ಅಸಮಾನತೆಯ ಅಂಧಕಾರ ಸೀಳಿದ ಜ್ಞಾನಸೂರ್ಯ: ಡಾ. ಬಿ.ಆರ್. ಅಂಬೇಡ್ಕರ್

 ಅಸಮಾನತೆಯ ಅಂಧಕಾರ ಸೀಳಿದ ಜ್ಞಾನಸೂರ್ಯ: ಡಾ. ಬಿ.ಆರ್. ಅಂಬೇಡ್ಕರ್




ಭಾರತದ ಇತಿಹಾಸದ ಹಾದಿಯಲ್ಲಿ ಅನೇಕ ಮಹಾಪುರುಷರು ಬಂದು ಹೋಗಿದ್ದಾರೆ. ಆದರೆ, ಕೇವಲ ಒಂದು ಜನಾಂಗದ ದನಿಯಾಗಿರದೆ, ಇಡೀ ದೇಶದ ಅಸ್ಮಿತೆಯನ್ನು ತಿದ್ದಿ ತೀಡಿದ ಕೀರ್ತಿ ಡಾ. ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಪ್ರತಿ ವರ್ಷ ಏಪ್ರಿಲ್ 14 ರಂದು ನಾವು ಆಚರಿಸುವ 'ಅಂಬೇಡ್ಕರ್ ಜಯಂತಿ' ಕೇವಲ ಒಬ್ಬ ವ್ಯಕ್ತಿಯ ಜನ್ಮದಿನವಲ್ಲ; ಅದು ಜ್ಞಾನದ ವಿಜಯೋತ್ಸವ, ಸಮಾನತೆಯ ಸಂಕಲ್ಪ ಮತ್ತು ಶೋಷಿತರ ಆತ್ಮಗೌರವದ ಹಬ್ಬ. ಬದುಕಿನುದ್ದಕ್ಕೂ ಅವಮಾನಗಳನ್ನೇ ಉಂಡು, ಅದನ್ನೇ ಜ್ಞಾನದ ಅಮೃತವನ್ನಾಗಿ ಪರಿವರ್ತಿಸಿ ದೇಶಕ್ಕೆ ನೀಡಿದ ಈ ಮಹಾಚೇತನದ ಬದುಕು ಒಂದು ಅಚ್ಚರಿ.


ಅಂಬೇಡ್ಕರ್ ಅವರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಮೂಲದ ರಾಮ್‌ಜೀ ಸಕ್ಪಾಲ್ ಮತ್ತು ಭೀಮಾಬಾಯಿ ದಂಪತಿಯ 14ನೇ ಮಗುವಾಗಿ ಜನಿಸಿದ ಭೀಮರಾವ್, ಶಾಲಾ ಹಂತದಲ್ಲೇ ಅಸ್ಪೃಶ್ಯತೆಯ ಕರಾಳ ಮುಖಗಳನ್ನು ನೋಡಿದ್ದರು. ಅಂದು ಸಮಾಜ ಹೇರಿಕೆ ಮಾಡಿದ್ದ ಜಾತಿ ಪದ್ಧತಿಯಿಂದಾಗಿ ಅವರು ಶಾಲೆಯ ಕಿಟಕಿಯ ಹೊರಗೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯತೆ ಇತ್ತು. ಕುಡಿಯುವ ನೀರಿಗಾಗಿ ಪರರ ದಯೆಯನ್ನು ಕಾಯಬೇಕಿತ್ತು. ಈ ನೋವು ಅವರಲ್ಲಿ ಸಿಟ್ಟನ್ನು ತರಲಿಲ್ಲ, ಬದಲಾಗಿ "ನನ್ನ ಜನರನ್ನು ಈ ದುಸ್ಥಿತಿಯಿಂದ ಹೊರತರಲು ನಾನು ಅತಿ ಹೆಚ್ಚು ಓದಬೇಕು" ಎಂಬ ಛಲವನ್ನು ಮೂಡಿಸಿತು. ಗಾಯಗೊಂಡ ಮನಸ್ಸು ಜ್ಞಾನದ ಆಶ್ರಯ ಪಡೆದಾಗ ಅದು ಇತಿಹಾಸ ಸೃಷ್ಟಿಸುತ್ತದೆ ಎಂಬುದಕ್ಕೆ ಅಂಬೇಡ್ಕರ್ ಅವರೇ ಸಾಕ್ಷಿ.


