ನಿರಂತರ ಕಲಿಕೆಯಿಂದ ಮಾತ್ರ ಉತ್ತಮ ಯಶಸ್ಸು ಸಾಧ್ಯ : ಅಭಿನಂದನ ಮೂರಾಬಟ್ಟೆ

 ನಿರಂತರ ಕಲಿಕೆಯಿಂದ ಮಾತ್ರ ಉತ್ತಮ ಯಶಸ್ಸು ಸಾಧ್ಯ : ಅಭಿನಂದನ ಮೂರಾಬಟ್ಟೆ



ಕಾರದಗಾ : ಉತ್ತಮವಾದ ಪರಿಸರದಿಂದ ಉತ್ತಮವಾದ ಕಲಿಕೆ ಸಾಧ್ಯವಾಗುತ್ತದೆ. ಹಾಗೆಯೇ ತರಗತಿಯಲ್ಲಿ ಶಿಕ್ಷಕರು ಕಲಿಸುವ ಪಾಠಗಳನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಾ ಹೋದರೆ ಯಶಸ್ಸಿನ ಮೆಟ್ಟಿಲನ್ನು ಏರುವುದಕ್ಕೆ ಸಾಧ್ಯವಾಗುತ್ತದೆ. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ಕಾರದಾಗ ಡಿಎಸ್ ನಾಡಗೆ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ಚಿಂತಕರಾದ ಡಾ. ಅಭಿನಂದನ ಮೂರಾಬಟ್ಟೆ ಅವರು ಅಭಿಪ್ರಾಯಪಟ್ಟರು. 


ಶನಿವಾರ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ 2025-26 ನೇ ಸಾಲಿನ ಎಸ್. ಎಸ್.ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೂರು ವಿದ್ಯಾರ್ಥಿನಿಯರಿಗೆ ಅಭಿನಂದನ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು. ನಮ್ಮ ಶಾಲೆಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಭಾಗದ ಗ್ರಾಮೀಣ ಪ್ರದೇಶದ ಶಾಲೆಯಾಗಿದೆ. ನಮ್ಮ ಮಕ್ಕಳು ಎಸ್.ಎಸ್. ಎಲ್. ಸಿ ಯಲ್ಲಿ ನಿಪ್ಪಾಣಿ ತಾಲೂಕಿಗೆ ಉತ್ತಮವಾದಂತಹ ಪಲಿತಾಂಶವನ್ನು ತಂದುಕೊಟ್ಟಿದ್ದಾರೆ. ಜೊತೆಗೆ ಮರಾಠಿ ವಿಷಯದಲ್ಲಿ ನಿಪ್ಪಾಣಿ ತಾಲೂಕಿಗೆ ಪ್ರಥಮ ಸ್ಥಾನ ಸ್ಥಾನ ಪಡೆದಿರುವುದು ತಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಂತೋಷ ವ್ಯಕ್ತಪಡಿಸಿದರು. 


ನಮ್ಮ ವಿದ್ಯಾ ಸಂಸ್ಥೆಯು 1951 ಹಳೆಯ ಸಂಸ್ಥೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಒಂದಲ್ಲ ಒಂದು ಉನ್ನತವಾದ ಸ್ಥಾನವನ್ನು ಪಡೆದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಹಾಗೆಯೇ ನೀವುಗಳು ಯಶಸ್ಸನ್ನ ಸಾಧಿಸಲು ಶಾಲೆಯ ವಾತಾವರಣ ಮುಖ್ಯ. ನಮ್ಮಲ್ಲಿ ಉತ್ತಮವಾದ ಕಲಿಕೆಯ ವಾತಾವರಣವಿದೆ. ಅದರಂತೆ ಶಾಲೆಯಲ್ಲಿ ಕಲಿಸುವ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸುತ್ತಾರೆ. ಪೋಷಕರು ಸಹ ನಿರಂತರವಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಬೆಳವಣಿಗೆಗೆ ಕಾರಣಕರ್ತರಾಗಬೇಕೆಂದು ಕರೆ ನೀಡಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೇಡಿಕಿಹಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೊಂಬಯ್ಯ ಮಾತನಾಡುತ್ತಾ ಇಲ್ಲಿನ ವಿದ್ಯಾರ್ಥಿಗಳು ಬಹಳ ಬುದ್ಧಿವಂತರು ಮತ್ತು ಪ್ರಜ್ಞಾವಂತರಾಗಿರುತ್ತಾರೆ. ಏಕೆಂದರೆ ಗಡಿ ಭಾಗದಲ್ಲಿ ಕನ್ನಡ ಮತ್ತು ಮರಾಠಿ ಸೋದರ ಭಾಷೆಗಳನ್ನು ಅಭ್ಯಾಸ ಮಾಡುತ್ತಾ ಭಾಷಾ ಭಾಂದವ್ಯವನ್ನು ಧರಿಸಿಯುತ್ತಾರೆ. ತಾಯ್ತನದ ನುಡಿಯ ಜೊತೆಗೆ ಹಲವು ಭಾಷೆಗಳನ್ನು ಕಲಿಯುವುದರ ಮೂಲಕ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿರುತ್ತಾರೆ ಎಂದು ತಿಳಿಸುತ್ತಾ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು. 


ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿ. ಪಾಟೀಲ್ ಅವರು ಮಾತನಾಡುತ್ತಾ ನಮ್ಮ ವಿದ್ಯಾರ್ಥಿಗಳು ಉತ್ತಮ ಅಂಕವನ್ನು ಪಡೆದು ಶಾಲೆಗೆ ಕೀರ್ತಿ ಮತ್ತು ಯಶಸ್ಸು ತಂದಿದ್ದಾರೆ ಇವರ ಹಾದಿಯಲ್ಲಿ ಮುಂಬರುವ ವಿದ್ಯಾರ್ಥಿಗಳು ನಿರಂತರವಾಗಿ ಶ್ರಮವಹಿಸಿ ವಿದ್ಯಾಭ್ಯಾಸವನ್ನು ಮಾಡಿ ಶಾಲೆಗೆ ಕೀರ್ತಿ ತರಬೇಕೆಂದು ಕರೆ ನೀಡಿದರು. 


ಇದೇ ಸಂದರ್ಭದಲ್ಲಿ ಅಕ್ಷತಾ ರಾಮಚಂದ್ರ ಜಾದವ್, ಸ್ನೇಹ ಕಲ್ಲಪ್ಪ ಕೋತ್, ಸುಶ್ಮಿತಾ ನಿತಿವ ಮಾಳಿ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಉಪ ಪ್ರಾಂಶುಪಾಲರಾದ ವಿ.ಕೆ ಖೋತ್,  ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ  ಜಿನದತ್ತ ಪಾಟೀಲ,  ಅತಿಥಿಗಳನ್ನು ಶ್ರೀಮತಿ ಸುನಿತಾ ಕೋಗತಿ ಸ್ವಾಗತಿಸಿದರು, ಎಸ್.ಬಿ ಪಾಟೀಲ ವಂದಿಸಿದರು. ಕುಮಾರಿ ಕಲ್ಪನಾ ರಾಯ ಜಾಧವ್ ನಿರೂಪಿಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ದೇಹ ದಾನಿಗಳ ಗ್ರಾಮ 

ಮೋ: 9591782353

Image Description

Post a Comment

0 Comments