ಮಾಳ್ವ ಪ್ರಾಂತದ ಮಹಾರಾಣಿ, ಧರ್ಮರಕ್ಷಕಿ ಶಿವಶರಣೆ ಅಹಲ್ಯಾಬಾಯಿ ಹೋಳ್ಕರ್

 ಮಾಳ್ವ ಪ್ರಾಂತದ ಮಹಾರಾಣಿ, ಧರ್ಮರಕ್ಷಕಿ ಶಿವಶರಣೆ ಅಹಲ್ಯಾಬಾಯಿ ಹೋಳ್ಕರ್



****

ಸಂಗಮೇಶ ಎನ್ ಜವಾದಿ

ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

---

ಭಾರತದ ಇತಿಹಾಸದಲ್ಲಿ ಅದ್ಭುತ ಆಡಳಿತಗಾರ್ತಿ, ಧರ್ಮರಕ್ಷಕಿ ಮತ್ತು ಲೋಕಮಾತೆಯಾಗಿ ಪ್ರಸಿದ್ಧರಾಗಿರುವ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ಅವರು ಮಾಳವ ಸಂಸ್ಥಾನದ (ಈಗಿನ ಮಧ್ಯಪ್ರದೇಶ) ದಕ್ಷ ಮತ್ತು ಜನಪ್ರಿಯ ರಾಣಿಯಾಗಿದ್ದರು. ಅವರು ತೋರಿದ ನ್ಯಾಯಪರತೆ, ಧಾರ್ಮಿಕ ಮತ್ತು ಸಮಾಜಮುಖಿ ಕಾರ್ಯಗಳಿಂದಾಗಿ ಇಂದಿಗೂ ಭಾರತೀಯರ ಮನಸ್ಸಿನಲ್ಲಿ ಅಜರಾಮರರಾಗಿದ್ದಾರೆ. 

‎ಆಕ್ರಮಣಕಾರರಿಂದ ನಾಶವಾಗಿದ್ದ ವಿವಿಧ ದೇಗುಲಗಳು ಮತ್ತು ಪುಣ್ಯಕ್ಷೇತ್ರಗಳನ್ನು ಮರು ಸ್ಥಾಪಿಸಿದ ಮಹಾದೈವಭಕ್ತೆ, ಧರ್ಮ ರಕ್ಷಕಿ, ಮಾಳ್ವ ಪ್ರಾಂತದ ಮಹಾರಾಣಿ ಲೋಕಮಾತೆ ಶಿವಶರಣೆ ಅಹಲ್ಯಾಬಾಯಿ ಹೋಳ್ಕರ್ ತಾಯಿ.

ಪ್ರಜೆಗಳ ಯೋಗಕ್ಷೇಮಕ್ಕೆ ಹೆಚ್ಚು ಒತ್ತು ನೀಡಿದ ಇವರು, ಬಡವರು ಮತ್ತು ನಿರ್ಗತಿಕರಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರು. ರಾಜ್ಯದ ರಕ್ಷಣೆಗಾಗಿ ಸ್ವತಃ ಸೈನ್ಯವನ್ನು ಮುನ್ನಡೆಸಿದ ಕೀರ್ತಿ ಇವರದ್ದು.ಬಾಲ್ಯ ವಿವಾಹ, ಸತಿ ಸಹಗಮನದಂತಹ ಅನಿಷ್ಠ ಪದ್ಧತಿಗಳನ್ನು ಬಲವಾಗಿ ವಿರೋಧಿಸಿದರು. ಮಹಿಳಾ ಸಬಲೀಕರಣ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ತರುವಾಯ ಇವರು ದೇಶದಾದ್ಯಂತ ಹಲವಾರು ಪ್ರಸಿದ್ಧ ದೇವಾಲಯಗಳು, ಘಾಟ್‌ಗಳು, ಬಾವಿಗಳು ಮತ್ತು ಧರ್ಮಶಾಲೆಗಳನ್ನು ಜೀರ್ಣೋದ್ಧಾರ ಮಾಡಿದ್ದಾರೆ ಮತ್ತು ಹೊಸದಾಗಿ ಅನೇಕ ಕಡೆಗಳಲ್ಲಿ ನಿರ್ಮಿಸಿದ್ದಾರೆ.  ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಜೊತೆಗೆ ಉತ್ತಮ ಆಡಳಿತಕ್ಕೆ ಹೆಸರುವಾಸಿಯಾಗಿದ್ದಾರೆ. 


