*ಅಮ್ಮನಿಗೆ ನಮನ*
ಅಮ್ಮನಿಗರ್ಪಣೆ ಮಾಡುವೆನೀದಿನ
ಕವನದ ಪರಿಯಲಿ ನನ್ನನ್ನು|
ದೇವರಿಗಿಂತಲು ಹೆಚ್ಚಿನ ಗೌರವ
ಭಾವನೆ ಮೆರೆಯುವ ಮನವನ್ನು||೧||
ತಾಯಿಯು ಕರುಳಿನ ಕುಡಿಯನು ಎತ್ತಲು
ಮಗುವಿಗೆ ಕಿರುನಗೆ ಮೂಡುವುದು|
ಅಮ್ಮನ ಅಪ್ಪುಗೆಯಲಿ ಮಗು ಸಂತಸ
ಪಡುತಿಹ ದೃಶ್ಯವು ಕಾಣುವುದು||೨||
ಮಗುವನು ಅಪ್ಪಿದ ತಾಯಿಯ ಮೊಗದಲಿ
ತೃಪ್ತಿಯ ಭಾವವು ತೇಲುತಿದೆ|
ಯಾವುದೆ ನಿಧಿಗೂ ಮೀರಿದ ಮೌಲ್ಯವು
ಪಡೆಯುವ ನೆಮ್ಮದಿ ತೋರುತಿದೆ||೩||
ನಗುತಿಹ ಮಗುವಿನ ತುಟಿಯದು ಬಿರಿಯುವ
ಮಲ್ಲಿಗೆ ಮೊಗ್ಗಿನ ಸೊಬಗಂತೆ|
ಅಳುತಿಹ ಕಂದನ ಕಣ್ಗಳ ಹನಿಗಳು
ಮುತ್ತಿನ ಮಣಿಗಳು ಹರಿದಂತೆ||೪||
ನನ್ನೀ ಪುಟ್ಟನು ಜಗದಲಿ ಜಾಣನು
ಅವನಿಗೆ ಸಾಟಿಯು ಇನ್ನಿಲ್ಲ|
ಎನ್ನುವ ಅಮ್ಮನ ಮಾತನು ಕೇಳಲು
ಕಂದನ ನಗುವಿಗೆ ಕೊನೆಯಿಲ್ಲ||೫||
ಬಾನಲಿ ತೇಲುವ ಚಂದ್ರನ ತೋರಿಸಿ
ಅಮ್ಮನು ತುತ್ತನು ಕೊಡುವಾಗ|
ಅಮೃತಧಾರೆಯೆ ತುತ್ತಲಿ ಬೆರೆಯಲು
ಪುಟ್ಟನು ಉಣುವನು ಬಲುಬೇಗ||೬||
ಅಮ್ಮನು ತೊಟ್ಟಿಲು ತೂಗುತ ಜೋಗುಳ
ಹಾಡಲು ನಿದ್ರೆಯು ಬರದಿಹುದೇ! |
ಮುಚ್ಚಿದ ಕಣ್ಗಳ ಕನಸಲಿ ಚಂದ್ರನು
ಆಡಲು ಜೊತೆಯಲಿ ನಿಲಬಹುದೇ? ||೭||
ನೆನಪಿಡಿ ಎಂದಿಗು ಶೋಷಕ ರೂಪದ
ಜನನಿಯು ಜಗದಲಿ ಜನಿಸಿಲ್ಲ|
ಎನ್ನುವ ಸಂಸ್ಕ್ರತ ಶ್ಲೋಕದ ಅರ್ಥವು
ಯಾವುದೆ ಕಾಲಕು ಸಟೆಯಲ್ಲ||೮||
*ಕಿಗ್ಗಾಲು ಎಸ್ ಗಿರೀಶ್,ಮೂರ್ನಾಡು*
೧೦-೦೫-೨೦೨೬

.gif)

.gif)


0 Comments