ಭ್ರಷ್ಟಾಚಾರ ಮತ್ತು ಭಯೋತ್ಪಾದಕತೆ ಮೆಟ್ಟಿ ನಿಂತಾಗಲೇ ದೇಶದ ನಿಜವಾದ ಅಭಿವೃದ್ಧಿ
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ
---
ಭಾರತ ದೇಶದ ಪ್ರಜೆಗಳಾದ ನಾವು ಭ್ರಷ್ಟಾಚಾರ ಮತ್ತು ಭಯೋತ್ಪಾದಕತೆ ಇವೆರಡನ್ನೂ ಸಮರ್ಥವಾಗಿ ಮೆಟ್ಟಿ ನಿಂತಾಗ ಮಾತ್ರ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತದೆ. ಯಾಕೆಂದರೆ
ಭ್ರಷ್ಟಾಚಾರ, ದೇಶದ ಒಳಗಿನ ಗೆದ್ದಲು,
ದೇಶದ ಅಭಿವೃದ್ಧಿಗೆ ಹಿಡಿದ ಮಹಾರೋಗ. ಒಂದು ರಸ್ತೆ ಕಾಮಗಾರಿಗೆ 100 ಕೋಟಿ ಬಿಡುಗಡೆಯಾದರೆ 40 ಕೋಟಿ ಮಾತ್ರ ನೆಲಕ್ಕೆ ತಲುಪುತ್ತದೆ. ಉಳಿದ 60 ಕೋಟಿ ಫೈಲ್‌ನಲ್ಲೇ ಮಾಯ. ಪರಿಣಾಮ - ಗುಂಡಿ ಬಿದ್ದ ರಸ್ತೆ, ಕುಸಿಯುವ ಸೇತುವೆ, ಸೋರುವ ಶಾಲೆ.
ಬಡವನ ಪಡಿತರ ಅಕ್ಕಿ ಕಾಳಸಂತೆಗೆ ಹೋಗುತ್ತದೆ. ರೈತನ ಸಬ್ಸಿಡಿ ದಲ್ಲಾಳಿ ಪಾಲಾಗುತ್ತದೆ. ವಿದ್ಯಾರ್ಥಿಯ ಸ್ಕಾಲರ್‌ಶಿಪ್ ಮಧ್ಯವರ್ತಿ ನುಂಗುತ್ತಾನೆ. ಇಂತಹ ವ್ಯವಸ್ಥೆಯಲ್ಲಿ ಸಾಮಾನ್ಯ ಮನುಷ್ಯನ ಕನಸು ಹೇಗೆ ನನಸಾಗುತ್ತದೆ?
ಅದಕ್ಕಾಗಿಯೇ ಬಸವಣ್ಣನವರು 900 ವರ್ಷದ ಹಿಂದೆಯೇ ಎಚ್ಚರಿಸಿದ್ದರು - "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ". ಆದರೆ ಇಂದು ಕಳ್ಳತನವೇ ಕೆಲವರಿಗೆ ಕಾಯಕವಾಗಿದೆ. ಲಂಚವಿಲ್ಲದೆ ಫೈಲ್ ಮುಂದೆ ಹೋಗಲ್ಲ, ಶಿಫಾರಸಿಲ್ಲದೆ ಕೆಲಸ ಆಗಲ್ಲ - ಈ ಸ್ಥಿತಿ ಬದಲಾದಾಗ ಮಾತ್ರ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ನಿಜವಾಗುತ್ತದೆ. ಇಲ್ಲವಾದಲ್ಲಿ ಬಹಳ ಕಷ್ಟಕರವಾಗಲಿದೆ.
ಅಂದಹಾಗೆ
ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ದೇಶದ ಪ್ರಗತಿಯನ್ನು ಕುಂಠಿತಗೊಳಿಸುವ ಎರಡು ಪ್ರಮುಖ ಪಿಡುಗುಗಳಾಗಿವೆ. ಇವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸಲು ಸಾಧ್ಯ.ಭ್ರಷ್ಟಾಚಾರದಿಂದಾಗಿ ಸಾರ್ವಜನಿಕ ಹಣವು ದುರ್ಬಳಕೆಯಾಗುತ್ತದೆ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಇದು ನಿಲ್ಲುವುದರಿಂದ ಬಡತನ ನಿರ್ಮೂಲನೆ ಮತ್ತು ಆರ್ಥಿಕ ಸಮಾನತೆ ಸಾಧ್ಯ.ಭಯೋತ್ಪಾದನೆಯು ಸಮಾಜದಲ್ಲಿ ಅಶಾಂತಿ ಮತ್ತು ಭೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಇದನ್ನು ಮೆಟ್ಟಿ ನಿಂತಾಗ ಮಾತ್ರ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಮತ್ತು ಉದ್ಯೋಗ, ಶಿಕ್ಷಣದಂತಹ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ.ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಸೌಲಭ್ಯಗಳು ನೇರವಾಗಿ ತಲುಪುತ್ತವೆ. ಈ ನಿಟ್ಟಿನಲ್ಲಿ ದೇಶದ ಜನಸಾಮಾನ್ಯರು ಜಾಗೃತ ಆಗಬೇಕಾಗಿರೋದು ಇಂದಿನ ದಿನಮಾನಗಳಲ್ಲಿ ಅಗತ್ಯತೆ ಇದೆ ಮತ್ತು ಅನಿವಾರ್ಯತೆ ಎದುರಾಗಿದೆ.
ಭಯೋತ್ಪಾದಕತೆ: ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಗುರಿಗಳನ್ನು ಸಾಧಿಸಲು ವ್ಯಕ್ತಿಗಳು ಅಥವಾ ಸಂಘಟನೆಗಳು ಸಮಾಜದಲ್ಲಿ ಹಿಂಸಾಚಾರ ಮತ್ತು ಭಯವನ್ನು ಸೃಷ್ಟಿಸುವುದನ್ನು ಭಯೋತ್ಪಾದಕತೆ (Terrorism) ಎನ್ನಲಾಗುತ್ತದೆ. ಇದು ಅಮಾಯಕರ ಜೀವಕ್ಕೆ ಹಾನಿ ಮಾಡುವ ಮತ್ತು ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಹಾಳುಮಾಡುವ ಜಾಗತಿಕ ಪಿಡುಗು.
ದೇಶದ ಹೊರಗಿನ ವೈರಿ
ಭಯೋತ್ಪಾದಕತೆ ಎಂದರೆ ದೇಶದ ಶಾಂತಿಗೆ ಬೆಂಕಿ ಇಟ್ಟ ಹಾಗೆ. ಒಂದು ಬಾಂಬ್ ಸ್ಫೋಟವಾದರೆ ನೂರು ಕುಟುಂಬಗಳು ಬೀದಿಗೆ ಬೀಳುತ್ತವೆ. ಒಬ್ಬ ಯೋಧ ಹುತಾತ್ಮನಾದರೆ ಇಡೀ ಊರು ಅನಾಥವಾಗುತ್ತದೆ.
ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವವರು, ಗಡಿಯಾಚೆಯಿಂದ ನುಸುಳಿ ಬಂದು ಮುಗ್ಧರನ್ನು ಕೊಲ್ಲುವವರು, ಯುವಕರ ಮೆದುಳು ತಿರುಗಿಸಿ ಮತಾಂಧರನ್ನಾಗಿ ಮಾಡುವವರು - ಇವರೆಲ್ಲ ದೇಶದ ಏಕತೆಗೆ ಮಾರಕ.
