*ಹೆಸರಿನ ರಾಜಕೀಯವೇ? ಜನಪರ ಯೋಜನೆಗಳ ಸಾರ್ಥಕತೆಯೇ?*
ರಾಯಬಾಗ: ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಬರುವ ಜೂನ್ ತಿಂಗಳಿನಿಂದ ಅನ್ನ ಭಾಗ್ಯದ ಜೊತೆಗೆ ಸಕ್ಕರೆ ಬೇಳೆ ಎಣ್ಣೆ ಉಪ್ಪು ಇರುವ ಇಂದಿರಾ ಕಿಟ್ ನೀಡಲಿದೆ ಎಂಬುದು ಒಳ್ಳೆಯ ಬೆಳವಣಿಗೆ.
ಆದರೆ ಘೋಷಿಸಿರುವ ಈ “ಇಂದಿರಾ ಕಿಟ್” ಯೋಜನೆ ಮೊದಲ ನೋಟಕ್ಕೆ ಬಡಜನರ ಬದುಕಿಗೆ ನೆಮ್ಮದಿ ತರುವ ಆಶಾದಾಯಕ ಹೆಜ್ಜೆಯಂತೆ ಕಾಣುತ್ತದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಜೀವನೋಪಾಯದ ಸಂಕಷ್ಟ ಮತ್ತು ಆರ್ಥಿಕ ಒತ್ತಡದ ನಡುವೆ ಇಂತಹ ಯೋಜನೆಗಳು ದುರ್ಬಲ ವರ್ಗಕ್ಕೆ ಭರವಸೆಯ ನೆರಳಾಗುವುದರಲ್ಲಿ ಸಂದೇಹವಿಲ್ಲ. ಆದರೆ, ಯೋಜನೆಯ ಉದ್ದೇಶದಷ್ಟೇ ಅದರ ಹೆಸರಿನ ಔಚಿತ್ಯವೂ ಸಾರ್ವಜನಿಕ ಚರ್ಚೆಗೆ ಒಳಪಡುವುದು ಸಹಜ.
ಇಲ್ಲಿ ಉದ್ಭವಿಸುವ ಪ್ರಶ್ನೆ ಒಂದೇ—ಬಡತನ, ಹಸಿವು ಮತ್ತು ಸಾಮಾಜಿಕ ತಿರಸ್ಕಾರವನ್ನು ಸ್ವತಃ ಅನುಭವಿಸಿ, ಹಿಂದುಳಿದ ಶೋಷಿತ ಸಮುದಾಯಗಳ ಧ್ವನಿಯಾಗಿ ಬದುಕಿದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರನ್ನು ಇಂತಹ ಜನಪರ ಯೋಜನೆಗೆ ಇಟ್ಟಿದ್ದರೆ ಅದು ಹೆಚ್ಚು ಸಾಂದರ್ಭಿಕ ಹಾಗೂ ಸಾರ್ಥಕವಾಗಿರಲಿಲ್ಲವೇ? ಹಸಿವು ಮತ್ತು ಅಭಾವದ ನೋವನ್ನು ಅತ್ಯಂತ ವ್ಯಾಪಕ ಅರಿತ ವ್ಯಕ್ತಿತ್ವದ ಹೆಸರು, ಅನ್ನಭದ್ರತೆಯ ಯೋಜನೆಗೆ ಒಂದು ಸಾಮಾಜಿಕ ಸಂದೇಶವಾಗಬಹುದಿತ್ತು ಎಂಬ ವಾದವೂ ಅಸಂಗತವಲ್ಲ.
