*ನೀಟ್ ಸೋರಿಕೆ: ಪ್ರತಿಭೆಯ ಮೆಟ್ಟಿಲಿಗೆ ಭ್ರಷ್ಟತೆಯ ಬಿರುಕು*
ರಾಯಬಾಗ:ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಕನಸುಗಳಿಗೆ ದಾರಿಯಾಗಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಪ್ರಶ್ನೆ ಪತ್ರಿಕೆ ಸೋರಿಕೆಯ ಸುದ್ದಿ ಕೇಳಿದಾಗ ಅಚ್ಚರಿ, ಆತಂಕ ಹಾಗೂ ಆಕ್ರೋಶ ಒಂದೇ ಸಮಯದಲ್ಲಿ ಮೂಡುತ್ತದೆ.
ವೈದ್ಯಕೀಯ ಕ್ಷೇತ್ರದಂತಹ ಅತ್ಯಂತ ಗೌರವಾನ್ವಿತ ವೃತ್ತಿಗೆ ಪ್ರವೇಶ ಕಲ್ಪಿಸುವ ಪರೀಕ್ಷೆಯ ಪಾವಿತ್ರ್ಯವೇ ಪ್ರಶ್ನಾರ್ಥಕವಾದರೆ, ಅದು ಕೇವಲ ಒಂದು ಪರೀಕ್ಷೆಯ ಸಮಸ್ಯೆಯಲ್ಲ — ದೇಶದ ಶಿಕ್ಷಣ ವ್ಯವಸ್ಥೆಯ ನಂಬಿಕೆಯ ಸಂಕಟವಾಗಿದೆ.
“ಪಾರದರ್ಶಕತೆ” ಎಂಬ ಪದ ಇಂದಿನ ಸಂದರ್ಭದಲ್ಲಿ ಕೇವಲ ಪುಸ್ತಕದ ಪುಟಗಳಲ್ಲಿ ಮಾತ್ರ ಉಳಿದುಬಿಟ್ಟಿದೆಯೇ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಪರೀಕ್ಷಾ ವ್ಯವಸ್ಥೆಯಲ್ಲಿ ನ್ಯಾಯ, ಸಮಾನ ಅವಕಾಶ ಮತ್ತು ನೈತಿಕತೆ ಎಂಬ ಅಂಶಗಳು ಜೀವಂತವಾಗಿರಬೇಕಾದರೆ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಸಂಪೂರ್ಣವಾಗಿ ನಿರ್ಮೂಲವಾಗಬೇಕು. ಆದರೆ ಪದೇ ಪದೇ ಕೇಳಿಬರುವ ಇಂತಹ ಸುದ್ದಿಗಳು ವ್ಯವಸ್ಥೆಯೊಳಗಿನ ದೊಡ್ಡ ಜಾಲವೊಂದರ ಅಸ್ತಿತ್ವದ ಬಗ್ಗೆ ಅನುಮಾನ ಹುಟ್ಟಿಸುತ್ತವೆ.
“ಬೇಲಿಯೇ ಎದ್ದು ಹೊಲ ಮೇದರೆ ಹೇಗೆ?” ಎಂಬ ಮಾತು ಇಲ್ಲಿ ಬಹಳ ಸೂಕ್ತವಾಗಿ ಅನಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯ ಕಾಪಾಡಬೇಕಾದ ವ್ಯವಸ್ಥೆಯೇ, ಕೆಲವರ ಸ್ವಾರ್ಥದ ಮುಂದೆ ಮಣಿದರೆ ನಂಬಿಕೆ ಯಾರ ಮೇಲೆ ಇಡಬೇಕು? ಕಠಿಣ ಪರಿಶ್ರಮ, ಹಗಲಿರುಳು ಓದು, ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ಕನಸು ಕಟ್ಟಿಕೊಂಡಿರುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಎಂತಹ ಅನ್ಯಾಯ! ಹಣ, ಪ್ರಭಾವ ಮತ್ತು ಅಕ್ರಮ ಮಾರ್ಗಗಳಿಗೆ ಅವಕಾಶ ದೊರಕಿದರೆ, ಪ್ರತಿಭೆ ಹಿನ್ನಡೆಯುವ ಅಪಾಯ ಉಂಟಾಗುತ್ತದೆ.
