"ಇದು ಬಾಳಪಯಣದ ಕಟುವಾಸ್ತವದ ಅನಾವರಣದ ಕವಿತೆ. ಜೀವ-ಜೀವನದ ನಡಿಗೆಯ ಕಹಿಸತ್ಯಗಳ ರಿಂಗಣಗಳ ನಿತ್ಯ ಸತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಬದುಕಿನ ಸತ್ವಗಳ ಸಾರವಿದೆ. ಅರ್ಥೈಸಿದಷ್ಟೂ ಬೆಳಕಿನ ತತ್ವಗಳ ವಿಸ್ತಾರವಿದೆ. ಇದು ನಮ್ಮ ನಿಮ್ಮೆಲ್ಲರ ಸ್ವಾನುಭವವೂ ಹೌದು, ಲೋಕಾನುಭವವೂ ಹೌದು. ಬಾಳ ದರ್ಶನ ನಿದರ್ಶನಗಳ ಅನುಭಾವಾವೂ ಹೌದು. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಪಯಣ.!
ಕಣ್ಣಿಲ್ಲದವರೊಡನೆ
ಸಾಗಬಹುದು.!
ಕನಸುಗಳಿಲ್ಲದವರೊಡನೆ
ಸಾಗಲಾಗದು..!!
ಮಾತಿಲ್ಲದವರೊಡನೆ
ನಡೆಯಬಹುದು.!
ಮನಸಿಲ್ಲದವರೊಡನೆ
ನಡೆಯಲಾಗದು.!
ಕಾಂಚಾಣವಿಲ್ಲದಡೆಯೂ
ಇರಬಹುದು
ಕರುಣೆಯಿಲ್ಲದಡೆಯಲಿ
ಇರಲಾಗದು.!
ನೆರಳಿಲ್ಲದಡೆ
ದುಡಿಯಬಹುದು.!
ನೆರವಿಲ್ಲದಡೆ
ದುಡಿಯಲಾಗದು..!
ಬಲವಿಲ್ಲದೆಯೂ
ಗೆಲ್ಲಬಹುದು.!
ಛಲವಿಲ್ಲದೆಂದೆಂದು
ಗೆಲ್ಲಲಾಗದು.!!
ಅನುರಾಗವಿಲ್ಲದಡೆಯು
ಏಗಬಹುದು.!
ಅಂತಃಕರಣವಿಲ್ಲದೆಡೆ
ಏಗಲಾಗದು.!
ನೆಮ್ಮದಿಯಿಲ್ಲದೆಯೂ
ಬಾಳಬಹುದು.!
ನಂಬಿಕೆಯಿಲ್ಲದಡೆ
ಬಾಳಲಾಗದು.!
ಬೆಳಕಿಲ್ಲದಡೆ
ಬದುಕಬಹುದು.!
ಭರವಸೆಗಳಿಲ್ಲದಡೆ
ಬದುಕಲಾಗದು..!!
ಎ.ಎನ್.ರಮೇಶ್. ಗುಬ್ಬಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments