*ಭರವಸೆಯ ಬೆಳಕೋ, ಅಥವಾ ಭ್ರಮೆಯ ನೆರಳೋ?*
ರಾಯಬಾಗ: ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಸಚಿವರು “ಶೀಘ್ರದಲ್ಲೇ 8 ಸಾವಿರ, ಮತ್ತೆ 5 ಸಾವಿರ ಶಿಕ್ಷಕರ ನೇಮಕ” ಸದ್ಯದಲ್ಲೆ 6500 ಶಿಕ್ಷಕರ ನೇಮಕ ಮಾಡಲಾಗುವುದು ಎಂದು ಇಂತಹ ಅತ್ಯಾಕರ್ಷಕ ಮನ ಸೆಳೆಯುವ ಘೋಷಣೆಗಳನ್ನು ಪುಂಖಾನುಪುಂಖವಾಗಿ ವಿವಿಧ ವೇದಿಕೆಗಳಲ್ಲಿ ಮಾಡುತ್ತಿರುವುದು ನಿರುದ್ಯೋಗಿ ಶಿಕ್ಷಕ ಆಕಾಂಕ್ಷಿಗಳಲ್ಲಿ ಆಶಾ ಕಿರಣ ಮೂಡಿಸಿದೆ. ಆದರೆ ಪದೇ ಪದೇ ಇಂತಹ ಭರವಸೆಗಳು ಕೇಳಿಬಂದರೂ ನೇಮಕಾತಿಯ ಸ್ಪಷ್ಟ ವೇಳಾಪಟ್ಟಿ ಪ್ರಕಟವಾಗದಿರುವುದು ಮಾತ್ರ ಜಾತಕ ಪಕ್ಷಿಯಂತೆ ನೇಮಕದ ದಾರಿ ಕಾಯುತ್ತಿರುವ ಅನೇಕ ಯುವ ಮನಗಳಲ್ಲಿ ಆತಂಕವನ್ನೂ ಉಂಟುಮಾಡಿದೆ ಎಂಬುದು ಸ್ಪಟಿಕ ಸ್ಪಷ್ಟ.
ಶಿಕ್ಷಕರಾಗುವ ಕನಸು ಹೊತ್ತು ಹಲವು ವರ್ಷಗಳ ಕಾಲ ಪದವಿ, ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸಾವಿರಾರು ಯುವಕರಿಗೆ ಉದ್ಯೋಗ ಕೇವಲ ಆದಾಯದ ಮೂಲವಲ್ಲ; ಅದು ಆತ್ಮವಿಶ್ವಾಸ ಮತ್ತು ಕುಟುಂಬದ ಭವಿಷ್ಯದ ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ವೇದಿಕೆಗಳ ಮೇಲಿನ ಮನಾಕರ್ಷಕ ಘೋಷಣೆಗಳು ಅನುಷ್ಠಾನದ ಹಂತ ತಲುಪದಿದ್ದರೆ, ಭರವಸೆಯೇ ನಿರಾಶೆಯಾಗಿ ಬದಲಾಗುವ ಅಪಾಯವಿದೆ.
ಸರ್ಕಾರಕ್ಕೆ ಆಡಳಿತಾತ್ಮಕ ಮತ್ತು ಆರ್ಥಿಕ ಮಿತಿಗಳಿರಬಹುದು. ಆದರೆ ಎಷ್ಟು ಹುದ್ದೆಗಳು, ಯಾವಾಗ ಅಧಿಸೂಚನೆ, ನೇಮಕಾತಿ ಯಾವ ಹಂತದಲ್ಲಿದೆ ಎಂಬುದರ ಕುರಿತು ಪಾರದರ್ಶಕ ಹಾಗೂ ಕಾಲಮಿತಿಯ ಸ್ಪಷ್ಟ ಮಾಹಿತಿ ನೀಡಿದಾಗ ಮಾತ್ರ ಯುವಕರಲ್ಲಿ ವಿಶ್ವಾಸ ಮೂಡುತ್ತದೆ.
ಯುವಕರ ಬದುಕು ರಾಜಕೀಯ ಭರವಸೆಗಳ ಪ್ರಯೋಗಾಲಯವಾಗಬಾರದು. ಶಿಕ್ಷಕರ ನೇಮಕಾತಿ ಶೀಘ್ರದಲ್ಲಿ ವಾಸ್ತವ ರೂಪ ಪಡೆದರೆ ಅದು ಶಿಕ್ಷಣ ಕ್ಷೇತ್ರಕ್ಕೂ ಸಾವಿರಾರು ಕುಟುಂಬಗಳ ಬದುಕಿಗೂ ಆಶಾಕಿರಣವಾಗಲಿದೆ. ಈಗ ಅಗತ್ಯವಿರುವುದು ಹೊಸ ಘೋಷಣೆಗಳಲ್ಲ, ಖಚಿತ ಕ್ರಮಗಳು.
ಲೇಖನ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments