ಐಪಿಲ್ ಜಾತ್ರೆ: ಯಾರಿಗೆಲ್ಲ ಏನೇನೋ ದಕ್ಕಿತು... ನಮಗೆ ಮಾತ್ರ ..........ಸಿಕ್ಕಿತು !!
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ
---
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಒಂದು ಕಡೆ ಲಕ್ಷಾಂತರ ಅಭಿಮಾನಿಗಳಿಗೆ ಮನರಂಜನೆಯ ಜಾತ್ರೆಯಾಗಿದ್ದರೆ, ಮತ್ತೊಂದೆಡೆ ಯುವಜನರ ಅಮೂಲ್ಯ ಸಮಯ ಹಾಳು ಮಾಡುವ ಚಟವಾಗಿದೆ. ಕ್ರಿಕೆಟ್‌ನಲ್ಲಿನ ಮಿತಿಮೀರಿದ ವ್ಯಾಪಾರೀಕರಣ, ಬೆಟ್ಟಿಂಗ್ ಮತ್ತು ಗಂಟೆಗಟ್ಟಲೆ ಟಿವಿ ಮುಂದೆ ಕೂರುವ ಅಭ್ಯಾಸಗಳು ವಿದ್ಯಾರ್ಥಿಗಳ ಹಾಗೂ ದುಡಿಯುವ ವರ್ಗದವರ ಅಮೂಲ್ಯ ಸಮಯವನ್ನು ನುಂಗುತ್ತಿವೆ ಎಂಬ ಟೀಕೆಗಳು ವ್ಯಾಪಕವಾಗಿವೆ ಕೇಳಿ ಬರುತ್ತಿವೆ. ದಿನಕ್ಕೆ ೩-೪ ಗಂಟೆಗಳ ಕಾಲ ಪಂದ್ಯ ವೀಕ್ಷಿಸುವುದರಿಂದ ದೈನಂದಿನ ಕೆಲಸಗಳಿಗೆ, ಓದಿಗೆ ಮತ್ತು ನಿದ್ರೆಗೆ ತೊಂದರೆಯಾಗುತ್ತದೆ.ಬೆಟ್ಟಿಂಗ್ ಮತ್ತು ಡ್ರೀಮ್ 11 ನಂತಹ ಆನ್‌ಲೈನ್ ಗೇಮ್‌ಗಳಿಂದಾಗಿ ಅನೇಕರು ಹಣಕಾಸಿನ ನಷ್ಟ ಅನುಭವಿಸುತ್ತಿದ್ದಾರೆ. ಸೋಲು-ಗೆಲುವಿನ ಲೆಕ್ಕಾಚಾರಗಳು ಅಭಿಮಾನಿಗಳಲ್ಲಿ ಮಾನಸಿಕ ಆತಂಕ ಮತ್ತು ಭಾವನಾತ್ಮಕ ಏರಿಳಿತಗಳನ್ನು ಉಂಟುಮಾಡುತ್ತವೆ. ಐಪಿಎಲ್ ಅಥವಾ ಕ್ರಿಕೆಟ್ ಕ್ರೀಡೆಯು ಮೂಲತಃ ಮನರಂಜನೆಯ ಕ್ರೀಡಾಕೂಟವಾಗಿದ್ದರೂ, ಇದನ್ನು ಹಣ ಗಳಿಸುವ ಜೂಜಾಟ ಮತ್ತು ಬೆಟ್ಟಿಂಗ್‌ಗಾಗಿ ಬಳಸಿಕೊಳ್ಳುತ್ತಿರುವುದು ದೇಶದಲ್ಲಿ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ನ್ಯಾಯಾಲಯಗಳು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ.ಆನ್‌ಲೈನ್ ಆಪ್‌ಗಳ ಮೂಲಕ ಹಣ ಪಣಕ್ಕೊಡ್ಡಿ ಬೆಟ್ಟಿಂಗ್ ಮಾಡುವುದು ಕಾನೂನುಬಾಹಿರ ಜೂಜಾಟಕ್ಕೆ ಸಮಾನವಾಗಿದೆ.ಇದು ಕೇವಲ ಕ್ರೀಡೆಯಾಗಿ ಉಳಿಯದೆ ಜೂಜಾಟದ ರೂಪ ಪಡೆಯುತ್ತಿರುವುದು ದುರದೃಷ್ಟಕರ.
