ಜೀವಯಾನ ಭಾವಗಾನ.!

 "ಇದು ಜೀವಯಾನದ ಕ್ಷಣಕ್ಷಣ ತಲ್ಲಣ, ನಿರತ ಚಾರಣದ ಅನಾವರಣದ ಮಾರ್ಮಿಕ ಕವಿತೆ. ಬಾಳ ಭಾವಗಾನದ ತರ ತರ ಸ್ವರರಿಂಗಣಗಳ ತಾತ್ವಿಕ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬದುಕಿನ ಪಯಣದ ಸತ್ಯ ಸತ್ವಗಳ ಸಾರವಿದೆ. ಅರ್ಥೈಸಿದಷ್ಟೂ ಜೀವ-ಜೀವನದ ವಿಸ್ಮಯ ತತ್ವ ಮಹತ್ವಗಳ ಚಿತ್ರಣದ ವಿಸ್ತಾರವಿದೆ. ಅದೆಷ್ಟೇ ಅರಿತರೂ, ಅಂದಾಜಿಸಿದರೂ ಪ್ರತಿ ಬದುಕೂ ವಿಭಿನ್ನ, ವಿಸ್ಮಯ. ಪ್ರತಿಕ್ಷಣ ಅನೂಹ್ಯ. ಕಲ್ಪನೆಗೂ ನಿಲುಕದ ಅಭೇದ್ಯ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.  



ಜೀವಯಾನ ಭಾವಗಾನ.!



ಅನುದಿನ ನೋವು ನಲಿವಿನ 

ಅನುಕ್ಷಣ ಅಳು ನಗುವಿನ

ಜೀಕುವ ಉಯ್ಯಾಲೆ ಜೀವನ.!


ಅವಿರತ ಸೋಲು ಗೆಲುವಿನ

ಅನವರತ ಏಳು ಬೀಳಿನ

ಕಣ್ಣಾಮುಚ್ಚಾಲೆಯ ತಾನ.!


ಅಡಿಗಡಿಗೂ ಏರು ಜಾರಿನ

ಹೆಜ್ಜೆಹೆಜ್ಜೆಗು ಕಲ್ಲು ಮಣ್ಣಿನ

ಅಚ್ಚರಿ ಶೃಂಖಲೆಯ ಯಾನ.!


ಅಂದಾಜಿಸದ ಸುಖ ಸಮ್ಮಾನ

ಅಪೇಕ್ಷಿಸದ ನಷ್ಟ ದುಮ್ಮಾನ

ಸತತ ಬೆಳಕು ಕತ್ತಲೆಯ ಪಾನ.!


ಆಕಸ್ಮಿಕ ಸಾವುಸೂತಕ ಹನನ

ಅನಿರೀಕ್ಷಿತ ಸಂಭ್ರಮ ಗಾಯನ

ನೆಳಲುಬೆಳಕಮಾಲೆಯ ತನನ.!


ಅತಿವೃಷ್ಟಿಯ ಸುಖ ಕೀರ್ತನ

ಅನಾವೃಷ್ಟಿಯ ಕಷ್ಟ ರೋಧನ

ಬಿಸಿಲು ಬೆಳದಿಂಗಳಲೆ ಸ್ನಾನ.!


ಪ್ರೀತಿ ದ್ವೇಷಗಳ ಸಂವರ್ತನ

ಸ್ವಾರ್ಥ ನಿಸ್ವಾರ್ಥ ಸಂಚಲನ

ಇಹಪರ ನೆಲೆಸೆಲೆಯ ಧ್ಯಾನ.!


ವಾಸ್ತವ ಭ್ರಮೆಗಳ ನಡುವಿನ

ಅರಿವು ಅರ್ಥಗಳ ಆಚೆಗಿನ

ಮರ್ಮಮಾಯಜ್ವಾಲೆ ತಾಡನ.!


ನಿತ್ಯ ರಾಗ ವಿರಾಗಗಳ ಗಾನ

ಸತತ ಸತ್ಯಮಿಥ್ಯೆಗಳ ಸಂವಹನ

ಅನೂಹ್ಯಲೀಲೆಗಳ ಸಂಕೀರ್ತನ.!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments