ಯುದ್ಧದ ಬಿಸಿ ಔಷಧಿಗಳಿಗೂ ತಟ್ಟಿದೆ: ದೇಶೀಯತೆಯೇ ದಾರಿ - ಸಂಗಮೇಶ ಎನ್ ಜವಾದಿ

 ಯುದ್ಧದ ಬಿಸಿ ಔಷಧಿಗಳಿಗೂ ತಟ್ಟಿದೆ: ದೇಶೀಯತೆಯೇ ದಾರಿ


- ಸಂಗಮೇಶ ಎನ್ ಜವಾದಿ 


ಬರಹಗಾರರು, ಪತ್ರಕರ್ತರು, ಚಿಂತಕರು, ಬೀದರ ಜಿಲ್ಲೆ


---


ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಜಾಗತಿಕ ಪರಿಣಾಮಗಳು ನೇರವಾಗಿ ಭಾರತದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿವೆ. ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಂತರ, ಜೀವ ರಕ್ಷಕ ಔಷಧಗಳ ಬೆಲೆಯೂ ಗಗನಕ್ಕೇರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. 

ಕರ್ನಾಟಕ ಫಾರ್ಮಾ ಮೆಡಿಕಲ್ ಅಸೋಸಿಯೇಷನ್ ನೀಡಿರುವ ಮಾಹಿತಿಯ ಪ್ರಕಾರ, ಮಾರುಕಟ್ಟೆಗೆ ಬರುತ್ತಿರುವ ಹೊಸ ಬ್ಯಾಚ್‌ನ ಔಷಧಗಳ ಬೆಲೆಯಲ್ಲಿ ಸರಾಸರಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಳವಾಗಿದೆ. ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಪೂರೈಕೆ ಸರಪಳಿ ಸಂಪೂರ್ಣವಾಗಿ ಏರುಪೇರಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. 

ಹೌದು, ಇತ್ತೀಚಿನ ಭೌಗೋಳಿಕ ರಾಜಕೀಯ ಸಂಘರ್ಷಗಳು ಮತ್ತು ಯುದ್ಧದ ಪರಿಣಾಮಗಳು ಸಾಮಾನ್ಯ ಜನರ ಔಷಧಿಯ ಮೇಲೆಯೂ ಭಾರೀ ಹೊಡೆತ ನೀಡಿವೆ. ಪ್ರಮುಖ ಯುದ್ಧ ಹಾಗೂ ಉದ್ವಿಗ್ನ ಪರಿಸ್ಥಿತಿಗಳು ಔಷಧ ವಲಯದ ಮೇಲೆ ಪ್ರಭಾವ ಬೀರಿವೆ. ಯುದ್ಧದ ವಾತಾವರಣದಿಂದಾಗಿ ಅಂತಾರಾಷ್ಟ್ರೀಯ ಹಡಗು ಮಾರ್ಗಗಳಲ್ಲಿ ಮತ್ತು ವಿಮಾನಯಾನದಲ್ಲಿ ವ್ಯತ್ಯಯ ಉಂಟಾಗಿ, ಔಷಧ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳ (Active Pharmaceutical Ingredients - API) ಆಮದು ದುಬಾರಿಯಾಗಿದೆ ಎಂಬ ಮಾಹಿತಿ. ಅದಕ್ಕಾಗಿಯೇ 

ಕಚ್ಚಾ ವಸ್ತುಗಳ ಸಾಗಾಟದ ವೆಚ್ಚ ಹೆಚ್ಚಳ ಹಾಗೂ ಪೂರೈಕೆಯಲ್ಲಿನ ಕೊರತೆಯಿಂದಾಗಿ ಪ್ಯಾರಸಿಟಮಾಲ್ ಸೇರಿದಂತೆ ದೈನಂದಿನ ಅಗತ್ಯದ ಜೀವ ರಕ್ಷಕ ಔಷಧಿಗಳ ಬೆಲೆ ಹೆಚ್ಚಾಗುವ ಆತಂಕ ಎದುರಾಗಿದೆ.

ಇದು ದುರ್ಬಲ ವರ್ಗದವರಿಗೆ ಔಷಧಿ ಮತ್ತು ಚಿಕಿತ್ಸೆಯ ಲಭ್ಯತೆಯನ್ನು ಮತ್ತಷ್ಟು ದುಬಾರಿಯನ್ನಾಗಿ ಮಾಡುತ್ತದೆ.

ಇದರಿಂದ ಆರ್ಥಿಕ ಏರಿಳಿತ ಮತ್ತು ಹಣದುಬ್ಬರದ ಜೊತೆಗೆ ಸೇರಿಕೊಂಡಿರುವ ಈ ಜಾಗತಿಕ ಬಿಕ್ಕಟ್ಟುಗಳು, ಸಾಮಾನ್ಯ ಜನರ ದೈನಂದಿನ ಆರೋಗ್ಯ ವೆಚ್ಚದ ಮೇಲೆ ತೀವ್ರ ಹಾಗೂ ಗಂಭೀರ ಪರಿಣಾಮ ಬೀರುತ್ತಿವೆ. 


ಬೆಲೆ ಏರಿಕೆಗೆ ಕಾರಣವೇನು?

ಮಾತ್ರೆಗಳು ಮತ್ತು ಸಿರಪ್‌ಗಳ ತಯಾರಿಕೆಗೆ ಪೆಟ್ರೋ ಕೆಮಿಕಲ್ಸ್ ಅತ್ಯಗತ್ಯ ಕಚ್ಚಾವಸ್ತುವಾಗಿದೆ. ಆದರೆ ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಮತ್ತು ಪೆಟ್ರೋ ಕೆಮಿಕಲ್ಸ್ ಆಮದು ವೆಚ್ಚ ದುಬಾರಿಯಾಗಿದೆ. ಸಾಗಣೆ ಸಮಯ ಹಾಗೂ ವೆಚ್ಚ ಎರಡೂ ಹೆಚ್ಚಾಗಿರುವುದರಿಂದ, ಫಾರ್ಮಾ ಕಂಪನಿಗಳು ಅನಿವಾರ್ಯವಾಗಿ ಹೊಸ ಬ್ಯಾಚ್‌ನ ಮೆಡಿಸಿನ್‌ಗಳ ದರವನ್ನು ಹಂತ ಹಂತವಾಗಿ ಏರಿಕೆ ಮಾಡುತ್ತಿವೆ.


ಯಾವ ಔಷಧಿಗಳಿಗೆ ಪೆಟ್ಟು?

ಈ ದರ ಏರಿಕೆಯು ಸಾಮಾನ್ಯ ಕಾಯಿಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ನಿತ್ಯವೂ ಬಳಸುವ ಬಿಪಿ, ಶುಗರ್, ಕಾರ್ಡಿಯಾಕ್ ಡ್ರಗ್ಸ್, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ ಮತ್ತು ಜ್ವರಕ್ಕೆ ಬಳಸುವ ಪ್ಯಾರಾಸಿಟಮಾಲ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಹೆಚ್ಚಾಗುತ್ತಿದೆ. ದಿನನಿತ್ಯ ಮಾತ್ರೆಗಳನ್ನೇ ನಂಬಿ ಬದುಕುವ ವೃದ್ಧರು ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಇದು ದೊಡ್ಡ ಹೊಡೆತವಾಗಿದೆ.

ಔಷಧಗಳ ಜೊತೆಗೆ ದೈನಂದಿನ ಬಳಕೆಯ ಕಾಸ್ಮೆಟಿಕ್ಸ್ ಮತ್ತು ಬೇಬಿ ಪ್ರಾಡಕ್ಟ್ಸ್ ಬೆಲೆಯಲ್ಲೂ ಗಣನೀಯವಾಗಿ ಏರಿಕೆ ಕಂಡುಬಂದಿದೆ. ಮಕ್ಕಳ ಪೌಡರ್, ಸೋಪ್, ಲೋಷನ್ ಮತ್ತು ಕ್ರೀಮ್‌ಗಳ ದರಗಳು ಕೂಡ ಗ್ರಾಹಕರಿಗೆ ಶಾಕ್ ನೀಡುತ್ತಿವೆ. ಅತ್ಯಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಇವುಗಳ ಬೆಲೆ ಏರಿಕೆಯು ಪ್ರತಿಯೊಂದು ಕುಟುಂಬದ ಮಾಸಿಕ ಬಜೆಟ್ ಅನ್ನು ಏರುಪೇರು ಮಾಡಿದೆ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.