ಸುಪ್ರೀಂ ಕೋರ್ಟ್ ಕೂಡ ಐಪಿಎಲ್ ಹೆಸರಿನಲ್ಲಿ ನಡೆಯುವ ಬೆಟ್ಟಿಂಗ್ ಬಗ್ಗೆ ಎಚ್ಚರಿಕೆ ನೀಡಿದೆ.
ಯಾರಿಗೆ ಏನು ಸಿಕ್ಕಿತು ಲೆಕ್ಕ ಹಾಕೋಣ:
1. ಟಿವಿ & ಡಿಜಿಟಲ್ ಕಂಪನಿಗಳಿಗೆ: ಹತ್ತು ಸಾವಿರ ಕೋಟಿಗೂ ಹೆಚ್ಚು ವ್ಯವಹಾರ.
2. ಜಾಹೀರಾತು ಕಂಪನಿಗಳಿಗೆ: 5-6 ಸಾವಿರ ಕೋಟಿ ಹೂಡಿಕೆ. ಆ ಹಣ ಸುರಿದ ಮೇಲೆ ಸುಮ್ಮನಿರುತ್ತಾರೆಯೇ? ನಿಮ್ಮ ತಲೆಯೊಳಗೆ, ಮನೆಯೊಳಗೆ, ಕನಸಿನೊಳಗೆ ಅವರ ಬ್ರ್ಯಾಂಡ್ ನುಗ್ಗಿಸಿಬಿಟ್ಟರು.
3. ಹೋಟೆಲ್, ವಿಮಾನ, ಟ್ಯಾಕ್ಸಿ, ರೆಸ್ಟೋರೆಂಟ್, ಪ್ರವಾಸೋದ್ಯಮ: 7-8 ಸಾವಿರ ಕೋಟಿ ವ್ಯವಹಾರ.
4. ಸ್ವಿಗ್ಗಿ, ಜೊಮ್ಯಾಟೋ: ಮ್ಯಾಚ್ ದಿನ ಡಬಲ್ ಆರ್ಡರ್. 40% ಹೆಚ್ಚು ಆರ್ಡರ್ = ಸಾವಿರ ಕೋಟಿಗೂ ಹೆಚ್ಚು ವಹಿವಾಟು.
5. ಮೊಬೈಲ್ & ಇಂಟರ್ನೆಟ್ ಕಂಪನಿ: ಲಕ್ಷಾಂತರ GB ಡೇಟಾ ಖಾಲಿ. ಅವರಿಗೆ ಸಾವಿರಾರು ಕೋಟಿ ಲಾಭ.
6. ಗುಪ್ತ್ ಗುಪ್ತ್ ಬೆಟ್ಟಿಂಗ್: 10 ಸಾವಿರ ಕೋಟಿಗೂ ಹೆಚ್ಚು ಹಣ ಓಡಾಡಿದೆಯಂತೆ!
7. ಆಟಗಾರರಿಗೆ: ರಣಜಿಯಲ್ಲಿ ಸಾವಿರ-ಲಕ್ಷ ತಗೊಳ್ಳೋರು ಕೋಟ್ಯಾಧಿಪತಿಗಳಾದರು. ಸ್ಟಾರ್ ಆಟಗಾರರಿಗೆ ಕನಸಲ್ಲೂ ಕಾಣದ ದುಡ್ಡು.
8. ಬಿಸಿಐಗೆ: 6-10 ಸಾವಿರ ಕೋಟಿ ಆದಾಯ.
9. ಸರ್ಕಾರಕ್ಕೆ: ಜಿಎಸ್ಟಿ, ಇನ್‌ಕಮ್ ಟ್ಯಾಕ್ಸ್, ಟಿಡಿಎಸ್, ಪ್ರೊಫೆಷನಲ್ ಟ್ಯಾಕ್ಸ್ ಸೇರಿ 3-4 ಸಾವಿರ ಕೋಟಿ ತೆರಿಗೆ. ಮತ್ತೆ ಮುಂಗಾರು! ಒಟ್ಟಾರೆ ಐಪಿಲ್ ಅಂದ್ರೆ ಬರೀ ಕ್ರಿಕೆಟ್ ಅಲ್ಲ. 25-30 ಸಾವಿರ ಕೋಟಿ ವ್ಯವಹಾರ ನಡೆಯುವ ಒಂದೊಡ್ಡ ಹಣಕಾಸು ಜಾತ್ರೆ!
ನಮ್ಮ ಮನಸ್ಸುಗಳನ್ನು ಅರಿತವರು, ನಮ್ಮನ್ನು ಬಳಸಿಕೊಂಡು ಇಷ್ಟೆಲ್ಲಾ ಮಾಡಿಕೊಂಡು ಮನೆಗೆ ಹೋದರು!
