*ಯುದ್ಧ ಬೇಡ ಬುದ್ಧ ಬೇಕು*

 *ಯುದ್ಧ ಬೇಡ ಬುದ್ಧ ಬೇಕು*



ಯುದ್ಧದ ಹೊಗೆ ದೂರದ ದೇಶದಲಿ ಎದ್ದರೂ, ಮನೆಮನೆಗೆ ಬೆಲೆಯ ಬೆಂಕಿ ಹೊತ್ತಿತು,

ಬಾಣಲೆಯ ಬಿಸಿಯೊಳ ಹಸಿವಿನ ನಿಟ್ಟುಸಿರು , ಬಡವನ ಬದುಕಿಗೆ ಭಾರವಾಯಿತು.



ತೈಲದ ತುಂತುರು ಚಿನ್ನದ ಬೆಲೆಯಾಗಿ, ದಾರಿದೀಪವೂ ಮಂಕಾಗಿ ಕಂಡಿತು,

ಮಧ್ಯಮ ವರ್ಗದ ಕನಸಿನ ಗೂಡಿಗೆ, ದುಬಾರಿ ದಿನಗಳು ದಾಳಿ ಮಾಡಿತು.



ಅಕ್ಕಿಯ ಕಣವೂ ಅಳತೆಯ ಮಾತಾಗಿ, ಮಾರುಕಟ್ಟೆ ಮುಖವೇ ಬದಲಾಗಿತು,

ಬೆಲೆ ಏರಿಕೆಯ ಬಿರುಗಾಳಿಯ ಮುಂದೆ, ಜನಮನದ ಧೈರ್ಯವೇ ಕುಗ್ಗಿತು.



“ಯುದ್ಧ ವಿರಾಮ” ಎನ್ನುವ ಮಾತು ಕೇಳಿದರೂ, ಯಾತನೆಯ ಹೊರೆ ಮಾತ್ರ ಕಡಿಮೆಯಾಗಲಿಲ್ಲ,

ಏರುಮುಖ ಬೆಲೆಗಳ ಎತ್ತರ ನೋಡಿದ ಜನ, ಇಳಿಮುಖದ ದಿನವೇ ಕಾಣಲಿಲ್ಲ.



ಬಾಂಬಿನ ಸದ್ದಿಗಿಂತ ಬುದ್ಧನ ನುಡಿ ಮೇಲು, ಶಾಂತಿಯ ದೀಪವೇ ಬೆಳಗಲಿ,

“ಯುದ್ಧ ಬೇಡ – ಬುದ್ಧ ಬೇಕು” ಎನ್ನುವ ಘೋಷ, ಜಗದ ಮನದಲಿ ಮೊಳಗಲಿ.


ಕವಿ:ಡಾ. ಜಯವೀರ ಎ. ಕೆ.

          ಖೇಮಲಾಪುರ

Image Description

Post a Comment

0 Comments