*ಮನೆ ಮನೆಗೆ, ಮನ ಮನಕ್ಕೆ ಬಾಬಾಸಾಹೇಬರು” : ಕೇವಲ ಕೈಪಿಡಿಯಲ್ಲ, ಚಿಂತನೆಯ ದೀಪವಾಗಲಿ*

 *ಮನೆ ಮನೆಗೆ, ಮನ ಮನಕ್ಕೆ ಬಾಬಾಸಾಹೇಬರು” : ಕೇವಲ ಕೈಪಿಡಿಯಲ್ಲ, ಚಿಂತನೆಯ ದೀಪವಾಗಲಿ*



  ಕಳೆದ ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜಯಂತಿಯ ಅಂಗವಾಗಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ಡಾ. ಬಿ ಆರ್ ಅಂಬೇಡ್ಕರ್ ಅಧ್ಯಯನ ಪೀಠದ ವತಿಯಿಂದ  1 ಲಕ್ಷ  50 ಸಾವಿರ ಪ್ರತಿಗಳನ್ನು ಮುದ್ರಣಮಾಡಿ  ಪದವಿ ಕಾಲೇಜು ವಿದ್ಯಾರ್ಥಿಗಳಿಗೆ “ಮನೆ ಮನೆಗೆ, ಮನ ಮನಕ್ಕೆ ಬಾಬಾಸಾಹೇಬರು” ಎಂಬ ಕಿರು ಹೊತ್ತಿಗೆಯನ್ನು ಹಂಚಿರುವುದು ಗಮನಾರ್ಹ ಮತ್ತು ಕಾಲೋಚಿತ ಪ್ರಯತ್ನವಾಗಿದೆ.


 ಕೇವಲ ಆಚರಣಾತ್ಮಕ ಕಾರ್ಯಕ್ರಮಗಳ ಗಡಿಯನ್ನು ಮೀರಿ, ಚಿಂತನೆಯ ಮೂಲಕ ಅಂಬೇಡ್ಕರ್ ಅವರನ್ನು ವಿದ್ಯಾರ್ಥಿಗಳ ಮನಸ್ಸಿಗೆ ತಲುಪಿಸುವ ಉದ್ದೇಶ ಈ ಕೈಪಿಡಿಯ ಹಿಂದಿರುವುದು ವಿಶೇಷ.

ಈ ಹೊತ್ತಿಗೆಯ ಪ್ರಮುಖ ಆಕರ್ಷಣೆಯೆಂದರೆ, ಬಾಬಾಸಾಹೇಬರು ತಮ್ಮ ಬರಹ ಹಾಗೂ ಭಾಷಣಗಳಲ್ಲಿ ಪ್ರತಿಪಾದಿಸಿದ ಸಮಾನತೆ, ಶಿಕ್ಷಣ, ಸ್ವಾಭಿಮಾನ, ಸಂವಿಧಾನಿಕ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಸಂದೇಶಗಳು. “ಶಿಕ್ಷಣವೇ ಮುಕ್ತಿಯ ಶಕ್ತಿ”, “ಸಂಘಟಿತರಾಗಿ, ಶಿಕ್ಷಣ ಪಡೆಯಿರಿ, ಹೋರಾಟ ಮಾಡಿ” ಎಂಬಂತಹ ಚಿಂತನೆಗಳು ಇಂದಿನ ತಲೆಮಾರಿಗೆ ಕೇವಲ ಘೋಷಣೆಯಲ್ಲ; ಬದುಕಿನ ದಿಕ್ಕು ತೋರಿಸುವ ಮೌಲ್ಯಗಳಾಗಿವೆ. ಸಮಾಜದಲ್ಲಿ ಅಸಮಾನತೆ, ದ್ವೇಷ, ಅಸಹಿಷ್ಣುತೆ ಮತ್ತು ಮಾಹಿತಿಯ ಗೊಂದಲ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂತಹ ಚಿಂತನ ಸಂದೇಶಗಳು ಮತ್ತಷ್ಟು ಪ್ರಸ್ತುತವಾಗುತ್ತವೆ.



ಅದೇ ರೀತಿ, 1891ರಿಂದ 1956 ರವರೆಗೆ ಡಾ.ಬಾಬಾಸಾಹೇಬರ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರಗಳ ಮೂಲಕ ಪರಿಚಯಿಸಿರುವ ವಿನ್ಯಾಸ ಕೈಪಿಡಿಗೆ ಜೀವಂತಿಕೆ ನೀಡುತ್ತದೆ. ಬಾಲ್ಯದ ಸಂಕಷ್ಟಗಳಿಂದ ಹಿಡಿದು ಉನ್ನತ ಶಿಕ್ಷಣ, ಸಂವಿಧಾನ ರಚನೆ, ಸಾಮಾಜಿಕ ಹೋರಾಟ ಮತ್ತು ಬೌದ್ಧ ಧರ್ಮ ಸ್ವೀಕಾರದವರೆಗೆ ಅವರ ಪಯಣ ವಿದ್ಯಾರ್ಥಿಗಳಲ್ಲಿ ಪ್ರೇರಣೆಯ ಭಾವ ಮೂಡಿಸುತ್ತದೆ. ಹೋರಾಟದ ಬದುಕು ಹೇಗೆ ಇತಿಹಾಸ ರೂಪಿಸುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷ್ಯವಾಗಿದೆ. ಹೀಗಾಗಿ ಈ ಹೊತ್ತಿಗೆ ಕೇವಲ ಓದು ಸಾಮಗ್ರಿಯಲ್ಲ; ಸಂಗ್ರಹ ಯೋಗ್ಯವಾದ ಚಿಂತನಾ ದಾಖಲೆ ಎಂಬ ಭಾವ ಮೂಡಿಸುತ್ತದೆ.

