ಶ್ರೀ ಮಲ್ಲಿಕಾರ್ಜುನ ಖರ್ಗೆ: ದೇಶ ಕಂಡ ಸೌಮ್ಯ ಸಜ್ಜನ ರಾಜಕಾರಣಿ - ಸಂಗಮೇಶ ಎನ್ ಜವಾದಿ


 ಶ್ರೀ ಮಲ್ಲಿಕಾರ್ಜುನ ಖರ್ಗೆ: ದೇಶ ಕಂಡ ಸೌಮ್ಯ ಸಜ್ಜನ ರಾಜಕಾರಣಿ


- ಸಂಗಮೇಶ ಎನ್ ಜವಾದಿ  

ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ


---

ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ಮುತ್ಸದ್ದಿ. ಸೌಮ್ಯ ಸ್ವಭಾವ, ಅಪ್ರತಿಮ ಸಂಸದೀಯ ಪಟುತ್ವ ಹಾಗೂ ರಾಜಕೀಯ ಚಾಣಾಕ್ಷತೆಗೆ ಹೆಸರಾಗಿರುವ ಇವರು, ತಳಮಟ್ಟದಿಂದ ರಾಜಕೀಯ ಹೆಜ್ಜೆಯಿಟ್ಟು ರಾಷ್ಟ್ರಮಟ್ಟದವರೆಗೆ ಬೆಳೆದಿರುವ ಈ ದೇಶ ಕಂಡ ಮಹಾನ್ ಶ್ರೇಷ್ಠ ನಾಯಕರು.

ತಮ್ಮ ರಾಜಕೀಯ ಜೀವನದಲ್ಲಿ ಯಾವುದೇ ದೊಡ್ಡ ವಿವಾದಗಳಿಗೆ ಸಿಲುಕದೆ, ವಿರೋಧಿಗಳನ್ನೂ ತಮ್ಮ ಮೃದು ನುಡಿಯಿಂದ ಗೌರವಿಸುವ ಸಜ್ಜನ ರಾಜಕಾರಣಿ.

ದಲಿತ ಹಾಗೂ ಹಿಂದುಳಿದ ವರ್ಗಗಳ ಧ್ವನಿಯಾಗಿ, ಶೋಷಿತರ ಅಭಿವೃದ್ಧಿಗಾಗಿ ಸದಾ ಹೋರಾಡುವ ಗುಣ ಇವರದು.5 ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಅನುಭವ ಹೊಂದಿರುವ ಇವರು, ಸಂಸತ್ತಿನಲ್ಲಿ ಆಡಳಿತ ಪಕ್ಷವನ್ನು ತಾರ್ಕಿಕವಾಗಿ ಎದುರಿಸುವಲ್ಲಿ ಎತ್ತಿದ ಕೈ.

ದೇಶದ ಪ್ರಮುಖ ರಾಜಕೀಯ ಧ್ರುವಗಳಲ್ಲಿ ಒಬ್ಬರಾಗಿರುವ ಇವರ ಬದುಕು ಮತ್ತು ಹೋರಾಟ ಯುವ ಪೀಳಿಗೆಗೆ ಸದಾ ಸ್ಪೂರ್ತಿದಾಯಕ.


ಕಲ್ಯಾಣ ಕರ್ನಾಟಕದ ಕಣ್ಮಣಿ : ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ರಾಜಕಾರಣಿ. ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವರವಟ್ಟಿ ಗ್ರಾಮದಲ್ಲಿ ಜನಿಸಿದ ಇವರು, ತಮ್ಮ ರಾಜಕೀಯ ಜೀವನದಲ್ಲಿ ಸತತವಾಗಿ ಮೇಲೇರಿದ ಸರದಾರ್ ಎಂದು ಖ್ಯಾತಿ ಪಡೆದಿದ್ದಾರೆ. ಕಡುಬಡತನದ ಕುಟುಂಬದಲ್ಲಿ ಜನಿಸಿದ ಖರ್ಗೆ, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಕಲಬುರಗಿಯ ಸರ್ಕಾರಿ ಕಾಲೇಜಿನಲ್ಲಿ ಪದವಿ ಹಾಗೂ ಸೇಠ್ ಶಂಕರಲಾಲ್ ಲಾಹೋಟಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದವರು. ಹುಟ್ಟುತ್ತಲೇ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರಲ್ಲ, ಕಡುಬಡತನ ಮನೆಯಲ್ಲಿ ಜನಿಸಿ ಸಾಕಷ್ಟು ನೋವು ನಷ್ಟ ಕಷ್ಟ ಅನುಭವಿಸಿದವರು. 

ವಿದ್ಯಾರ್ಥಿ ದೆಸೆಯಿಂದಲೇ ಕಾರ್ಮಿಕರ ಮತ್ತು ದಲಿತರ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿ, ನಂತರ ವಕೀಲಿ ವೃತ್ತಿಯನ್ನೂ ಆರಂಭಿಸಿರುತ್ತಾರೆ. 

ಸಧ್ಯ ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕದ ಭಾಗದ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 50 ವರ್ಷಗಳಿಗೂ ಮೀರಿ ಸುದೀರ್ಘ ರಾಜಕೀಯ ಜೀವನ ನಡೆಸಿರುವ ಶ್ರೀ ಖರ್ಗೆಯವರು ಅನೇಕ ಯುವ ರಾಜಕೀಯ ನಾಯಕರಿಗೆ ಮಾರ್ಗದರ್ಶಕರಾಗಿ ಈ ಭಾಗದಲ್ಲಿ ಅನೇಕ ಜನಪರ ಕೆಲಸ ಕಾರ್ಯಗಳನ್ನು ಮಾಡಿ ಜನಸಾಮಾನ್ಯರಿಂದ 'ಜನನಾಯಕ' ಎನಿಸಿಕೊಂಡ ಧೀಮಂತ ನಾಯಕರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ವಿಶಿಷ್ಟ ಪ್ರೀತಿಯ ಛಾಪು ಮೂಡಿಸುವ ಮೂಲಕ ಈ ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.


ಕಾಯಕಯೋಗಿ ರಾಜಕಾರಣಿ : ಕಾರ್ಮಿಕ ನಾಯಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಖರ್ಗೆಯವರು, ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದವರು. ತದನಂತರ 

1969ರಲ್ಲಿ ಗುಲಬರ್ಗಾ ಸಿಟಿ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯ ಪ್ರವೇಶ ಮಾಡಿದ ಖರ್ಗೆಯವರು, 1972ರಲ್ಲಿ ಮೊದಲ ಬಾರಿಗೆ ಗುರುಮಠಕಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೆ ಒಮ್ಮೆಯೂ ಚುನಾವಣೆಯಲ್ಲಿ ಸೋಲದ ದಾಖಲೆ ಅವರದ್ದು. 9 ಬಾರಿ ಶಾಸಕರು, 2 ಬಾರಿ ಸಂಸದರು, 1 ಬಾರಿ ರಾಜ್ಯಸಭಾ ಸದಸ್ಯರು - ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಅಂತೆಯೇ ಈ ಹಿಂದಿನ 

ಕರ್ನಾಟಕ ಸರ್ಕಾರದಲ್ಲಿ ಗೃಹ, ಗ್ರಾಮೀಣಾಭಿವೃದ್ಧಿ, ಕಂದಾಯ, ಸಾರಿಗೆ, ಜಲಸಂಪನ್ಮೂಲ ಸೇರಿದಂತೆ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕೇಂದ್ರದಲ್ಲಿ ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ 

AICC ಅಧ್ಯಕ್ಷರಾಗಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

ಸಂಸತ್ತಿನಲ್ಲಿ ತಮ್ಮದೇ ಆದ ಸ್ಪಷ್ಟ ಹಾಗೂ ಪ್ರಬುದ್ಧ ನಿಲುವುಗಳ ಮೂಲಕ ಖ್ಯಾತಿ ಪಡೆದಿರುವ ಅವರು,  ದೇಶದ ಗಮನ ಸೆಳೆದಿದ್ದಾರೆ.ತಮ್ಮ ದೀರ್ಘಾವಧಿಯ ರಾಜಕೀಯ ಇತಿಹಾಸದಲ್ಲಿ ಬಹುತೇಕ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಇವರನ್ನು ಕರ್ನಾಟಕ ರಾಜಕಾರಣದ ಅಜಾತಶತ್ರು ಎಂದು ಕರೆಯಲಾಗುತ್ತದೆ.ಹಿಂದುಳಿದ ವರ್ಗಗಳ, ದಲಿತರ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಸದಾ ದನಿಯೆತ್ತುವ ಇವರ ನಾಯಕತ್ವ ದೇಶದ ರಾಜಕೀಯ ವಲಯದಲ್ಲಿ ಅತ್ಯಂತ ಮಹತ್ವಪೂರ್ಣ ಸ್ಥಾನ ಪಡೆದಿದ್ದಾರೆ.

ಹೀಗೆ, ತಳಮಟ್ಟದಿಂದ ಬೆಳೆದು ರಾಷ್ಟ್ರ ರಾಜಕಾರಣದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ರಾಜ್ಯ ಕಂಡ ಹೆಮ್ಮೆಯ ರಾಜಕಾರಣಿ.


ಕಲ್ಯಾಣ ಕರ್ನಾಟಕಕ್ಕೆ ಕೊಡುಗೆ:  ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 371(J) ಕಲಂ ಜಾರಿಗೆ ತರುವಲ್ಲಿ ಖರ್ಗೆಯವರ ಪಾತ್ರ ಐತಿಹಾಸಿಕ. ಇದರಿಂದ ಶಿಕ್ಷಣ, ಉದ್ಯೋಗದಲ್ಲಿ ಸ್ಥಳೀಯರಿಗೆ ಮೀಸಲಾತಿ ಸಿಕ್ಕಿದೆ. ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಕಾರಣಕರ್ತರು.

ಅದೇ ರೀತಿ ಕಲಬುರಗಿಗೆ ESI ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರೈಲ್ವೆ ವಿಭಾಗೀಯ ಕಚೇರಿ ತಂದ ಕೀರ್ತಿ ಇವರದ್ದು. ಜೊತೆಗೆ ಕಲಬುರಗಿ ವಿಮಾನ ನಿಲ್ದಾಣದ ಕನಸು ನನಸು ಮಾಡಿದವರು.ಶಿಕ್ಷಣ ಸಂಸ್ಥೆಗಳು ಆರಂಭಿಸಿ ಸಾವಿರಾರು ಕುಟುಂಬಗಳಿಗೆ ಉದ್ಯೋಗ, ಶಿಕ್ಷಣ ಕಲ್ಪಿಸಿದ್ದಾರೆ. ಹೀಗೆ ಅನೇಕ ಜನಪರ ಯೋಜನೆಗಳನ್ನು ತರುವ ಮೂಲಕ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ.


ಸೌಮ್ಯತೆಯೇ ಶಕ್ತಿ : ಕಡು ಬಡತನದಲ್ಲಿ ಜನಿಸಿ, ಮಗುವಿದ್ದಾಗಲೇ ಎಲ್ಲರನ್ನು ಕಳೆದುಕೊಂಡು, ಹುಟ್ಟಿನಿಂದ ಹೋರಾಟದ ಹಾದಿಯಲ್ಲಿಯೇ ಬೆಳೆದು ಬಂದ ಡಾ. ಮಲ್ಲಿಕಾರ್ಜುನ ಖರ್ಗೆ ಈಗ ಶತಮಾನದ ಇತಿಹಾಸವುಳ್ಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.

ಅಧಿಕಾರದ ಮದವಿಲ್ಲ, ಅಹಂಕಾರವಿಲ್ಲ. ವಿರೋಧಿಗಳನ್ನೂ ಗೌರವದಿಂದ ಕಾಣುವ ಸಂಸ್ಕೃತಿ ಅವರದು. ಸಂಸತ್ತಿನಲ್ಲಿ ಮಾತನಾಡಿದರೆ ಇಡೀ ಸದನ ಗಮನವಿಟ್ಟು ಕೇಳುತ್ತದೆ. ಕನ್ನಡ, ಹಿಂದಿ, ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಅಪರೂಪದ ಸಂಸದೀಯ ಪಟು.

ದಲಿತ ಸಮುದಾಯದಿಂದ ಬಂದು, ಸ್ವಶಕ್ತಿಯಿಂದ ರಾಷ್ಟ್ರೀಯ ನಾಯಕರಾಗಿ ಬೆಳೆದ ಖರ್ಗೆಯವರು ಲಕ್ಷಾಂತರ ಯುವಕರಿಗೆ ಸ್ಫೂರ್ತಿ. "ಕಷ್ಟಪಟ್ಟು ಓದಿ, ಪ್ರಾಮಾಣಿಕವಾಗಿ ದುಡಿದರೆ ಯಾವ ಎತ್ತರಕ್ಕೂ ಏರಬಹುದು" ಎಂಬುದಕ್ಕೆ ಅವರು ಜೀವಂತ ಸಾಕ್ಷಿ. ಅಂದಹಾಗೆ ಸೌಮ್ಯ ಸ್ವಭಾವ, ಮೃದು ಭಾಷಣ ಮತ್ತು ಸಮಚಿತ್ತದ ವ್ಯಕ್ತಿತ್ವಕ್ಕೆ ಹೆಸರಾದ ಭಾರತದ ಹಿರಿಯ ರಾಜಕಾರಣಿ.ಎದುರಾಳಿಗಳ ಟೀಕೆಗಳಿಗೂ ತಾಳ್ಮೆಯಿಂದ ಉತ್ತರಿಸುವ ಇವರು, ಯಾವುದೇ ಉದ್ವೇಗಕ್ಕೆ ಒಳಗಾಗದೆ ಪಕ್ಷದ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿರುತ್ತಾರೆ.

ವಿವಾದಗಳಿಂದ ದೂರವಿದ್ದು, ಪಕ್ಷ ನಿಷ್ಠೆ ಮತ್ತು ಸಂಸದೀಯ ಅನುಭವಕ್ಕೆ ಹೆಚ್ಚು ಮನ್ನಣೆ ಪಡೆದಿದ್ದಾರೆ. 

ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸುವ ಖರ್ಗೆಯವರು, ಕಲಬುರಗಿಯಲ್ಲಿ ಬೃಹತ್ 'ಬುದ್ಧ ವಿಹಾರ' ನಿರ್ಮಾಣಕ್ಕೆ ಕಾರಣಕರ್ತರಾಗಿದ್ದಾರೆ. 


ಜನಸೇವೆಯೇ ಜನಾರ್ದನ ಸೇವೆ:

ಬಡವರ ಮಕ್ಕಳಿಗೆ ವಿದ್ಯೆ, ರೈತರಿಗೆ ನೀರು, ನಿರುದ್ಯೋಗಿಗಳಿಗೆ ಉದ್ಯೋಗ - ಇದು ಖರ್ಗೆಯವರ ರಾಜಕಾರಣದ ಮೂಲಮಂತ್ರ. ಕಚೇರಿಗೆ ಬಂದ ಪ್ರತಿಯೊಬ್ಬರ ಅಹವಾಲು ಕೇಳಿ, ಸ್ಪಂದಿಸುವ ಗುಣ ಅವರ ಜನಪ್ರಿಯತೆಗೆ ಕಾರಣ.

80ರ ಇಳಿವಯಸ್ಸಿನಲ್ಲೂ 18 ಗಂಟೆ ದುಡಿಯುವ ಚೈತನ್ಯ, ನಸುಕಿನ 4 ಗಂಟೆಗೆ ದಿನಚರಿ ಆರಂಭಿಸುವ ಶಿಸ್ತು, ದಿನಪತ್ರಿಕೆ ಓದದೆ ಮನೆಯಿಂದ ಹೊರಡದ ಅಭ್ಯಾಸ - ಇವೆಲ್ಲ ಯುವ ರಾಜಕಾರಣಿಗಳಿಗೆ ಪಾಠ.

ಪುಸ್ತಕಗಳನ್ನು ಓದುವುದರಲ್ಲಿ ಅಪಾರ ಆಸಕ್ತಿ ಹೊಂದಿರುವ ಖರ್ಗೆ, ಪ್ರಗತಿಪರ ಚಿಂತಕರು. ಮೂಢನಂಬಿಕೆ ಹಾಗೂ ಕಂದಾಚಾರಗಳ ವಿರುದ್ಧ ಇವರು ಸತತವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಅವರ ವೃತ್ತಿಜೀವನದ ಆರಂಭದಿಂದಲೂ, ಜಾತಿ, ಮತ ಮತ್ತು ನಂಬಿಕೆಯನ್ನು ಲೆಕ್ಕಿಸದೆ ಜನರ ಉನ್ನತಿಗಾಗಿ ಕೆಲಸ ಮಾಡುವುದು ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಖಚಿತಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಸಮಾಜದ ದುರ್ಬಲ ವರ್ಗಗಳ ಉನ್ನತಿಗಾಗಿ ಶಿಕ್ಷಣದ ಪಾತ್ರದಲ್ಲಿ ಅವರು ಬಲವಾದ ನಂಬಿಕೆಯುಳ್ಳವರಾಗಿದ್ದಾರೆ. ಅವರು ತಮ್ಮ ತವರು ರಾಜ್ಯವಾದ ಕರ್ನಾಟಕದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಬೆಂಬಲ ನೀಡಿದ್ದಾರೆ. ಬದಲಾವಣೆಯನ್ನು ತರುವ ಮತ್ತು ಸಮಾಜದಲ್ಲಿ ಎಲ್ಲರ ಸಬಲೀಕರಣವನ್ನು ಖಚಿತಪಡಿಸಿಕೊಳ್ಳುವ ಅವರ ಬದ್ಧತೆಗೆ ಇದು ಸಾಕ್ಷಿಯಾಗಿದೆ.ಒಬ್ಬರನ್ನು ಹೊರತುಪಡಿಸಿ ತಮ್ಮ ಜೀವಿತಾವಧಿಯ ವೃತ್ತಿಜೀವನದಲ್ಲಿ ಎಲ್ಲಾ ವಿರೋಧಿ ಅಭ್ಯರ್ಥಿಗಳನ್ನು ಸೋಲಿಸಿದ ದಾಖಲೆಗೆ ಅವರು ಹೆಸರುವಾಸಿಯಾಗಿದ್ದಾರೆ.  ಖರ್ಗೆಯವರ ನಿಷ್ಠೆ, ತಾಳ್ಮೆ ಮತ್ತು ಆಡಳಿತ ನಿರ್ವಹಿಸುವ ಜಾಣತನ ಮತ್ತು ಯಾವುದೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಸಂಯಮವೇ ಅವರನ್ನು ಇತರ ನಾಯಕರಿಗಿಂತ ವಿಭಿನ್ನ ಎಂಬಂತೆ ಮಾಡಿದೆ.ಕೆಳವರ್ಗ ಹಾಗೂ ದುರ್ಬಲ ವರ್ಗದವರ ಹಕ್ಕುಗಳಿಗಾಗಿ ಧ್ವನಿಯೆತ್ತುವ ಮೂಲಕ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ನಾಯಕರಾಗಿದ್ದಾರೆ.ಸಂಸತ್ತಿನಲ್ಲಿ ಕಾನೂನುಗಳನ್ನು ಆಳವಾಗಿ ಅಧ್ಯಯನ ಮಾಡಿ, ರಚನಾತ್ಮಕವಾಗಿ ಚರ್ಚಿಸುವ ಮೂಲಕ ದೇಶದ ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಲ್ಪಟ್ಟಿದ್ದಾರೆ.ಅಂತೆಯೇ

2023 ರಲ್ಲಿ, ಅವರು ಲೋಕಮತದ ಸಂಸದೀಯ ಪ್ರಶಸ್ತಿಗಳಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ.

ಖರ್ಗೆಯವರ ಜೀವನ ಮುಳ್ಳಿನ ಹಾದಿಯಾದ್ರೂ ಹೋರಾಟದಿಂದಲೇ ರಾಜಕೀಯ ಜೀವನದಲ್ಲಿ  ಯಶಸ್ವಿಯನ್ನು ಗಳಿಸಿದ್ದಾರೆ. ಜೀವನದ ಬಹುತೇಕ ಸಮಯ ಮುಳ್ಳಿನ‌ ಹಾದಿಯಲ್ಲಿ ನಡೆದು ಯಶಸ್ವಿ ಜೀವನದತ್ತ ಬಂದಿರುವ ಖರ್ಗೆ ಅವರ ಬದುಕು ಈ ದೇಶದ ಜನತೆಗೆ ಪ್ರೇರಣದಾಯಕ.


ಗೌರವ ನುಡಿ:

ಕಲ್ಯಾಣ ಕರ್ನಾಟಕದ ಮಣ್ಣಿನ ಮಗ, ದೇಶದ ಹೆಮ್ಮೆಯ ಪುತ್ರ, ಸೌಮ್ಯ ಸಜ್ಜನ ರಾಜಕಾರಣಿ, ಅಜಾತಶತ್ರು ಶ್ರೀ ಮಲ್ಲಿಕಾರ್ಜುನ ಖರ್ಗೆಯವರಿಗೆ ನಾಡಿನ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸುತ್ತೇವೆ.

ಅಧಿಕಾರಕ್ಕಾಗಿ ಅಲ್ಲ, ಜನಸೇವೆಗಾಗಿ ರಾಜಕಾರಣ ಮಾಡಿದ ಧೀಮಂತ. ಜಾತಿ-ಮತ-ಪಕ್ಷ ಭೇದವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಜನನಾಯಕ. ಅವರ ಆರೋಗ್ಯ, ಆಯುಷ್ಯ ಶತಾಯುಷಿಯಾಗಲಿ. ಅವರ ಮಾರ್ಗದರ್ಶನ ನಾಡಿಗೆ ಇನ್ನಷ್ಟು ವರ್ಷ ಲಭಿಸಲಿ ಎಂದು ಆಶಿಸುತ್ತೇವೆ.


@@@@@


ಸಂಗಮೇಶ ಎನ್ ಜವಾದಿ  

ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

Image Description

Post a Comment

0 Comments