ಮದ್ಯದ ಅಮಲಿಗಿಂತ ಮದದ ಅಮಲು ಅಪಾಯಕಾರಿ ! - ಸಂಗಮೇಶ ಎನ್ ಜವಾದಿ

 ಮದ್ಯದ ಅಮಲಿಗಿಂತ ಮದದ ಅಮಲು ಅಪಾಯಕಾರಿ !


- ಸಂಗಮೇಶ ಎನ್ ಜವಾದಿ 


ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ


---


ಮದ್ಯಪಾನ ಮತ್ತು ಧೂಮಪಾನವು ವ್ಯಕ್ತಿಯ ಮಾನಸಿಕ ಸ್ಥಿತಿಯ ಮೇಲೆ ಧಾಳಿ ನಡೆಸಿ ಆ ವ್ಯಕ್ತಿಯ ಚಿಂತನೆಯನ್ನೇ ಬದಲಿಸಬಲ್ಲವು. ವಿಶೇಷವಾಗಿ ಮದ್ಯದ ಅಮಲು ಯುವಜನತೆಗೆ ಹೆಚ್ಚು ಆಕರ್ಷಕವಾಗಿದೆ.

ಪರಿಣಾಮಗಳು ಕುಡಿತದ ಚಟಕ್ಕೆ ಬಲಿಯಾಗಿಸುತ್ತದೆ ಹಾಗೂ ಮದ್ಯ ಇಲ್ಲದೇ ಆಗುವುದೇ ಇಲ್ಲ ಎನ್ನುವಂತಹ ಸ್ಥಿತಿಗೆ ತಂದಿಡುತ್ತದೆ. ಆದ್ದರಿಂದ ಪುಕ್ಕಟೆ ಸಿಕ್ಕಿತು ಎಂದು ಎಂದಿಗೂ ನಿಮ್ಮ ಮಿತಿ ಮೀರಿ ಕುಡಿಯದಿರಿ, ನಿಮ್ಮ ಮಿತಿಗಳನ್ನು ಅರಿಯಿರಿ ಹಾಗೂ 'ಇಲ್ಲ' ಮತ್ತು 'ಬೇಡ' ಎಂದರೆ, ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರುವುದಂತೂ ಗ್ಯಾರಂಟಿ.

ಅವಾಗ ಏನೇ ಮಾಡಿದರು ನಿಮ್ಮ ಜೀವನವನ್ನು ಉಳಿಸುವುದು ಕಷ್ಟಕರವಾಗಬಹುದು. ಅದಕ್ಕಾಗಿ ಜೀವನ ಏನೆಂಬುದು ತಿಳಿದುಕೊಂಡು ಸಾಗಬೇಕು. 

ಅಂದಾಗಲೇ ಮಾತ್ರ ಜೀವನಕ್ಕೊಂದು ಬೆಲೆ.  

ಅದೇ ರೀತಿ ಮದದ ಅಮುಲು ಏರಿದಾಗ ಮನುಷ್ಯ ನಾನೇ ಶ್ರೇಷ್ಠ, ನಾನೇ ಹೇಳಿದ್ದೇ ವೇದವಾಕ್ಯ ಎನ್ನುವ ಅಹಂನಲ್ಲಿ ತೇಲಾಡುತ್ತಾನೆ. ಇದು ಆತನ ಅಧಃಪತನಕ್ಕೆ ಖಂಡಿತವಾಗಿಯೂ ಕಾರಣವಾಗುತ್ತದೆ. ವಿಶೇಷವಾಗಿ ಈ ನೆಟ್ಟಿನಲ್ಲಿ ಹೇಳುವುದಾದರೆ,  ಮಾನವನಿಗೆ

ಸಂಬಂಧ ಎನ್ನುವುದು ಜೀವನದಲ್ಲಿ  ಸಂಜೀವಿನಿ ಇದ್ದಂತೆ. ಮನುಷ್ಯ ಸಂಘಜೀವಿ ಆಗಿರುವುದರಿಂದ ಆತ ಏಕಾಂಗಿಯಾಗಿ ಬದುಕುವುದು ಕಷ್ಟ. ಆದರೆ ಮದ/ಅಹಂಕಾರವೇ ಮೈದುಂಬಿಕೊಂಡರೆ ಯಾರೂ ನಿಮ್ಮೊಂದಿಗೆ ಇರಲಾರರು. 

ಹೀಗಾಗಿ ನಮ್ಮೊಳಗಿನ ಮದ /ಅಹಂಕಾರವನ್ನು ಕೊನೆಗಾಣಿಸಲು ಪ್ರಯತ್ನ ಮಾಡಬೇಕು.

ಇಲ್ಲವಾದಲ್ಲಿ ಪ್ರಾಣಿಗಳಿಗಿಂತ ಕಡೆಯದಾಗುತ್ತೆ ಮಾನವ ಬಾಳು.


ಮದ್ಯದ ಅಮಲು - ತಾತ್ಕಾಲಿಕ ನಾಶ :

ಮದ್ಯ ಕುಡಿದವನು ರಸ್ತೆಯಲ್ಲಿ ಬೀಳುತ್ತಾನೆ, ಬೈದಾಡುತ್ತಾನೆ, ಹೊಡೆದಾಡುತ್ತಾನೆ. 4 ಗಂಟೆ ಅಮಲು, ಮರುದಿನ ತಲೆನೋವು. ಪೊಲೀಸರು ಹಿಡಿದು ಒಳಗೆ ಹಾಕಿದರೆ ಬುದ್ಧಿ ಬರುತ್ತದೆ. ಲಿವರ್ ಹಾಳಾದರೆ ಆಸ್ಪತ್ರೆ ಸೇರುತ್ತಾನೆ. ಅಂದರೆ ಮದ್ಯದ ಅಮಲಿಗೆ ಮಿತಿ ಇದೆ, ಅಂತ್ಯ ಇದೆ. ಸಮಾಜ ಅವನನ್ನು "ಕುಡುಕ" ಎಂದು ಗುರುತಿಸಿ ದೂರ ಇಡುತ್ತದೆ.


ಮದದ ಅಮಲು - ಶಾಶ್ವತ ವಿನಾಶ :

ಆದರೆ ಮದ - ಅಹಂಕಾರ, ಅಧಿಕಾರದ ಮದ, ದುಡ್ಡಿನ ಮದ, ಜಾತಿಯ ಮದ, ವಿದ್ಯೆಯ ಮದ - ಇದು ಕಣ್ಣಿಗೆ ಕಾಣದ ವಿಷ.

1.ಅಧಿಕಾರದ ಮದ: ಕುರ್ಚಿ ಸಿಕ್ಕ ಕೂಡಲೇ "ನಾನೇ ದೊಡ್ಡವನು, ನನ್ನ ಮಾತೇ ಶಾಸನ" ಎನ್ನುತ್ತಾನೆ. ಜನಸೇವಕ ಆಗಬೇಕಾದವನು ಜನರ ಒಡೆಯ ಆಗುತ್ತಾನೆ. ವರ್ಗಾವಣೆ, ಅಮಾನತು, ಕೇಸ್ ಹಾಕಿ ಜನರ ಬದುಕನ್ನೇ ಹಾಳು ಮಾಡುತ್ತಾನೆ. ಮದ್ಯದ ಅಮಲು ಇಳಿಯುತ್ತೆ, ಅಧಿಕಾರದ ಅಮಲು ಇಳಿಯಲ್ಲ - ಇಳಿಯೋದು ಖುರ್ಚಿ ಹೋದಾಗಲೇ ಮಾತ್ರ.


2.ದುಡ್ಡಿನ ಮದ: "ದುಡ್ಡಿದ್ರೆ ಏನು ಬೇಕಾದ್ರೂ ಮಾಡಬಹುದು" ಎಂಬ ಭ್ರಮೆ. ಬಡವನ ಜಮೀನು ಕಬಳಿಸ್ತಾನೆ, ನ್ಯಾಯವನ್ನೇ ಕೊಂಡುಕೊಳ್ತಾನೆ. ಮಗನಿಗೆ ಕಾರು ಕೊಡಿಸಿ 5 ಜನರ ಜೀವ ತೆಗೆಸುತ್ತಾನೆ, ಆಮೇಲೆ ಪೊಲೀಸರಿಗೆ ದುಡ್ಡು ಕೊಟ್ಟು ಕೇಸ್ ಮುಚ್ಚಿಸುತ್ತಾನೆ. ಇವನ ಅಮಲು ಇಳಿಯೋದು ಸ್ಮಶಾನ ಸೇರಿದಾಗಲೇ.


3. ಜಾತಿಯ ಮದ: "ನನ್ನ ಜಾತಿ ಮೇಲು, ನಿನ್ನ ಜಾತಿ ಕೀಳು" ಎಂಬ ರೋಗ. ಹೊಟೇಲಿನಲ್ಲಿ ಬೇರೆ ಲೋಟ, ದೇವಸ್ಥಾನದಲ್ಲಿ ಬೇರೆ ದಾರಿ. ಇವನ ಮದದಿಂದ ಊರಿಗೆ ಊರೇ ಹೊತ್ತಿ ಉರಿಯುತ್ತೆ, ಅಮಾಯಕರು ಬಲಿಯಾಗ್ತಾರೆ. 


4. ವಿದ್ಯೆಯ ಮದ: 4 ಪುಸ್ತಕ ಓದಿದ ಕೂಡಲೇ "ನನಗೇ ಎಲ್ಲಾ ಗೊತ್ತು, ಉಳಿದವರೆಲ್ಲ ದಡ್ಡರು"  ಎಂಬ ಅಹಂ. ತಂದೆ-ತಾಯಿಯನ್ನೇ "ಅನಕ್ಷರಸ್ಥರು" ಎಂದು ಕಡೆಗಣಿಸುತ್ತಾನೆ. ಸಂಸ್ಕಾರ ಇಲ್ಲದ ವಿದ್ಯೆ ವಿನಾಶಕ್ಕೆ ದಾರಿಯಾಗುತ್ತದೆ. ಜೊತೆಗೆ 

ನಾನೆಂಬ ಭಾವ ಇರುವವರೆಗೆ ಅಹಂಕಾರವು ನಮ್ಮಲ್ಲಿ ಮನೆಮಾಡಿಕೊಂಡಿರುತ್ತದೆ. ನಾನು, ನನ್ನದು ಎಂಬ ಅಭಿಮಾನಕ್ಕೆ ಕಾರಣವಾದುದೇ ಅಹಂಕಾರ. ಈ ಅಹಂಕಾರವು ಮನಸ್ಸಿನಲ್ಲಿ ಇಂಬುಗೊಂಡಾಗ ಉತ್ತಮ ನಾಗರಿಕನಾಗಿ ಬದುಕಲು ಅಡ್ಡಿಯಾಗುವುದಷ್ಟೇ ಅಲ್ಲ, ಅಧಃಪತನಕ್ಕೂ ಕಾರಣವಾಗಬಹುದು.

ಹಾಗಾಗಿಯೇ ಮದ ಎನ್ನುವುದು ಇನ್ನೊಬ್ಬರನ್ನು ತುಳಿಯುವ ಕೆಲಸ ಮಾಡುತ್ತದೆ. ಸಂಬಂಧಗಳಿಗಿಂತ ನಮ್ಮ ಮಾತು ನಡೆಯುವುದೇ ನಮಗೆ ಮುಖ್ಯ ಎಂದಾದಾಗ ಯಾರೂ ನಮ್ಮೊಂದಿಗೆ ಆತ್ಮೀಯತೆಯಿಂದ ಇರಲು ಇಷ್ಟಪಡುವುದಿಲ್ಲ. ಅಹಂಕಾರವೆನ್ನುವುದು ಎಂದಿಗೂ ನಿಮ್ಮನ್ನು ಸಂತೋಷವಾಗಿ ಹಾಗೂ ಶಾಂತಿಯಿಂದ ಇರಲು ಬಿಡಲಾರದು. ಅಹಂಕಾರ ಯಾವತ್ತು ನಿಮ್ಮನ್ನು ನಿಯಂತ್ರಿಸಲು ಆರಂಭಿಸುತ್ತದೆಯೋ ಅಂದಿನಿಂದ ನಿಮ್ಮ ಜೀವನ ಹಾಳಾಯಿತು ಎಂದೇ ಲೆಕ್ಕ. ಅಲ್ಲಿಂದ ನೀವು ಎಂದಿಗೂ ನಿಮ್ಮ ಜೀವನದಲ್ಲಿ ನೆಮ್ಮದಿ ಅಥವಾ ಸಂತೋಷದಿಂದ ಬದುಕಲು ಸಾಧ್ಯವೇ ಇಲ್ಲ. ಮದ ಎನ್ನುವುದು ಕೇವಲ ನಿಮ್ಮ ಸಂಬಂಧದಲ್ಲಿ ಶಾಂತಿಯನ್ನು ಹಾಳು ಮಾಡುವುದರ ಜೊತೆಯಲ್ಲಿ ನಿಮ್ಮ ಮನಸ್ಸಿನ ಶಾಂತಿಯನ್ನೂ ಖಂಡಿತವಾಗಿಯೂ ಹಾಳು ಮಾಡುತ್ತದೆ ಎಂಬುದು ನಿಮಗೆ ತಿಳಿದಿರಬೇಕು.ಕೊನೆಗೊಂದು ದಿನ ಎಲ್ಲವನ್ನೂ ಕಳೆದುಕೊಂಡು ಏಕಾಂಗಿಯಾಗಿ ಬಾಳಬೇಕಾದ ದಿನ ಸಮಿಪಿಸಿದರೂ ಆಶ್ಚರ್ಯವಿಲ್ಲ. ಮದವು ಬಹುತೇಕ ಎಲ್ಲ ಸಮಸ್ಯೆಗಳ ಮೂಲ. ಅದು ಅತಿಯಾದರೆ ಅನೇಕ ರೋಗಗಳು ಬರುವುದುಂಟು. ಆಯುಷ್ಯ ಕಡಿಮೆಯಾಗುವುದುಂಟು. 

ಹೀಗಾಗಿ ಏಕಾಂಗಿಯಾಗಿ ಬಾಳುವುದಕ್ಕಿಂತ ನಮ್ಮನ್ನು ನಾವು ತಿದ್ದುಕೊಂಡು ಪ್ರೀತಿಪಾತ್ರರ ಜೊತೆಯಲ್ಲಿ ಉತ್ತಮರಾಗಿ ಇರುವುದು ಅರ್ಥವಿದೆ.

ಅದಕ್ಕಾಗಿ ಕ್ಷಮಿಸುವ ಗುಣವನ್ನು ಕಲಿತುಕೊಳ್ಳುವುದು ಉತ್ತಮ. ಯಾರಿಂದಲೂ ಪ್ರತಿಫಲವನ್ನು ನಿರೀಕ್ಷೆ ಮಾಡಲೇಬೇಡಿ. ನಿಮ್ಮ ಬಳಿ ಏನಿದೆಯೋ ಅದರಲ್ಲಿಯೇ ಜೀವನವನ್ನು ಆನಂದಿಸಿ.ತಾಳ್ಮೆ, ಪ್ರಾಮಾಣಿಕತೆ, ಕೃತಜ್ಞತಾ ಭಾವಗಳಂತಾ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.ಅಂದಾಗಲೇ ಮಾತ್ರ ಉತ್ತಮ ನಾಗರಿಕನಾಗಿ ಬಾಳಬಹುದು.


ಯಾಕೆ ಮದದ ಅಮಲು ಅಪಾಯಕಾರಿ? ಗೊತ್ತಾ, ಯಾಕೆಂದರೆ!

ಮದ್ಯ ಕುಡಿದವನಿಗೆ ತಾನು ಕುಡಿದಿದ್ದೇನೆ ಎಂದು ಗೊತ್ತು. ಆದರೆ ಮದ ಏರಿದವನಿಗೆ ತಾನು ಮದದಲ್ಲಿದ್ದೇನೆ ಎಂದೇ ಗೊತ್ತಾಗಲ್ಲ. ಅದಕ್ಕೆ ಚಿಕಿತ್ಸೆಯೂ ಇಲ್ಲ.

ಮದ್ಯ ಒಬ್ಬನನ್ನಷ್ಟೇ ಹಾಳು ಮಾಡುತ್ತದೆ.ಆದರೆ ಮದ ಇಡೀ ಕುಟುಂಬ, ಸಮಾಜ, ದೇಶವನ್ನೇ ಹಾಳು ಮಾಡುತ್ತದೆ. ಹಿಟ್ಲರ್, ಮುಸಲೋನಿ - ಇವರೆಲ್ಲ ಅಧಿಕಾರ ಮದದಿಂದಲೇ ಲಕ್ಷಾಂತರ ಜನರನ್ನು ಕೊಂದರು.

