ಮಕ್ಕಳ, ಮಹಿಳೆಯರ ನೈರ್ಮಲ್ಯ ಅರಿವು ಪ್ರಮುಖ ಗುರಿ

 ಮಕ್ಕಳ, ಮಹಿಳೆಯರ ನೈರ್ಮಲ್ಯ ಅರಿವು ಪ್ರಮುಖ ಗುರಿ 




ಟಿಜೆಡ್ ಎಂಒ ಇಂಡಿಯಾ ಸೌತ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಲೀನಾ ಅಭಿಮತ


ಬೆಂಗಳೂರು:ಜೂ.17: ಕರ್ನಾಟಕದ ಶಾಲೆಗಳು, ಕಾಲೇಜುಗಳು, ಸ್ವಸಹಾಯ ಸಂಘಗಳು ಹಾಗೂ ಆಶಾ ಕಾರ್ಯಕರ್ತೆಯರಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಯೋಜನೆಯ ಪ್ರಮುಖ ಗುರಿಯಾಗಿದೆ.  ಕಂಪನಿಯ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಸ್ಯಾನಿಟರಿ ಪ್ಯಾಡ್‌, ನೈರ್ಮಲ್ಯ ಕಿಟ್‌ಗಳನ್ನು ವಿತರಿಸಲಾಗುವುದು ಎಂದು ಟಿಜೆಡ್ ಎಂಒ ಇಂಡಿಯಾ ಸೌತ್ ಪ್ರೈವೇಟ್ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಲೀನಾ ಪೊಸ್ಟುನ್ನಿ ಹೇಳಿದರು.


ಕರ್ನಾಟಕ ಸಮಾಜ ಸೇವಾ ಟ್ರಸ್ಟ್  ಹಾಗೂ ಟಿಜೆಡ್ ಎಂಒ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದಲ್ಲಿ ಕೆಎಸ್ಎಸ್ ಟಿ ಮಕ್ಕಳ ಮತ್ತು ಮಹಿಳಾ ಯೋಜನೆ ಅಡಿಯಲ್ಲಿ ನಡೆದ ನೈರ್ಮಲ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಹಾಗೂ ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿಯನ್ನು ಉತ್ತೇಜಿಸುವ ಉದ್ದೇಶ ಹೊಂದಲಾಗಿದೆ ಎಂದರು.


 ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ನೈರ್ಮಲ್ಯದ ಮಹತ್ವ, ಅದರ ಪ್ರಯೋಜನಗಳು ಹಾಗೂ ನಿರ್ಲಕ್ಷ್ಯದಿಂದ ಉಂಟಾಗುವ ಸಮಸ್ಯೆಗಳ ಕುರಿತು ಶ್ರೀ ಮಾತಾ ಮಹಿಳಾ ಟ್ರಸ್ಟ್ ಅಧ್ಯಕ್ಷೆ ವೀಣಾ ಪಿ. ವಿವರವಾಗಿ  ತಿಳಿಸಿದರು.


ಪೀಣ್ಯ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ಶ್ರೀ ದಾನಪ್ಪ ಮಾತನಾಡಿ, ಸಂಸ್ಥೆ ಮತ್ತು ಕಂಪನಿಗಳು ತಮ್ಮ ಸಿಎಸ್ಆರ್  ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸಾರ್ವಜನಿಕರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.


ಕರ್ನಾಟಕ ಸಮಾಜ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಮಾತನಾಡಿ, ಟ್ರಸ್ಟ್ ಹಲವು ವರ್ಷಗಳಿಂದ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕರ ಅಭಿವೃದ್ಧಿ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು.


ಈ ವೇಳೆ  ಕರ್ನಾಟಕ ಸಮಾಜ ಸೇವಾ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಮಂಜುನಾಥ್ ನಾಯಕ್,  ಬಸವ ಸೆಂಟರ್ ಆಫ್ ನಾರ್ತ್ ಅಮೆರಿಕ ಹಾಗೂ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶೈಲಕುಮಾರ್ ಹಾದಿಮನಿ,  ಜಯಕಿರಣ್ ಫೌಂಡೇಷನ್ ಅಧ್ಯಕ್ಷ ಶ್ರೀ ಕಿರಣ್ ಕುಮಾರ್, ಕಾಸ್ಸಿಯಾ ಕೌನ್ಸಿಲ್ ಸದಸ್ಯ ಆನಂದ್ ರಾವ್ ಸೇರಿ ಹಲವರು ಪಾಲ್ಗೊಂಡಿದ್ದರು.

Image Description

Post a Comment

0 Comments