ಸದ್ಯಕ್ಕೆ ಪರಿಹಾರ ಇಲ್ಲ:

ಈ ಬೆಲೆ ಏರಿಕೆಯ ಆಟ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಿಳಿಗೊಂಡು, ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ವ್ಯವಸ್ಥೆ ಯಥಾಸ್ಥಿತಿಗೆ ಬರುವವರೆಗೂ ಈ ದರ ಏರಿಕೆಯ ಪ್ರಕ್ರಿಯೆ ಮುಂದುವರಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. 


ಈಗ ನಾವು ಮಾಡಬೇಕಾದ್ದೇನು? "ದೇಶೀಯತೆಯೇ ದಿವ್ಯೌಷಧ"

1. ಸ್ವದೇಶಿ ಮಂತ್ರ ಪಠಿಸೋಣ:  

ಹೆಚ್ಚಾಗಿ ದೇಶಿಯ ವಸ್ತುಗಳು ಬಳಕೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಪರದೇಶದ ಯುದ್ಧದ ಬಿಸಿ ನಮ್ಮ ಅಡುಗೆ ಮನೆ, ನಮ್ಮ ಔಷಧಿ ಡಬ್ಬಿಗೆ ತಟ್ಟುತ್ತಿರುವಾಗ, "ಆತ್ಮನಿರ್ಭರ ಭಾರತ" ಕೇವಲ ಘೋಷಣೆಯಾಗಬಾರದು, ಅದು ಆಚರಣೆಯಾಗಬೇಕು. ದೇಶದಲ್ಲಿ ತಯಾರಾದಂತ ಎಲ್ಲಾ ವಸ್ತುಗಳನ್ನೂ ಉಪಯೋಗಿಸುವಂತಹ ವಾತಾವರಣ ನಿರ್ಮಾಣ ಮಾಡುವ ಮುಖಾಂತರ ದೇಶೀಯ ಸಂಸ್ಕೃತಿಗೆ  ಒಗ್ಗಿಕೊಳ್ಳುವ ಕೆಲಸ ಮಾಡಬೇಕು.


2. ಅಜ್ಜಿಯ ಮದ್ದಿನ ಪೆಟ್ಟಿಗೆ ತೆರೆಯೋಣ:  

ದೇಶಿಯ ಆಯುರ್ವೇದಿಕ್ ಔಷಧಿಗಳನ್ನು ಉಪಯೋಗಿಸುವ ಮೂಲಕ ಆರೋಗ್ಯ ಜೀವನ ಸಾಗಿಸಬೇಕು. ಶೀತ-ಕೆಮ್ಮಿಗೆ ತುಳಸಿ ಕಷಾಯ, ಗ್ಯಾಸ್ಟ್ರಿಕ್‌ಗೆ ಜೀರಿಗೆ ನೀರು, ರೋಗನಿರೋಧಕ ಶಕ್ತಿಗೆ ಚ್ಯವನಪ್ರಾಶ - ನಮ್ಮ ಅಡುಗೆ ಮನೆಯೇ ಮೊದಲ ಔಷಧಾಲಯ. ಪ್ರತಿ ಸಣ್ಣ ಕಾಯಿಲೆಗೂ ವಿದೇಶಿ ಕಂಪನಿಯ ಪೆಟ್ರೋ ಕೆಮಿಕಲ್ ಮಾತ್ರೆ ನುಂಗುವ ಬದಲು, ಆಯುರ್ವೇದದ ಮೊರೆ ಹೋಗೋಣ. 


