ಚಳವಳಿಗಳ ಚೇತನ ಶತಾಯುಷಿ ಹೆಚ್.ಎಸ್. ದೊರೆಸ್ವಾಮಿ
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ
---
ರೈತ, ಕಾರ್ಮಿಕ ಚಳುವಳಿ, ಪರಿಸರ ಹೋರಾಟ, ನಾಗರೀಕ ಚಳುವಳಿ, ಭೂಒತ್ತುವರಿ ವಿರುದ್ಧದ ಹೋರಾಟ ಮುಂತಾದ ಹಲವು ಚಳುವಳಿಗಳಲ್ಲಿ ಹೆಚ್ ಎಸ್ ದೊರೆಸ್ವಾಮಿ ರವರು
ಮುಂದಾಳತ್ವ ವಹಿಸಿ, ಅನೇಕ ಇತರ ಚಳುವಳಿಗಳಿಗೆ ನೈತಿಕ ಮತ್ತು ಸಾಂಕೇತಿಕ ಬೆಂಬಲವಾಗಿ ಪಾಲ್ಗೊಂಡು ನ್ಯಾಯಯುತ ಹೋರಾಟ ಮಾಡಿದವರು.ಹೋರಾಟವೇ ಉಸಿರಾಗಿದ್ದ ಚೇತನ' ಎಂದೇ ಪ್ರಖ್ಯಾತರಾದವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಹಾಗೂ ಪತ್ರಕರ್ತ ಎಚ್.ಎಸ್. ದೊರೆಸ್ವಾಮಿ (ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ). ಇವರು ಬ್ರಿಟಿಷರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು, ಸ್ವತಂತ್ರ ಭಾರತದ ಪ್ರಮುಖ ಜನಪರ ಚಳುವಳಿಗಳವರೆಗೆ ಸದಾ ಮುಂಚೂಣಿಯಲ್ಲಿ ನಿಂತು ಧ್ವನಿಯೆತ್ತಿದ ಅಪ್ರತಿಮ ದೇಶಪ್ರೇಮಿ. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಇವರು, ಬ್ರಿಟಿಷರ ವಿರುದ್ಧ ಗುಪ್ತ ಪತ್ರಿಕೆಗಳನ್ನು ಮುದ್ರಿಸಿ ಹಂಚುವ ಕೆಲಸ ಮಾಡಿದರು. ಈ ಕಾರಣಕ್ಕಾಗಿ ಸುಮಾರು ೧೪ ತಿಂಗಳ ಕಾಲ ಜೈಲುವಾಸವನ್ನೂ ಅನುಭವಿಸಿದ್ದರು.ಭಾರತದ ಸ್ವಾತಂತ್ರ್ಯಾನಂತರವೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಸಕ್ರಿಯರಾಗಿದ್ದರು. ಭೂ ಒತ್ತುವರಿ ವಿರೋಧಿ ಆಂದೋಲನ ಮತ್ತು ತುರ್ತು ಪರಿಸ್ಥಿತಿಯ ವಿರುದ್ಧವೂ ಧ್ವನಿಯೆತ್ತಿದ್ದರು.
ಪೂರ್ಣಚಂದ್ರ ತೇಜಸ್ವಿ' ಅವರಂತಹ ಸಾಹಿತಿಗಳ ಒಡನಾಡಿಯಾಗಿದ್ದ ಇವರು, ಪತ್ರಿಕೋದ್ಯಮದಲ್ಲೂ ತೊಡಗಿಸಿಕೊಂಡು 'ಸಹಹಾರ' ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.ತಮ್ಮ ನೂರನೇ ವಯಸ್ಸಿನಲ್ಲೂ ಯುವಕರಷ್ಟೇ ಹುರುಪಿನಿಂದ ಪ್ರತಿಭಟನೆ ಮತ್ತು ಧರಣಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕರ್ನಾಟಕದ ಜನಪರ ಹೋರಾಟಗಳ ಪಾಲಿಗೆ ಇವರು 'ನಾಡಿನ ಸಾಕ್ಷಿಪ್ರಜ್ಞೆ' ಎಂದೇ ಬಿಂಬಿತರಾಗಿದ್ದರು.
ಹೋರಾಟವೇ ಉಸಿರಾಗಿದ್ದ ಚೇತನ:
1918 ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ಜನಿಸಿದ ಹರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಅವರು 103 ವರ್ಷಗಳ ಸಾರ್ಥಕ ಬದುಕನ್ನು ನಾಡಿಗೆ ಮುಡಿಪಾಗಿಟ್ಟರು. 2021 ಮೇ 26ರಂದು ಇಹಲೋಕ ತ್ಯಜಿಸಿದರೂ ಅವರ ಹೋರಾಟದ ಕಿಚ್ಚು ಇಂದಿಗೂ ಲಕ್ಷಾಂತರ ಯುವಕರ ಎದೆಯಲ್ಲಿ ಉರಿಯುತ್ತಿದೆ.
18ನೇ ವಯಸ್ಸಿಗೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ* ದೊರೆಸ್ವಾಮಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ 14 ತಿಂಗಳು ಕಾರಾಗೃಹವಾಸ ಅನುಭವಿಸಿದರು. ಬಾಂಬ್ ತಯಾರಿಕೆ ಪ್ರಕರಣದಲ್ಲಿ ಬಂಧಿತರಾಗಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದರು.ಸ್ವಾತಂತ್ರ್ಯ ಬಂದ ನಂತರವೂ ಅವರ ಹೋರಾಟ ನಿಲ್ಲಲಿಲ್ಲ.
ಪತ್ರಕರ್ತನಿಂದ ಪ್ರಜಾಪ್ರಭುತ್ವದ ಕಾವಲುಗಾರ:
'ಪೌರವಾಣಿ', 'ಸಾಹಿತ್ಯ ಮಂದಿರ' ಪತ್ರಿಕೆಗಳನ್ನು ನಡೆಸಿದ ದೊರೆಸ್ವಾಮಿ, ಲೇಖನಿಯ ಮೂಲಕವೇ ಸರ್ಕಾರಗಳನ್ನು ಪ್ರಶ್ನಿಸಿದರು. ಭೂಸುಧಾರಣೆ, ಕಾಡು ಉಳಿಸಿ, ಕೆರೆ ಉಳಿಸಿ, ಭ್ರಷ್ಟಾಚಾರ ವಿರೋಧಿ ಆಂದೋಲನ, ನರ್ಮದಾ ಬಚಾವೋ, ರೈತ ಹೋರಾಟ - ಹೀಗೆ ಸ್ವಾತಂತ್ರ್ಯದ ನಂತರದ 75 ವರ್ಷಗಳ ಕಾಲ ಒಂದಲ್ಲ ಒಂದು ಹೋರಾಟದಲ್ಲಿ ಇದ್ದೇ ಇದ್ದರು.
95ನೇ ವಯಸ್ಸಿನಲ್ಲೂ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. "ನನ್ನ ವಯಸ್ಸು 100 ಆದರೂ ನನ್ನ ರಕ್ತ 20ರ ಯುವಕನದ್ದು" ಎಂದು ಗರ್ಜಿಸುತ್ತಿದ್ದರು.
ಸರಳತೆಯ ಸಾಕಾರಮೂರ್ತಿ:
ಗಾಂಧಿ ಟೋಪಿ, ಖಾದಿ ಜುಬ್ಬಾ, ಹೆಗಲ ಮೇಲೆ ಒಂದು ಜೋಳಿಗೆ - ಇದೇ ದೊರೆಸ್ವಾಮಿ ಅವರ ಆಸ್ತಿ. ಸರ್ಕಾರ ಕೊಡಮಾಡಿದ ಮನೆ, ಕಾರು, ಸೌಲಭ್ಯ ಎಲ್ಲವನ್ನೂ ತಿರಸ್ಕರಿಸಿದರು. "ಹೋರಾಟಗಾರನಿಗೆ ಐಷಾರಾಮ ಬೇಡ, ಜನರ ಪ್ರೀತಿಯೇ ಸಾಕು" ಎನ್ನುತ್ತಿದ್ದರು.
ಭ್ರಷ್ಟಾಚಾರದ ವಿರುದ್ಧ, ಕೋಮುವಾದದ ವಿರುದ್ಧ, ಅನ್ಯಾಯದ ವಿರುದ್ಧ ಕೊನೆಯ ಉಸಿರಿರುವವರೆಗೂ ಹೋರಾಡಿದರು. ಅಧಿಕಾರಸ್ಥರಿಗೆ ಸಿಂಹಸ್ವಪ್ನವಾಗಿದ್ದರು, ಜನಸಾಮಾನ್ಯರಿಗೆ ಆಸರೆಯಾಗಿದ್ದರು.
