ಹಿಂದಿನ ಶ್ರಮವೇ ಇಂದಿನ ಸಾಧನೆ ಮುಂದಿನ ಸನ್ಮಾನ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಪ್ರತಿಯೊಬ್ಬ ಸಾಧಕರು ಮತ್ತು ವಿದ್ಯಾರ್ಥಿಗಳ ಹಿಂದಿನ ಶ್ರಮವೇ ಇವತ್ತಿನ ಸಾಧನೆ ಹಾಗೂ ನಾಳೆಯ ಸನ್ಮಾನ. ಈ ಸನ್ಮಾನದ ಹಿಂದೆ ನಿರಂತರವಾದ ಪರಿಶ್ರಮ ಇರುತ್ತದೆ ಎಂದು ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸತೀಶ್ ಲಕ್ಷ್ಮಣ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕ್ರೀಡಾ ಇಲಾಖೆ ವತಿಯಿಂದ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಿದ 'ಬೆಳಗಾವಿ ಬೆಳಕು' 2025- 26 ನೇ ಸಾಲಿನ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಾಧಕರಿಗೆ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರವಾಗಿ ಶ್ರಮಪಡಬೇಕು. ವಿದ್ಯಾರ್ಜನೆ ನಮ್ಮ ಸಾಧನೆ ಆಗಬೇಕು. ಈ ಸಾಧನೆಗೆ ಪೋಷಕರು ಆಧಾರ ಸ್ತಂಭವಾಗಬೇಕು. ಶಾಲಾ ಶಿಕ್ಷಕರು ಮಾರ್ಗದರ್ಶನ ಮಾಡುವುದರ ಮೂಲಕ ಇಂದು 280 ಜನ ವಿದ್ಯಾರ್ಥಿಗಳು ಸನ್ಮಾನ ಸ್ವೀಕರಿಸುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ನಾವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಂದು ಹಿಂಜರಿಯದೆ ಕಲಿಯುವ ಶಕ್ತಿಯನ್ನು ನಿಮ್ಮಲ್ಲಿ ಬಳಸಿಕೊಳ್ಳಬೇಕು ಆಗ ಮಾತ್ರ ಸಾಧನೆ ನಮ್ಮ ಹಿಂದೆ ಬರುತ್ತದೆ. ಇದಕ್ಕೆ ಮೂಲ ಕಾರಣಕರ್ತರು ಇಂದಿನ ಸನ್ಮಾನ ಸಮಾರಂಭದಲ್ಲಿ ಬೆಳಗಾವಿಯ ಮೂರು ಜನ ಐಎಎಸ್ ಪಡೆದ ವ್ಯಕ್ತಿಗಳೇ ಸಾಕ್ಷಿ ಪ್ರಜ್ಞೆ ಆಗಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಅಂಕಪಟ್ಟಿಯಲ್ಲಿ ಮಾತ್ರ ಅಂಕಗಳು ಮುಖ್ಯವಾಗದೆ ನೀವು ಕೌಶಲ್ಯಗಳ ಅಭಿವೃದ್ಧಿ ಪಡಿಸಿಕೊಳ್ಳಬೇಕು. ವಿಶೇಷ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ನಿಮ್ಮ ಜೀವನದ ಮುಂದಿನ ದಾರಿ ಸುಗಮವಾಗಲು ಸಾರ್ಥಕವಾಗುತ್ತದೆ ಎಂದು ಸಾಧಕರಿಗೆ ಕಿವಿಮಾತು ಹೇಳಿದರು.
ನಮ್ಮ ಕರ್ನಾಟಕ ಸರ್ಕಾರವು ಕಲಿಯುವ ವಿದ್ಯಾರ್ಥಿಗಳಿಗಾಗಿ ದೆಹಲಿಯಲ್ಲಿ ಯುಪಿಎಸ್ಸಿ ತಯಾರಿಗಾಗಿ ಕಟ್ಟಡವನ್ನು ನಿರ್ಮಿಸುತ್ತಿದ್ದೇವೆ. ಕನ್ನಡ ಸರ್ಕಾರದಲ್ಲಿ ನಿರ್ಮಿಸುವ ಈ ಕಟ್ಟಡಕ್ಕೆ ಕರ್ನಾಟಕ ರಾಜ್ಯದ ಪ್ರತಿಯೊಂದು ತಾಲೂಕಿನ ಇಬ್ಬರು ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯುಪಿಎಸ್ಸಿ ತಯಾರಿ ನಡೆಸಲು ಅವಕಾಶ ಮಾಡಿಕೊಡುತ್ತೇವೆ. ಇದರಿಂದ ಪ್ರತಿಯೊಬ್ಬರೂ ಸಾಧನೆ ಮಾಡಿ ನಮ್ಮ ರಾಜ್ಯಕ್ಕೆ ಉತ್ತಮವಾದ ಐಎಎಸ್ ಅಧಿಕಾರಿಗಳು ನಿರ್ಮಾಣವಾಗಬೇಕೆಂದು ಆಶಯವನ್ನು ವ್ಯಕ್ತಪಡಿಸಿದ್ದರು.
ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಹಾಗಾಗಿ ನೀವೆಲ್ಲ ಉತ್ತಮವಾದ ಅಂಕವನ್ನ ಪಡೆದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನ ಪಡೆದು ಯುಪಿಎಸ್ಸಿಯಲ್ಲಿ ಉನ್ನತ ಸ್ಥಾನವನ್ನು ಪಡೆದು ಈ ದೇಶವನ್ನು ಆಡಳಿತಾತ್ಮಕವಾಗಿ ಆಳ್ವಿಕೆ ಮಾಡುವ ಒಳ್ಳೆಯ ವ್ಯಕ್ತಿಗಳಾಗಿ ಹೊರಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಿಂದಿನ ದಿನಮಾನಗಳಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ ಭಾರತ ಸಂವಿಧಾನ ರಚನೆಗೊಂಡ ನಂತರ ಅಂಬೇಡ್ಕರ್ ಅವರ ಸಾಧನೆಯಿಂದ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆದು ಸಂವಿಧಾನದ ಆಶಯದಂತೆ ಶಿಕ್ಷಣ ಸಂಘಟನೆ ಹೋರಾಟ ಎಂಬ ತತ್ವ ಅಂಶಗಳನ್ನು ಅಳವಡಿಸಿಕೊಳ್ಳಲು ಅಂಬೇಡ್ಕರ್ ಅವರ ಚಿಂತನೆ ಮುಖ್ಯವಾಗಿದೆ ಎಂದು ತಿಳಿಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಆರ್ ಸೀತಾರಾಮ್ ಅವರು ಪ್ರಾಸ್ತಾವಿಕ ಮಾತನಾಡುತ್ತಾ ಬೆಳಗಾವಿಯ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಿಂದ ಎಸ್ ಎಸ್ ಎಲ್ ಸಿ ಯಿಂದ ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಿದ ಐಎಎಸ್ ರ್ಯಾಂಕ್ ವಿಜೇತರಿಗೆ ಸನ್ಮಾನ ಮಾಡುತ್ತಿರುವುದು ನಮ್ಮೆಲ್ಲರ ಬಹು ಮುಖ್ಯವಾದ ಕನಸಾಗಿತ್ತು. ಆ ಕನಸು ಎಂದು ನನಸಾಗುತ್ತಿದೆ . ಇಡೀ ರಾಜ್ಯದಲ್ಲಿ ನಮ್ಮ ಬೆಳಗಾವಿ ಜಿಲ್ಲೆಗೆ ಎಸೆಸೆಲ್ಸಿಯಲ್ಲಿ ಪ್ರಥಮ ರಾಂಕ್ ಪಡೆದ ಮೂರು ಜನ ವಿದ್ಯಾರ್ಥಿಗಳು ಇದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಈ ಕಾರಣಕ್ಕಾಗಿ ಪ್ರತಿಭೆಗೆ ಸನ್ಮಾನ ಭವಿಷ್ಯಕ್ಕೆ ದಾರಿ ಎಂಬ ಆಶಯದಂತೆ ಅಭಿನಂದನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಯುಪಿಎಸ್ಸಿ ್ಯಾಂಕ್ ವಿಜೇತರಾದ ಕಿರಣ್ ಕಮತೆ ಮತ್ತು ಬಸವರಾಜ್ ಪಾಟೀಲ್ ಮತ್ತು ಎಸ್ ಎಸ್ ಎಲ್ ಸಿ ಪ್ರಥಮ ರಾಂಕ್ ಪಡೆದ ಪ್ರಾರ್ಥನಾ ಬಿರಾದರ ಪಾಟೀಲ್ ಸಾಧನೆಯ ಅನಿಸಿಕೆಗಳನ್ನು ಹಂಚಿಕೊಂಡರು.
ಬೆಳಗಾವಿ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂದೆ ಶುಭಾಶಯ ತಿಳಿಸಿದರು. ವೇದಿಕೆಯಲ್ಲಿ ಸರ್ಕಾರದ ಮಾನ್ಯ ವಿಶೇಷ ಪ್ರತಿನಿಧಿ ಟು ನವದೆಹಲಿ ಹಾಗೂ ಮಾನ್ಯ ವಿಧಾನ ಪರಿಷತ್ ಸದಸ್ಯರು ಪ್ರಕಾಶ್ ಬಾ ಹುಕ್ಕೇರಿ, ಬೈಲ್ಮಂಗಲ ಶಾಸಕರಾದ ಮಹಾಂತೇಶ ಎಸ್ ಕೌಜಲಗಿ, ಸಂದೀಪ್ ಪಾಟೀಲ್ ಪೊಲೀಸ್ ಮಹಾ ನಿರೀಕ್ಷಿಕರು, ಬೊರಸೆ ಭೂ ಗುಲಾಬರಾವ್ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೆ ರಾಮರಾಜನ್, ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚೌವ್ಹಾಣ್, ಬೆಳಗಾವಿ ಶಾಲಾ ಶಿಕ್ಷಣ ಉಪದೇಶಕರಾದ ಎಲ್ಎಸ್ ಹಿರೇಮಠ, ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಸಂಜೀವ್ ಹುಲ್ಲೊಳ್ಳಿ ಹರಿದಾಸ್ ಖಾಡೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ನಾಡಗೀತೆ ಹಾಡಲಾಯಿತು. ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರನ್ನು ಹಾಗೂ ವಿದ್ಯಾರ್ಥಿಗಳನ್ನು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ, ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಸ್ವಾಗತಿಸಿದರು. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಕುರಿಹುಲಿ ವಂದಿಸಿದರು. ಮಲ್ಲಿಕಾರ್ಜುನ ಎಸ್ ದೇಶನೂರು, ರಾಜಶೇಖರ ನೇಗಿನಾಳ, ಹೇಮ ಪಿ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಲಾಯಿತು.
ವರದಿ :ಡಾ.ವಿಲಾಸ ಕಾಂಬಳೆ
ದೇಹ ದಾನಿಗಳ ಗ್ರಾಮ
ಶೇಗುಣಶಿ
ಮೋ: 9591782353

.gif)

.gif)


0 Comments