3. ಸಾವಯವದ ಕಡೆ ಹೆಜ್ಜೆ ಇಡೋಣ:  

ಸಾವಯವ ಕೃಷಿಯ ಪದಾರ್ಥಗಳನ್ನು ಹೆಚ್ಚಾಗಿ ಉಪಯೋಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಆದ್ಯತೆ ನೀಡಬೇಕು. ರಾಸಾಯನಿಕ ಮುಕ್ತ ಆಹಾರ ಸೇವನೆಯಿಂದ ರೋಗವೇ ಬರುವುದು ಕಡಿಮೆ. ರೋಗ ಬರದಿದ್ದರೆ ಔಷಧಿಯ ಖರ್ಚೇ ಇಲ್ಲ. ಇದೇ ನಿಜವಾದ ಉಳಿತಾಯ. ಅದಕ್ಕಾಗಿ ಸಾವಯವ ಪದಾರ್ಥಗಳನ್ನು ಹೆಚ್ಚಾಗಿ ಬಳಸಬೇಕು.


ಸ್ವದೇಶಿ ಬಳಸಿ, ದೇಶ ಉಳಿಸಿ:  ಎನ್ನುವುದು ಕೇವಲ ಘೋಷಣೆಯಲ್ಲ, ಬದಲಿಗೆ ದೇಶದ ಆರ್ಥಿಕ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಸಂಕೇತವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಬಳಸುವುದರಿಂದ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ. 

ಸ್ಥಳೀಯವಾಗಿ ತಯಾರಿಸಿದ ವಸ್ತುಗಳನ್ನು ಖರೀದಿಸುವುದರಿಂದ ದೇಶದ ರೈತರು, ಕುಶಲಕರ್ಮಿಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗುತ್ತದೆ.

ಭಾರತೀಯ ಉತ್ಪನ್ನಗಳ ಬಳಕೆಯು ದೇಶದಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ಬಂಡವಾಳದ ಹೊರಹರಿವನ್ನು ತಡೆಯುತ್ತದೆ.

ಇದು ಭಾರತವನ್ನು ಸ್ವಾವಲಂಬಿಯಾಗಿಸುವ ಮತ್ತು ನಮ್ಮದೇ ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಪ್ರಮುಖ ಮಾರ್ಗವಾಗಿದೆ. ಅದೇ ರೀತಿ ದೈನಂದಿನ ಜೀವನದಲ್ಲಿ ಸ್ಥಳೀಯವಾಗಿ ಬೆಳೆದ ಆಹಾರ ಧಾನ್ಯಗಳು, ಭಾರತೀಯ ಬ್ರ್ಯಾಂಡ್‌ಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳಿಗೆ ಭಾರತೀಯರು ಆದ್ಯತೆ ನೀಡಬೇಕು. ಈ ಸ್ವದೇಶಿ ಉತ್ಪನ್ನಗಳ ಬಳಕೆಯು ಉತ್ತಮ ಆರೋಗ್ಯ ಮತ್ತು ಸ್ವಾವಲಂಬನೆಗೆ ದಾರಿಯಾಗಿದೆ. ಸಂಸ್ಕೃತಿ ಪ್ರಧಾನವಾದ ನಮ್ಮ ದೇಶೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜತೆಗೆ ಸ್ವದೇಶೀ ವಸ್ತುಗಳನ್ನು ಬಳಸಿ ಉತ್ತಮ ಆರೋಗ್ಯ ಕಾಪಾಡಿಕೊಂಡು ಸದೃಢ ಹಾಗೂ ಸಂಪತ್ಭರಿತ ರಾಷ್ಟ್ರವಾಗಿ ನಿರ್ಮಾಣ ಮಾಡಬೇಕಾಗಿದೆ.  