ಗ್ರಾಮೀಣ ಪ್ರದೇಶದ ಅನೇಕ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯ ನಡುವೆಯೂ ಅಪಾರ ಪರಿಶ್ರಮದಿಂದ ನೀಟ್ ಪರೀಕ್ಷೆಗೆ ಸಜ್ಜಾಗುತ್ತಾರೆ. ಪೋಷಕರು ಸಾಲ ಮಾಡಿ ಕೋಚಿಂಗ್‌ಗಳಿಗೆ ಕಳುಹಿಸುವ ಉದಾಹರಣೆಗಳೂ ಕಡಿಮೆ ಇಲ್ಲ. ಇಂತಹ ಸಂದರ್ಭದಲ್ಲಿ ಕೆಲವರು ಅಕ್ರಮದ ಮೂಲಕ ಯಶಸ್ಸಿನ ದಾರಿ ಹುಡುಕಿದರೆ, ನೈತಿಕ ಮೌಲ್ಯಗಳೊಂದಿಗೆ ಹೋರಾಡುವ ವಿದ್ಯಾರ್ಥಿಗಳ ಮನೋಸ್ಥೈರ್ಯ ಕುಸಿಯುವುದು ಸಹಜ. “ಓದಿದರೂ ಪ್ರಯೋಜನವಿಲ್ಲ; ಹಣ ಅಥವಾ ಸಂಪರ್ಕ ಇದ್ದರೆ ಸಾಕು” ಎಂಬ ಅಪಾಯಕಾರಿ ಮನೋಭಾವ ಯುವ ಮನಸ್ಸುಗಳಲ್ಲಿ ಬೇರೂರಿದರೆ, ಅದು ಸಮಾಜಕ್ಕೆ ನೀಡುವ ತಪ್ಪು ಸಂದೇಶ ಅತ್ಯಂತ ಗಂಭೀರವಾಗಿದೆ.
ಇದು ಕೇವಲ ಪರೀಕ್ಷಾ ಅಕ್ರಮವಲ್ಲ; ಸಮಾಜದ ಮೌಲ್ಯ ವ್ಯವಸ್ಥೆಗೆ ಬಿದ್ದ ಹೊಡೆತ. ವೈದ್ಯಕೀಯ ಕ್ಷೇತ್ರದಲ್ಲಿ ಸೇವಾಭಾವ, ಜ್ಞಾನ ಮತ್ತು ಪ್ರಾಮಾಣಿಕತೆ ಅತ್ಯಂತ ಮುಖ್ಯ. ಆದರೆ ಪ್ರವೇಶ ಹಂತದಲ್ಲೇ ಅಕ್ರಮದ ನೆರಳು ಆವರಿಸಿದರೆ, ಭವಿಷ್ಯದ ಆರೋಗ್ಯ ವ್ಯವಸ್ಥೆಯ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.
ಅಕ್ರಮದ ಮೂಲಕ ವೈದ್ಯಕೀಯ ಶಿಕ್ಷಣ ಪ್ರವೇಶಿಸುವವರ ಕೈಯಲ್ಲಿ ಜನರ ಜೀವ ಸುರಕ್ಷಿತವಾಗಿರಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.
ಹೀಗಾಗಿ, ಇಂತಹ ಪ್ರಕರಣಗಳನ್ನು ಕೇವಲ ಸುದ್ದಿಯಾಗಿ ಮರೆತುಬಿಡದೆ, ಸಮಕಾಲೀನ ಸನ್ನಿವೇಶದಲ್ಲಿ ಗಂಭೀರ ಆತ್ಮಾವಲೋಕನ ನಡೆಸಬೇಕಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ, ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನಾಧಾರಿತ ಭದ್ರತೆ, ಸಂಪೂರ್ಣ ಪಾರದರ್ಶಕ ತನಿಖೆ ಮತ್ತು ಜನರ ವಿಶ್ವಾಸ ಮರುಸ್ಥಾಪನೆ ಈಗಿನ ಅಗತ್ಯವಾಗಿದೆ.
ವಿದ್ಯಾರ್ಥಿಗಳ ಪರಿಶ್ರಮಕ್ಕೆ ನ್ಯಾಯ ಸಿಗಬೇಕು; ಭ್ರಷ್ಟತೆಯ ಜಾಲಕ್ಕೆ ಅಲ್ಲ. ಇಲ್ಲದಿದ್ದರೆ, ಪ್ರತಿಭೆಯ ಕನಸುಗಳು ಕುಸಿಯುತ್ತವೆ, ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯೂ ನಿಧಾನವಾಗಿ ನಶಿಸುತ್ತದೆ. “ಸತ್ಯ, ಪರಿಶ್ರಮ ಮತ್ತು ಅರ್ಹತೆ” ಗೆ ಗೌರವ ಸಿಗದ ಸಮಾಜದ ಭವಿಷ್ಯ ಎಂದಿಗೂ ಭದ್ರವಾಗುವುದಿಲ್ಲ.
ಡಾ. ಜಯವೀರ ಎ.ಕೆ.
ಖೇಮಲಾಪುರ

.gif)

.gif)


0 Comments