*ನಡೆಯದ ನೇಮಕಾತಿ ಪ್ರಕ್ರಿಯೆ:* *ಆತಂಕದಲ್ಲಿ ವಯೋಮಿತಿ ಮೀರುತ್ತಿರುವ ಉದ್ಯೋಗಾಕಾಂಕ್ಷಿಗಳು*

 *ನಡೆಯದ ನೇಮಕಾತಿ ಪ್ರಕ್ರಿಯೆ:*

*ಆತಂಕದಲ್ಲಿ ವಯೋಮಿತಿ ಮೀರುತ್ತಿರುವ ಉದ್ಯೋಗಾಕಾಂಕ್ಷಿಗಳು* 




   ರಾಯಬಾಗ : ರಾಜ್ಯದಲ್ಲಿ ಕಳೆದ ಎಂಟು ವರ್ಷಗಳಿಂದ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೇಮಕಾತಿ ನಡೆಯದಿರುವುದು ಸಾವಿರಾರು ಉದ್ಯೋಗಾಕಾಂಕ್ಷಿಗಳ ಭವಿಷ್ಯದ ಮೇಲೆ ಅತ್ಯಂತ ಗಾಢ ಪರಿಣಾಮ ಬೀರಿದೆ. ಅದರಲ್ಲೂ ಕೊರೊನಾ ಮಹಾಮಾರಿಯ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಸರ್ಕಾರಿ ಉದ್ಯೋಗದ ಕನಸು ಕಂಡ ಅನೇಕ ಅಭ್ಯರ್ಥಿಗಳು ಅನಿರೀಕ್ಷಿತ ಸಂಕಷ್ಟಕ್ಕೆ ಸಿಲುಕಿದರು. ಈ ಕಾರಣದಿಂದ ಉದ್ಯೋಗಾಕಾಂಕ್ಷಿಗಳ ವಯಸ್ಸು ಹೆಚ್ಚಾಗುತ್ತಿದ್ದರೂ ಅವಕಾಶಗಳು ಮಾತ್ರ ಕೈಗೆಟುಕದಂತಾದವು.



ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಭ್ಯರ್ಥಿಗಳು ನಡೆಸಿದ ಪ್ರತಿಭಟನೆಗಳು ಸರ್ಕಾರದ ಗಮನ ಸೆಳೆದವು. ಇದರ ಪರಿಣಾಮವಾಗಿ ಸರ್ಕಾರ ಗರಿಷ್ಠ ವಯೋಮಿತಿಯನ್ನು ಮೂರು ವರ್ಷಗಳ ಕಾಲ ಹೆಚ್ಚಿಸುವ ನಿರ್ಧಾರ ಕೈಗೊಂಡಿತು. ಕುಪಿತರಾದ ಉದ್ಯೋಗ ಆಕಾಂಕ್ಷಿಗಳು ವಯೋಮಿತಿ ಹೆಚ್ಚಳಕ್ಕೆ ಬಿಗಿ ಪಟ್ಟು ಹಿಡಿದರು. ಮತ್ತೇ ಪರಿಷ್ಕರಣೆ ಮಾಡಿ ಐದು ವರ್ಷ ಗರಿಷ್ಠ ವಯೋಮಿತಿ ಮಾಡಿತು. ಆದರೆ ನೇಮಕಾತಿ ಪ್ರಕ್ರಿಯೆ ಮಾತ್ರ ನಡೆಯದಿರುವುದು ಇವರ ಭವಿಷ್ಯದ ಕಾರ್ಮೋಡ ಕವಿದಂತಾಯಿತು. ಇದು ಅತ್ಯಂತ ಖೇದಕರ ಸಂಗತಿ.


  ವಯೋಮಿತಿ ಸಡಿಲಿಕೆಯ ಸದುದ್ದೇಶದ ನಿರ್ಧಾರ ಜಾರಿಗೆ ಬಂದರೂ, ಅದರ ಅನುಸಾರವಾಗಿ ನಿರೀಕ್ಷಿತ ಪ್ರಮಾಣದ ನೇಮಕಾತಿಗಳು ನಡೆದಿಲ್ಲ. ಹೀಗಾಗಿ ಆ ಸಡಿಲಿಕೆಯ ನಿಜವಾದ ಪ್ರಯೋಜನ ಅನೇಕ ಅಭ್ಯರ್ಥಿಗಳಿಗೆ ದೊರೆಯಲೇ ಇಲ್ಲ ಎಂಬುದು ವಾಸ್ತವ.



ಇಂದು ಸಾವಿರಾರು ಅಭ್ಯರ್ಥಿಗಳು ನೇಮಕಾತಿ ಅಧಿಸೂಚನೆಗಾಗಿ "ಜಾತಕ ಪಕ್ಷಿಯಂತೆ" ಕಾದು ಕುಳಿತಿದ್ದಾರೆ. ಕೆಲವರು ಈಗಾಗಲೇ ವಯೋಮಿತಿ ಮೀರಿದ್ದಾರೆ; ಇನ್ನೂ ಅನೇಕರು ಮೀರಲಿರುವ ಪರಿಸ್ಥಿತಿಯಲ್ಲಿದ್ದಾರೆ. ಇದು ಕೇವಲ ವೈಯಕ್ತಿಕ ನಷ್ಟವಲ್ಲ, ದೀರ್ಘಕಾಲದಿಂದ ಸರ್ಕಾರಿ ಉದ್ಯೋಗಕ್ಕಾಗಿ ಶ್ರಮಿಸಿದ ಯುವ ಸಮುದಾಯದ ಆಶಾಭಂಗದ ಸಂಕೇತವಾಗಿದೆ. ಸರ್ಕಾರದ ನೀತಿಗಳಿಂದ ಉಂಟಾದ ವಿಳಂಬದ ಹೊರೆ ಅಭ್ಯರ್ಥಿಗಳ ಮೇಲೆ ಬೀಳುವುದು ನ್ಯಾಯೋಚಿತವಲ್ಲ ಎಂಬ ವಾದದಲ್ಲಿ ಸಾಕಷ್ಟು ತರ್ಕವಿದೆ.

ಆದಾಗ್ಯೂ, ವಯೋಮಿತಿ ಹೆಚ್ಚಳ ಎಂಬುದು ಶಾಶ್ವತ ಪರಿಹಾರವಲ್ಲ ಎಂಬುದನ್ನು ಸಹ ಗಮನಿಸಬೇಕಾಗಿದೆ. ಸರ್ಕಾರವು ಒಂದೆಡೆ ಮತ್ತೊಮ್ಮೆ ಒಂದು ವರ್ಷದ ವಯೋಮಿತಿ ಸಡಿಲಿಕೆ ನೀಡುವುದರ ಕುರಿತು ಗಂಭೀರವಾಗಿ ಪರಿಗಣಿಸಬೇಕಾದರೆ, ಇನ್ನೊಂದೆಡೆ ಖಾಲಿ ಹುದ್ದೆಗಳ ಭರ್ತಿಗೆ ಸ್ಪಷ್ಟ ವೇಳಾಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು. ಇಲ್ಲದಿದ್ದರೆ ವಯೋಮಿತಿ ಸಡಿಲಿಕೆ ಎಂಬುದು ಕೇವಲ ತಾತ್ಕಾಲಿಕ ಸಮಾಧಾನದ ಕ್ರಮವಾಗಿಯೇ ಉಳಿಯುತ್ತದೆ.

ಸರ್ಕಾರದ ದೃಷ್ಟಿಯಿಂದ ನೋಡಿದರೆ, ಉದ್ಯೋಗಾಕಾಂಕ್ಷಿಗಳ ಈ ಬೇಡಿಕೆ ಕೇವಲ ಸವಲತ್ತಿನ ಪ್ರಶ್ನೆಯಲ್ಲ; ಅದು ಸಮಾನ ಅವಕಾಶ ಮತ್ತು ಆಡಳಿತಾತ್ಮಕ ನ್ಯಾಯದ ಪ್ರಶ್ನೆಯಾಗಿದೆ. ನೇಮಕಾತಿ ವಿಳಂಬದಿಂದ ಅವಕಾಶ ಕಳೆದುಕೊಳ್ಳುತ್ತಿರುವ ಅಭ್ಯರ್ಥಿಗಳ ಸಂಕಷ್ಟವನ್ನು ಮಾನವೀಯ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು ಅಗತ್ಯವಾಗಿದೆ.

ಒಟ್ಟಾರೆ, ಉದ್ಯೋಗಾಕಾಂಕ್ಷಿಗಳ ಮನವಿಯಲ್ಲಿ ನ್ಯಾಯಸಮ್ಮತವಾದ ಅಂಶಗಳಿವೆ. ಆದ್ದರಿಂದ ರಾಜ್ಯ ಸರ್ಕಾರವು ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯವಿದ್ದರೆ ಮತ್ತೊಂದು ವರ್ಷದ ವಯೋಮಿತಿ ಸಡಿಲಿಕೆ ನೀಡಿ, ಜೊತೆಗೆ ಖಾಲಿ ಹುದ್ದೆಗಳ ಭರ್ತಿಗೆ ವೇಗ ನೀಡುವ ಮೂಲಕ ಯುವಜನರ ವಿಶ್ವಾಸವನ್ನು ಮರುಸ್ಥಾಪಿಸಬೇಕಿದೆ. ಇದು ಕೇವಲ ಆಡಳಿತಾತ್ಮಕ ನಿರ್ಧಾರವಾಗಿರದೆ, ಒಂದು ಪೀಳಿಗೆಯ ನಿರೀಕ್ಷೆಗಳಿಗೆ ನ್ಯಾಯ ಒದಗಿಸುವ ಕಾರ್ಯವಾಗಲಿದೆ.



ವರದಿ:ಡಾ. ಜಯವೀರ ಎ. ಕೆ.

           ಖೇಮಲಾಪುರ

Image Description

Post a Comment

0 Comments