ಆಧುನಿಕ ವಚನಗಳು
ಜೀವನವೆಂಬುದು ನೂರಾರು ವರ್ಷದ ಬೆಳೆ ಸುಖ ದುಃಖಗಳ ಗೊಬ್ಬರದಲ್ಲಿ ಅರಳಬೇಕಿದೆ ಬದುಕು
ಬಿರುಗಾಳಿಗೆ ಬಿಸಿಲು ಮಳೆಗೆ ಅಂಕದೆ ಸಾಗಬೇಕಿದೆ ನೀ ಭಾವಿಸಿದಂತೆ ಇರೋದು ನೋಡ ನಿನ್ನ ಬಾಳು ಮಾಸ್ತೇಶ್ವರ II
ಜೀವನದಿ ಬರುವ ಕಷ್ಟ ನೋವುಗಳನನು
ನುಂಗಿ ಸಾಗಬೇಕಿದೆ ಈ ಜಗದೊಳು
ಉಣ್ಣಲಿರಲಿ, ಇಲ್ಲದಿರಲಿ ಸಾಗಬೇಕಿದೆ ಜೀವ
ತ್ಯಾಗ, ಧಾನ, ಧರ್ಮವೇ ನಿನಗೆ ಶ್ರೀರಕ್ಷೆಯಾಗುವುದು ನೋಡಾ ಮಾಸ್ತೇಶ್ವರ
ಪುರಾತನ ಸಂಸ್ಕೃತಿಯು ಮರೆಯಾಗಿಹುದೇಕೆ?
ದಾನ ಧರ್ಮವ ಮರೆತು ಬದುಕುತಿಹರೇಕೆ?
ಕೂಡಿ ಬಾಳುವ ಗುಣವ ತೊರೆದಿಹರೇಕೆ?
ಹುಟ್ಟಬೇಕಿದೆ ನಮ್ಮಲ್ಲಿ ಮಾನವೀಯತೆಯ ದೈವ ನೋಡ ಮಾಸ್ತೇಶ್ವರ
ನಿನ್ನ ನಿಂದಿಸಿದವರ ತಿರುಗಿ ನಿಂದಿಸಬೇಡ
ನಿನಗೆ ಅಪಕಾರ ಮಾಡಿದವರನು ದೂರ ತಳ್ಳಬೇಡ
ಕಷ್ಟಕಾಗದವರ ಬಂಧು ಬಳಗದವರ ತೊರೆಯಬೇಡ
ಕಾಲವೇ ಕಲಿಸುವುದು ಸರ್ವರಿಗೂ ಬುದ್ಧಿಯ ನೋಡ ಮಾಸ್ತೇಶ್ವರ
ನೀನು ನಿನ್ನಂತೆ ಬಾಳ್ವೆ ನಡೆಸು
ಅನ್ಯರಂತೆ ಬದುಕುವ ಆಸೆಯ ಬಿಡು ನೀ
ನಿನ್ನ ಜ್ಞಾನ, ನಿನ್ನ ಅರಿವು ನಿನ್ನಲ್ಲಿರಲಿ
ಇರುವುದರಲ್ಲಿಯೇ ಕೈಲಾಸವ ನೋಡಾ ಮಾಸ್ತೇಶ್ವರ
ಹೆದರದಿರು ಏನೇ ಬಂದರೂ ನೀ
ಹೆದರಿಸುವ ಗುಣವ ಕಲಿ ನೀ
ಇಲ್ಲವಾದಲ್ಲಿ ಬೆದರಿಸಿ ಮೂಲೆಗೊತ್ತುವರು
ನಿನ್ನ ಮಾಡಿಕೊಳ್ವರು ಕೈಗೊಂಬೆಯಂತೆ ನೋಡಾ ಮಾಸ್ತೇಶ್ವರ
ಗಳಿಸಬೇಕಿದೆ ಇರುವುದರೊಳಗೆ ಒಳ್ಳೆಯ ಹೆಸರ
ಉಳಿಸಬೇಕಿದೆ ಹೆತ್ತವರ ಕೀರ್ತಿಯ
ತನುವಳಿದರೂ ನಾಮವು ಉಳಿಯಬೇಕಿದೆ ಅಚಲವಾಗಿ
ಇದನು ತಿಳಿದು ಸಾಧನೆಯಲಿ ಸಾಗು ನೀ ಮಾಸ್ತೇಶ್ವರ.
ಡಾ.ಮಾಸ್ತಿ ಬಾಬು
ಬೆಂಗಳೂರು

.gif)

.gif)


0 Comments