ಭಂಟರಕುಪ್ಪೆ ಗ್ರಾಮದಲ್ಲಿ ಸಾರ್ಥಕಗೊಂಡ ಎನ್‌ಎಸ್ಎಸ್ ವಾರ್ಷಿಕ ಶಿಬಿರ
ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಘಟಕ -2 ವಾರ್ಷಿಕ ಶಿಬಿರ ಯಶಸ್ವಿ ಅಭಿಯಾನ
ಮಾಗಡಿ: ಏ.28: ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಘಟಕ -2ರ ಸ್ವಯಂ ಸೇವಕರು “ನನಗಲ್ಲ ನಿನಗೆ” ಎಂಬ ಧ್ಯೇಯ ವಾಕ್ಯದಂತೆ ಮಾಗಡಿ ತಾಲ್ಲೂಕಿನ ಭಂಟರಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ 2025-26ನೇ ಶೈಕ್ಷಣಿಕ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಎನ್ಎಸ್ಎಸ್ ಘಟಕ -2ರ ಕಾರ್ಯಕ್ರಮಧಿಕಾರಿಗಳಾದ ಡಾ.ರತ್ನಕುಮಾರಿ ಬಿ.ಎಂ. ಅವರ ನೇತೃತ್ವದಲ್ಲಿ ಶಿಬಿರದ ಉದ್ಘಾಟನೆ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಗಳಾಗಿ ಡಾ.ಸುಬೇದಾರ್ ಮೇಜರ್ ಬಿ.ಕೆ, ಕುಮಾರಸ್ವಾಮಿ, ಹವಾಲ್ದಾರ್ ಶರವಣ ಎಂ, ಬೆಳಗುಂಬ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಉಮಾ ನರಸಿಂಹಮೂರ್ತಿ, ಪಂಚಾಯಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.
* ಶಿಬಿರದ ಪ್ರಮುಖ ಚಟುವಟಿಕೆಗಳು
"ಸರ್ಕಾರಿ ಶಾಲೆಯನ್ನು ಉಳಿಸುವುದು ಮತ್ತು ಅಭಿವೃದ್ಧಿಪಡಿಸುವುದು" ಎಂಬ ಮೂಲ ಉದ್ದೇಶದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಈ ನಿಟ್ಟಿನಲ್ಲಿ ಸ್ವಯಂಸೇವಕರು ಈ ಕೆಳಗಿನ ಕಾರ್ಯಗಳನ್ನು ಕೈಗೊಂಡರು.
* ಶಾಲಾ ಅಭಿವೃದ್ಧಿ: ಶಾಲೆಯ ಕಟ್ಟಡಗಳಿಗೆ ಬಣ್ಣ ಬಳಿಯಲಾಯಿತು. ಗೋಡೆಗಳ ಮೇಲೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಡೊಳ್ಳು ಕುಣಿತ, ಯಕ್ಷಗಾನ, ಭರತನಾಟ್ಯದಂತಹ ಆಕರ್ಷಕ ಚಿತ್ರಗಳನ್ನು ಬಿಡಿಸಲಾಯಿತು.
* ಶೈಕ್ಷಣಿಕ ನೆರವು: ಶಾಲಾ ಮಕ್ಕಳಿಗೆ ಕಲಿಕೆಗೆ ಪೂರಕವಾಗುವ ವಿವಿಧ ವಿಷಯಗಳ ಚಾರ್ಟ್‌ಗಳನ್ನು ಸಿದ್ಧಪಡಿಸಲಾಯಿತು. ಅಲ್ಲದೆ, ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪುಸ್ತಕ, ಪೆನ್ನು, ಪೆನ್ಸಿಲ್ ಸೇರಿದಂತೆ ವಿವಿಧ ಪಠ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.
* ಗ್ರಾಮ ಸೇವೆ: ಸ್ವಯಂಸೇವಕರು ಗ್ರಾಮದ ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು ಮತ್ತು ಸಾಮಾಜಿಕ ಅರಿವು ಮೂಡಿಸಲು ಜಾಗೃತಿ ಜಾಥಾವನ್ನು ನಡೆಸಿದರು.
ದಿನಚರಿ ಮತ್ತು ಸೃಜನಾತ್ಮಕ ಕಾರ್ಯಕ್ರಮಗಳು
ಶಿಬಿರದ ನಿಗದಿತ ವೇಳಾಪಟ್ಟಿಯಂತೆ ಪ್ರತಿದಿನ ಬೆಳಿಗ್ಗೆ ಧ್ವಜಾರೋಹಣ, ಯೋಗ ಮತ್ತು ಶ್ರಮದಾನ ಚಟುವಟಿಕೆಗಳು ನಡೆಯುತ್ತಿದ್ದವು. ಸಂಜೆ 4 ಗಂಟೆಗೆ ನುರಿತ ತಜ್ಞರಿಂದ ವಿಶೇಷ ಉಪನ್ಯಾಸಗಳನ್ನು ಆಯೋಜಿಸುವ ಮೂಲಕ ಸ್ವಯಂಸೇವಕರಿಗೆ ಜ್ಞಾನಾರ್ಜನೆಯ ಅವಕಾಶ ಕಲ್ಪಿಸಲಾಯಿತು. ಸಂಜೆ ವೇಳೆ ಆಯೋಜಿಸಲಾಗುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮಸ್ಥರು ಮತ್ತು ಸ್ವಯಂ ಸೇವಕರ ನಡುವೆ ಸಮನ್ವಯತೆ ಮೂಡಿಸಿದವು. ವಿಶೇಷವಾಗಿ ಬೀದಿನಾಟಕಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಲಾಯಿತು.
* ವಿಶೇಷ ಆಕರ್ಷಣೆ: ಜಾನಪದ ಸಂಜೆ ಬಸವ ಜಯಂತಿಯ ಪ್ರಯುಕ್ತ ಹಮ್ಮಿಕೊಂಡಿದ್ದ "ಜಾನಪದ ಸಂಜೆ" ಕಾರ್ಯಕ್ರಮವು ಶಿಬಿರದ ಹೈಲೈಟ್ ಆಗಿತ್ತು. 'ಜಾನಪದ ಕೋಗಿಲೆ' ಹಾಗೂ ಚಂದನ ದೂರದರ್ಶನದ ಗಾನ ಗರುಡಿ ಖ್ಯಾತಿಯ ಶ್ರೀ ಕಡಬಗೆರೆ ಮುನಿರಾಜು ಅವರು ಜಾನಪದ ಗಾಯನದ ಮೂಲಕ ನೆರೆದಿದ್ದವರನ್ನು ಮಂತ್ರಮುಗ್ಧಗೊಳಿಸಿದರು. ರಾತ್ರಿ 7 ರಿಂದ 9.30 ರವರೆಗೆ ನಡೆದ ಈ ಸುಂದರ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಎನ್ಎಸ್ಎಸ್ ತಂಡದವರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕೊನೆಯಲ್ಲಿ ಕಾರ್ಯಕ್ರಮಾಧಿಕಾರಿಯವರ ಸೂಕ್ತ ಮಾರ್ಗದರ್ಶನ, ಸ್ವಯಂ ಸೇವಕರ ಶಿಸ್ತು ಮತ್ತು ಗ್ರಾಮಸ್ಥರ ಸಕ್ರಿಯ ಸಹಭಾಗಿತ್ವದಿಂದಾಗಿ ಈ ಏಳು ದಿನಗಳ ವಿಶೇಷ ವಾರ್ಷಿಕ ಶಿಬಿರವು ಸ್ಥಳೀಯ ಮುಖಂಡರ ಹಾಗೂ ಗ್ರಾಮಸ್ಥರ ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಇದೇ ಸಂದರ್ಭದಲ್ಲಿ ಮೈ ಇನ್ಸ್ಟಿಟ್ಯೂಟ್ ಟೀಚರ್ ಟ್ರೈನಿಂಗ್ ಕಾಲೇಜ್ ನ ಪ್ರಾಂಶುಪಾಲ ಬಿ.ಎಂ. ಚಂದ್ರಶೇಖರಯ್ಯ, ಭಂಟರಕುಪ್ಪೆ ಶಾಲೆಯ ಮುಖೋಪಾಧ್ಯಾಯ ಶ್ರೀಮತಿ ನಾಗರತ್ನಮ್ಮ, ಶಿಕ್ಷಕ ಶಶಿಧರ್, ಕಾನೂನು ಸಲಹೆಗಾರ ನವೀನ್ ಗಂಗಪ್ಪನಹಳ್ಳಿ, ಗ್ರಾಮದ ಹಿರಿಯ ಮುಖಂಡರು, ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭ ಅವರೊಂದಿಗೆ ಕಾಲೇಜಿನ ಅಧ್ಯಾಪಕ ವೃಂದದವರು, ಸ್ವಯಂ ಸೇವಕರು ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್:
ಮಾಗಡಿ ತಾಲೂಕಿನ ಭಂಟರಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಶಿಬಿರವನ್ನು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ -2ರ ಕಾರ್ಯಕ್ರಮಾಧಿಕಾರಿ ಪ್ರೊ. ರತ್ನಕುಮಾರಿ ಬಿ.ಎಂ, ಸ್ವಯಂ ಸೇವಕರು ಮತ್ತಿತರರು ಭಾಗವಹಿಸಿದ್ದರು.
ಫೋಟೋ ಕ್ಯಾಪ್ಶನ್ :2
ಮಾಗಡಿ ತಾಲೂಕಿನ ಭಂಟರಕುಪ್ಪೆ ಗ್ರಾಮದ ಶಾಲೆಯ ಆವರಣದಲ್ಲಿ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

.gif)

.gif)


0 Comments