ಕತ್ತಿ ಹಿಡಿಯದ ರಾಣಿ, ಕೋಟಿ ಹೃದಯ ಗೆದ್ದ ರಾಣಿ:

ಮೇ 31, 1725 - ಮಹಾರಾಷ್ಟ್ರದ ಚೌಂಡಿ ಗ್ರಾಮದಲ್ಲಿ ಜನಿಸಿದ ಮಾಳೋಜಿ ಶಿಂಧೆ ಅವರ ಮಗಳು ಅಹಲ್ಯಾ.

8 ವರ್ಷದ ವಯಸ್ಸಿಗೆ ಮಲ್ಹಾರರಾವ್ ಹೋಳ್ಕರ್ ಮಗ ಖಂಡೇರಾವ್‌ಗೆ ಮದುವೆ.  

29ನೇ ವಯಸ್ಸಿಗೆ ಗಂಡನೂ, ಮಾವನೂ ತೀರಿಕೊಂಡರು. ಅತ್ತ ಸತಿ ಸಹಗಮನದ ಒತ್ತಡ.

ಆದರೆ ಅಹಲ್ಯಾಬಾಯಿ ಕಣ್ಣೀರಿನಲ್ಲಿ ಮುಳುಗಿ ಕೂತಿಲ್ಲ. "ರಾಜ್ಯ ಯಾರದ್ದೂ ಅಲ್ಲ, ಜನರದ್ದು" ಎಂದು ಮಾಳ್ವ ಪ್ರಾಂತದ ಆಡಳಿತ ಚುಕ್ಕಾಣಿ ಹಿಡಿದರು. 30 ವರ್ಷ ಆಡಳಿತ. ಒಂದು ಯುದ್ಧವಿಲ್ಲ, ಒಂದು ರಕ್ತಪಾತವಿಲ್ಲ. ಆದರೂ ಇತಿಹಾಸದಲ್ಲಿ ಅಜರಾಮರ.


ಧರ್ಮರಕ್ಷಕಿ ಅಹಲ್ಯಾಬಾಯಿ :ಆಕ್ರಮಣಕಾರರಿಂದ ನಾಶವಾಗಿದ್ದ ದೇಗುಲಗಳ ಪುನರ್ನಿರ್ಮಾಣವೇ ಅವರ ಜೀವನ ಧ್ಯೇಯವಾಯಿತು.

ಕಾಶಿ ವಿಶ್ವನಾಥ, ಸೋಮನಾಥ, ಗಯಾ, ಬದರಿನಾಥ, ರಾಮೇಶ್ವರಂ, ತಿರುಪತಿ, ನಾಸಿಕ್, ಉಜ್ಜಯಿನಿ ಮಹಾಕಾಲ - ದೇಶದ 100+ ದೇಗುಲಗಳು, ಘಾಟ್‌ಗಳು, ಧರ್ಮಶಾಲೆಗಳು, ಬಾವಿಗಳು ಅವರಿಂದ ಜೀರ್ಣೋದ್ಧಾರ ಆಗಿವೆ.

ತಾನು ರಾಣಿಯಾಗಿ ಅರಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಯಾತ್ರಾರ್ಥಿಯಾಗಿ ಸನ್ಯಾಸಿಯಂತೆ ಬದುಕಿದರು. "ಜನಸೇವೆಯೇ ಜನಾರ್ದನ ಸೇವೆ" ಎಂದರು. ಒಂದು ರೂಪಾಯಿ ತೆರಿಗೆ ಹೆಚ್ಚಿಸಲಿಲ್ಲ, ಆದರೆ ಸಾವಿರಾರು ಕೋಟಿ ಮೌಲ್ಯದ ಧರ್ಮಕಾರ್ಯ ಮಾಡಿ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಅಮರರಾಗಿದ್ದಾರೆ.


ಬಾಲ್ಯ ವಿವಾಹ-ಸತಿ ಸಹಗಮನದ ವಿರುದ್ಧದ ಧ್ವನಿ:

18ನೇ ಶತಮಾನದಲ್ಲಿ ಬಾಲ್ಯ ವಿವಾಹ, ಸತಿ ಸಹಗಮನದಂತಹ ಅನಿಷ್ಠ ಪದ್ಧತಿಗಳನ್ನು ವಿರೋಧಿಸಿದ ಧೀರಮಹಿಳೆ. ತಾನು ಸತಿಯಾಗಲು ನಿರಾಕರಿಸಿದರು. ವಿಧವೆಯರಿಗೆ ಆಶ್ರಯ, ಗೌರವ ಕೊಟ್ಟರು.  

ಸ್ತ್ರೀ ಶಿಕ್ಷಣ ಹಾಗೂ ಸಮಾನತೆಗೆ ಶ್ರಮಿಸಿದರು. "ಸ್ತ್ರೀ ಅಬಲೆಯಲ್ಲ, ಶಕ್ತಿ" ಎಂದು ಬದುಕಿ ತೋರಿಸಿದರು.

ಅರಮನೆಯಲ್ಲಿ ಕುಳಿತು ಅಡುಗೆ ಮನೆ ನೋಡುವ ಬದಲು, ರಾಜ್ಯದ ಮೂಲೆ ಮೂಲೆ ಸುತ್ತಿ ಜನರ ಕಷ್ಟ ಆಲಿಸಿದರು."ರಾಣಿಯ ಛತ್ರಿಯ ಕೆಳಗೆ ಎಲ್ಲರೂ ಸಮಾನ" ಎಂಬುದು ಅವರ ಆಡಳಿತ ಸೂತ್ರ.


ಆದರ್ಶ ಆಡಳಿತ - ರಾಮರಾಜ್ಯದ ಮಾದರಿ:

ಅಹಲ್ಯಾಬಾಯಿ ಅವರ ಬದುಕು ಹಾಗೂ ಆಡಳಿತ ಸದಾ ಆದರ್ಶವಾಗಿದೆ.

1. ತೆರಿಗೆ ಕಡಿಮೆ, ನೀತಿ ಹೆಚ್ಚು:ರೈತರಿಂದ ಕಡಿಮೆ ತೆರಿಗೆ, ಆದರೆ ಕೃಷಿಗೆ ನೀರಾವರಿ, ಬಾವಿ, ಕೆರೆ.  

2. ನ್ಯಾಯ ಎಲ್ಲರಿಗೂ ಸಮಾನ: ದೂರು ಕೇಳಲು ಪ್ರತಿದಿನ ದರ್ಬಾರ್. ರಾಣಿಯ ಮುಂದೆ ರೈತನೂ ನಿಂತು ಮಾತಾಡಬಹುದು.  

3. ಕಲೆ-ಸಾಹಿತ್ಯ-ವ್ಯಾಪಾರ ಅಭಿವೃದ್ಧಿ: ಮಹೇಶ್ವರಿ ಸೀರೆಗೆ ಪ್ರೋತ್ಸಾಹ ಕೊಟ್ಟರು. ಇಂದೂ "ಮಹೇಶ್ವರಿ ಸೀರೆ" ಜಗತ್ಪ್ರಸಿದ್ಧ.  