ಅಂದಹಾಗೆ ಆಮದು ಕಡಿಮೆಯಾಗಿ ರಪ್ತು ಜಾಸ್ತಿಯಾಗಬೇಕು. ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಧ್ವನಿಯಾಗಬೇಕು. ಮನೆಗಳಲ್ಲಿ ಬಳಸುವ ವಸ್ತು ಸ್ವದೇಶಿ ಇರುವಂತೆ, ಸ್ಥಳೀಯ ಉತ್ಪನ್ನವನ್ನೇ ಖರಿದಿಸುವಂತೆ ಗಮನಹರಿಸಬೇಕು. ಇದಕ್ಕಾಗಿ 

ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಸ್ವದೇಶಿ ವಸ್ತುಗಳ ಬಳಕೆ ಅಗತ್ಯವಾಗಿದೆ. ಸ್ವದೇಶಿ ಸಂಕಲ್ಪದ ಕರೆಯ ಮೇರೆಗೆ ನಡೆಯಲಿರುವ ಆತ್ಮ ನಿರ್ಭರ ಭಾರತ ಸ್ವದೇಶಿ ವಸ್ತು ಬಳಸಿ ಅಭಿಯಾನದಲ್ಲಿ ಎಲ್ಲರೂ ತೊಡಗಿಸಿಕೊಂಡು ಜನಜಾಗೃತಿ ಮೂಡಿಸಬೇಕು.

ಪ್ರತಿಯೊಬ್ಬರ ಸಣ್ಣ ಕ್ರಿಯೆಯು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಂಡು  ಭಾರತೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು. ಖರೀದಿಸುವುದು ಪ್ರತಿಯೊಬ್ಬ ಭಾರತೀಯನ  ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ದೇಶಿ ಉತ್ಪನ್ನಗಳನ್ನು ಖರೀದಿಸಿ , ಕಡ್ಡಾಯವಾಗಿ ಬಳಸುವಂತೆ ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಿಬೇಕು.


ಯುವಜನತೆ :

ಆಧುನಿಕತೆಯನ್ನೇ ಅಭಿವೃದ್ಧಿಯೆಂದು ಬೆಂಬತ್ತಿ ಹೊರಟಿರುವ ಇಂದಿನ ಯುವಪೀಳಿಗೆ ನಮ್ಮ ಸಾಹಿತ್ಯ, ಸಂಸ್ಕೃತಿ ಎಲ್ಲವನ್ನೂ ಮರೆತು ವಿದೇಶಿ ವಸ್ತುಗಳಿಗೆ ಮಾರು ಹೋಗಿದೆ. ಭಾರತ ಸಾಹಿತ್ಯ-ಸಂಸ್ಕೃತಿಗಳ ತವರೂರು,  ಪ್ರತಿಭಾವಂತರ ನೆಲೆಬೀಡು. ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಏನು ಬೇಕೋ ಅವೆಲ್ಲವೂ ಇಲ್ಲಿ ಲಭ್ಯವಿವೆ. ಆದರೆ ಅದರ ಬಳಕೆ ಸಮರ್ಪಕವಾಗದೆ ಎಲ್ಲವೂ ನಶಿ ಸುತ್ತಾ ಸಾಗಿವೆ. ಇದನ್ನರಿತ ವಿದೇಶಿ ಕಂಪೆನಿಗಳು ಭಾರತ ದಿಂದಲೇ ಕಚ್ಚಾವಸ್ತುಗಳನ್ನು ಪಡೆದು ಸಿದ್ಧ ವಸ್ತುಗಳನ್ನು ತಯಾರಿಸಿ, ಇಲ್ಲಿಗೇ ತಂದು ಮಾರುತ್ತಿವೆ. ಆದರೆ ಹೆಸರು ಮಾತ್ರ ವಿದೇಶದ್ದು. ನಮ್ಮ ಜನ ಇಂತಹ ವಸ್ತುಗಳಿಗೆ ಮಾರು ಹೋಗಿ ಅದರ ಬೆಲೆಯನ್ನು ಲೆಕ್ಕಿಸದೇ ಖರೀದಿಸುತ್ತಾರೆ. ಇದರ ಫಲ: ನಿರುದ್ಯೋಗದ ಸಮಸ್ಯೆ. ಸ್ಥಳೀಯವಾಗಿ ಲಭ್ಯವಾಗುವ ವಸ್ತುಗಳನ್ನು ಸರಿಯಾಗಿ ಬಳಸಿಕೊಂಡರೆ ಕೆಲವೇ ವರ್ಷಗಳಲ್ಲಿ ಭಾರತ ಸದೃಢ, ಸ್ವಾಭಿಮಾನಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ  ಎಂಬುದನ್ನು ನಮ್ಮ ಯುವಜನ ಅರಿಯಬೇಕಿದೆ. ಈ ನಿಟ್ಟಿನಲ್ಲಿ ಯುವಜನತೆ ಸಾಗಬೇಕಾಗಿದೆ. ಅಂದಾಗಲೇ ಮಾತ್ರ ದೇಶ ಸಮೃದ್ಧಿವಾಗಲಿದೆ.


