ಬಸವ ಜಯಂತಿ ಎಂಬುದು ಆತ್ಮಾವಲೋಕನದ ಕಾಲ ಅವ್ವಾ.
.
ಒಂಬೈನೂರು ವರ್ಷ ಕೆಳಗೆ ಹುಟ್ಟಿದ ವ್ಯಕ್ತಿ ಬಸವಣ್ಣನನ್ನು ಇವತ್ತು ಗಲ್ಲಿ ಗಲ್ಲಿಗಳಲ್ಲಿ, ಊರೂರುಗಳಲ್ಲಿ, ಏಕೆ ನೆನೆಯುತ್ತಿದ್ದೇವೆ? ಆತ ಸಿರಿವಂತನೆಂದಲ್ಲ. ಅಧಿಕಾರಸ್ಥನೆಂದಲ್ಲ. ಚೆಲುವ ಮೂರುತಿಯೆಂದಲ್ಲ. ಯುದ್ಧದಲ್ಲಿ ಹೋರಾಡಿದ ವೀರಾಧಿವೀರನೆಂದಲ್ಲ. ನುರಿತ ಮಾತುಗಾರನೆಂದಲ್ಲ. ಸಾವಿರದ ಗುಡಿಗಳ ಕಟ್ಟಿಸಿದನೆಂದಲ್ಲ. ವರ್ಣಧರ್ಮ ಪರಿಪಾಲಕನೆಂದಲ್ಲ. ನಾವವರ ನೆನೆಯುವ ಕಾರಣ ಆತ ಸಿರಿಯನ್ನು ಹಂಚಿದನೆಂದು; ಅಧಿಕಾರಕ್ಕೆ ಆಸೆ ಪಡದೆ ಅಧಿಕಾರವನ್ನು ಜನಹಿತಕ್ಕಾಗಿ ಬಳಸಿದನೆಂದು; ಚೆಲುವು ಅಂತರಂಗ ಬಹಿರಂಗಗಳೊಂದಾದ ನಡೆನುಡಿಯಲ್ಲಿದೆಯೇ ಹೊರತು ಕಾಯದ ನುಂಪಿನಲ್ಲಿಲ್ಲ ಎಂದು ಹೇಳಿದನೆಂದು; ಅರಿಷಡ್ವರ್ಗಗಳೆಂಬ ಶತ್ರುವಿನ ವಿರುದ್ಧ ನೀವು ಹೋರಾಡಬೇಕಾಗಿದೆಯೇ ಹೊರತು ಎದೆ ಬಗೆದು ನೆತ್ತರ ಹರಿಸಬೇಕಿಲ್ಲ ಎಂದು ಹೇಳಿದನೆಂದು; ನಡೆನುಡಿ ಒಂದೇ ಆದ ವ್ಯಕ್ತಿ ಎಂದು; ಸಾಕಾರ ಸಗುಣ+ನಿರಾಕಾರ ನಿರ್ಗುಣಗಳ ಎರಡೂ ಉನ್ನತ ಅಧ್ಯಾತ್ಮ ದಾರಿಗಳನ್ನು ಸಮನ್ವಯಿಸಿ ದೇವಾಲಯಗಳಿಂದ ಜನರನ್ನು ಹೊರಗೆಳೆದು ದೇಹವೇ ದೇಗುಲವೆಂದು ಇಷ್ಟಲಿಂಗ ನೀಡಿದವನೆಂದು. ಶ್ರೇಣೀಕರಣವನ್ನೊಲ್ಲದ ಸಮಾಜ ಕನಸಿದನೆಂದು; ಊರಾಚೆ ಮಠ ಆಶ್ರಮ ಕಟ್ಟಿಕೊಂಡಲ್ಲ, ಊರೊಳಗೇ ನಿಂತು ಆಡುಭಾಷೆಯಲ್ಲಿ ಲಿಂಗದೊಡನಾಡಿದನೆಂದು.
ಮುಟ್ಟದ, ಮುಟ್ಟಿಸಿಕೊಳ್ಳದ ಅಧರ್ಮವೇ ಮೆರೆಯುತ್ತಿದ್ದ ಕಾಲದಲ್ಲಿ ಮುಟ್ಟುವ, ಮುಟ್ಟಿಸಿಕೊಳ್ಳುವ ಮಾರ್ಗ ತೆರೆದನೆಂದು.
ಬಸವಣ್ಣ ವರ್ಗಪ್ರಜ್ಞೆ ಮೀರಿದ. ಹುಟ್ಟಿನ ಗುರುತು, ಜಾತಿ ಗುರುತು, ವೃತ್ತಿಯ ಗುರುತು, ವರ್ಗದ ಅಧಿಕಾರದ ಗಂಡನೆಂಬ ತಂದೆಯೆಂಬ ಭಂಡಾರಿಯೆಂಬ ಗುರುತುಗಳನಳಿಸಿಕೊಂಡು ಗಂಡೆಂಬ ಅಹಂಕಾರವನೂ ಶರಣಸತಿಯಾಗಿ, ಶರಣೆಯರ ಚರ್ಚೆಗಳಿಂದ ಒಂದೊಂದೇ ವಿಷಯ ಅರಿತುಕೊಳ್ಳುತ್ತ, ಬದಲಾಯಿಸಿಕೊಳ್ಳುತ್ತ ಬದಲಾದ ನಾಯಕ.
‘ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಹೊಲಕ್ಕೆ ಬೆರಣಿಗೆ ಹೋಗಿ ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ’.
ಸಮಾಜವು ಕೆಳದೂಡಿದ ಸಮುದಾಯದವರ ಮನೆಯಲ್ಲಿ ದಾಸ ದಾಸಿಯಾಗಿರುವವರ ಮಗ, ಮಗಳು (ಅವರ ಹುಟ್ಟಿನ ಮೂಲವನ್ನೂ ಸಮಾಜ ‘ಬೆರಕೆ’ ಎಮದು ಅಗೌರವವದಿಂದಲೇ ಮಾತನಾಡುತ್ತದೆ), ವಿವಾಹಬಾಹಿರವಾಗಿ ಸಂಗ ಮಾಡಲು ಹುಟ್ಟಿದ ಮಗು ನಾನು ಎಂದು ಹೇಳಬೇಕಾದರೆ ಬಸವಣ್ಣ ಎಂಥ ಒಳಗೊಳ್ಳುವ ಉದಾರತೆ, ಅಂತಃಕರಣ, ಮತ್ತು ಸಂವೇದನಾಶೀಲತೆಯನ್ನು ಹೊಂದಿರಬಹುದು! ಹುಟ್ಟಿನ ಅಹಮನ್ನು ಕಳೆದುಕೊಂಡು ಎಲ್ಲ ಹುಟ್ಟೂ ಒಂದೇ ಎಂಬ ಲೆಜಿಟಿಮಸಿ ತಂದುಕೊಡಲು ಇಂತಹ ಮಾತು ಹೇಳಿದ್ದು ಬಲು ದೊಡ್ಡ ಜಿಗಿತವೇ ಹೌದು.
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ
ಬೇಡಿದ ಪದವಿಯನೀವ ನಮ್ಮ ಕೂಡಲಸಂಗಮದೇವ
ಮಾಡುವ ಭಕ್ತನ ಕಾಯ ಬಾಳೆಯ ಕಂಭದಂತಿರಬೇಕು
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ ಒಳಗೆ ಕೆಚ್ಚಿಲ್ಲದಿರಬೇಕು
ಮೇಲಾದ ಫಲವ ನಮ್ಮವರು ಬೀಜಸಹಿತ ನುಂಗಿದರು
ಎನಗಿನ್ನಾವ ಭಯವಿಲ್ಲ ಕಾಣಾ ಕೂಡಲಸಂಗಮದೇವಾ
ಒಕ್ಕುದ ಮಿಕ್ಕುದುಂಡು ಕಿವಿವಿಡಿದಾಡುವೆ
ಶರಣರ ಮನೆಯ ಲೆಂಗಿಯ ಡಿಂಗರಿಗ ನಾನು
ಕೂಡಲ ಸಂಗನ ಶರಣರ ಮನೆಯ ಭಕ್ತಿಯ ಮರುಳ ನಾನು.
ಮಾವಿನಕಾಯೊಳಗೆ ಒಂದು ಎಕ್ಕೆಯಕಾಯಿ ನಾನಯ್ಯಾ
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ
ಅಡ್ಡದೊಡ್ಡ ನಾನಲ್ಲಯ್ಯಾ/ ದೊಡ್ಡ ಬಸಿರು ಎನಗಿಲ್ಲಯ್ಯಾ
ಈ ವಿನಯ, ಎಲ್ಲರೊಳಗೊಂದು ತಾನು-ಎಲ್ಲರಂತೆ ತಾನೆಂಬ ಭಾವ ಕೇವಲ ತನಗಷ್ಟೇ ಇದ್ದರೆ ಸಾಲದು; ’ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ಭಾವಿಸುವುದು’. ‘ಕೂಡಲಸಂಗಮದೇವಾ ಭಕ್ತರ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ” ಎಂದು ಹೇಳಿದ ಬಸವಣ್ಣ ಎಲ್ಲ ಸಾಮಾಜಿಕ ಕಾರ್ಯಕರ್ತರು ಅರಿತು ಅನುಸರಿಸಬೇಕಾದ ವ್ಯಕ್ತಿತ್ವ. ಯಾವುದೇ ಚಳವಳಿ, ಸಂಘಟನೆ, ಹೋರಾಟದಲ್ಲಿ ಮುನ್ನೆಲೆಯ ಕೆಲಸ ಮಾಡುವವರು (ತಮ್ಮನ್ನು ನಾಯಕ-ನಾಯಕಿಯರೆಂದು ಭಾವಿಸಿದವರು ಅನುಸರಿಸಬೇಕಾದ ಅನನ್ಯ ಆದರ್ಶ. ನಾಯಕ ಸ್ಥಾನದಲ್ಲಿರುವವರು ಜಾತಿ-ವರ್ಗಪ್ರಜ್ಞೆ ಮೀರಿ ತನ್ನ ಅನುಯಾಯಿಗಳಿಗೆ ನೀಡಿದ ಉನ್ನತ ಸ್ಥಾನವು ಯಾವುದೇ ಚಳವಳಿಗೆ ಆದರ್ಶಪ್ರಾಯವಾಗಿದೆ. ಹುಟ್ಟು, ಜಾತಿ, ವರ್ಗ, ಲಿಂಗತ್ವ - ಈ ನಾಲ್ಕೂ ದೃಷ್ಟಿಯಿಂದ ಅನುಕೂಲಸ್ಥ ಕುಟುಂಬದಿಂದ ಬಂದ ವ್ಯಕ್ತಿಯು ಸಮಾಜವು ತಳಸ್ತರಕ್ಕೆ ನೂಕಿದ ಸಂಭೋಳಿ ಎನುವವರಿಗೆ, ಸಮಗಾರರಿಗೆ, ಹಡಪದವರಿಗೆ, ಮಡಿವಾಳರಿಗೆ, ವೇಶ್ಯೆಯರಿಗೆ, ದಾಸರಿಗೆ ಮಿಡಿದು ಎಲ್ಲರೊಳಗೊಂದಾಗಿದ್ದು, ತನ್ನ ಅಹಂಕಾರಗಳ ಕಳೆದುಕೊಳ್ಳಲು ಕಾಯವನ್ನೇ ಕದಳಿಯನ್ನಾಗಿಸಿಕೊಂಡದ್ದು ಅಪ್ರತಿಮ ಉದಾಹರಣೆಯಾಗಿದೆ.
ಬಸವಾದಿ ಶರಣೆ, ಶರಣರೇ, ನಮ್ಮ ಹೆಜ್ಜೆಗಳಲ್ಲಿ ನೀವಿರುವಿರಿ.
ಡಾ. ಎಚ್. ಎಸ್. ಅನುಪಮಾ

.gif)

.gif)


0 Comments