4. ಧರ್ಮನಿರಪೇಕ್ಷತೆ: ದೇಗುಲ ಕಟ್ಟಿಸಿದಷ್ಟೇ ಮಸೀದಿ, ಧರ್ಮಶಾಲೆಗೂ ನೆರವು. "ಎಲ್ಲರೂ ನನ್ನ ಮಕ್ಕಳು" ಎಂದು, ಸಮಾನತೆ ಸಾರಿದ ಧೀರ ಮಹಿಳೆಯಾಗಿದ್ದಾರೆ. 

ಅದಕ್ಕಾಗಿಯೇ ಬ್ರಿಟಿಷರ ಆಫೀಸರ್ ಮಾಲ್ಕಮ್ ಹೇಳಿದ್ದು ಹೀಗೆ: "30 ವರ್ಷ ಆಡಳಿತ ಮಾಡಿದರೂ ಒಂದು ದೂರು ಕೇಳಿಲ್ಲ. ಅಂತಹ ರಾಣಿ ಜಗತ್ತಿನ ಇತಿಹಾಸದಲ್ಲೇ ವಿರಳ ಎಂದಿದ್ದಾರೆ." ಹಾಗಾಗಿಯೇ ಈ ತಾಯಿಯ ದೂರದೃಷ್ಟಿ ಮತ್ತು ಆಡಳಿತ ಕೌಶಲ್ಯ ದೇಶಕ್ಕೆ ಮಾದರಿ.ಇವರ ಧಾರ್ಮಿಕ ಮತ್ತು ಸಮಾಜ ಕಲ್ಯಾಣ ಕಾರ್ಯಗಳನ್ನು ಮೆಚ್ಚಿ ಜನಸಾಮಾನ್ಯರು ಇವರನ್ನು 'ರಾಜಮಾತೆ', 'ಲೋಕಮಾತೆ' ಮತ್ತು 'ದೇವಿ' ಎಂದು ಭಕ್ತಿಯಿಂದ ಕರೆಯುತ್ತಾರೆ. ಅಂತೆಯೇ ಈ ತಾಯಿಯವರ ತ್ಯಾಗ ಸೇವೆಯನ್ನು ಗುರುತಿಸಿ





ಭಾರತ ಸರ್ಕಾರವು ಆಗಸ್ಟ್ 25, 1996 ರಂದು ಅವರ 200 ನೇ ಪುಣ್ಯತಿಥಿಯ ಆಚರಣೆಯಲ್ಲಿ ಅಂಚೆಚೀಟಿಯನ್ನು ಬಿಡುಗಡೆ ಮಾಡಿತು. ಇಂದೋರ್ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲಾಗಿದೆ. ಇಂದೋರ್ ನಗರವು ವಿಶ್ವವಿದ್ಯಾಲಯಕ್ಕೆ ದೇವಿ ಅಹಲ್ಯಾ ವಿಶ್ವವಿದ್ಯಾಲಯ ಎಂದು ಹೆಸರಿಡಲಾಗಿದೆ.


ಅಹಲ್ಯಾಬಾಯಿ ತಾಯಿ ಸಂದೇಶ : ಅಧಿಕಾರ ಎಂದರೆ ಐಶ್ವರ್ಯ ಅಲ್ಲ, ಹೊಣೆಗಾರಿಕೆ. ರಾಜ್ಯಭಾರ ಎಂದರೆ ಆಜ್ಞೆ ಮಾಡುವುದು ಅಲ್ಲ, ಸೇವೆ ಮಾಡುವುದು. ಧರ್ಮ ಎಂದರೆ ಆಚರಣೆ ಅಲ್ಲ, ಮಾನವೀಯತೆ. ಮಹಿಳೆಯರೇ, ನೀವು ದುರ್ಬಲರಲ್ಲ. ಅಹಲ್ಯಾಬಾಯಿಯಂತೆ ವಿಧಿಯ ವಿರುದ್ಧ ನಿಂತು ಇತಿಹಾಸ ಬರೆಯಬಹುದು. ನಾಯಕರೇ, ಅಧಿಕಾರ ಸಿಕ್ಕಾಗ ಅರಮನೆ ಕಟ್ಟಿಸಬೇಡಿ, ಜನರ ಬದುಕು ಕಟ್ಟಿ. ಜನರ ಭಾವನೆಗಳಿಗೆ ಸ್ಪಂದಿಸುವಂತಹ ಕೆಲಸ ಮಾಡಿ, ಇದೆ ನಿಜವಾದ ಮಾನವೀಯತೆ, ಇದೆ ನಿಜವಾದ ಕಾಯಕ ಸೇವೆ ಎಂಬುದು ಅಹಲ್ಯಾಬಾಯಿ ತಾಯಿಯವರ ಜೀವನ ಸಂದೇಶವಾಗಿದೆ.


ಅವಿಸ್ಮರಣೀಯ :

ಶಿವಶರಣೆ, ಮಹಾಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರ ಮಾಳವ ಸಂಸ್ಥಾನದ ಮಹಾರಾಣಿಯಾಗಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಧೀಮಂತ ನಾಯಕಿ ಅವರು.ಮಹಿಳಾ ಹಕ್ಕುಗಳಿಗಾಗಿ ಧ್ವನಿ ಎತ್ತಿ, ವಿಧವೆಯರಿಗೆ ಆಸ್ತಿ ಹಕ್ಕು ಕೊಡಿಸುವ ಮೂಲಕ ಸ್ತ್ರೀ ಸಬಲೀಕರಣಕ್ಕೆ ನಾಂದಿ ಹಾಡಿದರು. ಮಹೇಶ್ವರಿಯಲ್ಲಿ ರೇಷ್ಮೆ ಉದ್ಯಮಕ್ಕೆ  ಪ್ರೋತ್ಸಾಹ ನೀಡಿ, ಉದ್ಯೋಗ ಸೃಷ್ಟಿಗೆ ಕಾರಣರಾದರು. ದೇಶದ ಹಲವೆಡೆ ದಾಳಿಕೋರರು ನಾಶಪಡಿಸಿದ್ದ ಅನೇಕ ಪುಣ್ಯ ಕ್ಷೇತ್ರಗಳನ್ನು, ಧರ್ಮಶಾಲೆಗಳನ್ನು ಪುನರುತ್ಥಾನಗೊಳಿಸಿದ ಹೆಗ್ಗಳಿಕೆ ಅವರದ್ದು. ಪೂಜ್ಯ ಮಾತೆಯವರು ರಾಷ್ಟ್ರಕ್ಕೆ ನೀಡಿದ ಕೊಡುಗೆಗಳು ಮತ್ತು ಅವರ ನ್ಯಾಯದಾನ ಪದ್ಧತಿ ಎಂದಿಗೂ ಅನನ್ಯ, ಅವಿಸ್ಮರಣೀಯ.


ಜಯಂತಿ ಪ್ರಯುಕ್ತ ಪ್ರತಿಜ್ಞೆ :- ಅಹಲ್ಯಾಬಾಯಿ ಅವರ ಜಯಂತಿಯಂದು ಭಕ್ತಿಪೂರ್ವಕವಾಗಿ ನಮನಗಳು ಸಲ್ಲಿಸುತ್ತಾ,ಪ್ರತಿಜ್ಞೆ ಮಾಡೋಣ - ಒಂದು ದೇಗುಲವನ್ನಾದರೂ ಸ್ವಚ್ಛವಾಗಿಡೋಣ. ಒಂದು ಹೆಣ್ಣು ಮಗುವನ್ನಾದರೂ ಶಾಲೆಗೆ ಕಳಿಸೋಣ.ಒಬ್ಬ ಅನಾಥನಿಗಾದರೂ ಅನ್ನ ಹಾಕೋಣ.ಅದೇ ಅಹಲ್ಯಾಬಾಯಿಗೆ ನಾವು ಕೊಡುವ ನಿಜವಾದ ಗೌರವ.

****

ಸಂಗಮೇಶ ಎನ್ ಜವಾದಿ

ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

Image Description

Post a Comment

0 Comments