ಅಂಬೇಡ್ಕರ್ ಅವರ ಶೈಕ್ಷಣಿಕ ಸಾಧನೆ ಜಗತ್ತೇ ಬೆರಗಾಗುವಂಥದ್ದು. ಬರೋಡಾ ಮಹಾರಾಜರ ನೆರವಿನಿಂದ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅವರು ಪಡೆದ ಪದವಿಗಳು ಅಂದಿನ ಕಾಲಕ್ಕೆ ಅತಿ ದೊಡ್ಡ ಸಾಧನೆಗಳಾಗಿದ್ದವು. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯರಲ್ಲಿ ಇವರೂ ಒಬ್ಬರು. ವಿದೇಶದಲ್ಲಿ ಅಷ್ಟು ಗೌರವ ಸಂಪಾದಿಸಿದರೂ, ಸ್ವದೇಶಕ್ಕೆ ಮರಳಿದಾಗ ಅವರಿಗೆ ಎದುರಾಗಿದ್ದು ಮತ್ತೆ ಅದೇ ಹಳೆಯ ಜಾತಿ ತಾರತಮ್ಯ. ಅಂದು ಅವರು ನಿರ್ಧರಿಸಿದರು—ಕೇವಲ ಪುಸ್ತಕಗಳಲ್ಲಿರುವ ಜ್ಞಾನ ಸಾಲದು, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಬದಲಿಸಬೇಕು.


ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳು ಭಾರತದ ಚರಿತ್ರೆಯಲ್ಲಿ ಹೊಸ ಸಂಚಲನ ಮೂಡಿಸಿದವು. 1927ರ ಮಹಾಡ್ ಸತ್ಯಾಗ್ರಹವು ಕೇವಲ ನೀರಿಗಾಗಿ ನಡೆಸಿದ ಹೋರಾಟವಾಗಿರಲಿಲ್ಲ, ಅದು ಮನುಷ್ಯನ ಮೂಲಭೂತ ಹಕ್ಕುಗಳಿಗಾಗಿ ನಡೆದ ಯುದ್ಧವಾಗಿತ್ತು. ಸಾರ್ವಜನಿಕ ಕೆರೆಯ ನೀರನ್ನು ಮುಟ್ಟುವ ಮೂಲಕ ಅವರು ಶತಶತಮಾನಗಳ ಗುಲಾಮಗಿರಿಯ ಸಂಕೋಲೆಯನ್ನು ಮುರಿದರು. ಅವರ ಹೋರಾಟದ ಹಾದಿ ಕಲ್ಲು ಮುಳ್ಳಿನಿಂದ ಕೂಡಿತ್ತು. ಆದರೂ ಅವರು ಹಿಂಸೆಯ ಹಾದಿ ಹಿಡಿಯಲಿಲ್ಲ. 'ಮೂಕನಾಯಕ' ಮತ್ತು 'ಬಹಿಷ್ಕೃತ ಭಾರತ' ಎಂಬ ಪತ್ರಿಕೆಗಳ ಮೂಲಕ ಮೂಕವಾಗಿದ್ದ ಸಮುದಾಯಕ್ಕೆ ಮಾತು ನೀಡಿದರು. ಅವರ ಲೇಖನಿಗಳು ಜಾಗೃತಿಯ ಕಿಡಿಗಳಾದವು.


ಸಂವಿಧಾನ ಶಿಲ್ಪಿಯಾಗಿ ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಮಹತ್ವದ್ದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದ ಮುಂದಿದ್ದ ದೊಡ್ಡ ಸವಾಲು ಎಂದರೆ ವೈವಿಧ್ಯಮಯವಾದ ಜನರನ್ನು ಒಂದು ಸೂತ್ರದಡಿ ತರುವುದು. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಜಗತ್ತಿನ ಅತ್ಯಂತ ದೊಡ್ಡ ಲಿಖಿತ ಸಂವಿಧಾನವನ್ನು ನೀಡಿದರು. ಅವರು ಸಂವಿಧಾನದಲ್ಲಿ ಬರೆದ ಪ್ರತಿ ಪದವೂ ಭಾರತೀಯರ ಹಿತವನ್ನೇ ಬಯಸಿದ್ದವು. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ಮೂರು ತತ್ವಗಳನ್ನು ಸಂವಿಧಾನದ ಜೀವನಾಡಿಯನ್ನಾಗಿ ಮಾಡಿದರು. ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು, ವಿಚ್ಛೇದನದ ಹಕ್ಕು ಮತ್ತು ಸಮಾನ ಶಿಕ್ಷಣದ ಅವಕಾಶಗಳನ್ನು ಕಲ್ಪಿಸಲು ಅವರು ತಂದ 'ಹಿಂದೂ ಕೋಡ್ ಬಿಲ್' ಇಂದಿನ ಮಹಿಳಾ ಸಬಲೀಕರಣಕ್ಕೆ ಅಡಿಪಾಯ.


ಅಂಬೇಡ್ಕರ್ ಅವರು ಕೇವಲ ಸಾಮಾಜಿಕ ಹೋರಾಟಗಾರರಲ್ಲ, ಅವರು ಒಬ್ಬ ದಿವ್ಯದೃಷ್ಟಿಯ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಇಂದಿನ 'ಭಾರತೀಯ ರಿಸರ್ವ್ ಬ್ಯಾಂಕ್' (RBI) ಸ್ಥಾಪನೆಯ ಹಿಂದೆ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳಿವೆ. ಅವರು ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕರಿಗೆ 8 ಗಂಟೆಗಳ ಕೆಲಸದ ಅವಧಿ, ಕನಿಷ್ಠ ವೇತನ ಮತ್ತು ಹೆರಿಗೆ ರಜೆಯಂತಹ ಸೌಲಭ್ಯಗಳನ್ನು ತಂದರು. ಈ ಎಲ್ಲ ಸುಧಾರಣೆಗಳು ಭಾರತದ ಆರ್ಥಿಕ ಭದ್ರತೆಗೆ ಭದ್ರವಾದ ಅಡಿಪಾಯ ಹಾಕಿದವು. ಅವರ ದೃಷ್ಟಿಯಲ್ಲಿ ದೇಶದ ಅಭಿವೃದ್ಧಿ ಎಂದರೆ ಕೇವಲ ಜಿಡಿಪಿ ಹೆಚ್ಚಳವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜೀವನಮಟ್ಟದ ಸುಧಾರಣೆ.


ಜೀವನದ ಕೊನೆಯ ಹಂತದಲ್ಲಿ, ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಇದು ಕೇವಲ ಧಾರ್ಮಿಕ ಬದಲಾವಣೆಯಾಗಿರಲಿಲ್ಲ, ಅದು ಅಸಮಾನತೆಯಿಂದ ಸಮಾನತೆಯೆಡೆಗಿನ ಪಯಣವಾಗಿತ್ತು. ಅಹಿಂಸೆ, ಪ್ರೀತಿ ಮತ್ತು ಸಮಾನತೆಯನ್ನು ಬೋಧಿಸುವ ಬುದ್ಧನ ತತ್ವಗಳು ಅವರಿಗೆ ಆತ್ಮದ ನೆಮ್ಮದಿಯನ್ನು ನೀಡಿದವು. 1956 ಅಕ್ಟೋಬರ್‌ನಲ್ಲಿ ನಾಗ್ಪುರದಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ಅವರು ಧಮ್ಮ ದೀಕ್ಷೆ ಪಡೆದದ್ದು ಒಂದು ಹೊಸ ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು.


ಅಂಬೇಡ್ಕರ್ ಅವರು ನಮಗೆ ನೀಡಿದ ಅತಿ ದೊಡ್ಡ ಸಂದೇಶವೆಂದರೆ "ಕಲಿಯಿರಿ, ಸಂಘಟಿತರಾಗಿ, ಹೋರಾಡಿ". ಶಿಕ್ಷಣವು ಸಿಂಹಿಣಿಯ ಹಾಲಿದ್ದಂತೆ, ಅದನ್ನು ಕುಡಿದವನು ಗರ್ಜಿಸದೇ ಇರಲಾರ ಎಂಬ ಅವರ ಮಾತುಗಳು ಇಂದಿಗೂ ಯುವಜನತೆಗೆ ಸ್ಪೂರ್ತಿ. ಅವರು ಕಂಡ ಭಾರತದ ಕನಸು ಇನ್ನೂ ಪೂರ್ಣವಾಗಿ ನನಸಾಗಿಲ್ಲ. ಸಮಾಜದಲ್ಲಿ ಇಂದಿಗೂ ಇರುವ ಅಸಮಾನತೆ, ತಾರತಮ್ಯ ಮತ್ತು ಅಜ್ಞಾನವನ್ನು ತೊಡೆದುಹಾಕಿದಾಗ ಮಾತ್ರ ನಾವು ಆಚರಿಸುವ ಅಂಬೇಡ್ಕರ್ ಜಯಂತಿಗೆ ಸಾರ್ಥಕತೆ ಸಿಗುತ್ತದೆ. 


ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ, ಅವರು ಬದಲಾವಣೆಯ ಮಹಾಶಕ್ತಿ. ಅವರ ವಿಚಾರಗಳು ಕಾಲಾತೀತವಾದವು. ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಅವರ ಸಂವಿಧಾನವೇ ನಮಗೆ ಶ್ರೀರಕ್ಷೆ. ಇಂದು ನಾವು ಅನುಭವಿಸುತ್ತಿರುವ ಪ್ರತಿಯೊಂದು ಹಕ್ಕುಗಳ ಹಿಂದೆ ಅಂಬೇಡ್ಕರ್ ಅವರ ಕಠಿಣ ಪರಿಶ್ರಮ ಮತ್ತು ತ್ಯಾಗವಿದೆ. ಜ್ಞಾನದ ಮೂಲಕ ಜಗತ್ತನ್ನು ಬದಲಿಸಬಹುದು ಎಂದು ತೋರಿಸಿಕೊಟ್ಟ ಈ ಮಹಾನ್ ಮಾನತಾವಾದಿಗೆ ನಾವು ಸದಾ ಋಣಿಯಾಗಿರಬೇಕು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಮಾಡುವುದೇ ನಾವು ಅವರಿಗೆ ಸಲ್ಲಿಸಬಹುದಾದ ನಿಜವಾದ ನಮನ.


   - ಶ್ರೀಧರ ದೊಡಮನಿ.. ✍️ಯುವಕವಿ, ಗದಗ ಜಿಲ್ಲೆ 

       9845223463

Image Description

Post a Comment

0 Comments