*ನನ್ನಾಕೆ*

 *ನನ್ನಾಕೆ*




ಕಷ್ಟದ ದಾರಿಯಲಿ ಕೈ ಹಿಡಿದು ನಡೆದವಳು,

ಸುಖದ ಹೊತ್ತಲ್ಲಿಯೂ ನಗುವನು ಹಂಚಿದವಳು.

ಬಿರುಗಾಳಿಯ ಬದುಕಿನಲಿ ಭರವಸೆಯ ದೀಪವಾಗಿ,

“ದೇವರಿದೆ ನಮ್ಮ ಜೊತೆಗೆ” ಎಂದು ಧೈರ್ಯ ತುಂಬಿದವಳು॥

ನಂಬಿಕೆಯ ನೆರಳಾಗಿ ನಲುಗಿದ ಮನ ತಬ್ಬಿದವಳು,

ಕಷ್ಟವೆಂದು ಬಂದವರ ಕಣ್ಣೀರಿಗೆ ಮಿಡಿದವಳು.

ತನ್ನ ಕೈಲಾದ ಸಹಾಯದಿ ಹೃದಯ ಬಾಗಿಲು ತೆರೆದು,

ಇನ್ನೊಬ್ಬರ ಏಳ್ಗೆಯಲಿ ತನ್ನ ಸಂತಸ ಕಂಡವಳು॥

ಸತ್ಸಂಗದ ಸುವಾಸನೆ ಮನದಂಗಳ ತುಂಬಿದವಳು,

ಸದ್ಗುಣದ ಬೀಜವನು ಜೀವಗದ್ದೆಯಲಿ ಬಿತ್ತಿದವಳು.

ಪರೋಪಕಾರದ ಹಾದಿಯಲಿ ಪರಮಾತ್ಮ ಕಂಡು,

ಪ್ರೀತಿಯ ಪೂಜೆಯಲಿ ಬದುಕನು ಪಾವನಗೊಳಿಸಿದವಳು॥

ಗುರು–ಹಿರಿಯರ ಪಾದಕೆ ಗೌರವ ಹೂವ ಹರಡಿ,

ಮಕ್ಕಳ ಭವಿಷ್ಯದ ಕನಸಿಗೆ ಶ್ರಮದ ಬೆವರು ಸುರಿದು.

ನಿತ್ಯ ಪ್ರಾಮಾಣಿಕತೆಯ ದಾರಿಯಲಿ ದೀಪವಾಗಿ,

ಮನೆಯ ಮಂದಿರದಲಿ ಮೌಲ್ಯದ ಮೂರ್ತಿಯಾದಳು॥

ನಿಸ್ವಾರ್ಥ ಪ್ರೀತಿಯನು ಒಡಲೊಳಗಣ ಮರೆಮಾಡಿ,

ನಿಗರ್ವಿ ನಡತೆಯಲಿ ಮನುಜತ್ವದ ಬೆಳಕು ಹಚ್ಚಿ.

ಪಾತಿವ್ರತ್ಯ ಧರ್ಮದ ಪವಿತ್ರ ಉಡುಪು ತೊಟ್ಟು,

ಶರಣ ಸಂಸ್ಕೃತಿಯಲಿ ದಿವ್ಯತೆ ಮೈಗೂಡಿಸಿಕೊಂಡವಳು॥

ಅವಳು ಕೇವಲ ಹೆಂಡತಿಯಲ್ಲ ಆಶೆಯ ಆಧಾರ,

ಅವಳು ಕೇವಲ ತಾಯಿಯಲ್ಲ ಮಮತೆಯ ಸಾಗರ.

ನನ್ನಾಕೆ ಮನೆಯ ಗೃಹಲಕ್ಷ್ಮಿಯಾಗಿ ಕಂಗೊಳಿಸುವಳು,

ದೇವರು ಕೊಟ್ಟ ದಿವ್ಯ ವರವೆಂದು ಮನದಲಿ ಉಳಿಯುವಳು॥



ಕವಿ: ಡಾ. ಜಯವೀರ ಎ. ಕೆ.

ಖೇಮಲಾಪುರ

Image Description

Post a Comment

0 Comments