ವಿಶೇಷ ಲೇಖನ* *ಬಸವ ಜಯಂತಿ – 2026*

 *ವಿಶೇಷ ಲೇಖನ*  

*ಬಸವ ಜಯಂತಿ – 2026*



*ವಿಶ್ವ ಪ್ರಜಾಪ್ರಭುತ್ವದ ಪಿತಾಮಹ ಅಣ್ಣ ಬಸವಣ್ಣನವರು*


*ಲೇಖಕರು: ಸಂಗಮೇಶ ಎನ್ ಜವಾದಿ*  

_ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು, ಪ್ರಗತಿಪರ ಚಿಂತಕರು, ಹೋರಾಟಗಾರರು_


---


ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ. ಮಹಾನ್ ಋಷಿ-ಮುನಿಗಳು, ರೈತರು, ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮತಾಳಿದ್ದಾರೆ. ಅಂತೆಯೇ 12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು ಕ್ರಾಂತಿಸೂರ್ಯನಂತೆ ಸಮಾಜವನ್ನು ಸುಧಾರಿಸಿದ ಕೀರ್ತಿ ಅಣ್ಣ ಬಸವಣ್ಣನವರಿಗೆ ಸಲ್ಲಬೇಕು.


ಬಂಧುಗಳೇ, ಅಂದಹಾಗೆ ವಿಶ್ವ ಸಂವಿಧಾನ ಶಿಲ್ಪಿ ಅಣ್ಣ ಬಸವಣ್ಣನವರು ದೇಶದ ನಾಯಕರಲ್ಲ, ಅವರು ವಿಶ್ವ ನಾಯಕರಾಗಿದ್ದು, ದೇಶದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆ ಎಂಬ ಜಾತಿ ವ್ಯವಸ್ಥೆಯ ವಿರುದ್ಧ ನಿರಂತರ ಹೋರಾಟ ನಡೆಸಿ, ಸಾಮಾಜಿಕ ಪಿಡುಗಿಗೆ ಚಿಕಿತ್ಸೆ ನೀಡಿದ ಮಹಾ ಮೇಧಾವಿ ಸಂತ ಅಣ್ಣನವರು.


ಲೌಕಿಕದ ಅಧಿಕಾರದಲ್ಲಿದ್ದೂ ಆಂತರಿಕವಾಗಿ ಮಹಾ ಅನುಭಾವಿಯಾದುದು ಬಸವಣ್ಣನವರ ಅಂತರಂಗದ ಕಥೆ. ಬಸವಣ್ಣನವರ ವಚನಗಳಲ್ಲಿ ಅದರ ಉಜ್ವಲ ಚಿತ್ರ ಕಾಣಬರುತ್ತದೆ. ಬಸವಣ್ಣನವರ ಸಾಮಾಜಿಕ ಮತ್ತು ಧಾರ್ಮಿಕ ವಿಚಾರಧಾರೆಗಳು ಕಾಲದೇಶಗಳ ಹಂಗಿನ ಪರಿಧಿಯಾಚೆಗೂ ಸಾರ್ವಕಾಲಿಕವಾಗಿ ನಿಲ್ಲುವಂತಹದು.


ಅಂದು ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಸಮಯವದು. ದಲಿತರು, ಅಸ್ಪೃಶ್ಯರು, ಮಹಿಳೆಯರು ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿದ್ದ ಕಾಲವಾಗಿತ್ತು. ಇವರೆಲ್ಲರಿಗೂ ದೇವರ ದರ್ಶನ ಪಡೆಯುವುದು ದೂರದ ಮಾತಾಗಿತ್ತು. ದೇವರ ಪೂಜೆ ಮಾಡುವ ಮತ್ತು ದೇವಸ್ಥಾನಕ್ಕೆ ಪ್ರವೇಶವೇ ಇಲ್ಲದಿದ್ದ ಸಮಯದಲ್ಲಿ ಬಸವಣ್ಣನವರು ಇದನ್ನು ನೋಡಿ ಬಹಳ ಸಂಕಷ್ಟಪಟ್ಟರು. ಹೇಗಾದರೂ ಮಾಡಿ ಸರಿಪಡಿಸಿ, ಸರ್ವರಿಗೂ ದೇವರ ಧ್ಯಾನ, ದರ್ಶನ ಪಡೆಯುವಂತಾಗಬೇಕೆಂದು ನಿಶ್ಚಯ ಮಾಡಿ, ವೈಚಾರಿಕವಾಗಿ ಚಿಂತಿಸಿ, ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಇಟ್ಟು ಪೂಜಿಸುವ ಶಿವಯೋಗವನ್ನು ಕರುಣಿಸಿ ಕೊಟ್ಟು, ಸರ್ವರಿಗೂ ಇಷ್ಟಲಿಂಗ ಧಾರಣೆ ಮಾಡಿದರು.


