*ಬಡತನದ ನಡುವೆ ಅರಳಿದ ಪ್ರಾಮಾಣಿಕತೆಯ ಹೂವು*

 *ಬಡತನದ ನಡುವೆ ಅರಳಿದ ಪ್ರಾಮಾಣಿಕತೆಯ ಹೂವು


*



   ಚಿಕ್ಕೋಡಿ:ಇಂದಿನ ಸ್ವಾರ್ಥ, ಸ್ಪರ್ಧೆ ಮತ್ತು ಹಣದ ಮೋಹ ಹೆಚ್ಚುತ್ತಿರುವ ಈ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ಕೆಲವು ಅಪರೂಪದ ಘಟನೆಗಳು ಸಾಬೀತುಪಡಿಸುತ್ತವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಣ್ಣ ಹಳ್ಳಿಯ ನಿವಾಸಿಯಾದ ರಾಜೀವ ಶೆಟ್ಟಿ ಅವರ ನಡೆ ಅಂತಹದ್ದೇ ಒಂದು ಮೌಲ್ಯಪೂರ್ಣ ನೈಜ ಉದಾಹರಣೆಯಾಗಿದೆ.



ಚಿಕ್ಕೋಡಿ ಪಟ್ಟಣದ ರಾಘವೇಂದ್ರ ಹೋಟೆಲ್ ಪಕ್ಕದಲ್ಲಿ ಸಣ್ಣ ಪಾನ-ಬಿಡಿ ಅಂಗಡಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರಾಜೀವ ಶೆಟ್ಟಿಯವರಿಗೆ ಕಳೆದ ರವಿವಾರ ಸಂಜೆ ಸಮಯದಲ್ಲಿ ಆಕಸ್ಮಿಕವಾಗಿ ದೊರೆತ 10 ಸಾವಿರ ರೂಪಾಯಿ ಹಣದ ಪಾಕೀಟು ಅವರ ಆರ್ಥಿಕ ಸಂಕಷ್ಟವನ್ನು ಪರಿಹರಿಸಬಹುದಾದ ಒಂದು ಅವಕಾಶವಾಗಿತ್ತು. ಅದರೊಳಗೆ ಇದ್ದ ಹಣ, ಬೆಲೆಬಾಳುವ ಕಾರ್ಡ್‌ಗಳು ಹಾಗೂ ಮಹತ್ವದ ದಾಖಲೆಗಳನ್ನು ನೋಡಿ ಕ್ಷಣಮಾತ್ರದಲ್ಲಿ ಮನಸ್ಸಿನಲ್ಲಿ ಆಸೆ ಮೂಡುವ ಸಾಧ್ಯತೆ ಇತ್ತು. ಆದರೆ ಅವರ ಮನಸ್ಸು ಹಣದ ಮೌಲ್ಯಕ್ಕಿಂತ ಪ್ರಾಮಾಣಿಕತೆಯ ಮೌಲ್ಯವನ್ನು ದೊಡ್ಡದಾಗಿ ಕಂಡಿತು.

ಅವರು ಆ ಪಾಕೀಟಿನ ವಾರಸುದಾರರನ್ನು ಹುಡುಕಿ, ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಅದನ್ನು ಮರಳಿ ನೀಡಿದ ರೀತಿ ಅವರ ಸಂಸ್ಕಾರ, ಸನ್ನಡತೆ ಮತ್ತು ಮಾನವೀಯತೆಯ ಪ್ರತೀಕವಾಗಿದೆ. ಆ ಯುವಕ ಕೃತಜ್ಞತೆಯಿಂದ 1 ಸಾವಿರ ರೂಪಾಯಿ ನೀಡಲು ಮುಂದಾದ ಹಣವನ್ನೂ ಅವರು ಸ್ವೀಕರಿಸದೆ, "ಪರರ ಹಣ ನಮಗೆ ಬೇಡ" ಎಂಬ ಮಾತಿನ ಮೂಲಕ ತಮ್ಮ ವ್ಯಕ್ತಿತ್ವದ ಎತ್ತರವನ್ನು ತೋರಿಸಿದ್ದಾರೆ.

ಈ ಘಟನೆ ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ.


 ಬಡತನವು ಮನುಷ್ಯನ ಆರ್ಥಿಕ ಸ್ಥಿತಿಯನ್ನು ಮಾತ್ರ ತೋರಿಸುತ್ತದೆ; ಆದರೆ ಪ್ರಾಮಾಣಿಕತೆಯೇ ಆತನ ನಿಜವಾದ ಶ್ರೀಮಂತಿಕೆಯನ್ನು ನಿರ್ಧರಿಸುತ್ತದೆ. ಹಣದ ಕೊರತೆಯಿದ್ದರೂ ಮನಸ್ಸಿನ ಶ್ರೀಮಂತಿಕೆ ಹೊಂದಿರುವವರು ಸಮಾಜದ ನಿಜವಾದ ಆದರ್ಶ ವ್ಯಕ್ತಿಗಳು.

ರಾಜೀವ ಶೆಟ್ಟಿಯವರಂತಹ ಸಾಮಾನ್ಯ ಜನರ ಅಸಾಮಾನ್ಯ ಗುಣಗಳು ಸಮಾಜದ ನೈತಿಕ ದೀಪಗಳಾಗಿವೆ. ದೊಡ್ಡ ಸ್ಥಾನ, ಅಧಿಕಾರ ಅಥವಾ ಸಂಪತ್ತು ಹೊಂದಿರುವುದೇ ಮಹತ್ವವಲ್ಲ; ಸಂಕಷ್ಟದ ಸಂದರ್ಭದಲ್ಲಿಯೂ ಸತ್ಯ ಮತ್ತು ನ್ಯಾಯದ ದಾರಿಯಲ್ಲಿ ನಡೆಯುವ ಗುಣವೇ ಮನುಷ್ಯನನ್ನು ಶ್ರೇಷ್ಠನನ್ನಾಗಿ ಮಾಡುತ್ತದೆ ಎನ್ನುತ್ತಾರೆ ಚಿಕ್ಕೋಡಿ ಪಟ್ಟಣದ  ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ.



ಇಂತಹ ಘಟನೆಗಳು ಮಕ್ಕಳಿಗೆ, ಯುವಕರಿಗೆ ಮತ್ತು ಇಡೀ ಸಮಾಜಕ್ಕೆ ಮೌಲ್ಯ ಶಿಕ್ಷಣದ ಜೀವಂತ ಪಾಠಗಳಾಗಿವೆ. ಪ್ರಾಮಾಣಿಕತೆ ಎನ್ನುವುದು ಪುಸ್ತಕಗಳಲ್ಲಿ ಓದುವ ವಿಷಯವಲ್ಲ; ಬದುಕಿನಲ್ಲಿ ಅನುಸರಿಸುವ ಮೌಲ್ಯ ಎಂಬುದನ್ನು ರಾಜೀವ ಶೆಟ್ಟಿಯವರು ತಮ್ಮ ನಡೆ ಮೂಲಕ ತೋರಿಸಿದ್ದಾರೆ.

"ಕೈಯಲ್ಲಿ ಹಣವಿಲ್ಲದಿದ್ದರೂ ಪರವಾಗಿಲ್ಲ, ಆದರೆ ಹೃದಯದಲ್ಲಿ ಪ್ರಾಮಾಣಿಕತೆ ಇದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ" ಎಂಬ ಸತ್ಯಕ್ಕೆ ರಾಜೀವ ಶೆಟ್ಟಿಯವರ ಜೀವನದ ಈ ನೈಜ ಘಟನೆ ಉತ್ತಮ ಸಾಕ್ಷಿಯಾಗಿದೆ.


ವರದಿ:ಡಾ. ಜಯವೀರ ಎ. ಕೆ.

     ಖೇಮಲಾಪುರ

Image Description

Post a Comment

0 Comments