*ಬುದ್ಧಿ-ಭಾವಗಳ ವಿದ್ಯುತ್ ಆಲಿಂಗನದಿಂದ ಕಾವ್ಯ ಅವಿರ್ಭವಿಸುತ್ತದೆ:* *ಡಾ. ಜಯಪ್ಪ ಹೊನ್ನಾಳ್ಳಿ*

 *ಬುದ್ಧಿ-ಭಾವಗಳ ವಿದ್ಯುತ್ ಆಲಿಂಗನದಿಂದ  ಕಾವ್ಯ ಅವಿರ್ಭವಿಸುತ್ತದೆ:*

*ಡಾ. ಜಯಪ್ಪ ಹೊನ್ನಾಳ್ಳಿ*





 ರಾಯಬಾಗ: ಮಾನವನಲ್ಲಿ ಬುದ್ಧಿ ಮತ್ತು ಭಾವನೆಗಳು ಎರಡು ವಿಭಿನ್ನ ಶಕ್ತಿಗಳು. ಬುದ್ಧಿ ವಿಶ್ಲೇಷಣೆಗೆ, ತಾರ್ಕಿಕತೆಗೆ ಮತ್ತು ಸ್ಪಷ್ಟತೆಗೆ ಕಾರಣವಾಗುತ್ತದೆ. ಇನ್ನೊಂದೆಡೆ, ಭಾವನೆಗಳು ಸ್ಪಂದನೆಗೆ, ಅನುಭವಕ್ಕೆ ಮತ್ತು ಸೃಜನಾತ್ಮಕತೆಗೆ ಜೀವ ತುಂಬುತ್ತವೆ. ಈ ಎರಡೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಿದಾಗ, ಅದು ಸಂಪೂರ್ಣ ಕಾವ್ಯವನ್ನು ಸೃಷ್ಟಿಸಲು ಸಾಕಾಗುವುದಿಲ್ಲ. ಆದರೆ ಈ ಎರಡೂ ಶಕ್ತಿಗಳು ಒಂದೇ ಕ್ಷಣದಲ್ಲಿ ಪರಸ್ಪರ “ವಿದ್ಯುತ್ ಆಲಿಂಗನ” ಹೊಂದಿದಾಗ,ಅಂದರೆ  ತೀವ್ರವಾದ ಸಂವಹನ ಮತ್ತು ಸಂವೇದನೆಗಳ ಸಂಗಮ ಸಂಭವಿಸಿದಾಗ, ಕಾವ್ಯ ಅವಿರ್ಭವಿಸುತ್ತದೆ ಎಂದು ಮೈಸೂರಿನ ಜಯಕವಿ ಡಾ. ಜಯಪ್ಪ ಹೊನ್ನಾಳ್ಳಿ  ಹೇಳಿದರು.


   ತಾಲೂಕಿನ ಹಾರೂಗೇರಿ ಪಟ್ಟಣದ ಎಸ್ ಪಿ ಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ರವಿವಾರ ದಿ 26 ರಂದು   ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ರಾಯಬಾಗ ಇವುಗಳ ಸಹಯೋಗದಲ್ಲಿ ಆರಕ್ಷಕ ಕವಿ ಸಂಗಮೇಶ ನಾಯಿಕ ಅವರ ಮೌನ ಮಧುರ ಹಾಗೂ ಕಾವ್ಯ ಸಿಂಧೂರ ಕವನ ಸಂಕಲನಗಳ ಪುಸ್ತಕಾವಲೋಕನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಆಲಿಂಗನವು ಸಾಮಾನ್ಯ ಸೇರ್ಪಡೆ ಅಲ್ಲ; ಅದು ಚೈತನ್ಯದ ಹೊಳಪು. ಅಲ್ಲಿ ಬುದ್ಧಿಯ ಸ್ಪಷ್ಟತೆ ಭಾವನೆಯ ಆಳವನ್ನು ನಿಯಂತ್ರಿಸುತ್ತದೆ, ಭಾವನೆಯ ಉಕ್ಕುಬಿಕ್ಕು ಬುದ್ಧಿಗೆ ಜೀವ ತುಂಬುತ್ತದೆ. ಈ ಸಮನ್ವಯವೇ ಕಾವ್ಯಕ್ಕೆ ಅರ್ಥಪೂರ್ಣತೆಯನ್ನು, ಸೌಂದರ್ಯವನ್ನು ಮತ್ತು ಶಾಶ್ವತತೆಯನ್ನು ನೀಡುತ್ತದೆ ಎಂದರು.ಕವಿ ಮೊದಲು ಕವಿತೆಯಾಗಬೇಕು. ಕಾಲಾತೀತವಾಗಬೇಕು.    ಜಾತ್ಯತೀತನಾಗಬೇಕು. ಕವಿ ಪದವನ್ನು ತುಪ್ಪದಂತೆ ಬಳಸಿ ನೀರಿನ ಹಾಗೆ ಬಳಸಬಾರದು ಎಂದು ಸೂಚ್ಯವಾಗಿ ನುಡಿದರು.

ಇಂದಿನ ಕಾಲದಲ್ಲಿ ಕೆಲವೊಮ್ಮೆ ಕಾವ್ಯದಲ್ಲಿ ಭಾವಗಳ ಅತಿರೇಕ ಅಥವಾ ಬುದ್ಧಿಯ ಒಣತನ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭಾವ ಮಾತ್ರ ಇದ್ದರೆ ಅದು ಅತಿಸೆಂಟಿಮೆಂಟಲ್ ಆಗಬಹುದು; ಬುದ್ಧಿ ಮಾತ್ರ ಇದ್ದರೆ ಅದು ನಿರ್ಜೀವವಾಗುತ್ತದೆ. ಆದ್ದರಿಂದ ಈ ಎರಡರ ಸಮತೋಲನವೇ ಕಾವ್ಯದ ಆತ್ಮವೆಂದು ಪರಿಗಣಿಸಬೇಕು.

ಹೀಗಾಗಿ, “ಬುದ್ಧಿ ಮತ್ತು ಭಾವಗಳ ವಿದ್ಯುತ್ ಆಲಿಂಗನ” ಎಂಬ ಕಲ್ಪನೆ ಕಾವ್ಯವನ್ನು ಕೇವಲ ಸಾಹಿತ್ಯದ ಒಂದು ಪ್ರಕಾರವಲ್ಲ, ಆದರೆ ಜೀವಂತ ಅನುಭವವನ್ನಾಗಿ ರೂಪಿಸುತ್ತದೆ. ಕಾವ್ಯವು ಮನಸ್ಸಿನಲ್ಲಿನ ಈ ಚೈತನ್ಯಮಯ ಸಂಧಿಯಿಂದಲೇ ಜನ್ಮ ತಾಳುತ್ತದೆ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು.


 ಇದಕ್ಕೂ ಮೊದಲು ವೇದಿಕೆ ಮೇಲಿನ ಗಣ್ಯರು  ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕವಿ ಸಂಗಮೇಶ ನಾಯಿಕ ಅವರು ವಿರಚಿತ ಮೌನ ಮಧುರ ಕೃತಿಯ ಕುರಿತು ಪ್ರೊ ವಿಠ್ಠಲ ಜೋಡಟ್ಟಿ ಹಾಗೂ ಸಿದ್ದು ಹೊಸಪೇಟಿ ಹಾಗೂ ಕಾವ್ಯ ಸಿಂಧೂರ ಕೃತಿಯ ಕುರಿತು ಪ್ರೊ ತ್ರಿಶಲಾ ನಾಗನೂರ ಹಾಗೂ ಎಂ ಕೆ ಸಪ್ತಸಾಗರೆ ಅವರು ಪುಸ್ತಕ ಪರಿಚಯಿಸಿ ಮಾತನಾಡಿದರು.

 ಶಿಕ್ಷಕ ಶ್ರೀಧರ ಕಿಚಡಿ ಅಧ್ಯಕ್ಷತೆ ವಹಿಸಿ ಆಶಯ ನುಡಿಯಾಡಿದರು.

ಸಾಹಿತಿ ಡಾ ಸುರೇಶ ಹನಗಂಡಿ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಈರಣ್ಣಗೌಡ ಪಾಟೀಲ, ಪ್ರೇರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಡಿ ಫ್ರಾನ್ಸಿಸ್ ಕ್ಷೆವಿಯರ್ ಕವಿ ಸಂಗಮೇಶ ನಾಯಿಕ, ಶಿಕ್ಷಕ ಎಸ್ ಬಿ ಕ್ಯಾಸ್ತಿ, ಕವಿಯತ್ರಿ ಡಾ. ರತ್ನಾ ಬಾಳಪ್ಪನವರ ಸಾಹಿತ್ಯ ಪ್ರೇಮಿ ಆರ್ ಎಂ ಪಾಟೀಲ, ಎಂ ಎಸ್ ಬಳವಾಡ, ಶ್ರೀಧರ ಹೋಳ್ಕರ  ಹಾಗೂ ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.  


 ವರದಿ ಡಾ. ಜಯವೀರ ಎ. ಕೆ.

          ಖೇಮಲಾಪುರ

Image Description

Post a Comment

0 Comments