ಅಂತೆಯೇ"ಇವನಾರವ ಇವನಾರವ ಎನ್ನದೆ ಇವ ನಮ್ಮವ" ಎಂದ ಬಸವಣ್ಣನವರ ನಾಡಿನಲ್ಲಿ "ನೀನು ಹಿಂದೂ, ನಾನು ಮುಸ್ಲಿಂ" ಎಂದು ಬೇರ್ಪಡಿಸುವ ಭಯೋತ್ಪಾದಕರ ಕುತಂತ್ರಕ್ಕೆ ಬಲಿಯಾಗಬಾರದು. ಹಿಂದು-ಮುಸ್ಲಿಂ-ಕ್ರೈಸ್ತ-ಸಿಖ್ - ಲಿಂಗಾಯತ ಎಲ್ಲರೂ ಭಾರತ ಮಾತೆಯ ಮಕ್ಕಳು ಎಂಬುದನ್ನು ಮರೆಯಬಾರದು. ಅದಕ್ಕಾಗಿಯೇ ಜಾಗತಿಕ ಮಟ್ಟದಲ್ಲಿ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಭಯೋತ್ಪಾದನೆಯನ್ನು ವಿರೋಧಿಸಬೇಕು ಮತ್ತು ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳಬೇಕು.ಉಗ್ರರ ಹಣಕಾಸಿನ ಮೂಲಗಳನ್ನು (Terror Funding) ಪತ್ತೆ ಹಚ್ಚಿ ಕತ್ತರಿಸಬೇಕು.ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ಮಟ್ಟಹಾಕಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು.
ಭ್ರಷ್ಟಾಚಾರ ಪಿಡುಗು/ ನಿಯಂತ್ರಣ:
ಭ್ರಷ್ಟಾಚಾರ ಎಂದರೆ ಸಾರ್ವಜನಿಕ ಸ್ಥಾನದಲ್ಲಿರುವವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ನಿಯಮಬಾಹಿರವಾಗಿ ಅಥವಾ ಲಂಚದ ಮೂಲಕ ತಮಗೆ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಹಣ, ಆಸ್ತಿ ಅಥವಾ ಸೌಲಭ್ಯಗಳನ್ನು ಪಡೆಯುವುದಾಗಿದೆ. ಇದು ಆರ್ಥಿಕ ಬೆಳವಣಿಗೆಗೆ ತಡೆಗೋಡೆಯಾಗಿ, ಸಮಾಜದ ಪ್ರಗತಿಯನ್ನು ಕುಂಠಿತಗೊಳಿಸುವ ಒಂದು ಗಂಭೀರ ಅಪರಾಧವಾಗಿದೆ.ಕೆಲಸ ಮಾಡಿಕೊಡಲು ಅಧಿಕಾರಿಗಳು ಅಕ್ರಮವಾಗಿ ಹಣ ಅಥವಾ ಉಡುಗೊರೆಗಳನ್ನು ಬೇಡುವುದು.ತಮ್ಮ ಹುದ್ದೆಯ ಪ್ರಭಾವ ಬಳಸಿ ಸ್ವಂತ ಲಾಭ ಮಾಡಿಕೊಳ್ಳುವುದು ಅಥವಾ ಸಂಬಂಧಿಕರಿಗೆ ಮಣೆ ಹಾಕುವುದು.ಅರ್ಹತೆಗೆ ಬದಲಾಗಿ ಪರಿಚಿತರಿಗೆ ಅಥವಾ ಸ್ವಂತ ಜನರಿಗೆ ಅನುಕೂಲ ಮಾಡಿಕೊಡುವುದು.
ಸರ್ಕಾರಿ ಯೋಜನೆಗಳು ಅಥವಾ ನಿಧಿಯನ್ನು ದುರುಪಯೋಗಪಡಿಸಿಕೊಳ್ಳುವುದು ಇದು ಭ್ರಷ್ಟಾಚಾರದ ಪಿಡುಗಾಗಿದೆ. ಪರಿಣಾಮ ದೇಶದ ಸಂಪತ್ತು ಕೆಲವೇ ಕೆಲವು ಭ್ರಷ್ಟರ ಕೈಯಲ್ಲಿ ಶೇಖರಣೆಯಾಗುತ್ತದೆ.ಜನಸಾಮಾನ್ಯರಿಗೆ ಸಿಗಬೇಕಾದ ಮೂಲಭೂತ ಸೌಲಭ್ಯಗಳು ಸಿಗದೆ ಬದುಕು ದುರ್ಬರವಾಗುತ್ತದೆ.ಅರ್ಹರಿಗೆ ಸಿಗಬೇಕಾದ ಉದ್ಯೋಗ, ನ್ಯಾಯ ಮತ್ತು ಸವಲತ್ತುಗಳು ತಪ್ಪಿಹೋಗುತ್ತವೆ.
ಇತ್ತೀಚಿನ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಲಂಚಾವತಾರ ಮಿತಿಮೀರಿದ್ದು, ರಾಜ್ಯವು ಅತ್ಯಂತ ಭ್ರಷ್ಟ ರಾಜ್ಯಗಳ ಪಟ್ಟಿಯಲ್ಲಿ ೫ನೇ ಸ್ಥಾನದಲ್ಲಿದೆ ಎಂಬ ಮಾಹಿತಿ. ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕಲು ಲೋಕಾಯುಕ್ತ ಸಂಸ್ಥೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ದೂರುಗಳ ವಿಚಾರಣೆ ಮತ್ತು ದಾಳಿಗಳನ್ನು ಮುಂದುವರಿಸಿದೆ. ಈ ನಿಟ್ಟಿನಲ್ಲಿ
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ನ ಅಡಿಯಲ್ಲಿ ಭ್ರಷ್ಟರಿಗೆ ಕಠಿಣ ಶಿಕ್ಷೆಯ ಅವಕಾಶವಿದೆ.ಯಾವುದೇ ಸರ್ಕಾರಿ ನೌಕರರು ಲಂಚಕ್ಕೆ ಬೇಡಿಕೆ ಇಟ್ಟರೆ, ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ ಅಥವಾ ಲೋಕಾಯುಕ್ತಕ್ಕೆ ದೂರು ನೀಡಬಹುದು.ಡಿಜಿಟಲೀಕರಣ ಮತ್ತು ಆನ್‌ಲೈನ್ ಮೂಲಕ ಸರ್ಕಾರಿ ಸೇವೆಗಳನ್ನು ಒದಗಿಸುವುದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಹಕಾರಿಯಾಗಿದೆ. ಈ ಬಗ್ಗೆ ಜನರು ಹೆಚ್ಚು ಜಾಗೃತರಾಗಿರಬೇಕು.
ಎರಡೂ ಒಂದೇ ನಾಣ್ಯದ ಎರಡು ಮುಖ :
ಭ್ರಷ್ಟಾಚಾರ ಒಳಗಿನ ಶತ್ರು, ಭಯೋತ್ಪಾದಕತೆ ಹೊರಗಿನ ಶತ್ರು. ಆದರೆ ಎರಡಕ್ಕೂ ಸಾಮಾನ್ಯ ಜನರೇ ಬಲಿ.
ಭ್ರಷ್ಟ ನಾಯಕ ದೇಶವನ್ನು ಮಾರಿದರೆ, ಭಯೋತ್ಪಾದಕ ದೇಶವನ್ನು ಸುಡುತ್ತಾನೆ. ಒಬ್ಬ ಜನರ ತೆರಿಗೆ ಹಣ ಲೂಟಿ ಮಾಡಿದರೆ, ಇನ್ನೊಬ್ಬ ಜನರ ಪ್ರಾಣವನ್ನೇ ಲೂಟಿ ಮಾಡುತ್ತಾನೆ. ಇಬ್ಬರೂ ದೇಶದ್ರೋಹಿಗಳೇ.