ಜಾತಿ, ಧರ್ಮ ಸೇರಿದಂತೆ ಯಾವ ವಿಚಾರದಲ್ಲೂ ಜನರಲ್ಲಿ ಭೇದ ತೋರುತ್ತಿರಲಿಲ್ಲ. ಶತಮಾನ ಪೂರೈಸಿದರೂ ಅಗಾಧವಾದ ನೆನಪಿನ ಶಕ್ತಿ ಅವರಲ್ಲಿತ್ತು. ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಆಸಕ್ತಿ ಇತ್ತು.ಅವರಿಗೆ, ಸಮ ಸಮಾಜದ ಕನಸು ಅವರ ಕಣ್ಣಲ್ಲಿ ಇತ್ತು. ಅದನ್ನು ಸದಾ ಕಾವೂ ಜತೆಗಿರುವವರಿಗೆ ನೆನಪಿಸುತ್ತಲೇ ಇದ್ದ ಜೀವ ದೊರೆಸ್ವಾಮಿ ಅವರದು.ಇನ್ನು
ಸಮಾಜ ಸೇವೆಯಲ್ಲಿ ಇರುವವನು ಸ್ವಯಂಪ್ರೇರಿತವಾಗಿ ಬಡತನವನ್ನು ಅಪ್ಪಿಕೊಳ್ಳಬೇಕು’ ಎಂಬ ಮಹಾತ್ಮ ಗಾಂಧಿಯವರ ಮಾತನ್ನು ಜೀವನದುದ್ದಕ್ಕೂ ಪಾಲಿಸಿದವರು ದೊರೆಸ್ವಾಮಿ. ಪ್ರೌಢಶಾಲಾ ದಿನಗಳಲ್ಲಿ ಪುಸ್ತಕವೊಂದರಲ್ಲಿ ಗಾಂಧಿಯವರ ಮಾತನ್ನು ಓದಿದ್ದ ಅವರು, ಕಟ್ಟಕಡೆಯವರೆಗೂ ಅದನ್ನು ಅಕ್ಷರಶಃ ಅನುಕರಿಸಿದರು. ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ದೊರೆಸ್ವಾಮಿ ಅವರನ್ನು ಕರೆದು ಸಂಪುಟ ದರ್ಜೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ‘ಸಚಿವನಾದರೂ ನಾನು ಈಗ ಇದ್ದಂತೆಯೇ ಇರುವೆ. ತಪ್ಪು ಕಂಡಾಗ ನೇರವಾಗಿ ಹೇಳುತ್ತೇನೆ. ಅದಕ್ಕೆ ಸಮ್ಮತವಿದ್ದರೆ ಸಚಿವ ಸ್ಥಾನ ಕೊಡಬಹುದು’ ಎಂದು ದೊರೆಸ್ವಾಮಿ ಪ್ರತಿಕ್ರಿಯಿಸಿದ್ದರಂತೆ. ‘ಅದೆಲ್ಲ ಅಸಾಧ್ಯ. ತಪ್ಪಿನ ಬಗ್ಗೆ ಮಾತನಾಡಬಾರದು’ ಎಂದು ಕೆಂಗಲ್ ಹೇಳಿದಾಗ, ‘ನಿಮ್ಮ ಕಿವಿಯಲ್ಲಾದರೂ ಹೇಳುವ ಸ್ವಾತಂತ್ರ್ಯ ಇರಬೇಕಲ್ಲ’ ಎಂದು ಪ್ರತ್ಯುತ್ತರ ನೀಡಿ ಸಚಿವ ಸ್ಥಾನವನ್ನು ನಿರಾಕರಿಸಿದ್ದಾರೆ, ಈ ಮೂಲಕ ಸರಳತೆ ತೋರಿಸಿ, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದ್ದಾರೆ.
ಯುವಜನತೆಗೆ ಸಂದೇಶ:
ದೊರೆಸ್ವಾಮಿ ಅವರು ಹೇಳುತ್ತಿದ್ದರು - "ಪ್ರಶ್ನಿಸುವ ಹಕ್ಕನ್ನು ಎಂದಿಗೂ ಬಿಟ್ಟುಕೊಡಬೇಡಿ. ಸರ್ಕಾರ ಯಾವುದೇ ಇರಲಿ, ಅನ್ಯಾಯ ಕಂಡಾಗ ಧ್ವನಿ ಎತ್ತಿ. ಸಂವಿಧಾನವೇ ನಮ್ಮ ಶಸ್ತ್ರ, ಅಹಿಂಸೆಯೇ ನಮ್ಮ ಮಾರ್ಗ."
"ಸ್ವಾತಂತ್ರ್ಯವನ್ನು ಗಳಿಸುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ" ಎಂಬ ಎಚ್ಚರಿಕೆಯನ್ನು ನೀಡಿದ್ದರು. ಇಂದು ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗ, ಸಂವಿಧಾನಕ್ಕೆ ಧಕ್ಕೆ ಬಂದಾಗ ದೊರೆಸ್ವಾಮಿ ಅವರ ನೆನಪು ಇನ್ನಷ್ಟು ಕಾಡುತ್ತದೆ.
ಅಜರಾಮರ ಹೋರಾಟಗಾರ: ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಚ್‌ಎಸ್ ದೊರೆಸ್ವಾಮಿ ತಮ್ಮ ಜನಪರ ಹೋರಾಟಗಳನ್ನು ಮುಂದುವರಿಸಿದರು. ತಮ್ಮ ಇಳಿವಯಸ್ಸಿನಲ್ಲೂ ಮನೆಯಲ್ಲಿ ಕೂರದೆ ಜನಚಳವಳಿಗಳಲ್ಲಿ ಮುಂಚೂಣಿಯಲ್ಲೇ ಕಾಣಿಸಿಕೊಳ್ಳತೊಡಗಿದರು. ಭೂಮಿ ಹೋರಾಟ, ಕೋಮುವಾದ, ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸಿದರು. ಇದೇ ಕಾರಣಕ್ಕಾಗಿ ಕೆಲವರಿಂದ ಇತ್ತೀಚೆಗೆ ಟೀಕೆಗೂ ಒಳಗಾಗಿದ್ದರು.
ಅದೇನೇ ಇದ್ದರೂ ಇವರ ಉತ್ಸಾಹ, ಹೋರಾಟದ ಕಿಚ್ಚು ನಿಜಕ್ಕೂ ಮಾದರಿ. ಯಾವುದೇ ರಾಜಿ ಇಲ್ಲದೆ ತಮ್ಮ ನಿಲುವುಗಳನ್ನು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದರು. ವಯಸ್ಸು, ಆರೋಗ್ಯ ಲೆಕ್ಕಿಸದೆ ಜನರ ಧ್ವನಿಯಾಗಿ ಗಮನ ಸೆಳೆಯುವ ಮೂಲಕ ಸಾರ್ಥಕ ಜೀವನ ನಡೆಸಿದರು.
ಅಂತೆಯೇ ಪದ್ಮಭೂಷಣ, ಬಸವಶ್ರೀ, ಕರ್ನಾಟಕ ರತ್ನ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದರೂ ಅವರು ಮಾತ್ರ ಜನರ ಮಧ್ಯೆ, ಬೀದಿಯಲ್ಲಿ, ಹೋರಾಟದ ಕಣದಲ್ಲಿ ಇದ್ದವರು.
ಮರಣವೂ ಅವರ ಹೋರಾಟವನ್ನು ನಿಲ್ಲಿಸಲಿಲ್ಲ. ಅವರ ಚಿತಾಭಸ್ಮವನ್ನು ಕರ್ನಾಟಕದ ಎಲ್ಲ ಜಿಲ್ಲೆಗಳ ಕೆರೆ-ನದಿಗಳಲ್ಲಿ ವಿಸರ್ಜಿಸಿ "ನೀರು ಉಳಿಸಿ, ಪರಿಸರ ಉಳಿಸಿ" ಎಂಬ ಸಂದೇಶ ಸಾರಲಾಯಿತು.
ಇಂದು ಅವರ ಪುಣ್ಯಸ್ಮರಣೆಯ ದಿನ. ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವೆಂದರೆ - ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು, ಪ್ರಶ್ನಿಸುವ ಗುಣ ಬೆಳೆಸಿಕೊಳ್ಳುವುದು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು. ಇವರ ಬದುಕು ಇಂದಿನ ಯುವ ಪೀಳಿಗೆಗೆ ಎಂದೆಂದಿಗೂ ಸ್ಫೂರ್ತಿದಾಯಕ.
ಶತಾಯುಷಿ ದೊರೆಸ್ವಾಮಿ ಅಮರರಾಗಲಿ. ಅವರ ಹೋರಾಟದ ಕಿಚ್ಚು ನಮ್ಮೆಲ್ಲರ ಎದೆಯಲ್ಲಿ ಸದಾ ಉರಿಯುತ್ತಿರಲಿ.
ಗೌರವ ನಮನ:ಜೀವನದುದ್ದಕ್ಕೂ ಹೋರಾಟ, ಚಳವಳಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹೋರಾಟಗಾರರಿಗೆ ಮಾರ್ಗದರ್ಶಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಶತಾಯುಷಿ ಹೆಚ್.ಎಸ್. ದೊರೆಸ್ವಾಮಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
@@@@@@
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

.gif)

.gif)


0 Comments