ಹೀಗೆ ನೊಂದವರ ಪರವಾಗಿ ಹತ್ತು ಹಲವು ಕ್ರಾಂತಿಕಾರಿ ನಡೆಯ ಮೂಲಕ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಕೆಳ ಸಮುದಾಯಕ್ಕೆ ಅನುಭವ ಮಂಟಪದಲ್ಲಿ ಅವಕಾಶ ನೀಡಿ, ಅವರೆಲ್ಲರೂ ವಚನ ರಚನೆಯಲ್ಲಿ ತೊಡಗುವಂತೆ ಪ್ರೇರೆಪಿಸಿ, ವಚನಗಳನ್ನು ಬರೆಯುವಂತೆ ಮಾಡಿದವರು. ಜೊತೆಗೆ ಅಂತರ್ಜಾತಿ ವಿವಾಹವನ್ನು ಮಾಡಿಸಿ ಮಾನವರೆಲ್ಲರೂ ದೇವರ ಮಕ್ಕಳು ಎಂಬ ನಿಲುವು ಪ್ರತಿಪಾದಿಸಿ, ಸರ್ವರೂ ಸಮಾನರು ಎಂದು ಜಾಗತಿಕ ಪ್ರಪಂಚಕ್ಕೆ ಬಸವಣ್ಣನವರು ಸಾರಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವಂತಾಗಬೇಕೆಂದು ಹೋರಾಟ ಮಾಡಿದ್ದು ಕಾಣುತ್ತೇವೆ. ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡುವ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ.


ಅಂದು ಬಸವಣ್ಣನವರು ಕೆಳಗೆ ಬಿದ್ದವರನ್ನು ಯಾವ ರೀತಿ ಅಪ್ಪಿಕೊಂಡರು ಎಂಬುದಕ್ಕೆ ನಮಗಿಲ್ಲಿ ಅವರ ವಚನಗಳೇ ಸಾಕ್ಷಿಪ್ರಜ್ಞೆಯಾಗಿವೆ. ಬಸವಣ್ಣನವರು ತಮ್ಮನ್ನು ತಾವು ಕನಿಷ್ಠ ಮಟ್ಟದಲ್ಲಿ ಇಳಿಸಿಕೊಂಡು ಬಹು ಎತ್ತರಕ್ಕೆ ಬೆಳೆದ ಮಹಾನ್ ಚೇತನರಾಗಿದ್ದರು. ಅದಕ್ಕೆ ಅವರ ವಚನವೇ ಸಾಕ್ಷಿ, ಅವರ ಸಂಪೂರ್ಣ ವ್ಯಕ್ತಿತ್ವವನ್ನು ನಿರೂಪಿಸುತ್ತದೆ.


*"ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ, ಎನಗಿದೇ ದಿಬ್ಯ."*


ಎಂದು ಹೇಳುತ್ತಾರೆ. ಅಂದಿನ ಎಲ್ಲ ಜನಾಂಗವನ್ನು ಯಾವ ರೀತಿ ಒಲಿಸಿಕೊಂಡು ಅವರನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಬೇಕು ಎಂಬ ಸತ್ಯದ ದಾರಿ ಅಪ್ಪ ಬಸವಣ್ಣನವರಿಗೆ ಚೆನ್ನಾಗಿ ತಿಳಿದಿತ್ತು. ಹಾಗಾಗಿ ಅವರು ಪ್ರತಿಯೊಬ್ಬರನ್ನು ಸಂಪರ್ಕಿಸಿ "ನಿಮ್ಮ ಮನೆಯ ಮಗ"ನೆಂದು ಹೇಳಿಕೊಳ್ಳುತ್ತ ಅವರನ್ನು ಆಲಿಂಗಿಸಿಕೊಂಡು, ಯಾರೂ ಮಾಡದಂತ ಸಾಮಾಜಿಕ ಕ್ರಾಂತಿಯನ್ನು 12ನೇ ಶತಮಾನದಲ್ಲಿ ಮಾಡಿ ತೋರಿಸಿದ್ದಾರೆ.


*"ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ."*


ಕೂಡಲಸಂಗಮದೇವನ ಸಾಕ್ಷಿಯಾಗಿ ಎನ್ನಬೇಕಾದರೆ ಬಸವಣ್ಣನವರಿಗೆ ಅದೆಂಥ ತ್ಯಾಗದ ಮನೋಭಾವ! "ನಾನು ಸಣ್ಣವ, ನಾನು ಅತ್ಯಂತ ಕೆಳ ಸಮಾಜದವ, ನಾನು ದಾಸ-ದಾಸಿಯ ಮಗ" ಎಂದು ಹೇಳುವ ಈ ವಚನ ಅವರ ಎತ್ತರದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ. "ನಾನು ಕೆಳಸ್ತರದ ಜನಾಂಗದಲ್ಲಿ ಹುಟ್ಟಿದ ಮಗ" ಎಂದು ಗೌರವದಿಂದ ಹೇಳುವ ಅವರ ಮಾತು ನಿಜಕ್ಕೂ ದೊಡ್ಡದು, ಮಾನವೀಯ ನಡೆಗೆ ಇದು ಸಾಕ್ಷಿಯಾಗಿದೆ. ಇದೇ ತೆರನಾಗಿ ಎಲ್ಲ ಸಮುದಾಯದ ಜನರಲ್ಲಿ ಹೋಗಿ ಅವರೆಲ್ಲರನ್ನೂ ಒಂದೆಡೆ ಸೇರಿಸುವ ಅವರ ಪ್ರಯತ್ನ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಅವರನ್ನು ಗೌರವದಿಂದ ಕಾಣುವ ಮನೋಧರ್ಮ ಬಸವಣ್ಣನವರದಾಗಿತ್ತು.


*"ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ."*


"ನಿಮ್ಮ ಶರಣರ ಮನೆಯ ಮಗನು ನಾನಾಗಿದ್ದೇನೆ" ಎಂದು ಈ ವಚನದಲ್ಲಿ ಇಡೀ ಮಾನವ ಸಮಾಜದ ಮಗುವಾಗಿದ್ದೇನೆ ಎಂಬರ್ಥದಲ್ಲಿ ಹೇಳುತ್ತ, ಅವರಲ್ಲಿ ಉತ್ಸಾಹ-ಹುರುಪು ತುಂಬಿ ನವ ಚೈತನ್ಯವನ್ನೇ ಬರುವಂತೆ ಮಾಡುತ್ತಾರೆ ಬಸವಣ್ಣನವರು. 


*"ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ."*


ಈ ರೀತಿಯಾಗಿ ಅಪ್ಪ ಬಸವಣ್ಣನವರು ವಚನ ಚಳುವಳಿಯನ್ನು ಆರಂಭಿಸಿ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಅಂದು ಅಪ್ಪ ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಲು ಪಟ್ಟ ಪರಿಶ್ರಮ ಬಹಳ ದೊಡ್ಡದು. ಅದು ಇಂದಿಗೂ ಯಾರೂ ಪಟ್ಟಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ.


ಒಂದು ಸಂಘಟನೆ, ಒಂದು ಚಳುವಳಿಯನ್ನು ಮಾಡಬೇಕಾದರೆ ಸಣ್ಣ ಕೆಲಸವಲ್ಲ. ಅದಕ್ಕೆ ಬೇಕಾದ ತಯಾರಿ, ಸಿದ್ಧಿಗಳನ್ನು ನಾವು ಮಾಡಿಕೊಂಡಿರಬೇಕಾಗುತ್ತದೆ ಎಂಬುದಕ್ಕೆ ಬಸವಣ್ಣನವರೇ ನಮಗೆ ಮಾದರಿ. ಹಾಗಾಗಿ ಅವರು ಬರೆದ ವಚನಗಳನ್ನು ಅರ್ಥ ಮಾಡಿಕೊಂಡು ಹೋದಾಗ ಮಾತ್ರ ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯದಾಗುತ್ತದೆ. ಪ್ರತಿ ಸಮಾಜಪರ ಹೋರಾಟಗಳು ಇದೇ ರೀತಿಯಲ್ಲಿದ್ದರೆ ನಾವು ಹಮ್ಮಿಕೊಂಡ ಹೋರಾಟ ಸಾರ್ಥಕತೆಯನ್ನು ಪಡೆಯುತ್ತದೆ. ಹೀಗಾಗಿಯೇ ಜಾಗತಿಕ ಸಮುದಾಯವು ಇವರನ್ನು ವಿಶ್ವ ಪ್ರಜಾಪ್ರಭುತ್ವದ ಪಿತಾಮಹ, ವಿಶ್ವ ಸಂವಿಧಾನ ಶಿಲ್ಪಿ ಎನ್ನುತ್ತಾರೆ.


*ಗೌರವ ನುಡಿ:* ಬಸವಾದಿ ಶರಣರು ಜೀವಿಸಿದ್ದ ವಚನಾನುಭವಿಗಳ ಆ ಶತಮಾನವನ್ನು ನೆನೆದಾಗಲೆಲ್ಲ ಮೈಯೆಲ್ಲಾ ರೋಮಾಂಚನಕಾರಿಯಾಗುತ್ತದೆ. ಹೀಗೂ ಒಂದು ಯುಗವಿರಲು ಸಾಧ್ಯವೇ ಎನಿಸುವಂತಹ ಘಟನೆ ನಮ್ಮ ಎದುರಿಗೆ ಬಂದು ಹೋಗುತ್ತದೆ. ಆ ಅನುಭವ ಮಂಟಪವೆಂಬ ದೃಶ್ಯವೇ ಮಾನವೀಯತೆಯ ಮಹೋನ್ನತವಾದ ಸಮತಾಭಾವ ಸೃಷ್ಟಿಸುತ್ತದೆ. ಸುಮಾರು ಒಂಬತ್ತು ಶತಮಾನಗಳ ಹಿಂದೆಯಷ್ಟೇ ಅಷ್ಟೊಂದು ಪಕ್ವವಾದ ಕನ್ನಡದ ಭಾಷೆ ಜಾಗೃತಿಯಲ್ಲಿತ್ತು ಎಂದರೆ ಮನ-ಮನಸುಗಳು ರೋಮಾಂಚನವಾಗುತ್ತವೆ. ಎಲ್ಲ ಕಾಯಕದ ಶರಣರು, ಶರಣೆಯರು, ರಾಜನ ಆಸ್ಥಾನದವರು, ಸಾಧು-ಸಂತರು, ಸೇವಕ ವ್ಯಕ್ತಿತ್ವದವರು ಹೀಗೆ ಎಲ್ಲರೂ ಸಮಾನರಾಗಿ, ಮೇಲು-ಕೀಳುಗಳ ಭೇದ-ಭಾವವಿಲ್ಲದೆ ಪರಸ್ಪರ ಗೌರವಗಳಿಂದ ಆಧ್ಯಾತ್ಮ ಚಿಂತನೆಯಲ್ಲಿ ಪಾಲ್ಗೊಂಡು ವಿಚಾರ ವಿನಿಮಯ ನಡೆಸುತ್ತಿದ್ದ ಅಂತಹ ಯುಗದ ಕಲ್ಪನೆ ಯಾವುದೇ ಮುಂದುವರಿದ ಸಮಾಜದ ದಿನಗಳಲ್ಲೂ, ವಿಶೇಷವಾಗಿ ಈಗಿನ ಕಾಲದ ಸಮಯದಲ್ಲಿಯೂ ಕಾಣದಂತಹ ಒಂದು ಅಪೂರ್ವ ಐತಿಹಾಸಿಕ, ವಿಶ್ವ ಕಂಡ ಶ್ರೇಷ್ಠ ಯುಗ. ಈ ಯುಗದ ಪ್ರಾತಿನಿಧಿಕ ಸೂತ್ರಧಾರ ಅಣ್ಣ ಬಸವಣ್ಣನವರು.


ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣವರು ಸಾರಿ, ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದ್ದನ್ನು ಜಗತ್ತು ಎಂದೆಂದಿಗೂ ಮರೆಯಲಾಗದು. ಅದಕ್ಕಾಗಿಯೇ ವಿಶ್ವ ಜನಸಮುದಾಯ ಅಣ್ಣ ಬಸವಣ್ಣನವರನ್ನು ವಿಶ್ವ ಕಂಡ ಶ್ರೇಷ್ಠ ಯುಗಪುರುಷ ಎಂದು ಹೆಮ್ಮೆಯಿಂದ ಕರೆಯುತ್ತಾರೆ.


