*ತಮಿಳುನಾಡಿನ ಮಾದರಿ ಕರ್ನಾಟಕಕ್ಕೂ ಬೇಕು; ಮದ್ಯದಂಗಡಿ ನಿಷೇಧಕ್ಕೆ ಪ್ರೊ. ಶ್ರೀಕಾಂತಗೌಡ ಪಾಟೀಲ ಆಗ್ರಹ”

 “ತಮಿಳುನಾಡಿನ ಮಾದರಿ ಕರ್ನಾಟಕಕ್ಕೂ ಬೇಕು; ಮದ್ಯದಂಗಡಿ ನಿಷೇಧಕ್ಕೆ ಪ್ರೊ. ಶ್ರೀಕಾಂತಗೌಡ ಪಾಟೀಲ ಆಗ್ರಹ”




   ರಾಯಬಾಗ: ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿ ಜನಪರ ಕಾಳಜಿಯ   ಜೋಸೆಫ್ ವಿಜಯ್ ಅವರು ಅಧಿಕಾರ ಸ್ವೀಕಾರದ ಬಳಿಕ ಶಾಲೆ, ಕಾಲೇಜು ಹಾಗೂ ದೇವಸ್ಥಾನಗಳ ಸುತ್ತಮುತ್ತ ಮದ್ಯದಂಗಡಿಗಳಿಗೆ ನಿರ್ಬಂಧ ಹೇರಿದ ಕ್ರಮ  ಕರ್ನಾಟಕಕ್ಕೂ ಬೇಕು. ಮಧ್ಯದ ಅಂಗಡಿ ನಿಷೇಧಕ್ಕೆ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜಮುಖಿ ಚಿಂತಕರಾದ ಪ್ರೊ. ಶ್ರೀಕಾಂತಗೌಡ ಪಾಟೀಲ ಆಗ್ರಹಿಸಿದರು.


 ಮಾಧ್ಯಮದವರೊಂದಿಗೆ ಇಂದು ತಮ್ಮ ಅಭಿಮತವನ್ನು ಹಂಚಿಕೊಂಡ ಅವರು “ಜನಹಿತ ಮತ್ತು ಯುವಜನರ ಭವಿಷ್ಯದ ದೃಷ್ಟಿಯಿಂದ ಕರ್ನಾಟಕದಲ್ಲಿಯೂ ಇಂತಹ ಕ್ರಮಕ್ಕೆ ಮೊದಲ ಆದ್ಯತೆ ನೀಡಬೇಕು” ಎಂದರು. 



ಇಂದಿನ ಸಮಾಜದಲ್ಲಿ ಮದ್ಯಪಾನವು ಕೇವಲ ವೈಯಕ್ತಿಕ ಅಭ್ಯಾಸದ ಮಿತಿಯನ್ನು ಮೀರಿ, ಕುಟುಂಬಗಳ ನೆಮ್ಮದಿ, ಮಹಿಳಾ ಸುರಕ್ಷತೆ, ಯುವಜನರ ಭವಿಷ್ಯ ಹಾಗೂ ಸಾಮಾಜಿಕ ಶಾಂತಿಯ ಮೇಲೆಯೂ ಪರಿಣಾಮ ಬೀರುತ್ತಿರುವುದು ನಿರ್ವಿವಾದ ಸತ್ಯ. ವಿಶೇಷವಾಗಿ ಶಿಕ್ಷಣ ಸಂಸ್ಥೆಗಳ ಸಮೀಪ ಮದ್ಯದಂಗಡಿಗಳ ಅಸ್ತಿತ್ವ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪ್ರಭಾವ ಬೀರುವ ಅಪಾಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ದೇವಸ್ಥಾನಗಳಂತಹ ಆಧ್ಯಾತ್ಮಿಕ ಕೇಂದ್ರಗಳ ಸುತ್ತ ಮದ್ಯ ಮಾರಾಟ ನಡೆಯುವುದು ಸಮಾಜದ ನೈತಿಕ ಮೌಲ್ಯಗಳಿಗೂ ಪ್ರಶ್ನಾರ್ಥಕವಾಗಿದೆ.

ಆದರೆ, ಮದ್ಯದಂಗಡಿ ನಿಷೇಧ ಎನ್ನುವುದು ಕೇವಲ ಭಾವನಾತ್ಮಕ ನಿರ್ಧಾರವಾಗಬಾರದು; ಅದು ದೂರದೃಷ್ಟಿಯ ನೀತಿಯಾಗಬೇಕು ಎಂದು  ವಿಶ್ಲೇಷಿಸಿದರು.


ಕರ್ನಾಟಕ ಸರ್ಕಾರದ ಆದಾಯದಲ್ಲಿ ಅಬಕಾರಿ ಇಲಾಖೆಯ ಪಾತ್ರ ಮಹತ್ವದ್ದಾಗಿರುವುದರಿಂದ, ಸಂಪೂರ್ಣ ನಿಷೇಧಕ್ಕಿಂತ ಮೊದಲ ಹಂತದಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಧಾರ್ಮಿಕ ಕೇಂದ್ರಗಳ ಸಮೀಪ ಮದ್ಯ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ಹೇರುವುದು ಹೆಚ್ಚು ವ್ಯವಹಾರಿಕ ಹೆಜ್ಜೆಯಾಗಬಹುದು.ಜನಪರ ಆಡಳಿತವೆಂದರೆ ಕೇವಲ ಆದಾಯ ಗಳಿಕೆಗೆ ಸೀಮಿತವಾಗದೆ, ಜನರ ಬದುಕಿನ ಗುಣಮಟ್ಟವನ್ನು ಸುಧಾರಿಸುವ ಧೈರ್ಯಶಾಲಿ ನಿರ್ಧಾರಗಳತ್ತ ಸಾಗಬೇಕೆಂದು ಸೂಚ್ಯವಾಗಿ ನುಡಿದರು. 

ಮುಂಬರುವ 2028 ರ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದೆಂದು ಪ್ರೊ ಶ್ರೀಕಾಂತಗೌಡ ಪಾಟೀಲ ಅವರು ಸ್ಪಷ್ಟಪಡಿಸಿದರು. ಜನ ಹಿತಕ್ಕಾಗಿ ಮದ್ಯ ನಿಷೇಧ  ಈ ಕಾಲ ಘಟ್ಟದಲ್ಲಿ ಅನಿವಾರ್ಯ ಎಂದು ಹೇಳಿದರು.


ವರದಿ :ಡಾ.ಜಯವೀರ ಎ. ಕೆ.

         ಖೇಮಲಾಪುರ

Image Description

Post a Comment

0 Comments