"ಇದು ಆಟಗಳೊಳಗಿನ ಪಾಠ ಹೇಳುವ ಬದುಕಿನ ಮಾರ್ಮಿಕ ಕವಿತೆ. ಜೀವನದ ಸತ್ವ ಸಾರ ತಿಳಿಸುವ ಆಟಗಳ ತಾತ್ವಿಕ ಭಾವಗೀತೆ. ಈ ಆಟಗಳು ಬೋಧಿಸುವ ತತ್ವ ಮಹತ್ವಗಳಿಗೂ
, ಬದುಕಿನೊಳಗಿನ ಕಟುಸತ್ಯ ಸತ್ವಗಳಿಗೂ ಎಷ್ಟೆಲ್ಲಾ ಸಾಮ್ಯತೆಗಳಿವೆ. ಏನೇನೆಲ್ಲ ಸಮೀಕರಣ ಸಾಧ್ಯತೆಗಳಿವೆ. ವಿನೋದವೆನಿಸಿದರೂ ಹೇಗೇಗೆಲ್ಲಾ ವಾಸ್ತವದ ಸಾಮಿಪ್ಯತೆಗಳಿವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಬಿಂಬ-ಪ್ರತಿಬಿಂಬ.
ಬದುಕೆಂದರೆ..
ಒಬ್ಬನನ್ನು ಕೆಡವಲು
ಕಾಲೆಳೆದು ಬೀಳಿಸಲು
ಗೆಲುವು ಕಸಿದುಕೊಳ್ಳಲು
ಹಲವರು ಕೈಕೈ ಬೆಸೆದು
ನಿಂತಿರುವ ಕಬಡ್ಡಿಯಂತೆ.!
ಬದುಕೆಂದರೆ..
ಒಬ್ಬನನ್ನು ಹಿಡಿಯಲು
ಹಲವರು ಹೊಂಚುಹಾಕಿ
ಕಾದು ಕುಳಿತು ನೋಡುತ್ತ
ಪರಸ್ಪರ ಛೂ ಬಿಡುತ್ತಾ
ಬೆನ್ನತ್ತುವ ಖೋಖೋದಂತೆ.!
ಬದುಕೆಂದರೆ..
ಚೆಂಡನ್ನು ನಮ್ಮೆಡೆಗೆ ಎಸೆದು
ಹೊಡೆಯಲು ಪ್ರೇರೇಪಿಸುತ್ತಾ
ಹೊಡೆದೊಡನೆ ಹಿಡಿಯಲು
ಸುತ್ತಲೂ ಬಕಪಕ್ಷಿಗಳಂತೆ ನಿಂತು
ಕಾಯ್ವ ಕ್ರಿಕೆಟ್ಟಿನಾಟದಂತೆ.!
ಬದುಕೆಂದರೆ..
ಕಾಲಡಿಯಿಂದ ಚೆಂಡು ಕಸಿದು
ನಮ್ಮ ಕೋಟೆಯೊಳಗೆ ನುಗ್ಗಿ
ನಮ್ಮನ್ನು ನಮ್ಮವರನ್ನು ವಂಚಿಸಿ
ನಮ್ಮದೇ ಗೋಲೊಳಗೇ ಬಾರಿಸಿ
ಬೀಗುವ ಕಾಲ್ಚೆಂಡಿನಾಟದಂತೆ.!
ಬದುಕೆಂದರೆ..
ನಮ್ಮೆಲ್ಲ ಬಲಾಬಲಗಳ ಲೆಕ್ಕಿಸಿ
ಒಂದೊಂದೆ ಪಡೆಗಳ ಮಣಿಸಿ
ಎದುರಾಳಿ ಎಲ್ಲಕಡೆಯಿಂದಲೂ
ಆವರಿಸಿ ಆಕ್ರಮಿಸಿ ಒಂಟಿಯಾಗಿಸಿ
ಸೋಲಿಸುವ ಚದುರಂಗದಂತೆ.!
ಬದುಕೆಂದರೆ ಆಟಗಳ ಮಾಯೆ
ಬದುಕಿನ ತುಂಬೆಲ್ಲ ಆಟದ ಛಾಯೆ.!
ಬದುಕಿನ ಪ್ರತಿ ಮಜಲೂ ಸೋಲು
ಗೆಲುವಿನ ಹಾವುಯೇಣಿಯಾಟದ ಬಿಂಬ.!
ಪ್ರತಿ ಆಟವೂ ಬದುಕಿನದೇ ಪ್ರತಿಬಿಂಬ.!
ಎ.ಎನ್.ರಮೇಶ್. ಗುಬ್ಬಿ.

.gif)

.gif)


0 Comments