ಕಂಬನಿ..!

 "ಇದು ಕಂಬನಿಯ ಕವಿತೆಯಲ್ಲ, ಕಪೋಲಗಳ ಮೇಲೆ ಕಂಬನಿಯೇ ಬರೆವ ಭಾವಗೀತೆ. ಪ್ರತಿ ಕಂಬನಿಯ ಬಿಂದುವಿನಲೊಂದು ಕಾಣದ ಕಥೆಯಿದೆ. ಪ್ರತಿ ಕಣ್ಣೀರ ಹನಿಯ ಹಿಂದೊಂದು ಕೇಳದ ವ್ಯಥೆಯಿದೆ. ಕಣ್ಣಂಚನು ತೇವವಾಗಿಸುವ ಆ ಕ್ಷಣಗಳಲಿ ಆ ಜೀವಕ್ಕಷ್ಟೇ ಗೊತ್ತಿರುವ ನೋವಿನ ಸಂವೇದನೆಗಳಿರುತ್ತವೆ. ಕಣ್ಣಾಲಿ ತುಂಬಿ ಬರುವ ಆಘಳಿಗೆಯಲಿ ಆ ಹೃದಯಕ್ಕಷ್ಟೇ ರಿಂಗಣಿಸುವ ನೆನಪಿನ ನಿವೇದನೆಗಳಿರುತ್ತವೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.



ಕಂಬನಿ..!



ಯಾವ್ಯಾವ ಮಾತು 

ಯಾರ್ಯಾರ ಮನ

ಮುಟ್ಟುವುದೋ.?


ಯಾರ್ಯಾರ ಒಡಲ

ಆಳದಲಿ ಅದೇನು 

ಕಥೆಗಳಿವೆಯೋ.?


ಯಾವ್ಯಾವ ಹಾಡು 

ಯಾರ್ಯಾರ ಹೃದಯ 

ತಟ್ಟುವುದೋ..?


ಯಾರ್ಯಾರ ಎದೆ-

ಗೂಡಿನಲಿ ಅದೆಷ್ಟು 

ನೆನಪುಗಳಿವೆಯೋ.?


ಮಾತು ಮನವ

ತಾಕಿದಾಗ.....

ಹಾಡು ಹೃದಯ 

ಮೀಟಿದಾಗ.....


ಒಡಲಿನ ಕಥೆ 

ಒಳಗಿನ ನೆನಪು

ಕಂಗಳ ಮುತ್ತಾಗಿ 

ಮೆಲ್ಲನೆ ಜಾರುವುದು..!


ಕಣ್ಣಬಿಂದು ಎದೆಯ 

ಸಿಂಧುವಿನ ಬಿಂಬವಾಗಿ

ಕದಪುಗಳಲಿ

ಕಾವ್ಯ ಬರೆವುದು.!!


ಎ.ಎನ್.ರಮೇಶ್.ಗುಬ್ಬಿ.

Image Description

Post a Comment

0 Comments