ಕೊನೆಯದಾಗಿ, ಬಸವಣ್ಣನವರ 893ನೇ ಜಯಂತಿ ಆಚರಣೆಗೆ ಇಡೀ ಜಾಗತಿಕ ಪ್ರಪಂಚ ಸಿದ್ಧವಾಗಿದೆ. ಈ ದಿನ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಪ್ರಜಾಪ್ರಭುತ್ವದ ತತ್ವಗಳನ್ನು ಸ್ಮರಿಸುವ ಒಂದು ಮಹತ್ವದ ಸಂದರ್ಭವಾಗಿದೆ. 12ನೇ ಶತಮಾನದ ಈ ಮಹಾನ್ ಸಮಾಜ ಸುಧಾರಕರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ವಿಶೇಷವಾಗಿ ಇಡೀ ಜಗತ್ತಿನಲ್ಲಿ ಸಾಮಾಜಿಕ ಸುಧಾರಣೆಗಳ ಮುಂಜಾವಿನ ತಾರೆ ಬಸವಣ್ಣನವರು.


ಕಾಯಕವೇ ಕೈಲಾಸ, ಸ್ತ್ರೀ ಸಮಾನತೆ ಮತ್ತು ಶಿಕ್ಷಣ, ಸಾಮಾಜಿಕ ಸಮಾನತೆ ಮತ್ತು ನ್ಯಾಯ, ಅಸ್ಪೃಶ್ಯತೆ ಆಚರಣೆಯ ನಿರ್ಮೂಲನೆ, ಅಂತರ್ಜಾತಿ ವಿವಾಹ, ಸರಳ ಕನ್ನಡದಲ್ಲಿ ಜನರಿಗೆ ಮುಟ್ಟುವ ವಚನ ಸಾಹಿತ್ಯವನ್ನು 12ನೇ ಶತಮಾನದಲ್ಲೇ ರಚಿಸುವ ಮೂಲಕ ಅವುಗಳನ್ನು ಜಾರಿಗೆ ತರಲು ಸಂಘರ್ಷ ಮಾಡಿ ಬಲಿದಾನ ಮಾಡಿದ ವಿಶ್ವದ ಅದ್ಭುತ ದಾರ್ಶನಿಕ. ಅಂತೆಯೇ ಆಧುನಿಕ ಜಗತ್ತಿನ ಮೌಲ್ಯಗಳೆಂದು ಗುರುತಿಸುವ ಪ್ರಜಾತಂತ್ರ, ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸಮಾನತೆ, ಮಹಿಳಾ ಸಶಕ್ತೀಕರಣ ಈ ಎಲ್ಲವನ್ನೂ ಒಂದು ಸಾಮಾಜಿಕ ಆಂದೋಲನವನ್ನಾಗಿ 12ನೇ ಶತಮಾನದಲ್ಲಿಯೇ ರೂಪಿಸಿದವರು ಬಸವಣ್ಣ.


ಹಾಗಾಗಿ, ಅವರು ತೋರಿಸಿರುವ ಬೆಳಕಿನಲ್ಲಿ ನಾವು ಮಾನವರಾಗಿ ಮುನ್ನಡೆಯುವಂತ ಸಂಕಲ್ಪವನ್ನು ಮತ್ತೆ ಕೈಗೊಳ್ಳಬೇಕಿದೆ. ಅದೇ ರೀತಿ ಬಸವಣ್ಣನವರ ವಿಚಾರಗಳು, ಮುಖ್ಯವಾಗಿ ಜಾತಿ-ರಹಿತ ಸಮಾಜ ಮತ್ತು ಮಾನವ ಹಕ್ಕುಗಳ ಪರವಾದ ನಿಲುವು, ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿವೆ. 893ನೇ ಜಯಂತಿಯು ಕೇವಲ ಒಂದು ಜನ್ಮದಿನಾಚರಣೆಯಲ್ಲ, ಬದಲಾಗಿ ಬಸವಣ್ಣನವರ ಆದರ್ಶಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ಪವಿತ್ರ ಸುಸಂದರ್ಭವಾಗಿದೆ.


---


*ಲೇಖಕರು: ಸಂಗಮೇಶ ಎನ್ ಜವಾದಿ*  

ಬರಹಗಾರರು, ಪತ್ರಕರ್ತರು, ಪರಿಸರ ಸಂರಕ್ಷಕರು, ಪ್ರಗತಿಪರ ಚಿಂತಕರು, ಹೋರಾಟಗಾರರು  

ಚಿಟಗುಪ್ಪಾ, ಬೀದರ್ ಜಿಲ್ಲೆ

Image Description

Post a Comment

0 Comments