*ಹಸಿರಿನ ಹಾದಿಯೇ ಮಾನವ ಅಸ್ತಿತ್ವದ ದಾರಿ:*
*ಟಿ ಎಸ್ ವಂಟಗೂಡಿ*
ರಾಯಬಾಗ: ಮಾನವ ಪ್ರಕೃತಿಯ ಕೂಸು. ನಿಸರ್ಗವು ಅವನಿಗೆ ರಕ್ಷಾ ಕವಚವಾಗಿದೆ.ಹಸಿರಿನ ಹಾದಿಯೇ ಮಾನವ ಅಸ್ತಿತ್ವದ ದಾರಿಯಾಗಿದೆ ಎಂದು ಕನ್ನಡ ಪ್ರಾಧ್ಯಾಪಕರು ಹಿರಿಯ ವಾಗ್ಮಿ ಪ್ರೊ ತುಕಾರಾಮ ವಂಟಗೂಡಿ ಅಭಿಪ್ರಾಯಪಟ್ಟರು.
ತಾಲೂಕಿನ ಹಿಡಕಲ್ ಗ್ರಾಮದ ಶ್ರೀ ಜಡಿಸಿದ್ದೇಶ್ವರ ನಿಲಯದ ಆವರಣದಲ್ಲಿ ಶುಕ್ರವಾರ ದಿ. 5 ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವ ಪರಿಸರ ದಿನವು ಕೇವಲ ಒಂದು ದಿನದ ಆಚರಣೆಯಲ್ಲ; ಅದು ಮನುಕುಲ ತನ್ನ ಅಸ್ತಿತ್ವವನ್ನು ಮರುಪರಿಶೀಲಿಸಿಕೊಳ್ಳುವ ಜಾಗತಿಕ ಜಾಗೃತಿ ದಿನವಾಗಿದೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ನಿರಂತರ ದಾಳಿಯ ಪರಿಣಾಮವಾಗಿ ಹವಾಮಾನ ವೈಪರೀತ್ಯ, ನೀರಿನ ಕೊರತೆ, ತಾಪಮಾನ ಏರಿಕೆ ಹಾಗೂ ಜೀವವೈವಿಧ್ಯದ ಕ್ಷೀಣತೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಪರಿಸರದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಅತ್ಯಂತ ಮಹತ್ವ ಪಡೆಯುತ್ತವೆ ಎಂದರು.
ಮಾನವ ನಾಗರಿಕತೆಯ ಇತಿಹಾಸವನ್ನು ಅವಲೋಕಿಸಿದರೆ, ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡ ಸಮಾಜಗಳು ಮಾತ್ರ ದೀರ್ಘಕಾಲ ಉಳಿದು ಬೆಳೆದಿರುವುದು ಗೋಚರಿಸುತ್ತದೆ. ಆದರೆ ಇಂದು ಪ್ರಕೃತಿಯನ್ನು ಸಂಪನ್ಮೂಲವೆಂದು ಮಾತ್ರ ಪರಿಗಣಿಸಿ, ಅದರೊಂದಿಗೆ ಇರುವ ಭಾವನಾತ್ಮಕ ಮತ್ತು ನೈತಿಕ ಸಂಬಂಧವನ್ನು ಮರೆತುಬಿಡುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ ಎಂದು ಖೇದ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮಗಳು ಪ್ರಕೃತಿಯೊಂದಿಗೆ ಮನುಷ್ಯನ ಸಂಬಂಧವನ್ನು ಪುನಃ ಗಟ್ಟಿಗೊಳಿಸುವ ಪ್ರಯತ್ನಗಳಾಗಿವೆ.
ಪರಿಸರ ಸಂರಕ್ಷಣೆ ಎಂಬುದು ಕೇವಲ ಸರ್ಕಾರಗಳ ಅಥವಾ ಪರಿಸರವಾದಿಗಳ ಜವಾಬ್ದಾರಿಯಲ್ಲ. ಅದು ಪ್ರತಿಯೊಬ್ಬ ನಾಗರಿಕನ ಜೀವನಶೈಲಿಯ ಭಾಗವಾಗಬೇಕಾದ ಅನಿವಾರ್ಯತೆಯಾಗಿದೆ. ಮರ, ನೀರು, ಮಣ್ಣು ಮತ್ತು ಗಾಳಿ ಇವುಗಳನ್ನು ಕಾಪಾಡುವುದು ಎಂದರೆ ಭವಿಷ್ಯದ ಪೀಳಿಗೆಗಳಿಗೆ ಬದುಕುವ ಹಕ್ಕನ್ನು ಉಳಿಸಿಕೊಡುವುದಾಗಿದೆ. ಪರಿಸರದ ಪ್ರಶ್ನೆ ಇಂದು ಕೇವಲ ಪ್ರಕೃತಿಯ ಪ್ರಶ್ನೆಯಲ್ಲ; ಅದು ಆರ್ಥಿಕತೆ, ಆರೋಗ್ಯ, ಕೃಷಿ ಮತ್ತು ಸಾಮಾಜಿಕ ಸ್ಥಿರತೆಯ ಪ್ರಶ್ನೆಯೂ ಆಗಿದೆ.
ವಿಶ್ವ ಪರಿಸರ ದಿನಾಚರಣೆಯ ಸಂದೇಶವು ಸ್ಪಷ್ಟವಾಗಿದೆ — ಪ್ರಕೃತಿಯನ್ನು ಉಳಿಸುವುದು ಒಂದು ಆಯ್ಕೆಯಲ್ಲ, ಅದು ಮಾನವ ಅಸ್ತಿತ್ವದ ಅವಶ್ಯಕತೆ. ಹಸಿರನ್ನು ಕಾಪಾಡುವುದು ಎಂದರೆ ಕೇವಲ ಮರಗಳನ್ನು ಉಳಿಸುವುದಲ್ಲ; ಬದುಕಿನ ಸಮತೋಲನ, ಭವಿಷ್ಯದ ಭದ್ರತೆ ಮತ್ತು ಭೂಮಿಯ ಜೀವಂತಿಕೆಯನ್ನು ಸಂರಕ್ಷಿಸುವುದಾಗಿದೆ ಎಂದು ವಿಶ್ಲೇಷಿಸಿದರು.
ಪ್ರಗತಿಪರ ರೈತ ಅಶೋಕ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ವಿವೇಕರಾವ ವಂಟಗೂಡಿ, ಜಡಿಸಿದ್ದ ವಂಟಗೂಡಿ, ಹಾಲಸಿದ್ಧ ವಂಟಗೂಡಿ, ಅಮಿತ ಪೂಜೇರಿ ಉಪಸ್ಥಿತರಿದ್ದರು.
ವರದಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments