*ವಿಕಸಿತ ಭಾರತ ಎಂದರೆ*..…?
ಅಕ್ಕಿಯ ಬೆಲೆ ಗಗನಕ್ಕೆ ಹಾರಿ, ಬಾಣಲೆಯು ಬಿಸಿಯಲಿ ಖಾಲಿ,
ಬಡವನ ಬೆವರ ಬೆಲೆ ಮಾತ್ರ, ಬೀದಿಯ ಧೂಳಿಗೆ ತಳ್ಳಿ,
ಹೊಟ್ಟೆಯ ಹಸಿವಿಗೆ ಮಾತಿನ ಮದ್ದು, ಭರವಸೆಯ ಹೊದಿಕೆ ಹಚ್ಚಿ,
ಇದೇನಾ ವಿಕಸಿತ ಭಾರತ — ಹಸಿವಿನ ಕಣ್ಣೀರಿಗೆ ಬೆಳ್ಳಿ? #1#
ತರಕಾರಿಯ ಬೆಲೆ ತಾರೆಯಂತೆ, ತಲುಪದ ಎತ್ತರ ಸೇರಿ,
ಸಂತೆ ದಾರಿಯಲಿ ತಾಯಿಯ ಕೈ, ಚೀಲವಿಲ್ಲದೆ ಮನೆ ಸೇರಿ,
ಮಕ್ಕಳ ಕನಸು ಪುಸ್ತಕದಲ್ಲೇ, ಬದುಕು ಸಾಲದಲಿ ತೇಲಿ,
ಇದೇನಾ ವಿಕಸಿತ ಭಾರತ — ಖಾಲಿ ತಟ್ಟೆಯ ಹಾಡು ಕೇಳಿ?
#2#
ಪೆಟ್ರೋಲ್ ಹನಿ ಚಿನ್ನದ ಬೆಲೆ, ಚಕ್ರದ ಓಟವೂ ನಿಧಾನ,
ಉದ್ಯೋಗದ ಬಾಗಿಲು ಮುಚ್ಚಿ, ಯುವಜನ ಮನದಲಿ ಶೋಕಗಾನ,
ಭಾಷಣಗಳಲಿ ಬೆಳಕಿನ ಹಬ್ಬ, ಬದುಕಿನ ದಾರಿಯಲಿ ಮಂಜುಮೇಘ,
ಇದೇನಾ ವಿಕಸಿತ ಭಾರತ — ಜನತೆಯ ನೋವಿಗೆ ಯಾರು ಸಾಕ್ಷಿ?
#3#
ಗ್ಯಾಸ್ ಬೆಲೆ ಬೆಂಕಿಯಂತೆ, ಅಡುಗೆ ಮನೆಯಲಿ ಮೌನ,
ಔಷಧಿಯ ದರ ಏರಿದಂತೆ, ರೋಗಿಯ ಉಸಿರಿಗೂ ಸಾಲದ ಋಣ,
ಸೌಲಭ್ಯಗಳ ಕನಸು ಬಣ್ಣದಲಿ, ಬದುಕು ಬತ್ತಿದ ಹೊಲದ ರೂಪ,
ಇದೇನಾ ವಿಕಸಿತ ಭಾರತ — ಜನರ ಬದುಕೇ ಪ್ರಶ್ನಾರೂಪ? # 4#
ಮಹಲಿನೊಳಗೊಂದು ಸಂಭ್ರಮ ಜ್ಯೋತಿ, ಗುಡಿಸಲೊಳಗೊಂದು ಕತ್ತಲು,
ಘೋಷಣೆಗಳ ಗಾಳಿ ದೊಡ್ಡದು, ಹೊಟ್ಟೆ ಮಾತಿಗೆ ಯಾರು ಬೆಂಬಲ?
ಅಭಿವೃದ್ಧಿಯ ಹೆಸರಲಿ ಜನ, ಅಶ್ರುವಿನ ಹಾದಿಯಲಿ ನಿಂತಾಗ,
“ವಿಕಸಿತ ಭಾರತ” ಎಂದರೆ — ಜನ ನಗುವ ದೇಶವಲ್ಲವೇ ಆಗ? #5#
ಕವಿ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments