*ಭರವಸೆಯ ಬೆಳಕು*

 *ಭರವಸೆಯ ಬೆಳಕು*




ಬಡತನದ ಬಿರುಗಾಳಿಯಲಿ ಬೆಂಕಿಯಂತೆ ಬೆಳೆದವನು,

ಬಾಳ ಹಾದಿಯ ಮುಳ್ಳಿನಲಿ ಧೈರ್ಯವಾಗಿ ನಡೆದವನು,

ಕನಸಿನ ಕಣ್ಣಲಿ ಸೈನಿಕನ ಸಪಥವಿಟ್ಟು ನಿಂತವನು,

ಪ್ರಜ್ವಲ್ ಎಂಬ ಹೆಸರಿಗೇ ತಕ್ಕಂತೆ ಬೆಳಕಾಗಿ ಹೊಳೆದವನು…

ಬಾಳ ಬಂಡಿಯ ಭಾರವನು ಭುಜದ ಮೇಲೆ ಹೊತ್ತವನು,

ಬಡ ಮನೆಯ ನೋವಿನ ಮರ್ಮವನು ಮನದಾಳದಿ ತಿಳಿದವನು,

“ನಾನೊಬ್ಬ ಸೈನಿಕನಾಗಬೇಕು” ಎಂಬ ಸಂಕಲ್ಪ ಹೊತ್ತವನು,

ಕಠಿಣ ಪರಿಶ್ರಮದ ಬೆವರು ಸುರಿದು ಕನಸಿಗೆ ಜೀವ ತುಂಬಿದವನು.

ಅಗ್ನಿವೀರದ ಅಗ್ನಿಪಥದಿ ಆತ್ಮವಿಶ್ವಾಸ ತುಂಬಿದವನು,

ಆರ್ಮಿಯ ಅಂಗಳ ಸೇರುವ ಕನಸನು ಸಾಕಾರ ಮಾಡಿದವನು,

ಬೆಂಗಳೂರು ಎಂ.ಇ.ಜಿ ತರಬೇತಿ ಕೇಂದ್ರದ ಪಥದಲಿ,

ಭವಿಷ್ಯದ ಭದ್ರತೆಯ ಭಿತ್ತಿಯಂತೆ ಭರವಸೆಯಾಗಿ ನಿಂತವನು.

ಯೂಟ್ಯೂಬ್ ಲೋಕದ ಸಾಧಕರ ಕಥೆಗಳಲಿ ಸ್ಪೂರ್ತಿ ಕಂಡವನು,

ಸ್ವಯಂ ಪ್ರೇರಣೆಯ ದೀಪ ಹಿಡಿದು ಸಾಧನೆಯ ದಾರಿಯ ಕಂಡವನು,

ಸ್ನೇಹದ ಸೊಬಗು ಅರಿತು ಒಳ್ಳೆಯವರ ಬಳಗ ಸೇರಿಕೊಂಡವನು,

ಸಜ್ಜನಿಕೆಯ ಸುಗಂಧದಂತೆ ಜನಮನಗಳಲ್ಲಿ ನೆಲೆಗೊಂಡವನು.

ತನು ಮನ ಭಾವವನು ತಾಯ್ನಾಡಿಗೆ ಸಮರ್ಪಿಸಿದವನು,

ಧ್ವಜದ ಗೌರವ ಕಾಯಲು ಜೀವವನ್ನೇ ಅರ್ಪಿಸಿದವನು,

ಉತ್ಸಾಹದ ಕಾರಂಜಿಯಾಗಿ ಕನಸುಗಳಿಗೆ ರೆಕ್ಕೆ ಕೊಟ್ಟವನು,

ಪೋಷಕರ ಹೃದಯದ ಹೆಮ್ಮೆಗೀತೆ ಆಗಿ ಮನೆ ಬೆಳಗಿಸಿದವನು.

ಪ್ರಜ್ವಲ್ — ಹೆಸರು ಮಾತ್ರವಲ್ಲ ಪ್ರಜ್ವಲಿತ ಪ್ರಭೆಯ ಚಿಹ್ನೆ,

ಮನೆಮಂದಿಯ ಕನಸುಗಳಿಗೆ ಹೊತ್ತಿ ಉರಿಯುವ ನಿತ್ಯ ದೀಪವೇ,

ಜನ್ಮಭೂಮಿಯ ಹೆಮ್ಮೆ, ತಂದೆ ತಾಯಿಯ ಆಶೆಯ ಕಿರಣವೇ,

ದೇಶ ಸೇವೆಯ ದಾರಿಯಲಿ ದಿಟ್ಟ ಹೆಜ್ಜೆ ಇಡುವ ಸೈನಿಕನೇ!

“ಮನೆಯ ಕತ್ತಲಲಿ ಮೂಡಿದ ಬೆಳಕು — ಪ್ರಜ್ವಲ್,

ಕುಟುಂಬದ ಭರವಸೆಯ ದೀಪ — ಪ್ರಜ್ವಲ್,

ದೇಶಸೇವೆಯ ಕನಸಿಗೆ ರೂಪ — ಪ್ರಜ್ವಲ್,

ಹೆಮ್ಮೆ ತುಂಬಿದ ನಮ್ಮ ಹೃದಯದ ಸ್ಪಂದನೆ — ಪ್ರಜ್ವಲ್!”


ಕವಿ:ಡಾ. ಜಯವೀರ ಎ. ಕೆ.

      ಖೇಮಲಾಪುರ

Image Description

Post a Comment

0 Comments