*ಬರದ ಬೇಗುದಿಯಲ್ಲಿ ಉತ್ತರ ಕರ್ನಾಟಕ: ರೈತರ ಕಣ್ಣೀರೊರೆಸಲು ತುರ್ತು ಕ್ರಮ ಅಗತ್ಯ*
ರಾಯಬಾಗ: ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಪ್ರಸ್ತುತ ಬರದ ಕರಾಳ ಛಾಯೆ ಆವರಿಸಿದ್ದು, ಪ್ರಕೃತಿಯ ವೈಪರೀತ್ಯದಿಂದ ರೈತಾಪಿ ಸಮುದಾಯ ತೀವ್ರ ಆತಂಕಕ್ಕೆ ಒಳಗಾಗಿದೆ. ಸಮರ್ಪಕ ಮಳೆಯ ಕೊರತೆಯಿಂದ ಕೆರೆ-ಕಟ್ಟೆಗಳು, ಜಲಮೂಲಗಳು ಬತ್ತುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.
ಮಳೆಯ ನಿರೀಕ್ಷೆಯೊಂದಿಗೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರು ಇಂದು ಆಕಾಶದತ್ತ ನೋಡುವಂತಾಗಿದೆ. ಬಿತ್ತಿದ ಬೆಳೆ ಕೈಗೆ ಸಿಗದ ಆತಂಕ, ಕೃಷಿ ವೆಚ್ಚದ ಭಾರ ಹಾಗೂ ಮುಂದಿನ ಬದುಕಿನ ಚಿಂತೆ ರೈತರ ಮನಸ್ಸನ್ನು ಕಾಡುತ್ತಿದೆ.
ಅನ್ನದಾತನ ಬದುಕಿನ ಸಂಕಷ್ಟವನ್ನು ಕೇವಲ ಅಂಕಿ-ಅಂಶಗಳಿಂದ ಅಳೆಯದೆ, ಮಾನವೀಯ ನೆಲೆಯಲ್ಲಿ ಸರ್ಕಾರ ಗಮನಿಸಬೇಕಾದ ಅಗತ್ಯವಿದೆ.
ಬರದ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಅನೇಕ ಗ್ರಾಮಗಳ ಕೂಲಿ ಕಾರ್ಮಿಕರು ಜೀವನೋಪಾಯಕ್ಕಾಗಿ ಪಕ್ಕದ ಮಹಾರಾಷ್ಟ್ರದ ಮಿರಜ್, ಸಾಂಗಲಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಗ್ರಾಮೀಣ ಬದುಕಿನ ಕಠಿಣ ವಾಸ್ತವವನ್ನು ತೋರಿಸುತ್ತದೆ. ತಮ್ಮ ಊರು, ಮನೆ, ಕುಟುಂಬವನ್ನು ಬಿಟ್ಟು ದುಡಿಯಲು ಹೊರಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬರದ ತೀವ್ರತೆಯ ಸಂಕೇತವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಅಗತ್ಯವಿರುವ ಪ್ರದೇಶಗಳನ್ನು ತಕ್ಷಣ ಬರಪೀಡಿತವೆಂದು ಘೋಷಿಸಬೇಕು. ಕುಡಿಯುವ ನೀರು, ಜಾನುವಾರುಗಳ ರಕ್ಷಣೆ, ಉದ್ಯೋಗ ಸೃಷ್ಟಿ, ಬೆಳೆ ನಷ್ಟ ಪರಿಹಾರ ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು.
ಬರ ಎನ್ನುವುದು ಕೇವಲ ಮಳೆಯ ಕೊರತೆಯಲ್ಲ; ಅದು ಸಾವಿರಾರು ಕುಟುಂಬಗಳ ಬದುಕಿನ ಪ್ರಶ್ನೆಯಾಗಿದೆ. ರೈತರ ನೋವು ಮತ್ತು ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಸರ್ಕಾರ ಜನರ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾಗಿದೆ. ಉತ್ತರ ಕರ್ನಾಟಕದ ನೆಲ ಮತ್ತೆ ಹಸಿರಾಗಲು ದೂರದೃಷ್ಟಿಯುಳ್ಳ ಶಾಶ್ವತ ಬರ ನಿರ್ವಹಣಾ ಯೋಜನೆಗಳೂ ಅಗತ್ಯವಾಗಿವೆ.
ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments