳಸಿಕೊಳ್ಳುವುದಕ್ಕಿಂತ ಹೆಚ್ಚು ಅಮೂಲ್ಯ ಸಮಯವನ್ನು ವಿನೋದ, ವ್ಯರ್ಥ ಚಟುವಟಿಕೆಗಳಲ್ಲಿ ಕಳೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.

ವಿದ್ಯಾರ್ಥಿಗಳ ದಿನಚರಿಯಲ್ಲಿ ಸಾಮಾಜಿಕ ಜಾಲತಾಣಗಳು ಅವಿಭಾಜ್ಯ ಅಂಗಗಳಾಗಿ ಬದಲಾಗಿರುವುದು ನಿಜ. ಆದರೆ, ಅವುಗಳ ಬಳಕೆ ನಿಯಂತ್ರಣವಿಲ್ಲದೆ ಸಾಗಿದಾಗ ಅದು ಸಮಯನಷ್ಟ, ಗಮನ ವಿಚಲನ ಹಾಗೂ ತೀವ್ರ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ. “ಅಧ್ಯಯನದ ಸಮಯದಲ್ಲಿಯೇ ಮೊಬೈಲ್       ಆಧೀನತೆಯು ತೀವ್ರ ಹೆಚ್ಚುತ್ತಿದ್ದು, ಪಾಠಗಳತ್ತ ಇರುವ ಆಸಕ್ತಿ ಹಂತ ಹಂತವಾಗಿ ಕುಗ್ಗುತ್ತಿದೆ. ಇದರಿಂದ ಅವರ ಭವಿಷ್ಯದ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು.


ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲೂ ಡಿಜಿಟಲ್ ಸಾಧನಗಳ ಬಳಕೆ ಹೆಚ್ಚಾಗಿರುವುದರಿಂದ, ಶಿಕ್ಷಕರು ಮತ್ತು ಪಾಲಕರು ವಿದ್ಯಾರ್ಥಿಗಳಲ್ಲಿ ಜಾಲತಾಣ ಬಳಕೆಯ ಕುರಿತು ಜಾಗೃತಿ ಮೂಡಿಸುವುದು ಈಗ ತುರ್ತು ಅತ್ಯಗತ್ಯವಾಗಿದೆ ಸೂಚ್ಯವಾಗಿ ನುಡಿದರು.ಕೇವಲ ತಂತ್ರಜ್ಞಾನವನ್ನು ನಿಷೇಧಿಸುವುದರಿಂದ ಈ ಸಮಸ್ಯೆ ಪರಿಹಾರವಾಗುವುದಿಲ್ಲ; ಬದಲಾಗಿ, ಅದರ ಸರಿಯಾದ ಬಳಕೆಯ ಕುರಿತು ಸಮರ್ಥ ಮಾರ್ಗದರ್ಶನ ನೀಡುವುದು ಈ ಕಾಲದ ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

“ಸಾಮಾಜಿಕ ಜಾಲತಾಣಗಳು ಜ್ಞಾನಕ್ಕೆ ಸೇತುವೆಯಾಗಬೇಕೇ ಹೊರತು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡ್ಡಿಯಾಗಬಾರದು. ನಿಯಂತ್ರಿತ ಬಳಕೆ, ಸಮಯ ನಿರ್ವಹಣೆ ಮತ್ತು ಅಧ್ಯಯನದ ಮೇಲಿನ ಪ್ರಾಮುಖ್ಯತೆ – ಇವುಗಳ ಸಮನ್ವಯದಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸಿನ ದಾರಿಯಲ್ಲಿ ಮುಂದುವರಿಯಲು ಸಾಧ್ಯ,” ಎಂದು ವಿಶ್ಲೇಷಿಸಿದರು.

ಶಿಕ್ಷಣ ತಜ್ಞರ ಅಭಿಪ್ರಾಯಗಳ ಪ್ರಕಾರ, ಡಿಜಿಟಲ್ ಸಾಧನಗಳ ಯುಗದಲ್ಲಿ ವಿದ್ಯಾರ್ಥಿಗಳು ಸ್ವಯಂ ನಿಯಂತ್ರಣವನ್ನು ಬೆಳೆಸಿಕೊಳ್ಳುವುದು ಮತ್ತು ಪಾಲಕರು-ಶಿಕ್ಷಕರ ಸಮನ್ವಯದಿಂದ ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಅತ್ಯಂತ ಮುಖ್ಯವಾಗಿದೆ. ಇಲ್ಲವಾದರೆ, ಸಾಮಾಜಿಕ ಜಾಲತಾಣಗಳ ಆಕರ್ಷಣೆ ವಿದ್ಯಾರ್ಥಿಗಳ ಗುಣಮಟ್ಟದ ಪ್ರಗತಿಗೆ ದೋಷಕಾರಿಯಾಗುವ ಅಪಾಯ ಹೆಚ್ಚುತ್ತದೆ ಎಂದು ಪ್ರೊ ವಂಟಮೂರೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.


ವರದಿ:ಡಾ. ಜಯವೀರ ಎ. ಕೆ.

       ಖೇಮಲಾಪುರ

Image Description

Post a Comment

0 Comments