ಸರಿ... ನಮಗೆ ಏನು ಸಿಕ್ಕಿತು? ಅಂದರೆ....
ಭರಪೂರ ಮನರಂಜನೆ ಸಿಕ್ಕಿತು - ಇದೊಂದನ್ನು ಬಿಟ್ಟರೆ ಬೇರೆ ಏನೂ ಸಿಗಲಿಲ್ಲ. ಬದಲಾಗಿ ನಾವು ಕಳೆದುಕೊಂಡಿದ್ದೇನು ನೋಡಿ:
1. ಸಂಕಟ: ಬೇಕಾದ ತಂಡ ಸೋತರೆ ಊಟ ಸೇರದಷ್ಟು ಟೆನ್ಶನ್.
2. ಕಾಯುವಿಕೆ: ಧೋನಿ ಬರ್ತಾರಾ ಇಲ್ಲವಾ ಅಂತ ಕೊನೆಯ ಓವರ್ ತನಕ ಕಾದಿದ್ದಾಯಿತು.
3. ಬೇಸರ: ವಿರಾಟ್ ಔಟ್ ಆದ್ಮೇಲೆ "ಜೀವನವೇ ಬೇಡ" ಎನಿಸುವಷ್ಟು ಡಲ್.
4. ಜಗಳ: ಗೆಳೆಯರ ಜೊತೆ CSK vs RCB ಗಾಗಿ ಜಗಳ ಮಾಡಿಕೊಂಡಿದ್ದಾಯಿತು.
5. ಸಮಯ: ಕೆಲಸ ಬಿಟ್ಟು ಮ್ಯಾಚ್ ನೋಡಿದ್ದಾಯಿತು. 3 ತಾಸು ಹಾಳು.
6. ಹಣ: ಟಿಕೆಟ್, TV ರೀಚಾರ್ಜ್, ಬೆಟ್ಟಿಂಗ್, ಆರ್ಡರ್ - ಹಣ ಕಳಕೊಂಡಿದ್ದಾಯಿತು.
7. ನೆಮ್ಮದಿ: ಸೋಲಿನ ನಂತರ ರಾತ್ರಿ ನಿದ್ದೆ ಹೋಯಿತು. ಹಾಗೂ ತಂಡದ ಗೆಲುವು-ಸೋಲುಗಳು ಭಾವನಾತ್ಮಕವಾಗಿ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಪಂದ್ಯ ಸೋತಾಗ ಉಂಟಾಗುವ ಹತಾಶೆ ಮತ್ತು ಒತ್ತಡದಿಂದ ನೆಮ್ಮದಿ ಹಾಳಾಗುತ್ತದೆ.ಬೆಟ್ಟಿಂಗ್, ಗೇಮಿಂಗ್ ಆ್ಯಪ್‌ಗಳು (Dream11, ಇತ್ಯಾದಿ) ಮತ್ತು ದುಬಾರಿ ಟಿಕೆಟ್‌ಗಳ ಖರೀದಿಗೆ ಹಣ ಸುರಿದು ಜನ ಆರ್ಥಿಕವಾಗಿ ಕಷ್ಟಕ್ಕೆ ಸಿಲುಕುತ್ತಿದ್ದಾರೆ.ಪಂದ್ಯಗಳನ್ನು ನೋಡುವುದು, ಆನ್‌ಲೈನ್‌ನಲ್ಲಿ ಚರ್ಚಿಸುವುದು ಮತ್ತು ಪಂದ್ಯದ ನಂತರದ ವಿಶ್ಲೇಷಣೆಗಳಲ್ಲಿ ಮುಳುಗುವುದರಿಂದ ಓದು, ಕೆಲಸ ಹಾಗೂ ಕುಟುಂಬದ ಸಮಯ ಹಾಳಾಗುತ್ತದೆ.
ಅಷ್ಟೇ... ನಮಗೆ ಸಿಕ್ಕಿದ್ದು ಇಷ್ಟೇ.
ಸತ್ಯದ ಕನ್ನಡಿ,
ಐಪಿಲ್ ಎನ್ನುವುದು "ಬಿಸಿನೆಸ್ ಮಾದರಿ". ನಾವು "ಗ್ರಾಹಕರು". ಅವರು 25 ಸಾವಿರ ಕೋಟಿ ಸಂಪಾದಿಸುತ್ತಾರೆ, ನಾವು 3 ತಾಸು ಚಪ್ಪಾಳೆ ತಟ್ಟಿ ಮನೆಗೆ ಹೋಗುತ್ತೇವೆ. ಅವರಿಗೆ ಕೋಟಿ, ನಮಗೆ ಕೊರಗು.
ತಪ್ಪು ಯಾರದ್ದೂ ಅಲ್ಲ. ನಮಗೆ ಮನರಂಜನೆ ಬೇಕು, ಅವರಿಗೆ ದುಡ್ಡು ಬೇಕು. ವಿನಿಮಯ ಆಗುತ್ತೆ ಅಷ್ಟೇ.
ಆದರೆ ಅತಿಯಾದರೆ ಆಮೇಲೆ "ಟೆನ್ಶನ್" ಮಾತ್ರ ನಮಗೆ ಖಂಡಿತವಾಗಿಯೂ ಉಳಿಯುತ್ತೆ. ಅದಕ್ಕಾಗಿಯೇ ಕ್ರಿಕೆಟ್ ಅನ್ನು ಕೇವಲ ಒಂದು ಆಟವಾಗಿ, ಒತ್ತಡವಿಲ್ಲದೆ ಸೀಮಿತ ಅವಧಿಗೆ ವೀಕ್ಷಿಸುವುದು ಉತ್ತಮ. ಗೇಮಿಂಗ್ ಮತ್ತು ಬೆಟ್ಟಿಂಗ್‌ನಿಂದ ದೂರವಿದ್ದು, ವೈಯಕ್ತಿಕ ಬದುಕು ಮತ್ತು ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು.
ಪಾಠ ಏನು?
ಕ್ರಿಕೆಟ್ ನೋಡಿ, ಖುಷಿ ಪಡಿ. ಆದರೆ:
1. ಟೀಮ್ ಗೆದ್ದರೆ ಸಂತೋಷ, ಸೋತರೆ ದುಃಖ ಪಡಬೇಡಿ. ಇದು ಮನರಂಜನೆ, ಜೀವನ ಅಲ್ಲ.
2. ಬೆಟ್ಟಿಂಗ್ ಬೇಡ. "ಗುಪ್ತ್ ಗುಪ್ತ್" ನಲ್ಲಿ ಹೋದ ಹಣ ವಾಪಸ್ ಬರಲ್ಲ.
3. ಸಮಯದ ಬೆಲೆ ಅರಿಯಿರಿ. ಮೊದಲು ನಿಮ್ಮ ಕೆಲಸ ಮುಗಿಸಿ, ಆಮೇಲೆ ಮ್ಯಾಚ್ ನೋಡಿ. ಖಂಡಿತವಾಗಿಯೂ ಕೆಲಸ ಬಿಟ್ಟು ಮ್ಯಾಚ್ ನೋಡಬೇಡಿ.
4. ಮನೆಯ ನೆಮ್ಮದಿ ಮುಖ್ಯ. ತಂಡದ ಸೋಲಿಗಾಗಿ ಮನೆಯಲ್ಲಿ ಜಗಳ ಬೇಡ. ಹೊರಗಡೆ ಅಂತೂ ಜಗಳ ಬೇಡವೇ ಬೇಡ.
5. ಈ ಜಾತ್ರೆಯನ್ನು ಮನರಂಜನೆಗೆ ಮಾತ್ರ ಸೀಮಿತಗೊಳಿಸಿ, ಸಮಯವನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಗತ್ಯ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.
ಅಂದಹಾಗೆ ಕ್ರಿಕೆಟ್ ಆಟ, ಬದುಕಲ್ಲ. ಬದುಕು ಆಟದ ಮೈದಾನದ ಆಚೆ ಇದೆ. ವಾಸ್ತವ ವಿಚಾರ ತಿಳಿದುಕೊಳ್ಳಿ.
ಸಮಯ ಹಾಳು ಮಾಡಿಕೊಂಡು ಜೀವನ ವ್ಯರ್ಥ ಗೊಳಿಸಕೊಳ್ಳಬೇಡಿ.
ನೆನಪಿಡಿ: ಸ್ಕೋರ್ ಬೋರ್ಡ್‌ನಲ್ಲಿ ರನ್ ಬರುತ್ತೆ, ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಅಲ್ಲ ಎಂಬುದು ಸತ್ಯ ಅರಿತುಕೊಳ್ಳಿ.
-
ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

.gif)

.gif)


0 Comments