ಇದಕ್ಕೆ ಪರಿಹಾರ ಏನು? ಪ್ರಜೆಗಳ ಜಾಗೃತಿಯೇ ಮದ್ದು ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಮೊದಲನೇಯದಾಗಿ
ಲಂಚ ಕೊಡುವುದೂ ಇಲ್ಲ, ತೆಗೆದುಕೊಳ್ಳುವುದೂ ಇಲ್ಲ ಎಂಬ ಪ್ರತಿಜ್ಞೆ ಸರ್ವರೂ ಮಾಡಬೇಕು. RTI ಬಳಸಿ, ಪ್ರಶ್ನೆ ಕೇಳಿ, ದೂರು ನೀಡಬೇಕು.ಯಾರೇ ಭ್ರಷ್ಟಾಚಾರ ಮಾಡಲಿ ಅವರ ಮೇಲೆ ಸೂಕ್ತವಾದಂತ ಕಾನೂನು ಕ್ರಮ ತೆಗೆದುಕೊಳ್ಳುವ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು.
"ನನ್ನ ಒಂದು ಮತ ಮಾರಾಟಕ್ಕಿಲ್ಲ" ಎಂದು ನೇರವಾಗಿ ಹೇಳಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ಬೆಂಬಲಿಸಿ, ಭ್ರಷ್ಟರನ್ನು ಬಹಿಷ್ಕರಿಸಬೇಕು. ಅಂದಾಗಲೇ ಮಾತ್ರ ತಕ್ಕಮಟ್ಟಿಗೆಯಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.
ಭಯೋತ್ಪಾದಕತೆಗೆ ಧರ್ಮ-ಜಾತಿ ಹೆಸರಿನಲ್ಲಿ ದ್ವೇಷ ಹರಡುವವರನ್ನು ದೂರವಿಡಬೇಕು. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಖಂಡಿತವಾಗಿಯೂ ಹರಡಬಾರದು. ಒಂದು ವೇಳೆ ಸುಳ್ಳು ಸುದ್ದಿಗಳನ್ನು ಹರಡಿದರೆ ಅಥವಾ ಫಾರ್ವರ್ಡ್ ಮಾಡಿದರೆ, ಅಂಥವರಿಗೆ ಶಿಕ್ಷೆ ಆಗಬೇಕು.
ಅನುಮಾನಾಸ್ಪದ ವ್ಯಕ್ತಿ-ವಸ್ತು ಕಂಡರೆ ಪೊಲೀಸರಿಗೆ ತಿಳಿಸಬೇಕು."ನನ್ನ ದೇಶ ಮೊದಲು, ನಂತರ ಧರ್ಮ" ಎಂಬ ಭಾವನೆ ಸರ್ವರೂ ಬೆಳೆಸಿಕೊಳ್ಳಬೇಕು. ಮತ್ತು ಈ ನಿಟ್ಟಿನಲ್ಲಿ ಸರ್ವರಲ್ಲಿಯೂ ಭಾವನೆ ಮೂಡಿದಾಗ ಮಾತ್ರ ಭಯೋತ್ಪಾದಕತೆಯನ್ನು ಈ ದೇಶದಿಂದ ಬೇರು ಸಮೇತ ಕಿತ್ತುಹಾಕಲು ಸಾಧ್ಯ.
ಯುವಕರೇ, ಎಚ್ಚರ!
ಭ್ರಷ್ಟಾಚಾರಕ್ಕೆ ಬಲಿಯಾಗುವುದು ನಿಮ್ಮ ಭವಿಷ್ಯ. ಭಯೋತ್ಪಾದಕತೆಗೆ ಬಲಿಯಾಗುವುದು ನಿಮ್ಮ ಬದುಕು.
ಸರ್ಕಾರಿ ನೌಕರಿಗೆ 20 ಲಕ್ಷ ಲಂಚ ಕೊಟ್ಟರೆ, ನಾಳೆ ನೀವು ಲಂಚ ತೆಗೆದುಕೊಳ್ಳಬೇಕಾಗುತ್ತದೆ. ದ್ವೇಷದ ಭಾಷಣ ಕೇಳಿ ದಾರಿ ತಪ್ಪಿದರೆ, ನಾಳೆ ಜೈಲೋ-ಗೋರಿಯೋ ಗತಿ.
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳಿದಂತೆ - "ಕನಸು ಕಾಣಿ, ಕನಸು ನನಸು ಮಾಡಿ". ಆದರೆ ಭ್ರಷ್ಟಾಚಾರ ಮತ್ತು ಭಯೋತ್ಪಾದಕತೆ ಇರುವ ದೇಶದಲ್ಲಿ ಕನಸುಗಳು ಕೊಲೆಯಾಗುತ್ತವೆ. ಇದರ ಬಗ್ಗೆ ಹೆಚ್ಚಾಗಿ ಯುವಕರು ಹಾದಿ ತಪ್ಪುವ ಕೆಲಸ ಖಂಡಿತವಾಗಿಯೂ ಮಾಡಬಾರದು. ದೇಶ ಮತ್ತು ನಾಡಿನ ಬಗ್ಗೆ ಅಭಿಮಾನ ಹೊಂದಿರಬೇಕು. ಜೊತೆಗೆ ಭಯೋತ್ಪಾದನೆಯನ್ನು ಕಿತ್ತು ಹಾಕಲು ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕು. ಅದೇ ರೀತಿಯಲ್ಲಿ ಭ್ರಷ್ಟಾಚಾರವನ್ನು ತೊಡೆದು ಹಾಕಲು ಜಾಗೃತಿ ಅಭಿಯಾನಗಳು ನಿರಂತರವಾಗಿ ಸಮಾಜದಲ್ಲಿ ಮಾಡಬೇಕು.
ಕೊನೆಯ ಮಾತು: ನಾವೇ ಬದಲಾವಣೆ ಮಾಡಬೇಕು.
ಸರ್ಕಾರ ಬದಲಾಗಬಹುದು, ಕಾನೂನು ಬದಲಾಗಬಹುದು. ಆದರೆ ಪ್ರಜೆಗಳ ಮನಸ್ಥಿತಿ ಬದಲಾಗದಿದ್ದರೆ ದೇಶ ಬದಲಾಗಲ್ಲ.
ನೀನು ಲಂಚ ಕೊಡುವುದನ್ನು ನಿಲ್ಲಿಸಿದ ದಿನ ಭ್ರಷ್ಟಾಚಾರ ಸಾಯುತ್ತದೆ. ನೀನು ದ್ವೇಷ ಬಿತ್ತುವುದನ್ನು ನಿಲ್ಲಿಸಿದ ದಿನ ಭಯೋತ್ಪಾದಕತೆ ಸಾಯುತ್ತದೆ.
ಭಾರತ ವಿಶ್ವಗುರುವಾಗಬೇಕಾದರೆ ಮೊದಲು ಭ್ರಷ್ಟಾಚಾರ-ಭಯೋತ್ಪಾದಕತೆ ಮುಕ್ತವಾಗಬೇಕು. ಅದಕ್ಕೆ 140 ಕೋಟಿ ಭಾರತೀಯರ ಪ್ರಾಮಾಣಿಕತೆ, ಏಕತೆ, ಜಾಗೃತಿ ವಹಿಸಬೇಕು.
ಬನ್ನಿ, ಪ್ರತಿಜ್ಞೆ ಮಾಡೋಣ:
"ನಾನು ಲಂಚ ಕೊಡಲ್ಲ, ದ್ವೇಷ ಹರಡಲ್ಲ. ನನ್ನ ಭಾರತವನ್ನು ಭ್ರಷ್ಟಾಚಾರ-ಭಯೋತ್ಪಾದಕತೆ ಮುಕ್ತ ಮಾಡುತ್ತೇನೆ."ಆಗಲೇ ನಿಜವಾದ ಸ್ವಾತಂತ್ರ್ಯ. ಆಗಲೇ ನಿಜವಾದ ಅಭಿವೃದ್ಧಿ. ಆಗಲೇ ವಿಶ್ವಗುರು ಭಾರತ.
@@@@@@
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ ಜಿಲ್ಲೆ

.gif)

.gif)


0 Comments