* ಕೋರೆಗಾಂವ್ ವಿಜಯ ಸ್ತಂಭ *


 *ಕೋರೆಗಾಂವ್ ವಿಜಯ ಸ್ತಂಭ*


ನೆತ್ತರುಕ್ಕುಕ್ಕಿ ಚಿಮ್ಮುವ ಸಾಹಸಗಾಥೆ ಪೇಳ್ವ ವೀರ ಸ್ತಂಭ

ಸ್ವಾಭಿಮಾನ ಆತ್ಮಶಕ್ತಿ ದರ್ಶನ ಸ್ಮಾರಕವಿದು ಧೀರ ಕಂಬ

ಸಮತೆಯ ದಂಗೆ ಕಲಿತನಕಿಂಬು ಸ್ಪೂರಿಸುವುದು ಎದೆ ತುಂಬ

ಮಹರ ಮಗಧೀರರ ಭೀಮಾ ಕೊರೇಗಾಂವ ವಿಜಯ ಸ್ತಂಭ


ವಾಸಿಯಾಗದ ಜಾತಿ ರೋಗದಿ ಹೂತು ಹೋದ ಸಮರ

ತೆಗೆದರು ಹೆಕ್ಕಿ ಬ್ರಿಟಿಷ್ ಗ್ರಂಥಾಲಯದಿ ಭೀಮ ಅಮರ

ತಿಳಿಸಿದರು ಲೋಕ ಜನಕೆ ಬಹುಜನರ ಶೌರ್ಯ ಉಧಾರ 

ಸಮತಾ ಸಂವಿಧಾನ ರಚನೆಗೆ ಕೊರೇಗಾಂವ ಕದನವು ಆಧಾರ


ದ್ವಾದ್ವಿದಶ ಬಂಟ ಸಿದ್ಧಬಾಳ ಗಜರೂಪ ಸಮಗಣರ ಬಲಿದಾನ

ದ್ವಾದಶ ತಾಸುಗಳ ವಿರಮಿಸದ ನಿರಾಯಾಸ ಅನುಪಮ ಕಲಿತನ

ಗಂಡುಗಲಿ ಐನೂರು ಮಹರ ಯೋಧರ ಅಪರಿಮಿತ ಯೋಗದಾನ

ಮೂವತ್ತು ಸಹಸ್ರ ವೈರಿ ಪಡೆಯ ಬಗ್ಗು ಬಡಿದ ಮಹಾ ಕದನ


ಸಿಪಾಯಿ ದಂಗೆಗೂ ಮೊದಲೆ ದಂಗೆದ್ದ ಸ್ವಾಭಿಮಾನಿ ದಲಿತರ ನೆನಪು

ಮೂಲ ನಿವಾಸಿ ಭಾರತೀಯರ ಪ್ರಥಮ ಸ್ವಾತಂತ್ರ್ಯ ಹೊಳಪು

ಭೀಮಾ ನದಿ ತೀರದ ಕೋರೆಗಾಂವ್ ಸಂಗ್ರಾಮ ಒನಪು

ಅಸ್ಪೃಶ್ಯತೆ ನಿವಾರಣೆಗೆ ನವಭಾಷ್ಯ ಬರೆದ ನವ ವರುಷದ ಹುರುಪು


ಪರಾಕ್ರಮ ಧೈರ್ಯ ಸ್ಫೂರ್ತಿ ವೀರಾವೇಶ ಜಯದ ಸಂಕೇತ

ಮಾನವತೆ ಸಮತೆಯ ಸ್ಮರಣೆಗೆ ಭೀಮಾ ಶಿಲಾ ಸ್ಮಾರಕವು ಅಂಕಿತ

ಕತ್ತಲೆಯಲ್ಲಿಯೇ ಬೆಳಕನು ಕಂಡ ಮಹಾ ದಂಗೆಯ ಪ್ರತೀಕ

ಪೈಶಾಚಿಕ ಮನದ ಪೇಶ್ವೆಗಳಂತ್ಯಹಾಡಿದ ಸ್ಮರಣ ಕಾರಕ


*ಸುಹೇಚ ಪರಮವಾಡಿ*

ಶ್ರೀ. ಸುಭಾಷ್ ಹೇಮಣ್ಣಾ ಚವ್ಹಾಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ, ೭೯೭೫೦ ೨೬೭೨೪

Image Description

Post a Comment

0 Comments