"ಇಲ್ಲಿವೆ ಪ್ರೇಮದ ಮಾಟ. ಪರಿಪಾಠ, ಪರದಾಟಗಳ ಬಿಚ್ಚಿಡುವ ಹತ್ತು ಹನಿಗಳು. ಪ್ರೀತಿಯ ನೋಟ, ಕಾಟ, ಕಣ್ಣಮುಚ್ಚಾಲೆಯಾಟ ಸಾರುವ ಘಮ್ಮತ್ತು ದನಿಗಳು. ಕಚಗುಳಿಯಿಡುತ ಪುಳಕಿಸುವ ಒಲವು, ನಲಿವು, ನಿಲುವಿನ ಮಸ್ತು ಮಸ್ತು ಖನಿಗಳು. ತುಸು ತರಲೆ, ಲಘು ಲಾಸ್ಯ, ಕೊಂಚ ಕೀಟಲೆಯ ಈ ಹನಿಗಳು ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಕಾರಣ ನಿಮ್ಮೊಡಲ ಒಳಗಿನ ಒಲವ ಅಂತರ್ಗಾಮಿನಿ, ಅನುರಾಗಸ್ವರಗಳ ಭಾವಭಾಮಿನಿ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
HONEY ಹನಿಗಳು..
1. ಪ್ರೇಮೋಗ್ರಾಫ್..!
ಹಾಕುವಷ್ಟರಲ್ಲಿ ಲೇಖನಿಯಿಂದ
ಅಭಿಮಾನದ ಆಟೋಗ್ರಾಫ್...
ಬರೆದಿದ್ದಳು ಕಣ್ಣಂಚಿನಿಂದ
ಅನುರಾಗದ ಪ್ಯಾರಾಗ್ರಾಫ್.!
*********************
2. ಮಳ್ಳಿ..!
ಅದೆಂತಹ ಜಾಣ ಮರೆವು
ನೆನೆದು ಪಡೆವುದಷ್ಟೇ ಗೊತ್ತು
ಮರಳಿಸುವುದಿಲ್ಲ ದಿನವು
ನನ್ನಿಂದ ಪಡೆದ ಮುತ್ತು.!
***************
3. ಪರಾರಿ.!
‘ಓಡಿ ಹೋಗೋಣ ಬಾ’ ಎಂದೆ
ಹೂ ಎಂದು ಓಡಿಯೇ ಬಿಟ್ಟಳು
ನನ್ನ ಕೈಗೂ ಸಿಗದಂತೆ ಮುಂದೆ.!
******************
4. ಬದಲು.!
ಮದುವೆಗೆ ಮುನ್ನ ಹೇಳುತ್ತಿದ್ದೆ..
“ನೀ ನಕ್ಕರೆ ಮುತ್ತುದುರಿದಂತೆ”
ಇಂದು ಅವಳೇ ಹೇಳುತ್ತಾಳೆ
ಮುತ್ತುದುರಿಸಿದರಷ್ಟೆ ನಗುತ್ತೇನೆಂದು.!
*******************
5.ವಾಚ್ಯ-ಸೂಚ್ಯ.!
"ಐ ಲವ್ ಯೂ" ಎಂದರೆ....
ನಾನಿನ್ನ ಪ್ರೀತಿಸುವೆನೆಂಬ ವಾಚ್ಯ
ನಿನ್ನಿಂದಲು ನಾನು ಪ್ರೀತಿಸಲ್ಪಡಲು
ಬಯಸುತ್ತೇನೆ ಎಂಬುದು ಸೂಚ್ಯ.!
********************
6. ನವೀಕರಣ.!
ಆಗಾಗ ಕಾಯುವಿಕೆ ಬೇವಿಗೆ
ಅಧರಾಮೃತದ ಬೆಲ್ಲವಿಡೆ..
ನಿತ್ಯ ಕಾಯುಬಲ್ಲುದು ಕಾಯ
ಸರಿದರೂ ಅದೆಷ್ಟೇ ಸಮಯ.!
******************
7. ಕಿಸ್-ಮತ್ತು.!
ಮಧುರ ಮಾತಿಗಿದೆ
ಮತ್ತೇರಿಸುವ ಘಮ್ಮತ್ತು
ಅಧರ ಮುತ್ತಿಗಿದೆ
ಮೈಮರೆಸುವ ತಾಕತ್ತು.!
******************
8. ಬೆಸುಗೆ.!
ಜೀವ ಭಾವ ಬೆಸೆವ
ಉಸಿರಿಗೆಲ್ಲಿದೆ ಹೆಸರು
ಬೆರೆತಷ್ಟು ಉಸಿರುಸಿರು
ಎದೆಗಳು ಹಚ್ಚಹಸಿರು.!
*********************
9. ಕಂಜೂಸ್.!
ಕೊಟ್ಟರು ಸಾವಿರ ಮುತ್ತುಗಳು
ನಾನು ಮುಕ್ತವಾಗಿ ಮನಬಿಚ್ಚಿ
ಮರಳಿ ನೀಡುವುದಿಲ್ಲ ಅವಳು
ಒಂದೇ ಒಂದನ್ನೂ ತುಟಿಬಿಚ್ಚಿ.!
*****************
10. ಸಂವೇದನೆ.!
ಗೆಳತಿ ಇರಬಹುದು ನಮ್ಮಿಬ್ಬರಲಿ
ಗಂಡು ಹೆಣ್ಣೆಂಬ ಲಿಂಗಭೇದ..
ಆದರೆ ನಿತ್ಯ ಜೀವಸಂವೇದನೆಗಳಲಿ
ಅನುಕ್ಷಣ ಯೋಚನೆ ಯಾತನೆಗಳಲಿ
ಇಲ್ಲವೇ ಇಲ್ಲ ಎಳ್ಳಷ್ಟು ಭಾವಭೇದ.!
ಎ.ಎನ್.ರಮೇಶ್.ಗುಬ್ಬಿ.

.gif)

.gif)


0 Comments