ಇನ್ನೊಂದೆಡೆ, ದೇಶದ ರಾಜಕೀಯದಲ್ಲಿ ಮಹತ್ವದ ನಾಯಕರ ಹೆಸರಿನಲ್ಲಿ ಯೋಜನೆಗಳನ್ನು ಘೋಷಿಸುವ ಪರಂಪರೆ ಹೊಸದೇನಲ್ಲ. ಆದರೆ ಜನಪರ ಯೋಜನೆಗಳು ರಾಜಕೀಯ ಸಂಕೇತಗಳಾಗಿ ಬದಲಾಗುವಾಗ, ಅವುಗಳ ಮೂಲ ಉದ್ದೇಶ ಕೆಲವೊಮ್ಮೆ ಮಸುಕಾಗುವ ಅಪಾಯವೂ ಇರುತ್ತದೆ. ಸರ್ಕಾರ ಬದಲಾಗುತ್ತಿದ್ದಂತೆ ಹೆಸರು ಬದಲಾಗುವುದು, ಮತ್ತೆ ಹೊಸ ಬ್ರ್ಯಾಂಡಿಂಗ್ ನಡೆಯುವುದು—ಇದು ಸಾರ್ವಜನಿಕ ಸಂಪನ್ಮೂಲಗಳ ಬಗ್ಗೆ ರಾಜಕೀಯ ಪ್ರಭಾವದ ಛಾಪು ಮೂಡಿಸುವ ಪ್ರಯತ್ನವೆಂಬ ಟೀಕೆಗೆ ಕಾರಣವಾಗುತ್ತದೆ.
ಯೋಜನೆಯ ಯಶಸ್ಸು ಅದರ ಹೆಸರಿನಲ್ಲಿ ಅಲ್ಲ, ಜನರಿಗೆ ತಲುಪುವ ಪರಿಣಾಮಕಾರಿತ್ವದಲ್ಲಿ ಇದೆ ಎಂಬುದು ಸತ್ಯ. ಆದರೆ, ಹೆಸರೇ ಸಮಾಜಕ್ಕೆ ಸಂದೇಶವಾಗುವ ಸಂದರ್ಭದಲ್ಲಿ ಅದು ಪಕ್ಷಾತೀತ, ಜಾತ್ಯತೀತ ಮತ್ತು ಸಮಗ್ರ ಮೌಲ್ಯವನ್ನು ಪ್ರತಿಬಿಂಬಿಸಬೇಕಾದ ಅಗತ್ಯವೂ ಇದೆ. “ಇಂದಿರಾ”, “ಅಂಬೇಡ್ಕರ್” ಅಥವಾ ಇನ್ನಾವ ಹೆಸರಾದರೂ ಅದು ವಿಭಜನೆಯ ಸಂಕೇತವಾಗದೆ, ಸಮಾನತೆ ಮತ್ತು ಮಾನವೀಯತೆಯ ಸಂಕೇತವಾಗಬೇಕು.
ಅಂತಿಮವಾಗಿ, ಜನರಿಗೆ ಬೇಕಾಗಿರುವುದು ಹೆಸರುಗಳ ಪೈಪೋಟಿಯಲ್ಲ; ಹೊಟ್ಟೆ ತುಂಬುವ ನಿಷ್ಠಾವಂತ ಯೋಜನೆ. ಆದರೂ, ಜನಪರ ಯೋಜನೆಗಳು ರಾಜಕೀಯ ಗಿಮಿಕ್‌ಗಿಂತ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿನಿಧಿಸಿದಾಗ ಮಾತ್ರ ಅವುಗಳ ಸಾರ್ಥಕತೆ ಹೆಚ್ಚುತ್ತದೆ. ಜನಸಾಮಾನ್ಯರ ಬದುಕು ಸುಧಾರಿಸುವ ಯೋಜನೆಗಳು ಪಕ್ಷದ ಪ್ರಚಾರದ ಸಾಧನವಾಗದೆ, ಸಮಾಜದ ಸಮಗ್ರ ಹಿತದ ದಾರಿದೀಪಗಳಾದರೆ ಮಾತ್ರ ಅವು ನಿಜ ಅರ್ಥದಲ್ಲಿ ಅರ್ಥಪೂರ್ಣ ಅನುಷ್ಠಾನವೆನಿಸಬಹುದು.
ಅಭಿಮತ:ಡಾ. ಜಯವೀರ ಎ. ಕೆ.
ಖೇಮಲಾಪುರ

.gif)

.gif)


0 Comments