*ತೀವ್ರವಾಗುತ್ತಿರುವ ರಣಬಿಸಿಲ ಝಳ: ಬಸವಳಿಯುತ್ತಿರುವ ಜನಸಾಮಾನ್ಯರು*

 *ತೀವ್ರವಾಗುತ್ತಿರುವ ರಣಬಿಸಿಲ ಝಳ: ಬಸವಳಿಯುತ್ತಿರುವ ಜನಸಾಮಾನ್ಯರು*




ರಾಯಬಾಗ: ರಾಜ್ಯಾದ್ಯಂತ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ರಣಬಿಸಿಲಿನ ತೀವ್ರತೆಗೆ ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಕಾರ್ಯನಿಮಿತ್ಯ ಸಂತೆ-ಮಾರುಕಟ್ಟೆಗಳಿಗೆ ತೆರಳಿ ಅಗತ್ಯ ವಸ್ತುಗಳನ್ನು ತರಲು ಹೋಗುವವರು ಬೆಳಿಗ್ಗೆ 10 ಗಂಟೆಯೊಳಗೆ ಮನೆ ಸೇರುವಷ್ಟರಲ್ಲಿ ಬೆವರಲ್ಲಿ ನೆನೆಯುತ್ತಾ “ಹುಷ್ ಅಪ್ಪಾ!” ಎಂದು ನಿಟ್ಟುಸಿರು ಬಿಡುವ ಸ್ಥಿತಿ ನಿರ್ಮಾಣವಾಗಿದೆ.


ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಉಷ್ಣ ಅಲೆ ಹೆಚ್ಚಾಗಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿರುವುದು ಗಮನಾರ್ಹ. ಮನೆಗಳಲ್ಲಿ ಫ್ಯಾನ್ ಇದ್ದರೂ ಬಿಸಿಗಾಳಿ ಬೀಸುತ್ತಿರುವುದರಿಂದ ಜನರಿಗೆ ತಂಪಿನ ಅನುಭವ ಸಿಗುತ್ತಿಲ್ಲ. ಇದು ಸಾಮಾನ್ಯ ಬಿಸಿಲಲ್ಲ, ಅಸಹನೀಯವಾದ ಉಷ್ಣತೆಯಾಗಿದೆ ಎಂದು ಅನೇಕ ಜನರು ಹೇಳುತ್ತಿದ್ದಾರೆ.


ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಈಗ ಜನರು ಬೆಳಿಗ್ಗೆಯೇ ಗಿಡಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಸಂತೆ-ಮಾರುಕಟ್ಟೆಗಳಲ್ಲಿ ತಂಪು ಪಾನೀಯಗಳ ಅಂಗಡಿಗಳ ಮುಂದೆ ಜನರ ಗುಂಪುಗಳು ಹೆಚ್ಚಾಗಿ ಕಾಣಿಸುತ್ತಿವೆ.

ಪ್ರಸ್ತುತ ಎಲ್ ನಿನೊ ಪರಿಣಾಮದ ಆತಂಕವೂ ಹೆಚ್ಚಾಗಿದೆ. ಇದು ಮೌನವಾಗಿ ಜೀವಿಗಳಿಗೆ ಅಪಾಯ ತರಬಹುದೆಂಬ ಭಯ ವ್ಯಕ್ತವಾಗುತ್ತಿದೆ. ಮೇ ತಿಂಗಳು ಸಮೀಪಿಸುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂದು ಜನರಲ್ಲಿ ಆತಂಕ ಮನೆಮಾಡಿದೆ.

ಏಪ್ರಿಲ್ 29ರಿಂದ ಮೇ 12ರವರೆಗೆ ತೀವ್ರ ಶಾಖದ ಅಲೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಒಟ್ಟಾರೆ, ಈ ಬಾರಿಯ ಬಿಸಿಲು ಜನಸಾಮಾನ್ಯರನ್ನು ಕಂಗೆಡಿಸಿದೆ ಎಂಬುದು ಸಾರ್ವತ್ರಿಕ ಸತ್ಯ.


   ವರದಿ:ಡಾ. ಜಯವೀರ ಎ. ಕೆ.

             ಖೇಮಲಾಪುರ

Image Description

Post a Comment

0 Comments