ಮದ್ಯದ ಅಮಲಿಗೆ ನಾಚಿಕೆ ಇದೆ. ಬೆಳಗ್ಗೆ ಎದ್ದು "ನಿನ್ನೆ ಏನೇನೋ ಮಾಡ್ಬಿಟ್ಟೆ" ಅಂತ ತಲೆ ತಗ್ಗಿಸುತ್ತಾನೆ. ಆದರೆ ಮದ ಏರಿದವನಿಗೆ ನಾಚಿಕೆ-ಮಾನ-ಮರ್ಯಾದೆ ಯಾವುದೂ ಇರಲ್ಲ."ನಾನು ಮಾಡಿದ್ದೇ ಸರಿ" ಎಂದು ವಾದ ಮಾಡುತ್ತಾನೆ, ಸಮರ್ಥಿಸಿಕೊಳ್ಳುತ್ತಾನೆ.


ಬಸವಣ್ಣನವರ ಎಚ್ಚರಿಕೆ ಮಾತು:

"ಇವನಾರವ ಇವನಾರವ ಎನ್ನದೆ ಇವ ನಮ್ಮವ" ಎಂದ ಬಸವಣ್ಣನವರು. ಮದ ಏರಿದಾಗ "ನಾನು-ನೀನು, ಮೇಲು-ಕೀಳು" ಎಂಬ ಭೇದ ಶುರುವಾಗುತ್ತದೆ. ಅದಕ್ಕಾಗಿಯೇ 

"ಕಾಯಕವೇ ಕೈಲಾಸ" ಎಂದರು. ಆದರೆ ಮದ ಏರಿದವನು ಕಾಯಕವನ್ನು ಮರೆಯುತ್ತಾನೆ, ದುಡಿಯುವವನನ್ನು ಕೀಳಾಗಿ ಕಾಣುತ್ತಾನೆ. "ದಯವಿಲ್ಲದ ಧರ್ಮವದೇವುದಯ್ಯ?" ಎಂದರು. ಆದರೆ ಮದ ಇರುವಲ್ಲಿ ದಯೆ ಇರಲ್ಲ, ಧರ್ಮ ಇರಲ್ಲ. ಕರುಣೆಯಂತೂ ಮೊದಲೇ ಇರುವುದಿಲ್ಲ. ಒಟ್ಟಿನಲ್ಲಿ ಪ್ರಾಣಿಗಳಿಗಿಂತಲೂ ಕ್ರೂರಿಯಾಗಿ ಬದುಕುತ್ತಾನೆ. ಇದು ಖಂಡಿತವಾಗಿಯೂ ಮಾನವನ ಬದುಕಲ್ಲ. ಮತ್ತೊಂದು ಕಡೆಯಲ್ಲಿ

ಅಹಂಕಾರವೆಂಬುದು ‘ಮದವೇರಿದ ಆನೆ ಇದ್ದ ಹಾಗೆ’ ಎಂದು ಹೇಳುವ ಬಸವಣ್ಣನವರು - ‘ಅಹಂಕಾರವೆಂಬ ಸದಮದಗಜವೇರಿ ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ ’ಎನ್ನುತ್ತಾರೆ. ಅಹಂಕಾರವುಳ್ಳವರಿಗೆ ನರಕವೇ ಗತಿಯಾಗುತ್ತದೆ. ನಾನೆಂಬ ಅಹಂಕಾರ ತಲೆದೋರಿದಲ್ಲಿ ಅಟಮಟ ಕುಟಿಲ ಕುಹಕವೆಂಬ ಬಿರುಗಾಳಿ ಹುಟ್ಟಿತ್ತು. 

ಆ ಬಿರುಗಾಳಿ ಹುಟ್ಟಲೊಡನೆ ಜ್ಞಾನಜ್ಯೋತಿ ಕೆಟ್ಟಿತ್ತು. ಜ್ಞಾನಜ್ಯೋತಿ ಕೆಡಲೊಡನೆ ನಾ ಬಲ್ಲೆ ಬಲ್ಲಿದರೆಂಬ ಅರುಹಿರಿಯರೆಲ್ಲರೂ ತಾಮಸಕ್ಕೊಳಗಾಗಿ ಸೀಮೆದಪ್ಪಿ ಕೆಟ್ಟರು ಕಾಣಾ ಗುಹೇಶ್ವರಾ’ ಎಂಬ ಅಲ್ಲಮಪ್ರಭುವಿನ ವಚನದಲ್ಲಿ ನಾನೆಂಬ ಅಹಂಕಾರದ ಪರಿಣಾಮವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಅಹಂಕಾರವುಳ್ಳವರು ಆಸೆ-ಆಮಿಷ, ಕಾಮ-ಕ್ರೋಧ ಮತ್ತು ಮದ-ಮತ್ಸರಗಳಿಗೆ ಬಲಿಯಾಗಿ ತಮ್ಮ ವಿವೇಕವನ್ನೇ ಕಳೆದುಕೊಳ್ಳುತ್ತಾರೆ. ಮಹಾನ್ ಜ್ಞಾನಿಗಳೇ ಅಹಂಕಾರದಿಂದ ಅಧಃಪತನ ಹೊಂದಿರುವಾಗ ಸಾಮಾನ್ಯರ ಪಾಡಂತೂ ಹೇಳತೀರದು.

ಮದವು ಮನಸ್ಸನ್ನು ಆವರಿಸಿದಾಗ ಭಗವಂತನು ನಮ್ಮ ಮನಸಿನಿಂದ ದೂರ ಸರಿಯುತ್ತಾನೆ. ಅಹಂಕಾರವಳಿದ ಶುದ್ಧ ಮನಸ್ಸು ಲಿಂಗತನುವೆನಿಸಿಕೊಳ್ಳುತ್ತದೆ. ಅಂತಹ ಶುದ್ಧ ಮನಸ್ಸಿನಲ್ಲಿ ಭಗವಂತನು ನೆಲೆಗೊಳ್ಳುತ್ತಾನೆ. ಆದ್ದರಿಂದಲೇ ಬಸವಣ್ಣನವರು- ‘ಅಹಂಕಾರಿಯಾಗದೇ ಶರಣೆನ್ನು ಮನವೆ’ ಎಂದು ಮನಸ್ಸಿಗೆ ತಿಳಿಹೇಳುತ್ತಾರೆ. ಶರಣರು, ಸಂತರು ಅಹಂಕಾರವನ್ನು ತ್ಯಾಗ ಮಾಡಿದವರು. ಶರಣರ ದಾರಿಯಲ್ಲಿವುದರಿಂದ ಸಹಜವಾಗಿಯೆ ನಮ್ಮ ಅಹಂಕಾರವು ನಾಶವಾಗುತ್ತದೆ. 


ಮದ ಇಳಿಸೋದು ಹೇಗೆ?

1. ಕನ್ನಡಿ ನೋಡಿ: ಪ್ರತಿದಿನ "ನಾನು ಯಾರು? ನನ್ನ ಮೂಲ ಏನು?" ಎಂದು ಕೇಳಿಕೊಳ್ಳಿ. ಸ್ಮಶಾನಕ್ಕೆ ಹೋದಾಗ ಶ್ರೀಮಂತ - ಬಡವ ಎಲ್ಲ ಒಂದೇ ಎಂಬ ಸತ್ಯ  ಅರಿತುಕೊಳ್ಳಿ.

2.  ಜನರ ಜೊತೆ ಬೆರೆಯಿರಿ: ಎಸಿ ರೂಮಿನಿಂದ ಹೊರಬಂದು ಬಡವನ ಗುಡಿಸಲಿಗೆ ಹೋಗಿ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿ. ಕರುಣೆ ಬರುತ್ತದೆ,

ಮದ ಕರಗುತ್ತೆ. 

4. ಸಾವು ನೆನಪಿಡಿ: "ಒಂದು ದಿನ ಹೆಣವಾಗೋ ದೇಹಕ್ಕೆ ಇಷ್ಟೊಂದು ಅಹಂ ಯಾಕೆ?" ಎಂದು ನಮ್ಮಲ್ಲಿ ನಾವು ಪ್ರಶ್ನೆ ಹಾಕಿಕೊಳ್ಳಬೇಕು. ಆತ್ಮ ಅವಲೋಕನೇ ಮಾಡಿಕೊಳ್ಳಬೇಕು. ಅಂದಾಗ ಕನಿಷ್ಠಮಟ್ಟಿಗಾದರೂ ಸತ್ಯದ ಅರಿವು ಆಗಬಹುದು.


ಅಂದಹಾಗೆ ವೈಕುಂಠಕ್ಕೆ ನಿಮ್ಮಲ್ಲಿ ಯಾರು ಹೋಗುತ್ತೀರಿ ? ಎಂಬ ಗುರುಗಳ ಪ್ರಶ್ನೆಗೆ ಕನಕದಾಸರು - ನಾನು ಹೋದರೆ ಹೋದೇನು ಎಂದುತ್ತರಿಸುವಲ್ಲಿ ನಾನು ಎಂಬ ಅಹಂಕಾರ ಹೋದರೆ ಮೋಕ್ಷ ಸುಲಭವಾಗುತ್ತದೆ’ ಎಂಬರ್ಥವು ಧ್ವನಿತವಾಗುತ್ತದೆ.

ಅಹಂಕಾರವನ್ನು ಹೋಗಿಸುವಲ್ಲಿ ಕನಕದಾಸರು ನಮಗೆ ಪ್ರೇರಣದಾಯಕರು.

ಅದಕ್ಕಾಗಿಯೇ ಅಹಂಕಾರವನೆ ಮರೆದು, ದೇಹಗುಣಂಗಳನೆ ಜರೆದು ಇಹಪರವು ತಾನೆಂದರಿದ ಕಾರಣ ‘ ಸೋಹಂ ’ ಭಾವ ಸುಸ್ಥಿರವಾಯಿತ್ತು - ಎನ್ನುತ್ತಾರೆ ಅಲ್ಲಮಪ್ರಭುದೇವರು. ನಮ್ಮಲ್ಲಿರುವ ದೇಹ ಗುಣಗಳ ಅಭಿಮಾನ ಮತ್ತು ನಾನೆಂಬ ಅಹಂಭಾವ ಅಳಿಯಬೇಕು. ಪರಾತ್ಪರ ವಸ್ತುವೆ ತಾನೆಂದರಿಯ ಬೇಕು, ತಾನಾಗಿ ನಿಲ್ಲಬೇಕು. ಹಾಗಾದಾಗಲೇ ‘ ಸೋಹಂ’ ಭಾವ ಮೂಡುತ್ತದೆ. ಮನುಷ್ಯ, ಮನುಷ್ಯನಾಗಿ ಬಾಳುತ್ತಾನೆ.


ಕೊನೆ ಮಾತು: ಮದ್ಯ ಕುಡಿದವನು ಬಿದ್ದರೆ ಏಳಬಹುದು. ಮದ ಏರಿದವನು ಬಿದ್ದರೆ ಮೇಲೇಳಲ್ಲ - ಇತಿಹಾಸವೇ ಸಾಕ್ಷಿ. ದುಡ್ಡು, ಅಧಿಕಾರ, ವಿದ್ಯೆ, ಜಾತಿ - ಎಲ್ಲವೂ ಬಾಡಿಗೆ ಮನೆಯಿದ್ದಂತೆ. ಖಾಲಿ ಮಾಡಿ ಹೋಗಲೇಬೇಕು. ಒಯ್ಯೋದು ಬರೀ ಉತ್ತಮ ನಡತೆ ಮಾತ್ರ.

ಅದಕ್ಕೆ ಮದ ಬಿಡಿ, ಮಾನವೀಯತೆ ಉಳಿಸಿ - ಬೆಳೆಸಿ. ಅಹಂ ಬಿಡಿ, ಅರಿವು ಮೈಗೂಡಿಸಿಕೊಳ್ಳಿ.

ಇದೆ ನಿಜವಾದ ಮಾನವೀಯತೆ - ಮನುಷ್ಯತ್ವದ ಧರ್ಮ. 


@@@@@@@


- ಸಂಗಮೇಶ ಎನ್ ಜವಾದಿ 

ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

Image Description

Post a Comment

0 Comments