ಆದರೆ, ಸಮಕಾಲೀನ ನೆಲೆಯಲ್ಲಿ ಈ ಕೈಪಿಡಿಯ ಔಚಿತ್ಯವನ್ನು ಕೇವಲ ಪ್ರಶಂಸೆಯ ಕಣ್ಣಿನಿಂದ ನೋಡುವುದಷ್ಟೇ ಸಾಲದು; ವಿಮರ್ಶಾತ್ಮಕ ದೃಷ್ಟಿಯೂ ಅಗತ್ಯ. ಪ್ರಶ್ನೆ ಏನೆಂದರೆ — ಕೈಪಿಡಿ ಹಂಚುವುದು ಮಾತ್ರ ಸಾಕೇ? ಅಥವಾ ಅದರ ಆಶಯ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರತಿಫಲಿಸಬೇಕೇ? ಇಂದು ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹನೀಯರ ಜಯಂತಿಗಳು ಆಚರಣೆಗೆ ಸೀಮಿತವಾಗುತ್ತಿರುವ ಈ ಸಂದರ್ಭದಲ್ಲಿ, ಇಂತಹ ಕೈಪಿಡಿಗಳು ಚಿಂತನೆಗೆ ನಾಂದಿ ಹಾಡಬೇಕಾದರೆ ಅದರ ಸುತ್ತ ಸಂವಾದ, ಚರ್ಚೆ, ವಾಚನ ಮತ್ತು ಮೌಲ್ಯಾಧಾರಿತ ಕಾರ್ಯಕ್ರಮಗಳು ನಡೆಯಬೇಕು.

ಇನ್ನೊಂದು ಮಹತ್ವದ ಅಂಶವೆಂದರೆ, ಅಂಬೇಡ್ಕರ್ ಅವರನ್ನು ಕೇವಲ ಒಂದು ಸಮುದಾಯದ ನಾಯಕನಾಗಿ ಸೀಮಿತಗೊಳಿಸುವ ಪ್ರವೃತ್ತಿ ಇಂದಿಗೂ ಸಮಾಜದಲ್ಲಿ ಕಾಣಿಸುತ್ತದೆ. ಆದರೆ ಈ ಕೈಪಿಡಿಯಂತಹ ಪ್ರಯತ್ನಗಳು ಅವರನ್ನು ಸಂವಿಧಾನದ ಶಿಲ್ಪಿ, ಸಾಮಾಜಿಕ ನ್ಯಾಯದ ಪ್ರತಿಪಾದಕ ಮತ್ತು ಆಧುನಿಕ ಭಾರತದ ಚಿಂತಕರಾಗಿ ಪರಿಚಯಿಸುವ ಕೆಲಸ ಮಾಡಬೇಕು. 


ವಿದ್ಯಾರ್ಥಿ ಸಮುದಾಯದಲ್ಲಿ ವಿಮರ್ಶಾತ್ಮಕ ಚಿಂತನೆ, ಪ್ರಶ್ನಿಸುವ ಮನೋಭಾವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಅರಿವು ಬೆಳೆಸುವಲ್ಲಿ ಈ ರೀತಿಯ ಸಾಹಿತ್ಯ ಮಹತ್ವದ ಪಾತ್ರ ವಹಿಸಬಹುದು.

ಒಟ್ಟಾರೆ, “ಮನೆ ಮನೆಗೆ, ಮನ ಮನಕ್ಕೆ ಬಾಬಾಸಾಹೇಬರು” ಕೈಪಿಡಿ ಒಂದು ಉತ್ತಮ ಆರಂಭ. ಆದರೆ ಅದು ಕೇವಲ ವಿತರಿಸಲ್ಪಟ್ಟ ಹೊತ್ತಿಗೆಯಾಗಿ ಉಳಿಯದೆ, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಮಾನತೆಯ ಅರಿವು, ಶಿಕ್ಷಣದ ಬದ್ಧತೆ ಮತ್ತು ಸಂವಿಧಾನಿಕ ಮೌಲ್ಯಗಳ ಬಿತ್ತನೆ ಮಾಡುವ ಚಿಂತನಾ ದೀಪವಾಗಬೇಕು. ಆಗಲೇ ಇಂತಹ ಪ್ರಯತ್ನದ ನಿಜವಾದ ಔಚಿತ್ಯ ಸಾರ್ಥಕವಾಗುತ್ತದೆ.


ಲೇಖನ:ಡಾ. ಜಯವೀರ ಎ. ಕೆ.

           ಖೇಮಲಾಪುರ

Image Description

Post a Comment

0 Comments