*ಸಹಸ್ರ ಚಂದ್ರದರ್ಶನ: ಜೀವನಸಾರ್ಥಕತೆಯ ಸಂಭ್ರಮ, ಸಂಸ್ಕಾರದ ಸೊಬಗು*
ರಾಯಬಾಗ: ಹಿಂದೂ ಧಾರ್ಮಿಕ ಸಂಪ್ರದಾಯದಲ್ಲಿ ಅತ್ಯಂತ ಮಂಗಳಕರ ಹಾಗೂ ಅಪರೂಪದ ಆಚರಣೆಯಾದ ಸಹಸ್ರ ಚಂದ್ರದರ್ಶನ ಶಾಂತಿಯನ್ನು ನಿಂಬರಗಿ ಪರಿವಾರದ ಹಿರಿಯರಾದ ಶ್ರೀ ರಾಮಚಂದ್ರ ನಿಂಬರಗಿ ಹಾಗೂ ಶ್ರೀಮತಿ ನಿಂಬರಗಿ ದಂಪತಿಗಳು ಪೂರೈಸಿದ ಕುಟುಂಬದಷ್ಟೇ ಅಲ್ಲ, ಸಮುದಾಯದ ಹೆಮ್ಮೆಯ ಕ್ಷಣವಾಗಿದೆ.
ಮಾನವನ ಜೀವನಯಾತ್ರೆಯಲ್ಲಿ ಒಂದು ಸಾವಿರ ಹುಣ್ಣಿಮೆಗಳನ್ನು ಕಂಡು ಸುಮಾರು 80 ವರ್ಷ 8 ತಿಂಗಳ ವಯಸ್ಸನ್ನು ತಲುಪುವುದು ಸಾಧಾರಣ ಸಂಗತಿಯಲ್ಲ. ಅದು ದೀರ್ಘಾಯುಷ್ಯ, ಆರೋಗ್ಯ, ಅನುಭವ ಮತ್ತು ಜೀವನಸಾಧನೆಯ ಪ್ರತೀಕವಾಗಿದೆ. ಇಂತಹ ಮಹತ್ವದ ಘಟ್ಟದಲ್ಲಿ ಮಕ್ಕಳು, ಮೊಮ್ಮಕ್ಕಳು ಹಾಗೂ ಬಂಧು-ಬಳಗ ಒಗ್ಗೂಡಿ ಹಿರಿಯರನ್ನು ಸನ್ಮಾನಿಸಿ ಆಶೀರ್ವಾದ ಪಡೆಯುವುದು ಭಾರತೀಯ ಸಂಸ್ಕೃತಿಯ ಜೀವಂತ ಪರಂಪರೆಯಾಗಿದೆ.
ಪಕ್ಕದ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಅನವಾಲ ಗ್ರಾಮದ ಮೂಲದವರಾದ ಶ್ರೀ ರಾಮಚಂದ್ರ ನಿಂಬರಗಿ ಅವರು ವಿಮಾನ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಜೀವನದ ಪ್ರತಿಯೊಂದು ಹಂತದಲ್ಲೂ ಸರಳತೆ, ಸಜ್ಜನಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡವರು. ಹಿರಿಯರಿಗೆ ಗೌರವ, ಕಿರಿಯರಿಗೆ ಪ್ರೀತಿ ನೀಡುವ ಅವರ ವ್ಯಕ್ತಿತ್ವವು ಕುಟುಂಬದೊಳಗೆ ಮಾತ್ರವಲ್ಲ, ಸಮಾಜದಲ್ಲಿಯೂ ವಿಶೇಷ ಗೌರವವನ್ನು ತಂದುಕೊಟ್ಟಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಸನಾತನ ಧರ್ಮದ ಆಚರಣೆ-ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿರುವುದು ಅವರ ಬದುಕಿನ ಮತ್ತೊಂದು ವಿಶೇಷತೆ.
ಹುಬ್ಬಳ್ಳಿಯ ಮಾನಸಗಿರಿ ಪ್ರದೇಶದ ಎಸ್.ಎ.ಕೆ. ಸಮುದಾಯ ಭವನದಲ್ಲಿ ಮೇ 30 ರಂದು ನಡೆದ ಸಹಸ್ರ ಚಂದ್ರದರ್ಶನ ಹಾಗೂ ಅಧಿಕಮಾಸದ ನಿಮಿತ್ತ ದಂಪತಿಗಳ ಪಾದಪೂಜೆ ಕಾರ್ಯಕ್ರಮವು ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಹಿರಿಯರ ಜೀವನ ಸಾಧನೆಗೆ ಸಲ್ಲಿಸುವ ಗೌರವದ ಸಂಕೇತವಾಗಿದೆ.
ನೂರಾರು ಬಂಧುಗಳ ಪ್ರೀತಿ, ಕುಟುಂಬದ ಗೌರವ ಮತ್ತು ಸಮಾಜದ ಶುಭಹಾರೈಕೆಗಳ ನಡುವೆ ಸಹಸ್ರ ಚಂದ್ರದರ್ಶನ ಪೂರೈಸಿದ ಶ್ರೀ ರಾಮಚಂದ್ರ ನಿಂಬರಗಿ ದಂಪತಿಗಳು ಇನ್ನೂ ದೀರ್ಘಕಾಲ ಆರೋಗ್ಯ, ಮತ್ತು ಸಂತೃಪ್ತಿಯಿಂದ ಬದುಕಲಿ ಎಂಬುದು ನಿಂಬರಗಿ ಪರಿವಾರದ ಹೃತ್ಪೂರ್ವಕ ಹಾರೈಕೆಯಾಗಿದೆ.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments