*ಬಡವರ ಬದುಕಿನ ಭಾರ ಕಡಿಮೆಗೊಳಿಸುವುದು ಸರ್ಕಾರದ ಹೊಣೆ:* ಪ್ರೊ ವಂಟಮೂರೆ

 *ಬಡವರ ಬದುಕಿನ ಭಾರ ಕಡಿಮೆಗೊಳಿಸುವುದು ಸರ್ಕಾರದ ಹೊಣೆ:*

 ಪ್ರೊ ವಂಟಮೂರೆ 




   ರಾಯಬಾಗ: ಇಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದುದರಿಂದ ಬಡವರ ಭಾರ ಕಡಿಮೆಗೊಳಿಸುವುದು ಸರ್ಕಾರದ ಹೊಣೆಯಾಗಿದೆ ಎಂದು ರಾಯಬಾಗದ ಚುಟುಕು ಕವಿ, ಪ್ರಾಧ್ಯಾಪಕ ಪ್ರೊ ಎಲ್ ಎಸ್ ವಂಟಮೂರೆ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು  ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ತಮ್ಮ ಮುಕ್ತ ಅಭಿಪ್ರಾಯಗಳನ್ನು  ಹಂಚಿಕೊಂಡರು.


ಬದುಕಿನ ಭಾರ ವಿಶೇಷವಾಗಿ ದಿನಗೂಲಿ ಕಾರ್ಮಿಕರು, ಅಸಂಘಟಿತ ವಲಯದ ದುಡಿಯುವ ವರ್ಗ ಹಾಗೂ ಬಡ ಕುಟುಂಬಗಳು ಹೆಚ್ಚುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಕಷ್ಟಪಡುತ್ತಿದ್ದಾರೆ. ಆಹಾರ, ಅಡುಗೆ ಅನಿಲ, ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ವೆಚ್ಚಗಳ ಏರಿಕೆಯಿಂದ ಅವರ ಆದಾಯಕ್ಕೆ ಹೋಲಿಸಿದರೆ ಖರ್ಚಿನ ಪ್ರಮಾಣ ಹೆಚ್ಚಾಗಿದ್ದು, ಬದುಕಿನ ಸಮತೋಲನ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಲಿ ಕಾರ್ಮಿಕರ ಶ್ರಮವೇ ಸಮಾಜದ ಅಭಿವೃದ್ಧಿಯ ಅಡಿಪಾಯವಾಗಿದೆ. ಆದರೆ ಅವರ ದುಡಿಮೆಗೆ ತಕ್ಕ ಆದಾಯ ದೊರೆಯದ ಸಂದರ್ಭದಲ್ಲಿ ಬೆಲೆ ಏರಿಕೆಯ ಹೊರೆ ಅವರ ಭುಜದ ಮೇಲೆ ಮತ್ತಷ್ಟು ಭಾರವಾಗುತ್ತದೆ. ಪ್ರತಿದಿನದ ದುಡಿಮೆಯಿಂದ ಕುಟುಂಬದ ಅಗತ್ಯಗಳನ್ನು ಪೂರೈಸುವ ಈ ವರ್ಗದ ಜನರು ಭವಿಷ್ಯದ ಭದ್ರತೆ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದಂತಹ ಮೂಲಭೂತ ವಿಚಾರಗಳ ಬಗ್ಗೆ ಆತಂಕ ಪಡುವಂತಾಗಿದೆ. ಅವರ ಮುಖದಲ್ಲಿನ ಚಿಂತೆ ಕೇವಲ ಆರ್ಥಿಕ ಸಂಕಷ್ಟವಲ್ಲ, ಅದು ಸಾಮಾಜಿಕ ಅಸಮಾನತೆಯ ಪ್ರತಿಬಿಂಬವಾಗಿದೆ ಎಂದು ವಿಶ್ಲೇಷಿಸಿದರು.



ಆದ್ದರಿಂದ ಸರ್ಕಾರವು ಬಡ ಮತ್ತು ಕೂಲಿ ಕಾರ್ಮಿಕರ ಹಿತವನ್ನು ಕಾಪಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ, ಉದ್ಯೋಗ ಭದ್ರತೆ, ನ್ಯಾಯಯುತ ಕೂಲಿ, ಸಾಮಾಜಿಕ ಭದ್ರತಾ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಬಡ ಕುಟುಂಬಗಳಿಗೆ ನೆರವು ನೀಡುವ ನೀತಿಗಳು ಬಲಪಡಿಸಬೇಕಾಗಿದೆ. 

ಅಭಿವೃದ್ಧಿಯ ನಿಜವಾದ ಅರ್ಥವೆಂದರೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲೂ ನೆಮ್ಮದಿ ಮೂಡಿಸುವುದು. ಬಡವರ ಕಣ್ಣೀರನ್ನು ಒರೆಸುವ ಮತ್ತು ಅವರ ಬದುಕಿಗೆ ಭರವಸೆ ನೀಡುವ ಆಡಳಿತವೇ ಜನಪರ ಆಡಳಿತವಾಗುತ್ತದೆ ಎಂದು ಪ್ರೊ ವಂಟಮೂರೆ ಹೇಳಿದರು.


ಡಾ. ಜಯವೀರ ಎ. ಕೆ.

    ಖೇಮಲಾಪುರ

Image Description

Post a Comment

0 Comments