*ತಳಮಟ್ಟದಿಂದ ಸಂಘಟನೆ ಬಲಪಡಿಸಲು ಶ್ರೀಕಾಂತ ಮಾದರ ಕರೆ*

 *ತಳಮಟ್ಟದಿಂದ ಸಂಘಟನೆ ಬಲಪಡಿಸಲು ಶ್ರೀಕಾಂತ ಮಾದರ ಕರೆ*


ರಾಯಬಾಗ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ) ಚಂದ್ರಕಾಂತ ಕಾದ್ರೊಳ್ಳಿ ಬಣ ಸಂಘಟನೆ ವತಿಯಿಂದ ಸೋಮವಾರ ದಿ. 18 ರಂದು ರಾಯಬಾಗ ಪಟ್ಟಣದ ಲೋಕೋಪಯೋಗಿ ನಿರೀಕ್ಷಣಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಎಸ್‌ಸಿ-ಎಸ್‌ಟಿ ಜಾಗೃತಿ ಹಾಗೂ ಸಂಘಟನಾ ಸಭೆಯಲ್ಲಿ ದಲಿತ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸಭೆಯಲ್ಲಿ ಪ್ರಮುಖ ವಕ್ತಾರರಾಗಿ ಭಾಗವಹಿಸಿದ್ದ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಮಾದರ  ಅವರು ಮಾತನಾಡಿ, ದಲಿತ ಸಮುದಾಯದ ಇಂದಿನ ಸ್ಥಿತಿ-ಗತಿ, ಸವಾಲುಗಳು ಹಾಗೂ ಸಂಘಟನೆಯ ಅಗತ್ಯತೆಯ ಬಗ್ಗೆ ಒತ್ತಿ ಹೇಳಿದರು.



“ಸಂವಿಧಾನವು ಸಮಾನತೆ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನೀಡಿದರೂ, ಇಂದಿಗೂ ತಳಮಟ್ಟದಲ್ಲಿ ದಲಿತ ಸಮುದಾಯ ಹಲವು ರೀತಿಯ ಅಸಮಾನತೆ, ಶೋಷಣೆ ಮತ್ತು ಅವಕಾಶ ವಂಚನೆಗೆ ಒಳಗಾಗುತ್ತಿದೆ” ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಶಿಕ್ಷಣ, ಉದ್ಯೋಗ, ಭೂಹಕ್ಕು, ಮೀಸಲಾತಿ ಸೌಲಭ್ಯಗಳ ಸಮರ್ಪಕ ಅನುಷ್ಠಾನ ಹಾಗೂ ಸಾಮಾಜಿಕ ಭದ್ರತೆ ವಿಷಯಗಳಲ್ಲಿ ಇನ್ನೂ ಅನೇಕ ಕೊರತೆಗಳಿವೆ ಎಂದು ಅವರು ಅಭಿಪ್ರಾಯಪಟ್ಟರು.


ಜಿಲ್ಲಾ ಅಧ್ಯಕ್ಷೆ ಶ್ರೀಮತಿ ರೇಖಾ ಜಕ್ಕಣ್ಣವರ ಅವರು ಮಾತನಾಡಿ 

ಗ್ರಾಮೀಣ ಪ್ರದೇಶಗಳಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅವರು, ಜಾಗೃತಿ ಕೊರತೆ ಮತ್ತು ಸಂಘಟಿತ ಹೋರಾಟದ ಅಭಾವದಿಂದ ಅನೇಕ ಹಕ್ಕುಗಳು ಕೇವಲ ದಾಖಲೆಗಳಿಗೆ ಸೀಮಿತವಾಗಿವೆ ಎಂದರು.ಸರ್ಕಾರದ ವಿವಿಧ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲುಪಬೇಕಾದರೆ, ಜನರಲ್ಲಿ ಹಕ್ಕುಗಳ ಅರಿವು ಮತ್ತು ಸಂಘಟನಾ ಶಕ್ತಿ ಹೆಚ್ಚಾಗಬೇಕು ಎಂದು ತಿಳಿಸಿದರು.

“ಸಂಘಟನೆ ಎಂದರೆ ಕೇವಲ ಪ್ರತಿಭಟನೆಗೆ ಸೀಮಿತವಾಗಿರಬಾರದು. ತಳಮಟ್ಟದಿಂದ ಯುವಜನರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಸಾಮಾಜಿಕ ನ್ಯಾಯದ ಆಶಯದಡಿ ಬಲಿಷ್ಠ ಸಂಘಟನೆಯನ್ನು ನಿರ್ಮಿಸಬೇಕು. ಗ್ರಾಮಮಟ್ಟದಲ್ಲೇ ಸಮಿತಿಗಳನ್ನು ರಚಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆಯಬೇಕೆಂದರು.



  ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಮೇತ್ರಿ ಮಾತನಾಡಿ, ದಲಿತ ಸಮುದಾಯದ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ ಮನೋಭಾವ, ಶೈಕ್ಷಣಿಕ ಹಿನ್ನಡೆ ಹಾಗೂ ನಿರುದ್ಯೋಗದಂತಹ ಸಮಸ್ಯೆಗಳ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಬಡವರಿಗೆ ಈ ತುಟ್ಟಿಯ ದಿನಗಳಲ್ಲಿ ವಧು ವರರಿಗೆ ಮದುವೆ ಮಾಡಲು ಹರ ಸಾಹಸ ಪಡುತ್ತಿರುವ ಸಂದರ್ಭ ಬಂದೊದಗಿದೆ. ಸಂಘಟನೆ ವತಿಯಿಂದ ಈಗ ರಾಜ್ಯದ ಬೇರೆ ಬೇರೆ ಕಡೆ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗುತ್ತಿದೆ ಇದರ ಗರಿಷ್ಠ ಲಾಭ ತಾವೆಲ್ಲರೂ ಪಡೆದುಕೊಳ್ಳಬೇಕೆಂದರು. ಸಾಮಾಜಿಕ ಪರಿವರ್ತನೆಗೆ ಶಿಕ್ಷಣ ಮತ್ತು ಸಂಘಟನೆ ಎರಡೂ ಪ್ರಮುಖ ಅಸ್ತ್ರಗಳಾಗಿದ್ದು, “ಶಿಕ್ಷಣ, ಸಂಘಟನೆ ಮತ್ತು ಹೋರಾಟ” ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಂಘಟನೆಯ ಮುಖಂಡರು, ಕಾರ್ಯಕರ್ತರು ಹಾಗೂ ವಿವಿಧ ಗ್ರಾಮಗಳ ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು. ಎಸ್‌ಸಿ-ಎಸ್‌ಟಿ ಸಮುದಾಯದ ಹಕ್ಕುಗಳ ರಕ್ಷಣೆ ಹಾಗೂ ಜಾಗೃತಿ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವ ಕುರಿತು ಚರ್ಚೆ ನಡೆಯಿತು.

ಸಭೆಯು ದಲಿತ ಸಮುದಾಯದಲ್ಲಿ ಸಂಘಟನಾ ಶಕ್ತಿ ವೃದ್ಧಿ, ಹಕ್ಕುಗಳ ಅರಿವು ಮತ್ತು ಸಾಮಾಜಿಕ ನ್ಯಾಯದ ಕುರಿತು ಹೊಸ ಚೈತನ್ಯ ಮೂಡಿಸಿದ ವೇದಿಕೆಯಾಗಿ ಗಮನ ಸೆಳೆಯಿತು. 


ಜಿಲ್ಲಾ ಮಹಿಳಾ ಅಧ್ಯಕ್ಷೆ ದ್ರಾಕ್ಷಾಯಿಣಿ ಸನದಿ, ತಾಲೂಕು ಅಧ್ಯಕ್ಷ ಪರಶುರಾಮ ಮೇಲ್ಗಡೆ ಜಿಲ್ಲಾ ಉಪಾಧ್ಯಕ್ಷ ವಿಠ್ಠಲ ಮಾಂಗ ತಾಲೂಕು ಮಹಿಳಾ ಉಪಾಧ್ಯಕ್ಷೆ ಭಾರತಿ ಜಯವೀರ ಕಾಂಬಳೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸಭೆ ಆರಂಭಕ್ಕೆ ಮೊದಲು ಉಪಸ್ಥಿತ ಗಣ್ಯರು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.


ವರದಿ:ಡಾ. ಜಯವೀರ ಎ. ಕೆ.

     ಖೇಮಲಾಪುರ

Image Description

Post a Comment

0 Comments