ಕೊನೆಯ ಮಾತು - ಪರಾವಲಂಬನೆ ಬಿಟ್ಟು ಸ್ವಾವಲಂಬನೆ ಕಡೆಗೆ ನಮ್ಮೆಲ್ಲರ ನಡೆಗೆ ಸಾಗಲಿ:

ಮಧ್ಯಪ್ರಾಚ್ಯದಲ್ಲಿ ಬಾಂಬ್ ಸಿಡಿದರೆ ಇಲ್ಲಿ ಮಾತ್ರೆ ಬೆಲೆ ಏರುತ್ತೆ. ಏಕೆ? ನಾವು ಇನ್ನೂ ಪರಾವಲಂಬಿಗಳು. ನಮ್ಮ ಸೂಜಿಯಿಂದ ಹಿಡಿದು ಸಿರಪ್‌ವರೆಗೂ ವಿದೇಶಿ ಕಚ್ಚಾವಸ್ತು, ವಿದೇಶಿ ತಂತ್ರಜ್ಞಾನ ನಂಬಿಕೊಂಡಿದ್ದೇವೆ.

ಅದಕ್ಕಾಗಿಯೇ ಈ ಸ್ಥಿತಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ ಎಂದರೆ ಅಶೋಕ್ತಿಯಲ್ಲ.

ಇದು ಎಚ್ಚರಿಕೆಯ ಗಂಟೆ ಅಂದರೂ ತಪ್ಪಿಲ್ಲ.  

"ಸ್ವದೇಶಿ ಬಳಸಿ, ಸಾವಯವ ಉಪಯೋಗಿಸಿ, ಆಯುರ್ವೇದ ಅಪ್ಪಿಕೊಳ್ಳಿ"- ಇದು ಕೇವಲ ಘೋಷಣೆಯಲ್ಲ, ಈಗಿನ ಅನಿವಾರ್ಯತೆ.  ನಮ್ಮ ಆರೋಗ್ಯ, ನಮ್ಮ ಜೇಬು, ನಮ್ಮ ದೇಶದ ಅರ್ಥವ್ಯವಸ್ಥೆ - ಮೂರೂ ಉಳಿಯಬೇಕಾದರೆ ನಾವು "ದೇಶೀಯ" ಆಗಲೇಬೇಕು.

ಯುದ್ಧ ಅವರ ನೆಲದಲ್ಲಿ, ಆದರೆ ಯುದ್ಧ ಮಾಡೋದು ನಾವು - ಬೆಲೆ ಏರಿಕೆ ವಿರುದ್ಧ, ಪರಾವಲಂಬನೆ ವಿರುದ್ಧ. ಅದಕ್ಕಾಗಿ ಸ್ವದೇಶಿ ವಸ್ತುಗಳನ್ನು ಕಡ್ಡಾಯವಾಗಿ ಬಳಸಬೇಕು, ಸಾವಯವ ಆಹಾರ, ಆಯುರ್ವೇದ ಔಷಧ ಉಪಯೋಗಿಸಬೇಕು.ಇದುವೇ ನಮಗೆ ಉಳಿಗಾಲದ ಮಾಹಾ ಅಸ್ತ್ರ. ಏನಂತೀರಿ.....


@@@@@@


ಸಂಗಮೇಶ ಎನ್ ಜವಾದಿ

ಬರಹಗಾರರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ.


---

Image Description

Post a Comment

0 Comments